ಯಾರ ಮುಲಾಜೂ ಇಲ್ಲದ ಗದ್ಯಗಳು...
ಈ ಹೊತ್ತಿನ ಹೊತ್ತಿಗೆ
ಕತೆ ಮತ್ತು ಕಾವ್ಯ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿರುವ ಹರಿಯಪ್ಪ ಅತ್ಯುತ್ತಮ ಗದ್ಯ ಲೇಖಕರೂ ಎನ್ನುವುದನ್ನು ಪರಿಚಯಿಸುತ್ತದೆ ಅವರ ಇತ್ತೀಚಿನ ಗದ್ಯ ಬರಹಗಳ ಸಂಗ್ರಹ ‘ಯಾರ ಮುಲಾಜೂ ಇಲ್ಲದೆ...’. ಮುಂಗಾರು ಪತ್ರಿಕೆಗಳಲ್ಲಿ ಬರೆದ ಲೇಖನಗಳಿಂದ ಹಿಡಿದು ಇತ್ತೀಚಿನ ಕೆಲವು ಸಂದರ್ಭಗಳಿಗೆ ಪೂರಕವಾಗಿಬರೆದ ಲೇಖನಗಳವರೆಗೆ ಎಲ್ಲವೂ ನೇರ ಮತ್ತು ವಸ್ತುನಿಷ್ಠ ವಾದುಗಳು. ಕೃತಿಯ ಹೆಸರಿಗೆ ಪೂರಕವಾದುಗಳು. ಲೇಖನ, ವಿಮರ್ಶೆ, ಪತ್ರಗಳು, ಅನಿಸಿಕೆ, ಲಹರಿ, ಚಿಂತನೆ ಇವೆಲ್ಲವುಗಳನ್ನು ಒಳಗೊಂಡ ಈ ಕೃತಿ ಇದು. ಕೃತಿಯಲ್ಲಿ ಒಟ್ಟು ಐದು ವಿಭಾಗಗಳಿವೆ. ಮೊದಲನೆಯದು ಲೇಖನಗಳಿಗೆ ಸೀಮಿತವಾಗಿದೆ. ಸಾಹಿತ್ಯ, ಸಂಸ್ಕೃತಿಯ ಮೂಲಕ ವರ್ತಮಾನವನ್ನು ಶೋಧಿಸುವ ಕೆಲಸವನ್ನು ಅವರು ಮಾಡುತ್ತಾರೆ. ಸದ್ಯದ ಸಾಹಿತ್ಯಕ ಮತ್ತು ಸಾಂಸೃತಿಕ ರಾಜಕಾರಣಗಳನ್ನು ವಿಶ್ಲೇಷಿಸುವ ಕೆಲಸ ಹಲವು ಲೇಖನಗಳಲ್ಲಿ ನಡೆಯುತ್ತವೆ. ನವೋದಯ ಮತ್ತು ನವ್ಯ ಸಾಹಿತ್ಯ ನಡುವೆ ನಿಂತ ಯುವ ಬರಹಗಾರನ ಸವಾಲುಗಳನ್ನು ಪ್ರಸ್ತಾಪಿಸುತ್ತಾ ಇವುಗಳನ್ನು ಸಮನ್ವಯಗೊಳಿಸುವ ಕಲೆಯನ್ನು ತಮ್ಮದಾಗಿಸಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯವನ್ನು ತಮ್ಮ ಮೊದಲ ಲೇಖನದಲ್ಲಿ ಹೇಳುತ್ತಾರೆ. ‘ಭಾಷೆಯಲ್ಲಿ ಮೋಸ-ಜೀವ ವಿರೋಧ ಮತ್ತು ಪಲಾಯನ ವಾದ’ ಲೇಖನದಲ್ಲಿ ಕೆಲವರಿಗಾಗಿ ಮಾತ್ರ ಈ ನೆಲದಿಂದ ಮೇಲೇರಿ ಮೆರೆಯುತ್ತಿರುವ ಭಾಷೆ ರಮ್ಯ ಕನಸಾಗಿ, ಬೆಡಗಾಗಿ ಅಲೌಕಿಕ ದಿವ್ಯವಾಗಿ ಕಾಡುತ್ತಿರುವ ಭಾಷೆ ಈ ನೆಲಕ್ಕೆ ಇಳಿಯುವ, ನಮ್ಮ ಭಾಷೆಯಾಗುವ ಅಗತ್ಯವಿದೆ ಎನ್ನುತ್ತಾರೆ. ಪರಂಪರಾಗತ ಭಾಷಾ ಸ್ವರೂಪಕ್ಕೆ ಡೈನಮೈಟ್ ಇಡುವುದೆಂದರೆ ಪರ್ಯಾಯವಾದ ಒಂದು ಪ್ರಗತಿಶೀಲ ಜೀವಪರ ಸಂಸ್ಕೃತಿಯನ್ನು ನಿರ್ಮಿಸುವುದು ಎಂದು ಲೇಖಕರು ಭಾವಿಸುತ್ತಾರೆ. ಈ ಕೃತಿಯ ಇನ್ನೊಂದು ಅತ್ಯಂತ ಕುತೂಹಲಕರವಾದ ಲೇಖನ ‘ಗಣಪತಿ-ಬಂಡಾಯದ ನೇತಾರ?’. ನಾವು ಆರಾಧಿಸುವ ಗಣಪತಿ ಯಾ ವಿನಾಯಕ ಬೇಟೆ ಹಾಗೂ ರೈತ ಜನಾಂಗದ ಮುಖಂಡನಾಗಿದ್ದ ಎನ್ನುವ ಅಂಶವನ್ನು ಪ್ರಸ್ತಾಪಿಸುತ್ತಾ ಅದಕ್ಕೆ ಬೇಕಾದ ದಾಖಲೆಗಳನ್ನು ಈ ಬರಹದಲ್ಲಿ ನೀಡುತ್ತಾರೆ. ದ್ರಾವಿಡ ಗಣಪತಿಯನ್ನು ಹೇಗೆ ಆರ್ಯನನ್ನಾಗಿಸಲಾಗಿದೆ ಮತ್ತು ಆತನ ಚರಿತ್ರೆಯನ್ನು ಹೇಗೆ ವಿಸ್ಮತಿಗೆ ಒಯ್ಯಲಾಗಿದೆ ಎನ್ನುವ ಸ್ಫೋಟಕ ಅಂಶವನ್ನು ಹೇಳುವ ಪ್ರಯತ್ನ ಮಾಡುತ್ತಾರೆ. ಈ ವಿಭಾಗದಲ್ಲಿರುವ ಸುಮಾರು 15 ಲೇಖನಗಳು ತನ್ನ ವಿಷಯ ವೈವಿಧ್ಯತೆಯಿಂದ ಸೆಳೆಯುತ್ತವೆ. ಭಾಗ ಎರಡನ್ನು ವ್ಯಕ್ತಿಚಿತ್ರಕ್ಕೆ ಸೀಮಿತವಾಗಿಸಿದ್ದಾರೆ. ಇಡ್ಯ, ರಾಮಚಂದ್ರದೇವರ ಬದುಕಿನ ಚಿತ್ರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.ಭಾಗ 3ರಲ್ಲಿ ಕವಿ ಪೇಜಾವರ ಹರಿಯಪ್ಪ ಜೊತೆಗಿನ ಸಂದರ್ಶನಕ್ಕೆ ಸೀಮಿತವಾದರೆ, ಭಾಗ 4ರಲ್ಲಿ ವಿವಿಧ ಕೃತಿ, ಸಾಹಿತ್ಯ, ಸಮಸ್ಯೆಗಳಿಗೆ ಸಂಬಂಧಿಸಿದ ಪತ್ರಗಳಿವೆ. ಭಾಗ 5ರಲ್ಲಿ ಬರ್ಟ್ರಂಡ್ ರಸೆಲ್ ಅವರ ನೈಸ್ ಪೀಪಲ್ ಕೃತಿಯನ್ನು ‘ಸಭ್ಯ ಜನರು’ ಹೆಸರಲ್ಲಿ ಕನ್ನಡಕ್ಕಿಳಿಸಿದ್ದಾರೆ. ಶ್ರೇಯಸ್ ಪ್ರಕಾಶನ ಮಂಗಳೂರು ಹೊರತಂದಿರುವ 140 ಪುಟಗಳ ಈ ಕೃತಿಯ ಮುಖಬೆಲೆ 130 ರೂ.. ಆಸಕ್ತರು 94812 26150 ದೂರವಾಣಿಯನ್ನು ಸಂಪರ್ಕಿಸಬಹುದು.