ಸ್ವಚ್ಛತಾ ಸಮೀಕ್ಷೆಯ ಹಿಂದೆ ರಾಜಕೀಯ ಹಸ್ತಕ್ಷೇಪ?
ಕೇಂದ್ರ ಸರಕಾರದ ಸ್ವಚ್ಛತಾ ನಗರದ ಸಮೀಕ್ಷೆಯಲ್ಲಿ ರಾಜಕೀಯ ಹಸ್ತಕ್ಷೇಪಗಳು ಕಾಣಿಸಿಕೊಂಡಿವೆಯೇ? ಹಲವು ರಾಜ್ಯಗಳು ಈ ಬಗ್ಗೆ ಗೊಣಗುವುದಕ್ಕೆ ಆರಂಭಿಸಿವೆ. ಬಿಜೆಪಿಯೇತರ ರಾಜ್ಯಗಳ ಕೆಲವು ಸ್ವಚ್ಛ ನಗರಗಳನ್ನು ಸಮೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ಹಿಂದಕ್ಕೆ ತಳ್ಳಲಾಗಿದೆ ಎಂಬ ಆರೋಪಗಳು ರಾಜಕಾರಣಿಗಳಿಂದಲೂ, ತಜ್ಞರಿಂದಲೂ ಕೇಳಿ ಬರುತ್ತಿವೆ. ಕೇರಳ ರಾಜ್ಯವೂ ಈ ನಿಟ್ಟಿನಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ. ಈ ವರ್ಷದ ಅಗ್ರ 10 ಅಥವಾ 20 ನಗರಗಳಲ್ಲಿ ಕೇರಳದ ಒಂದು ನಗರವೂ ಸೇರ್ಪಡೆಯಾಗಿಲ್ಲ. ಇದಕ್ಕಿಂತಲೂ ಕಳವಳಕಾರಿ ವಿಚಾರವೆಂದರೆ, ಮೂರು ಮಹಾನಗರಗಳು 2016ರ ಸ್ಥಾನದಿಂದ ಕೆಳಕ್ಕೆ ಕುಸಿದಿವೆ. ದೇವರ ಸ್ವಂತ ದೇಶವೆಂದು ಕರೆಸಿಕೊಂಡಿರುವ ಕೇರಳದ ಕುರಿತಂತೆ ಬಲಪಂಥೀಯರಿಗೆ ಇರುವ ಅಸಮಾಧಾನದ ಪರಿಣಾಮ ಈ ಸಮೀಕ್ಷೆಯಲ್ಲೂ ಕಂಡು ಬಂದಿದೆಯೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಸ್ವಚ್ಛತೆ ಮತ್ತು ಹಸಿರಿಗಾಗಿ ತಿರುವನಂತಪುರಂ ತನ್ನದೇ ರೀತಿಯಲ್ಲಿ ದೇಶದ ಗಮನ ಸೆಳೆಯುತ್ತಾ ಬಂದಿದೆ. ಆದರೆ ಈ ಬಾರಿ ತಿರುವನಂತಪುರಂ, ಅಹ್ಮದಾಬಾದ್ ಮತ್ತು ಹೈದರಾಬಾದ್‌ಗಿಂತ ಕೊಳಕು ಎನಿಸಿಕೊಂಡಿದೆ. ಸಮೀಕ್ಷೆಯ ಅನ್ವಯ ಗುಜರಾತ್, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ನಗರಗಳು ದೇಶದ ಸ್ವಚ್ಛ ನಗರಗಳ ಪೈಕಿ ಶೇ.50ರಷ್ಟು ಪಾಲು ಪಡೆದಿವೆ. ತೀರಾ ಸುಂದರ ರಮಣೀಯ ದೃಶ್ಯಾವಳಿಯಿಂದ ವಿಶ್ವದ ಗಮನ ಸೆಳೆದಿರುವ ಕೇರಳದ ಯಾವ ನಗರಗಳೂ ಈ ಪಟ್ಟಿಯಲ್ಲಿಲ್ಲ. ಕಳೆದ ಬಾರಿಯೂ ಕೇರಳಕ್ಕೆ ಇದೇ ಅನುಭವವಾಗಿತ್ತು. ಕಳೆದ ಪಟ್ಟಿಯಲ್ಲಿ ಕೂಡಾ ತಿರುವನಂತಪುರ 40ನೆ ಸ್ಥಾನದಲ್ಲಿತ್ತು.
ಆದರೆ ಸರಕಾರ ಮಾತ್ರ ಈ ಬಗ್ಗೆ ವಿಶೇಷ ಚರ್ಚೆಯನ್ನು ಬಯಸುತ್ತಿಲ್ಲ. ಬಹುಶಃ ಈ ಚರ್ಚೆ ಮುನ್ನೆಲೆಗೆ ಬಂದರೆ, ಕೇರಳವನ್ನು ನರಕ ಮಾಡುತ್ತಿರುವ ಕೆಲವು ಸಂಗತಿಗಳು ಚರ್ಚೆಯ ಜೊತೆಗೆ ಸೇರಿಕೊಳ್ಳಬಹುದು ಎನ್ನುವ ಭಯವಿರಬೇಕು. ಈ ಸಮೀಕ್ಷೆಯಡಿ 2,000 ಅಂಕಗಳನ್ನು ನೀಡಲಾಗುತ್ತದೆ. ಇದರಲ್ಲಿ ಅರ್ಧದಷ್ಟು ಅಂಕಗಳು ಸಮೀಕ್ಷೆಗೆ ಒಳಪಟ್ಟ ನಗರಗಳ ಪಾಲಿಕೆಗಳ ಅಂಕಿ ಅಂಶವನ್ನು ಆಧರಿಸಿರುತ್ತದೆ. ಇದು ಸಮೀಕ್ಷೆಯ ಹೆಚ್ಚು ವಸ್ತುನಿಷ್ಠ ಅಂಶ. ಜತೆಗೆ ಇದರಲ್ಲಿ ಇತಿಮಿತಿಗಳು ಕೂಡಾ ಕನಿಷ್ಠ. ಕೇರಳದ ಕಳಪೆ ರ್ಯಾಂಕಿಂಗ್‌ಗೆ ಮುಖ್ಯ ಕಾರಣವೆಂದರೆ, ಸಮೀಕ್ಷೆಯಲ್ಲಿ ಹೆಚ್ಚು ಒತ್ತು ನೀಡಿರುವುದು ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆ, ಗುಡಿಸುವಿಕೆ ಮತ್ತು ಕಸ ಸಂಗ್ರಹ ಮತ್ತು ಸಾಗಣೆ ವ್ಯವಸ್ಥೆಗೆ ನೀಡಿರುವುದು. ಒಟ್ಟು ಅಂಕಗಳಲ್ಲಿ ಶೇ.40ರಷ್ಟು ಪಾಲು ಇದಕ್ಕೆ ನೀಡಲಾಗುತ್ತಿದೆ. ತ್ಯಾಜ್ಯಗಳ ಸಂಸ್ಕರಣೆ ಮತ್ತು ವಿಲೇವಾರಿಗೆ ಶೇ.20ರಷ್ಟು ಅಂಕಗಳಿವೆ. ಇದರಲ್ಲಿ ಕೇರಳ ನಗರಗಳು ವಿಫಲವಾಗಿವೆ. ಏಕೆಂದರೆ, ಇಲ್ಲಿ ನಿರ್ದಿಷ್ಟವಾಗಿ ಘನ ತ್ಯಾಜ್ಯ ವಿಲೇವಾರಿ ಯೋಜನೆಗಳಿಲ್ಲ. ಅಷ್ಟೇ ಅಲ್ಲದೆ ಮನೆ ಮನೆಯಿಂದ ಕಸ ಸಂಗ್ರಹ ಹಾಗೂ ಸಾಗಣೆ ವ್ಯವಸ್ಥೆಯೂ ಇಲ್ಲ.
ಕೆಲ ವರ್ಷಗಳ ಹಿಂದೆ ಕೇರಳ ರಾಜ್ಯ ತ್ಯಾಜ್ಯ ನಿರ್ವಹಣೆ ಬಗ್ಗೆ ದೊಡ್ಡ ಸಂಘರ್ಷವನ್ನು ಎದುರಿಸುತ್ತಿತ್ತು. ಇದರ ಅಕ ಜನದಟ್ಟಣೆ ಮತ್ತು ಪ್ರತೀ ಇಂಚು ನೆಲವನ್ನು ಕೂಡಾ ಊಹಾತ್ಮಕ ರಿಯಲ್ ಎಸ್ಟೇಟ್ ವಲಯವಾಗಿ ಪರಿಗಣಿಸಿರುವುದರಿಂದ ಡಂಪಿಂಗ್ ಯಾರ್ಡ್ ಅಥವಾ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೂಕ್ತವಾದ ಭೂಮಿ ಸಿಗಲಿಲ್ಲ. ಜನರು ತಮ್ಮ ಮನೆಗಳ ಪಕ್ಕದಲ್ಲಿ ಇಂಥ ಘಟಕಗಳ ಸ್ಥಾಪನೆಗೆ ಅವಕಾಶ ನೀಡಲಿಲ್ಲ. ತಿರುವನಂತಪುರ ಮಹಾನಗರಪಾಲಿಕೆ ತ್ಯಾಜ್ಯ ಸಂಸ್ಕರಣಾ ಘಟಕವನ್ನು ತನ್ನದೇ ದೊಡ್ಡ ಜಮೀನಿನಲ್ಲಿ ಸ್ಥಾಪಿಸಲು ಮುಂದಾದಾಗ ಸುತ್ತಮುತ್ತಲ ಜನರಿಂದ ತೀವ್ರ ಪ್ರತಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾದವು. ಪಾಲಿಕೆ ನಮ್ಮ ಪರಿಸರವನ್ನು ಮಲಿನಗೊಳಿಸಲು ಮುಂದಾಗಿದೆ ಎಂದು ಆಕ್ಷೇಪಿಸಿದರು.
ರಾಜಧಾನಿಯ ಬಹುತೇಕ ಪ್ರದೇಶದಲ್ಲಿ ಕಸ ಸಂಗ್ರಹ ವ್ಯವಸ್ಥೆಯನ್ನು ಬಹುತೇಕ ಹಿಂದಕ್ಕೆ ಪಡೆಯಲಾಗಿದೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿದೆ. ಜನರು ತಮ್ಮಲ್ಲಿ ಉತ್ಪತ್ತಿಯಾದ ತ್ಯಾಜ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುವ ವ್ಯವಸ್ಥೆ ಇದೆ. ಕೆಲವರು ರಸ್ತೆಗಳಿಗೆ ಇದನ್ನು ಎಸೆದರೆ ಮತ್ತೆ ಕೆಲವರು ಅನಿಯಂತ್ರಿತ ಖಾಸಗಿ ವಲಯದವರಿಗೆ ಕಸ ನೀಡುತ್ತಾರೆ. ಇವರು ಸಾಮಾನ್ಯವಾಗಿ ದುಬಾರಿ ಮಾಸಿಕ ಶುಲ್ಕ ವಿಸುತ್ತಾರೆ. ನಗರದ ಬಹುತೇಕ ಪ್ರಮುಖ ಪ್ರದೇಶಗಳಲ್ಲಿ ಕಸದ ರಾಶಿಗಳು ಕಂಡುಬರುವುದಿಲ್ಲವಾದರೂ, ನಗರದ ಹಲವೆಡೆ ಕಸಗಳನ್ನು ಸುರಿಯುವ ಕಪ್ಪು ಪ್ರದೇಶಗಳಿವೆ. ನಗರದ ಬಹುತೇಕ ಜಲಮಾರ್ಗಗಗಳು ಮಲಿನವಾಗಿವೆ. ಇಷ್ಟು ಸಾಲದೆಂಬಂತೆ ಸಮುದ್ರ ಕಿನಾರೆಗಳು ಕೊಳಕಾಗಿವೆ. ಕೋವಳಂ ಹೆದ್ದಾರಿಯ ಅತ್ಯಂತ ಪ್ರಸಿದ್ಧ ಬೀಚ್‌ಗಳು ಕಸದ ದೊಡ್ಡ ರಾಶಿಗಳಾಗಿ ಮಾರ್ಪಟ್ಟಿವೆ.
ಸುಮಾರು 1,000 ಅಂಕಗಳ ಪೈಕಿ 600ಕ್ಕೂ ಹೆಚ್ಚು ಅಂಕಗಳನ್ನು ಈ ವಲಯಕ್ಕೆ ನಿಗದಿಪಡಿಸಲಾಗಿದೆ. ಈ ವಿಚಾರದಲ್ಲಿ ಬಹುಶಃ ಕೇರಳದ ನಗರಗಳು ಸ್ವಚ್ಛತೆ ದೃಷ್ಟಿಯಿಂದ ಕಪ್ಪುಪಟ್ಟಿಯಲ್ಲಿವೆ. ಉಳಿದ 1,000 ಅಂಕಗಳ ಪೈಕಿ, 500 ಅಂಕಗಳನ್ನು ವೀಕ್ಷಣೆಗೆ ಬಂದ ಅಂಕಿ ಅಂಶಗಳ ಆಧಾರದಲ್ಲಿ ನೀಡಲಾಗುತ್ತದೆ. ಜನಸಾಮಾನ್ಯರ ಅಭಿಪ್ರಾಯಗಳಿಗೂ ಅಷ್ಟೇ ಅಂಕಗಳನ್ನು ನಿಗದಿಪಡಿಸಲಾಗಿದೆ. ವಿವಿಧಾನಗಳಿಗೆ ಅನುಗುಣವಾಗಿ ಯಾವ ವಿಚಕ್ಷಣಾ ಸಂಸ್ಥೆಗಳೂ ಕೂಡಾ ಕೇರಳ ನಗರಗಳಿಗೆ ಹೆಚ್ಚಿನ ಅಂಕಗಳನ್ನು ನೀಡಲಾರವು. ಏಕೆಂದರೆ, ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಈ ನಗರಗಳ ಕೊಳಕು ಮುಖಗಳು ಖಂಡಿತವಾಗಿಯೂ ಅರಿವಿಗೆ ಬರುತ್ತವೆ. ಪ್ರತಿಕ್ರಿಯೆಗಳ ವಿಚಾರದಲ್ಲಿ, ನಗರವನ್ನು ಮಲಿನಗೊಳಿಸುವ ಬಹುತೇಕ ಮಂದಿ ತಮ್ಮ ಪರಿಸರದ ಬಗ್ಗೆ ಸಂತೋಷ ಹೊಂದಿರಲು ಸಾಧ್ಯವಿಲ್ಲ. ಏಕೆಂದರೆ ಸಾಂಪ್ರದಾಯಿಕವಾಗಿ ಈ ಜನರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆಯೇ ವಿನಃ ತಮ್ಮ ಕರ್ತವ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಬಹುಶಃ ಇದು ರೂಪುಗೊಳ್ಳುತ್ತಿರುವ ಸಮಸ್ಯೆ. ಏಕೆಂದರೆ ವಿಶ್ವದಲ್ಲಿ ಯಾವ ನಗರವೂ ಸಾಂಸ್ಥಿಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲದೇ ಸುಸ್ಥಿರವಾಗಿರಲಾರದು. ಸ್ವಯಂ ಪ್ರಯತ್ನಗಳಾದ ಮನೆಗಳಲ್ಲೇ ಕಾಂಪೋಸ್ಟಿಂಗ್ ಮತ್ತು ಮರುಬಳಕೆಯಂಥ ಕ್ರಮಗಳು ತ್ಯಾಜ್ಯದ ಹೊರೆಯನ್ನು ಕಡಿಮೆ ಮಾಡಬಲ್ಲದು. ಆದರೆ ಇದು ಇಡೀ ಸಮಸ್ಯೆಯ ಪರಿಹಾರಕ್ಕೆ ಅನುಕೂಲವಾಗದು. ದೊಡ್ಡ ಪ್ರಯತ್ನಗಳು ಖಂಡಿತವಾಗಿಯೂ ನಾಗರಿಕ ಸಂಸ್ಥೆಗಳಿಂದಲೇ ಬರಬೇಕು. ಸಾಂಸ್ಥಿಕಮಟ್ಟದಲ್ಲೇ ತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆಗೆ ವ್ಯವಸ್ಥೆಯಾಗಬೇಕು. ಇದರ ಬದಲಾಗಿ ಸ್ಥಳೀಯ ಸಂಸ್ಥೆಗಳು ಕಣ್ಣುಮುಚ್ಚಿಕೊಂಡು, ಮತ್ತೆ ಜನರೆಡೆಗೆ ಅದನ್ನು ತಳ್ಳುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ. ಬಹುತೇಕ ರಾಜ್ಯಗಳು ಈ ವಿಧಾನವನ್ನೇ ಅನುಸರಿಸುವುದರಿಂದ 1994ರ ಸೂರತ್ ಪ್ಲೇಗ್ ಪ್ರಕರಣದಂಥ ವಿಕೋಪಗಳಿಗೆ ಇದು ಕಾರಣವಾಗಬಹುದು. ಒಂದು ಕಾಲದಲ್ಲಿ ಸಾಂಕ್ರಾಮಿಕ ರೋಗಗಳಿಂದ ಬಹುತೇಕ ಮುಕ್ತವಾಗಿದ್ದ ರಾಜ್ಯದ ಬಹುತೇಕ ಭಾಗಗಳು ಇದೀಗ ಡೆಂಗ್, ಚಿಕುನ್‌ಗುನ್ಯಾ ಮತ್ತು ಮಲೇರಿಯಾ ಹರಡುವ ತಾಣಗಳಾಗಿ ಮಾರ್ಪಟ್ಟಿವೆ. ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾಂಕ್ರಾಮಿಕ ರೋಗಗಳಿಂದಾಗಿ ಸಂಭವಿಸುವ ಸಾವಿನ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಲೇ ಇದೆ.
ಆದರೆ ಬರೇ ತ್ಯಾಜ್ಯ ಸಂಸ್ಕರಣೆಯ ನಿರ್ವಹಣೆಯ ಅಂಕಿ ಅಂಶಗಳಷ್ಟೇ ಸ್ವಚ್ಛನಗರಕ್ಕೆ ಮಾಪನವೇ? ಈ ಪ್ರಶ್ನೆಯನ್ನೂ ಕೇರಳ ಎತ್ತುತ್ತದೆ. ಕೇರಳ ಸಹಜವಾಗಿಯೇ ಹಸಿರಿನಿಂದಾ ವೃತವಾದ ಪ್ರದೇಶ. ನದಿಗಳು, ಕೊಳ್ಳಗಳು ಇದರ ಹೆಗ್ಗಳಿಕೆ. ಈಗಲೂ ಸರಕಾರೇತರ ಸಂಸ್ಥೆಗಳ ಸಮೀಕ್ಷೆಯ ಪ್ರಕಾರ ಕೇರಳ ದೇಶದ ಸ್ವಚ್ಛ ರಾಜ್ಯಗಳಲ್ಲೊಂದು. ಹಾಗೆಯೇ ಅತ್ಯಂತ ಜಾಗೃತ ಜನರಿರುವ ರಾಜ್ಯವೂ ಕೇರಳವಾಗಿದೆ. ಕೇರಳ ಕಾರ್ಪೊರೇಟ್ ಶಕ್ತಿಗಳಿಗೆ ತುಂಬಾ ತಲೆನೋವಾಗಿರುವ ರಾಜ್ಯ. ಬೃಹತ್ ಕೈಗಾರಿಕೆಗಳನ್ನು ಅದು ತನ್ನೊಳಗೆ ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತಿಲ್ಲ ಹಾಗೂ ಇಂದಿಗೂ ಕೇರಳ ದಕ್ಷಿಣ ಭಾರತದ ಅತ್ಯುತ್ತಮ ಪ್ರವಾಸ ಕೇಂದ್ರಿತವಾಗಿರುವ ಹಸಿರು ರಾಜ್ಯ. ಜನಸಾಂದ್ರತೆಯಲ್ಲಿ ಮುಂದಿದ್ದರೂ, ಹಸಿರನ್ನು ಉಳಿಸಿಕೊಳ್ಳುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಸಂಸ್ಕೃತಿ ಸಂಪ್ರದಾಯಗಳ ವಿಶಿಷ್ಟತೆಯನ್ನೂ ಉಳಿಸಿಕೊಂಡಿವೆ. ಹೀಗಿರುವಾಗ ಕೇಂದ್ರದ ಸ್ವಚ್ಛ ನಗರ ಸಮೀಕ್ಷೆಯನ್ನು ಸಂಪೂರ್ಣ ಒಪ್ಪಿಕೊಳ್ಳುವುದೂ ಕಷ್ಟವೇ ಹೌದು.