ಫತ್ವಾಗಳನ್ನು ಹೊರಡಿಸುವವರ ವಿರುದ್ಧ ಕ್ರಮ : ಸರಕಾರಕ್ಕೆ ಸೋನು ನಿಗಮ್ ಆಗ್ರಹ
ಹೊಸದಿಲ್ಲಿ,ಮೇ 7: ಕಳೆದ ತಿಂಗಳು ಮಸೀದಿಗಳಲ್ಲಿ ಅಝಾನ್‌ಗೆ ಧ್ವನಿವರ್ಧಕಗಳ ಬಳಕೆಯ ವಿರುದ್ಧ ಟ್ವೀಟಿಸುವ ಮೂಲಕ ರಾಷ್ಟ್ರಾದ್ಯಂತ ವಿವಾದವನ್ನು ಸೃಷ್ಟಿಸಿದ್ದ ಗಾಯಕ ಸೋನು ನಿಗಮ್ ಅವರು ಈಗ ‘ಫತ್ವಾ’ದ ರೂಪದಲ್ಲಿ ಜೀವ ಬೆದರಿಕೆಗಳನ್ನು ಒಡ್ಡಿದ್ದವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ರಜತ್ ಶರ್ಮಾ ಅವರ ಟಿವಿ ಕಾರ್ಯಕ್ರಮ ‘ಆಪ್ ಕಿ ಅದಾಲತ್ ’ನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದ ನಿಗಮ್, ‘‘ಸರ್ವವ್ಯಾಪಿಯಾಗಿರುವ ದೇವರನ್ನು ನಾನು ನಂಬುತ್ತೇನೆ. ಆದರೆ ಇನ್ನೋರ್ವ ವ್ಯಕ್ತಿಯ ತಲೆ ಬೋಳಿಸು, ಅವನನ್ನು ಕೊಲ್ಲು ಎಂದೆಲ್ಲ ಯಾರಾದರೂ ಫತ್ವಾ ಹೊರಡಿಸುವ ಈ ಮನೋಸ್ಥಿತಿಯು ನನಗೆ ಇಷ್ಟವಿಲ್ಲ. ನನ್ನ ತಲೆ ತೆಗೆಯಲೂ ಫತ್ವಾ ಹೊರಬಿದ್ದಿತ್ತು. ನನ್ನ ಅಭಿಪ್ರಾಯದಲ್ಲಿ ಇಂತಹ ಫತ್ವಾಗಳ ವಿರುದ್ಧ ಸರಕಾರವೇನಾದರೂ ಮಾಡಬೇಕು ’’ಎಂದು ಹೇಳಿದರು.
‘‘ನಾವು ನಾಗರಿಕ ಮತ್ತು ಪ್ರಜಾಸತ್ತಾತ್ಮಕ ದೇಶದಲ್ಲಿ ಬದುಕುತ್ತಿದ್ದೇವೆ. ನಮ್ಮದು ಪ್ರಜಾಪ್ರಭುತ್ವ. ಫತ್ವಾದಂತಹ ವಿಷಯಗಳಿಗೆ ನಾವು ಹೇಗೆ ಅವಕಾಶ ಕೊಡಬಲ್ಲೆವು? ಗೋರಕ್ಷಕರಿಂದ ಜನರ ಹತ್ಯೆಗಳನ್ನೂ ನಾನು ವಿರೋಧಿಸುತ್ತೇನೆ. ನಾವು ಸಂಪೂರ್ಣವಾಗಿ ಅವರಿಗೆ ವಿರುದ್ಧವಾಗಿದ್ದೇನೆ’’ಎಂದರು.
‘‘ಯಾವುದೇ ರೀತಿಯಲ್ಲಿಯೂ ಗೂಂಡಾಗಿರಿಯನ್ನು ನಾನು ವಿರೋಧಿಸುತ್ತೇನೆ. ನೀವು ಗುಂಪೊಂದನ್ನು ಜೊತೆಗೊಯ್ದು ಧರ್ಮದ ಹೆಸರಿನಲ್ಲಿ ಕುಟುಂಬಗಳಿಗೆ ಬೆದರಿಕೆ ಯೊಡ್ಡುವಂತಿಲ್ಲ. ನಮ್ಮ ದೇಶದಲ್ಲಿ ಇಂತಹ ಘಟನೆಗಳು ನಡೆಯಬಾರದು. ವಾಸ್ತವದಲ್ಲಿ ನಾವೆಲ್ಲ ಈ ದೇಶದಲ್ಲಿ ಚೆನ್ನಾಗಿಯೇ ಇದ್ದೇವೆ. ಈ ದಿನಗಳಲ್ಲಿ ಇದು ಇನ್ನೂ ಉತ್ತಮವಾಗಿದೆ. ಇದು ರಾಜಕೀಯ ಹೇಳಿಕೆಯಲ್ಲ, ಆದರೆ ‘ಅಚ್ಛೇ ದಿನ್ ’ಗಳು ಬರುತ್ತಿವೆಯೆಂದು ನಾನು ಭಾವಿಸಿದ್ದೇನೆ ’’ಎಂದೂ ನಿಗಮ್ ಹೇಳಿದರು.
ನೀವು ವಿದೇಶದಲ್ಲಿ ನೆಲೆಸಲು ಬಯಸಿದ್ದೀರಾ ಎಂಬ ಪ್ರಶ್ನೆಗೆ, ಭಾರತ ತನ್ನ ಮನೆ ಎಂದು ಉತ್ತರಿಸಿದ ನಿಗಮ್,ಎಲ್ಲಾದರೂ ದೂರ ಹೋಗಬೇಕೆಂದು ತನಗೆ ಕೆಲವು ಬಾರಿ ಅನ್ನಿಸಿದೆ. ಆದರೆ ಎಲ್ಲವೂ ಸರಿಯಾಗಿರುವ ಯಾವುದೇ ದೇಶ ಈ ಭೂಮಿಯಲ್ಲಿಲ್ಲ. ಎಲ್ಲ ಕಡೆಯೂ ಏನಾದರೂ ಕೊರತೆಗಳು ಇದ್ದೇ ಇರುತ್ತವೆ ಎಂದರು.