ಚಿತ್ತಾಕರ್ಷಕ ಖಾದಿ ಬಟ್ಟೆಗಳಿಗೆ ಮನಸೋತ ಸಿಲಿಕಾನ್‌ಸಿಟಿ ಜನರು
ಬೆಂಗಳೂರು, ಮೇ 6: ಜನರು ಖಾದಿ ಬಟ್ಟೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದಕ್ಕೆ ಅಪವಾದವೆಂಬಂತೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಖಾದಿ ಉತ್ಸವಕ್ಕೆ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದು, ಎ.24ರಿಂದ ಮೇ 6ರವರೆಗೆ 13 ಕೋಟಿ ರೂ. ವ್ಯವಹಾರ ನಡೆದಿದೆ.
ಖಾದಿ ಉತ್ಸವದ ಮಳಿಗೆಗಳು ಗ್ರಾಹಕರನ್ನು ಯಥೇಚ್ಛವಾಗಿ ಆಕರ್ಷಿಸುತ್ತಿದ್ದು, ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಪಾಲಿವಸ್ತ್ರಗಳು ಹಾಗೂ ಖಾದಿಯ ವೈವಿಧ್ಯಮಯ ಉತ್ಪನ್ನಗಳಿಗೆ ಗ್ರಾಹಕರು ಮಾರುಹೋಗಿ ಖರೀದಿಗೆ ಮುಂದಾಗಿರುವ ದೃಶ್ಯ ಎಲ್ಲ ಮಳಿಗೆಗಳಲ್ಲೂ ಕಂಡು ಬಂತು.
ಅಲ್ಲದೆ, ಮಳಿಗೆಗಳಲ್ಲಿ ಯುವ ಪೀಳಿಗೆಯ ಮನ ಮೆಚ್ಚುವ ಮೋಹಕ ಖಾದಿ ಡಿಸೈನರ್ ಉಡುಪುಗಳು, ನಿಸರ್ಗ ಷರ್ಟ್‌ಗಳು, ಗ್ರಾಮೀಣ ಗುಡಿಗಾರರಿಂದ ತಯಾರಾದ ಮರದ ಕೆತ್ತನೆಯ ವಸ್ತುಗಳು, ಪೀಠೋಪಕರಣಗಳು, ಆಕರ್ಷಕ ಹಾಗೂ ನೈಸರ್ಗಿಕ ಸೆಣಬಿನ ಉತ್ಪನ್ನಗಳು, ಗ್ರಾಮೀಣ ಚರ್ಮೋದ್ಯೋಗ ಉದ್ದಿಮೆಯಲ್ಲಿ ತಯಾರಾದ ಆಕರ್ಷಕ ಹಾಗೂ ಬಾಳಿಕೆ ಬರುವಂತಹ ಪಾದರಕ್ಷೆಗಳು, ಗ್ರಾಮೀಣ ಕುಂಬಾರಿಕೆಯ ಕುಶಲ ವಸ್ತುಗಳು, ಕೈ ಚೀಲಗಳು, ಮಹಿಳೆಯರ ಆಕರ್ಷಣೀಯ ವ್ಯಾನಿಟಿ ಬ್ಯಾಗ್‌ಗಳು, ಪರ್ಸ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಕೈ ಕಾಗದ ವಸ್ತುಗಳು, ನೈಜ ಹಾಗೂ ಶುದ್ಧ ಜೇನು ತುಪ್ಪ, ಗೋಡಂಬಿ ಹಾಗೂ ಔಷಧೀಯ ಉತ್ಪನ್ನಗಳಿದ್ದು ಇವುಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ
ಒಂದು ತಿಂಗಳ ಕಾಲ ಆಯೋಜಿಸಿರುವ ಖಾದಿ ಉತ್ಸವದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಉತ್ಸವದಲ್ಲಿ ಖಾದಿ ವಸ್ತ್ರಗಳು, ಕೈಮಗ್ಗ, ಕರಕುಶಲ ವಸ್ತುಗಳ ಮಾರಾಟದಲ್ಲಿ ಶೇ.10ರಿಂದ 50 ರಷ್ಟು ರಿಯಾಯಿತಿಯನ್ನು ಕಲ್ಪಿಸಲಾಗಿದೆ. ಇದರಿಂದ, ಹೆಚ್ಚೆಚ್ಚು ಗ್ರಾಹಕರು ಖಾದಿ ಬಟ್ಟೆಗಳ ಖರೀದಿಗಾಗಿ ಬೆಂಗಳೂರು ಸೇರಿ ಇತರೆ ಪ್ರದೇಶಗಳಿಂದ ಬರುತ್ತಿದ್ದಾರೆ. ಹೀಗಾಗಿ, ವ್ಯಾಪಾರಸ್ಥರೂ ಖುಷಿಗೊಂಡಿದ್ದು, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಖಾದಿ ವ್ಯಾಪಾರಿ ಪ್ರವೀಣ್ ಗಿಡದನ ಅಪ್ಪಗೋಳ ಅವರನ್ನು ಮಾತನಾಡಿಸಿದಾಗ, "ಖಾದಿ ಉತ್ಸವ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷ ರೂ. ವ್ಯಾಪಾರವಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಖಾದಿ ಉತ್ಸವಕ್ಕೆ ಹೋಲಿಸಿದರೆ ಬೆಂಗಳೂರಿನ ವ್ಯಾಪಾರವೇ ಬಲು ಖುಷಿ ತಂದಿದೆ" ಎಂದು ಹೇಳುತ್ತಾರೆ.
ಒಟ್ಟು 20 ಲಕ್ಷ ರೂ.ವಹಿವಾಟು ನಡೆಯಬಹುದೆಂದು ಅಂದಾಜಿಸಿದ್ದೇವೆ. ಹಾಗೆಯೇ ನಾವಂದುಕೊಂಡಷ್ಟು ಗ್ರಾಹಕರೂ ಖಾದಿ ಉತ್ಸವದ ಕಡೆಗೆ ಬರುತ್ತಿದ್ದಾರೆ. ಅಲ್ಲದೆ, ಈ ಖಾದಿ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ. ಹಾಗೂ ಚಳಿಗಾಲದಲ್ಲಿ ಬಿಸಿ ನೀಡುತ್ತದೆ ಎಂದು ಹೇಳಿದರು.
ಮತ್ತೊಬ್ಬ ಖಾದಿ ವ್ಯಾಪಾರಿ ಬಸವರಾಜ್ ಅವರನ್ನು ಮಾತನಾಡಿಸಿದಾಗ , "ನಮ್ಮ ಮಳಿಗೆಯಲ್ಲಿ 4,200 ರಿಂದ 9,500 ರೂ.ಬೆಲೆಯ ಸೀರೆಗಳಿದ್ದು, ಇಲ್ಲಿಯವರೆಗೆ 5 ಲಕ್ಷ ರೂ.ವ್ಯಾಪಾರವಾಗಿದೆ. ಆದರೆ, ಇದೇ ಖಾದಿ ಉತ್ಸವವನ್ನು ಜನವರಿಯಲ್ಲಿ ಆಯೋಜಿಸಿದ್ದರೆ ಇನ್ನೂ ಉತ್ತಮ ವ್ಯಾಪಾರವಾಗುತ್ತಿತ್ತು" ಎಂದು ಹೇಳಿದರು.
ಎಪ್ರಿಲ್, ಮೇ ತಿಂಗಳಲ್ಲಿ ಶಾಲೆಗಳು ಪ್ರಾರಂಭವಾಗುವುದರಿಂದ ಪೋಷಕರಿಗೆ ಖಾದಿ ಉತ್ಸವದ ಕಡೆಗೆ ಹೆಚ್ಚು ಬರಲಾಗುವುದಿಲ್ಲ. ಹೀಗಾಗಿ, ಜನವರಿ ತಿಂಗಳಲ್ಲಿ ಖಾದಿ ಉತ್ಸವ ಪ್ರಾರಂಭವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದರು.
‘ಖಾದಿ ಉತ್ಸವಕ್ಕೆ ಬಂದಿರುವುದು ಖುಷಿ ಅನಿಸುತ್ತಿದೆ. ಈ ಉತ್ಸವದಲ್ಲಿ ಎಲ್ಲ ಡಿಸೈನ್ ಇರುವ ಬಟ್ಟೆಗಳೂ ಇದ್ದು, ಕೊಂಡುಕೊಳ್ಳಲು ಮನಸ್ಸಾಗುತ್ತಿದೆ. ಇಂತಹ ಉತ್ಸವಗಳು ಪದೇ ಪದೇ ಆಯೋಜನೆಯಾಗಬೇಕು.’
-ದಿಗಂಬರ ಶಾಂತಪುರೆ, ಗ್ರಾಹಕ
‘ಖಾದಿ ಉತ್ಸವದ ಮಳಿಗೆಗಳಲ್ಲಿ ವಿವಿಧ ರೀತಿಯ ಖಾದಿ ಬಟ್ಟೆಗಳು ಹಾಗೂ ಶರ್ಟ್‌ಗಳಿದ್ದು, ದೇಶಿಯತೆ ಈ ಉತ್ಸವದಲ್ಲಿ ಕಂಡು ಬರುತ್ತಿದೆ. ಇಂತಹ ಉತ್ಸವವನ್ನು ತಾವು ಇದೇ ಮೊದಲ ಬಾರಿಗೆ ನೋಡಿದ್ದು, ಖುಷಿಯಾಗುತ್ತಿದೆ.’
-ಪುಂಡಲಿಕ ಎಕ್ಕುಂಬಿ, ಗ್ರಾಹ