ನೋಟು ರದ್ದು ವಿರುದ್ಧ ನಿಲ್ಲದ ಕೂಗು : 156 ದಿನಗಳಿಂದ ನಿರಂತರ ಏಕಾಂಗಿ ಹೋರಾಟ!
ಬೆಂಗಳೂರು, ಮೇ 9: ನೋಟು ರದ್ದುಗೊಂಡ ನಂತರ ಹಲವರಿಗೆ ತೊಂದರೆಯಾದರೆ, ಇನ್ನು ಕೆಲವರು ಹೊಸ ಬೆಳವಣಿಗೆ, ಬದಲಾವಣೆ ಬೇಕಾಗಿತ್ತು ಎಂದದ್ದೂ ಇದೆ. ಆ ನಂತರ ಎಲ್ಲರೂ ಬ್ಯಾಂಕ್‌ಗಳ ಮುಂದೆ ಸಾಲು ಸಾಲಾಗಿ ನಿಂತು ನೋಟು ಬದಲಾವಣೆ ಮಾಡಿಕೊಂಡರು. ಕಷ್ಟನಷ್ಟ ಅನುಭವಿಸಿದರು. ಸಾವುನೋವುಗಳೂ ಸುದ್ದಿಯಾದವು. ಆದರೆ, ನೋಟು ರದ್ದು ಕ್ರಮದ ವಿರುದ್ಧ ವ್ಯಕ್ತಿಯೊಬ್ಬರು 156 ದಿನಗಳಿಂದ ನಿರಂತರವಾಗಿ ಏಕಾಂಗಿಯಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನವೆಂಬರ್ 8 ರಂದು ಏಕಾಏಕಿ ಗರಿಷ್ಠ ಮುಖಬೆಲೆ 500 ಮತ್ತು 1 ಸಾವಿರ ರೂ. ನೋಟುಗಳ ಚಲಾವಣೆಯನ್ನು ಬಂದ್ ಮಾಡಿತು. ಅಂದಿನಿಂದ ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಸೇರಿದಂತೆ ವಿರೋಧ ವ್ಯಕ್ತಪಡಿಸಿದರು. ಮತ್ತು ಕಾವು ಆರುತ್ತಿದ್ದಂತೆ ಅಲ್ಲಿಗೇ ತಣ್ಣಗಾಯಿತು.
ಆದರೆ, ಹಳೇ ನೋಟುಗಳನ್ನು ಕೈಯಲ್ಲಿ ಹಿಡಿದ ವ್ಯಕ್ತಿಯೊಬ್ಬ ದೇಶದಾದ್ಯಂತ ಸುತ್ತಾಡುತ್ತಲೇ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಅಚ್ಚರಿಯೇ ಸರಿ.
ಕುಡಿಯುವ ನೀರಿಗೆ ಬೆಲೆ ನಿಗದಿ ಮಾಡಿರುವುದನ್ನು(ಬಾಟಲ್ ನೀರು) ವಿರೋಧಿಸಿ ಜತೆಗೆ ಇದನ್ನು ನಿಷೇಧಿಸಬೇಕೆಂದು ಬರೋಬ್ಬರಿ ಹದಿಮೂರು ವರ್ಷಗಳಿಂದ ಮಾತನ್ನೆ ಬಿಟ್ಟು ಮೌನವಾಗಿ ಹೋರಾಟ ನಡೆಸುತ್ತಿರುವ ‘ಮೌನಿ ಆಂಬ್ರೋಸ್’, ಇದೀಗ ನೋಟು ರದ್ದು ಕ್ರಮದ ವಿರುದ್ಧ ವೌನ ಪ್ರತಿಭಟನೆಗೆ ಮುಂದಾಗಿರುವುದಲ್ಲದೆ, ಈಗಾಗಲೇ ಹೊಸದಿಲ್ಲಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಆರ್‌ಬಿಐ ಕೇಂದ್ರ ಕಚೇರಿ ಮುಂಭಾಗ 25 ಸಾವಿರ ರೂ.ಮೌಲ್ಯದ ಹಳೇ ನೋಟುಗಳನ್ನಿಟ್ಟು ವೌನವಾಗಿ 156 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲೂ ಸಾರ್ವಜನಿಕವಾಗಿ ಹಳೇ ನೋಟುಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿರುವ ಅವರು, ಇದು ನೋಟು ನಿಷೇಧದ ಕ್ರಮದ ವಿರುದ್ಧ ನಡೆಸುತ್ತಿರುವ ಆಂದೋಲನ. ಅಲ್ಲದೆ, ಈ ಕ್ರಮ ಸಂವಿಧಾನ ಬದ್ಧವಿಲ್ಲ. ಬಡವರಿಗೆ ಅವಮಾನ ಮಾಡುವ ರೀತಿಯಲ್ಲಿದೆ. ಆರು ತಿಂಗಳಿನಿಂದ ಬಡವರು ತೊಂದರೆಯಲ್ಲಿದ್ದಾರೆ. ಇದಕ್ಕೆಲ್ಲಾ ಕೇಂದ್ರದಲ್ಲಿರುವ ಮೋದಿ ಸರಕಾರವೇ ಮೂಲ ಕಾರಣ ಎಂದು ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದವರಿಗೆ ಬರೆದು ತಿಳಿಸುತ್ತಿದ್ದಾರೆ.
ಹೊಸದಿಲ್ಲಿಯಲ್ಲಿಂದ ಆರಂಭ: ಮೊದಲ ಹಂತವಾಗಿ 2016ರ ಡಿಸೆಂಬರ್ 6ರಂದು ಹೊಸದಿಲ್ಲಿಯ ಜಂತರ್‌ಮಂತರ್ ಮೈದಾನದಲ್ಲಿ ಪ್ರತಿಭಟನೆ ಆರಂಭಿಸಿರುವ ಅವರು ಈಗಾಗಲೇ ಉತ್ತರಪ್ರದೇಶ, ಹರಿಯಾಣದಲ್ಲೂ ಪ್ರತಿಭಟನೆ ನಡೆಸಿದ್ದು, ಉತ್ತಮ ಜನಸ್ಪಂದನೆ ಸಿಕ್ಕಿದೆ. ಹಲವು ಎಡ ಮತ್ತು ಪ್ರಗತಿಪರ ಸಂಘಟನೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಪುಸ್ತಕದ ಹಣ ಇಲ್ಲ: ನಾನು ಪುಸ್ತಕಗಳನ್ನು ಮಾರಾಟ ಮಾಡುತ್ತೇನೆ. ಇದರಿಂದ ಬಂದಿದ್ದ 25 ಸಾವಿರ ರೂ.ಗಳನ್ನು ನನಗೆ ಮಾರಲು ಪುಸ್ತಕ ಕೊಟ್ಟಿದ್ದ ಪ್ರಕಾಶಕ, ಲೇಖಕರಿಗೆ ಹಿಂತಿರುಗಿಸಲು ಇಟ್ಟುಕೊಂಡಿದ್ದೆ. ಅಲ್ಲದೆ, ನೋಟು ಎಂದರೆ ನನ್ನ ಶ್ರಮ ಎಂದರ್ಥ. ನನ್ನ ಶ್ರಮವನ್ನೆ ಇಲ್ಲವಾಗಿಸಿ ಆರ್ಥಿಕ ಅಸ್ತಿತ್ವವನ್ನೆ ಕಸಿಯುವ ಹುನ್ನಾರವಾಗಿ ನನಗೆ ಇದು ತೋರಿತು. ಆದರೆ, ಏಕಾಏಕಿ ಈ ನಗದು ಚಲಾವಣೆಯಲ್ಲಿಲ್ಲ ಎಂದು ಬಿಟ್ಟರು. ನನ್ನ ಹಣಕ್ಕಾಗಿ ನಾನು ಏಕೆ ಬ್ಯಾಂಕ್ ಮುಂದೆ ನಿಲ್ಲಲಿ. ಹೀಗಾಗಿಯೇ ಪ್ರತಿಭಟನೆ ನಡೆಸುತ್ತಿದ್ದೇನೆ. ನನ್ನ ಹೋರಾಟಕ್ಕೆ ಜಯ ಸಿಗುತ್ತದೋ ಇಲ್ಲವೋ, ನನ್ನ ಪ್ರತಿಭಟನೆಯಂತೂ ಇದ್ದೇ ಇರುತ್ತದೆ ಎಂದು ಆಂಬ್ರೋಸ್ ಫಲಕಗಳಲ್ಲಿ ಬರೆದು ಕೊಂಡಿದ್ದಾರೆ.
ಒಟ್ಟಾರೆ, ಮೌನಿ ಆಂಬ್ರೋಸ್ ಅವರಿಗೆ ಹೋರಾಟ ಹೊಸದಲ್ಲ, ಆದರೆ, ನೋಟು ಅಮಾನ್ಯೀಕರಣದ ವಿರುದ್ಧ ಬರೋಬ್ಬರಿ 156 ದಿನಗಳಿಂದ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಹೊಸ ನೋಟು ಬಳಸಲ್ಲ, ಹಳೇ ನೋಟು ಬಿಡಲ್ಲ
ಹೊಸ ನೋಟು ಬಳಸಲ್ಲ, ಹಳೇ ನೋಟುಗಳನ್ನು ನಾನೆ ಹೋಗಿ ಬದಲಾಯಿಸುವುದಿಲ್ಲ. ಇದು ನನ್ನ ಹೋರಾಟದ ಮೊದಲ ಭಾಗ. ಹಾಗೆಯೇ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವ ನಾನು, ಹೊಸ 500 ಮತ್ತು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ. ಹಳೇ ನೋಟುಗಳನ್ನು ಕೊಟ್ಟರೆ ಮಾತ್ರ ಪುಸ್ತಕ ನೀಡುತ್ತೇನೆ.. ಎನ್ನುತ್ತಾರೆ ಆಂಬ್ರೋಸ್.