ಗರ್ಭಪಾತಕ್ಕೆ ಅನುಮತಿ ನಿರಾಕರಣೆ: ಎಚ್‌ಐವಿ ಪೀಡಿತೆಗೆ 3 ಲಕ್ಷ ರೂ. ಪರಿಹಾರ
ಬಿಹಾರ ಸರಕಾರಕ್ಕೆ ಸುಪ್ರೀಂ ಆದೇಶ
ಹೊಸದಿಲ್ಲಿ,ಮೇ 9: ಗರ್ಭಪಾತಕ್ಕೆ ತನಗೆ ಅನುಮತಿ ನೀಡಬೇಕೆಂಬ ಎಚ್‌ಐವಿ ಪೀಡಿತ ಅತ್ಯಾಚಾರ ಸಂತ್ರಸ್ತೆಯ ಮನವಿಯನ್ನು ತಿರಸ್ಕರಿಸಿದ್ದಕ್ಕಾಗಿ 3 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಬಿಹಾರ ಸರಕಾರಕ್ಕೆ ಆದೇಶಿಸಿದೆ. ಭಾರತದಲ್ಲಿ ತಾಯಿಯ ಜೀವಕ್ಕೆ ಅಪಾಯವಿರುವ ಸಂದರ್ಭಗಳನ್ನು ಹೊರತುಪಡಿಸಿ, ಗರ್ಭಿಣಿಗೆ 20 ವಾರಗಳೊಳಗೆ ಗರ್ಭಪಾತ ಮಾಡಿಕೊಳ್ಳುವುದಕ್ಕೆ ಕಾನೂನು ಮಿತಿ ವಿಧಿಸಿದೆ. ಗರ್ಭಪಾತಕ್ಕೆ ಅವಕಾಶ ನೀಡುವ ಅವಧಿಯನ್ನು 24 ವಾರಗಳವರೆಗೆ ವಿಸ್ತರಿಸುವುದಕ್ಕೆ ಅನುಮತಿ ನೀಡುವ ನೂತನ ಕರಡು ವಿಧೇಯಕವೊಂದು ಸಿದ್ಧಗೊಂಡಿದ್ದು ಅದು ಇನ್ನಷ್ಟೇ ಸಂಸತ್‌ನಲ್ಲಿ ಮಂಡನೆಯಾಗಬೇಕಿದೆ.
ತಾನು ಎಚ್‌ಐವಿ ಪೀಡಿತೆಯಾಗಿರುವುದರಿಂದ ಗರ್ಭದಲ್ಲಿರುವ ತನ್ನ ಮಗುವಿಗೂ ಆ ಮಾರಣಾಂತಿಕ ಕಾಯಿಲೆಯ ಸೋಂಕು ತಗಲುವ ಅಪಾಯವಿದ್ದು, ಅದಕ್ಕಾಗಿ ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂದು 35 ವರ್ಷದ ಅನಾಥ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈಗ 26 ತಿಂಗಳ ಗರ್ಭಿಣಿಯಾದ ಯುವತಿಯು ಗರ್ಭಪಾತ ಮಾಡಿಸಿಕೊಂಡಲ್ಲಿ ಆಕೆಗೆ ಜೀವಕ್ಕೆ ಅಪಾಯವಿದೆಯೆಂದು ನ್ಯಾಯಾಲಯ ನೇಮಿತಿ ಏಮ್ಸ್ ಆಸ್ಪತ್ರೆಯ ಸಮಿತಿಯೊಂದು ಸಲಹೆ ನೀಡಿದೆ.