ಮಾತಿಗೆ ಬರವಿಲ್ಲದ ಕಾಲ
ಕೊಟ್ಟಾರ ಕ್ರಾಸಿನಿಂದ ದಿನೇಶ್ ಬೇಕರಿ ಬಸ್‌ಸ್ಟಾಪ್‌ನ ವರೆಗಿನ ದಾರಿಯ ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಮನೆಗಳು ಹಾಗೂ ವಿಶಾಲವಾದ ಹಿತ್ತಿಲು, ಈಗ ಕೊಟ್ಟಾರ ಕ್ರಾಸಿನಲ್ಲಿ ಬಸ್‌ಸ್ಟಾಂಡ್ ಇಲ್ಲ. ಅಂದು ಬಸ್‌ಸ್ಟಾಂಡ್ ಇದ್ದು ಅದರ ಪಕ್ಕದಲ್ಲಿದ್ದ ಮನೆಯವರು ಅಪ್ಪನ ಶಿಷ್ಯರು. ಅವರ ಮನೆಯ ಭಾಗವೊಂದರಲ್ಲಿ ಸರಕಾರೀ ಸ್ವಾಮ್ಯದ ಹಣ್ಣು, ತರಕಾರಿಗಳ ‘ಹಾಪ್‌ಕಾಮ್ಸ್’ ಅಂಗಡಿ ಇತ್ತು. ಬಸ್‌ಸ್ಟಾಂಡ್‌ನ ಪಶ್ಚಿಮದ ಬದಿಗೆ ಇದ್ದ ಓಣಿ ಅಗಲವಾಗಿ ರಿಕ್ಷಾ ಓಡಾಡುವಂತಾಗಿತ್ತು. ಈ ಓಣಿಯು ತಿರುವು ಪಡೆದು ಮತ್ತೆ ಗುಡ್ಡ ಹತ್ತಿದರೆ ಅಲ್ಲೂ ಮನೆಗಳಾಗಿದ್ದುವು. ಆ ಓಣಿಯ ತಿರುವಿನಲ್ಲಿ ನಮಗೆ ಬಹಳ ಹಿಂದೆಯೇ ಪರಿಚಿತರಾಗಿದ್ದ ಡಾ. ಗಿರಿಧರರಾವ್ ಮುಂದೆ ಅವರ ಮಗಳು ಡಾ. ರಾಧಾ ಅವರಲ್ಲಿ ಕಾಂಪೌಂಡರ್ ಆಗಿದ್ದ ನರಸಿಂಹ ಪ್ರಭುಗಳ ಮನೆ ಇತ್ತು. ಅವರ ಮನೆ ಎನ್ನುವುದು ತುಂಬಿದ ಕುಟುಂಬ, ಅವರ ತಾಯಿ ಶತಾಯುಷಿಯಾಗಿದ್ದರು.
ನರಸಿಂಹ ಪ್ರಭುಗಳು ಅವರ ತಾಯಿ ಹಾಗೂ ಮಡದಿ ಇವರೆಲ್ಲರೂ ಮನೆಯಲ್ಲಿ ಕೊಟ್ಟಿಗೆ ತುಂಬಾ ಹಸುಗಳನ್ನು ಸಾಕುತ್ತಿದ್ದರು. ಹಾಗೆಯೇ ನಮ್ಮ ಕಾಪಿಕಾಡಿನ ಮನೆಗೂ ಪ್ರಭುಗಳ ಸೋದರಳಿಯ ವಿಶ್ವನಾಥಣ್ಣ ಹಾಲು ತಂದುಕೊಡುತ್ತಿದ್ದರು. ಇವರೂ ನನ್ನ ಅಪ್ಪನ ಉರ್ವ ಚರ್ಚ್ ಶಾಲೆಯ ವಿದ್ಯಾರ್ಥಿ. ನರಸಿಂಹ ಪ್ರಭುಗಳು ತಾವು ಸೈಕಲಲ್ಲಿ ಬೆಳಗ್ಗೆ ಕ್ಲಿನಿಕ್‌ಗೆ ಹೋಗುವಾಗ ಲಾಲ್‌ಬಾಗ್‌ನಲ್ಲಿದ್ದ ನನ್ನ ಅಜ್ಜಿ ಮನೆಗೂ ಹಾಲು ಒಯ್ದು ಕೊಡುತ್ತಿದ್ದರು. ಪ್ರಭುಗಳ ಮನೆಯಲ್ಲಿ ಅವರ ಸೋದರ ಸಂಬಂಧಿಗಳ ಮಕ್ಕಳು, ಹೆಂಡತಿಯ ಸಂಬಂಧಿಕರೆಂದು ಹಳ್ಳಿಯಿಂದ ಬಂದವರು ಶಾಲೆಯ ಓದಿನೊಂದಿಗೆ ತಮ್ಮ ಬದುಕಿನ ಹಾದಿಯನ್ನು ಕಂಡುಕೊಳ್ಳುವಲ್ಲಿ ನರಸಿಂಹ ಪ್ರಭುಗಳ ತಾಯಿಯಿಂದ ಹಿಡಿದು ಎಲ್ಲರೂ ಅವಿಭಕ್ತ ಕುಟುಂಬದಂತೆ ಇದ್ದುದನ್ನು ನೋಡಿದ್ದೇನೆ. ಅವರ ನಾದಿನಿಯರಿಬ್ಬರು, ನನ್ನ ಕಾಪಿಕಾಡು ಶಾಲೆಯಲ್ಲಿ ನನ್ನ ಹಿರಿಯ ಸಹಪಾಠಿಗಳಾಗಿದ್ದರೆ, ಅವರ ಮಕ್ಕಳು ಮೀರಾ, ಮೋಹಿನಿ, ಜಯಂತಿ, ಕಸ್ತೂರಿ ಮೊದಲಾದವರು ನನ್ನ ತಂಗಿ, ತಮ್ಮನ ಸಹಪಾಠಿಗಳಾಗಿದ್ದು ಹೈಸ್ಕೂಲು ವಿದ್ಯಾಭ್ಯಾಸ ಪಡೆದಿದ್ದರು.
ನಾನು ಮತ್ತೆ ಈ ಊರಿಗೆ ಬಂದಾಗ ಜಯಂತಿ ನನ್ನ ಜತೆಯ ಪಯಣಿಗಳಾಗಿ ಜತೆಗೇ ಹೋಗುತ್ತಿದ್ದೆವು. ಆಕೆ ಜನತಾ ಬಝಾರ್‌ನಲ್ಲಿ ಉದ್ಯೋಗಿಯಾಗಿದ್ದಳು. ಅವಳ ಅಕ್ಕಂದಿರು ಮದುವೆಯಾಗಿ ದೂರದ ಊರುಗಳಲ್ಲಿ ಇದ್ದರು. ಪ್ರಭು ದಂಪತಿ ಮಾತ್ರವಲ್ಲದೆ ಇಡೀ ಕುಟುಂಬದ ಎಲ್ಲರೂ ಕಷ್ಟ ಜೀವಿಗಳಾಗಿದ್ದರು ಎನ್ನುವುದರೊಂದಿಗೆ ಸಜ್ಜನ ಸಾತ್ವಿಕ ಸ್ವಭಾವದ ನೂರರ ಸಮೀಪಕ್ಕೆ ಹೆಜ್ಜೆ ಇಡುವ ಪ್ರಭುಗಳು ಈಗಲೂ ಇದ್ದಾರೆ ಎಂದು ತಿಳಿದಿದ್ದೇನೆ. ಅಂದಿನ ದಿನಗಳಲ್ಲಿ ಅಪರೂಪವಾಗಿ ನಾನು ಹೋಗುತ್ತಿದ್ದ ಮನೆಗಳಲ್ಲಿ ಜಯಂತಿ, ಕಸ್ತೂರಿಯವರು ಇದ್ದ ನರಸಿಂಹ ಪ್ರಭುಗಳ ಮನೆಯೂ ಒಂದಾಗಿತ್ತು. ಆ ಓಣಿಯ ಒಂದು ಪಕ್ಕದಲ್ಲಿ ರಸ್ತೆಗೆ ತಾಗಿಕೊಂಡು ಇದ್ದ ಮನೆಯಲ್ಲಿ ಲೇಡಿಹಿಲ್ ಹೈಸ್ಕೂಲಿನ ಟೀಚರ್ ಇದ್ದರು. ಅವರು ಕೂಡ ಅಪ್ಪನ ಶಿಷ್ಯೆಯಾಗಿದ್ದವರು ಆ ಮನೆಗೆ ಸೊಸೆಯಾಗಿ ಬಂದವರು. ಅವರೂ ನನ್ನ ಬಸ್ಸಿನ ಪ್ರಯಾಣದ ಜತೆಗಾತಿ.
ಆ ಓಣಿಯ ಇನ್ನೊಂದು ಪಕ್ಕದಲ್ಲಿ ಇದ್ದ ದೊಡ್ಡ ಮನೆಯ ಸೊಸೆಯೂ, ಮಗಳೂ ಇಬ್ಬರೂ ಅಪ್ಪನ ಶಿಷ್ಯೆಯರೇ. ಅವರ ವಿಶಾಲವಾದ ಮನೆಯಂಗಳದಲ್ಲಿ ಮುಂದೊಂದು ದಿನ ಸಣ್ಣ ಪ್ರಮಾಣದ ಅಂಗಡಿ ಪ್ರಾರಂಭ ಮಾಡಿ ಮಹಿಳೆಯರೇ ಅಂಗಡಿ ನಿರ್ವಹಿಸುತ್ತಿದ್ದರು. ಮುಂದೆ ಸಾಗಿದಂತೆ ವಿಶಾಲವಾದ ಅಂಗಳದಲ್ಲಿ ಮಾವಿನ ಮರಗಳಿಂದ ಕೂಡಿದ ಮನೆ ಮಥಾಯಿಸ್ ಕಾಂಪೌಂಡು ಬಲಭಾಗದಲ್ಲಿತ್ತು. ಅವರ ಮನೆಯ ಹಿರಿಮಗ ನೆಲ್ಸನ್ ನಮ್ಮ ಕಾಪಿಕಾಡಿನ ಮನೆಗೆ ಕನ್ನಡ ಪಾಠಕ್ಕಾಗಿ ನಾವು ಚಿಕ್ಕವರಿರುವಾಗ ಬರುತ್ತಿದ್ದರು. ಅವರಿಗೆ ಅಪ್ಪ ಕುವೆಂಪುರವರ ಮಲೆನಾಡಿನ ಚಿತ್ರಗಳು ಹಾಗೂ ಇತರ ಹಳೆಗನ್ನಡ ಕಾವ್ಯಗಳನ್ನು ಪಾಠ ಮಾಡಿದುದನ್ನು ಕೇಳಿದ ನೆನಪು ಈಗಲೂ ಇದೆ. ಹಾಗೆಯೇ ನೆಲ್ಸನ್ ಅವರು ನಮಗೆ ತಂದುಕೊಟ್ಟಿದ್ದ ಮಾವಿನ ಹಣ್ಣುಗಳ ನೆನಪೂ ಇತ್ತು. ಈ ದಾರಿ ನಡೆವಾಗ ನೆಲ್ಸನ್ ಅವರ ತಾಯಿ ಹೊರಗೆ ಇದ್ದರೆ ಮುಗುಳ್ನಕ್ಕು ಮಾಸ್ಟ್ರಮಗಳೆಂದೇ ಗುರುತಿಸಿ ಮಾತನಾಡಿಸುತ್ತಿದ್ದರು.
ಬಸ್‌ಸ್ಟಾಂಡಿನಿಂದ ಮನೆಯವರೆಗೆ ಇದ್ದ ರಸ್ತೆಯ ಎರಡೂ ಬದಿಗಳಲ್ಲಿ ಮಾವಿನ ಹಲಸಿನ ಮರಗಳು ಬಿಸಿಲಿಗೆ ನೆರಳನ್ನೂ, ಹಣ್ಣಾಗುವ ಕಾಲಕ್ಕೆ ಹಣ್ಣುಗಳನ್ನು ನೀಡುತ್ತಿತ್ತು. ಕೊಯ್ದವರು ಉಳಿದವರಿಗೂ ಹಂಚುತ್ತಿದ್ದರು. ಅದು ಹಂಚಿ ತಿನ್ನುವ ಕಾಲ ಆಗಿತ್ತು. ಮಥಾಯಸರ ಮನೆಯ ಭಾಗವಾಗಿಯೇ ಇದ್ದ ಮೂರು ಬಾಡಿಗೆ ಮನೆಗಳಲ್ಲಿ ನನ್ನ ಕಾಪಿಕಾಡಿನ ಹಿರಿಯ ಕಿರಿಯ ಸಹಪಾಠಿಗಳಿದ್ದರು. ಅವರಲ್ಲಿ ಒಂದು ಸಂಸಾರ ಪುಟ್ಟದಾದ ಹೊಟೇಲು ನಡೆಸುತ್ತಿದ್ದರೆ, ಇನ್ನೊಬ್ಬರು ಟೈಲರ್ ಆಗಿದ್ದರು. ಹೀಗೆಯೇ ಮುಂದೆ ಸಾಗಿದರೆ ಮಥಾಯಸ್ ಎಂಬ ಕುಟುಂಬದ ಹಲವು ಕವಲುಗಳು ಇದ್ದು ಅಲ್ಲಿಯೂ ಇದ್ದ ಹೆಣ್ಣು ಮಕ್ಕಳು ಅಪ್ಪನ ಶಿಷ್ಯೆಯರು. ಅವರಲ್ಲಿ ಒಂದು ಮಥಾಯಸ್ ಮನೆಯ ಹಿರಿಯ ಮಗಳು ಹಿಂದೆ ಬಿ.ಎಡ್. ಕಾಲೇಜಿನಲ್ಲಿ ಕ್ಲಾರ್ಕ್ ಆಗಿದ್ದು ಪರಿಚಿತರು.
ಅವರ ತಂಗಿ ಕೊಡಿಯಾಲಬೈಲು ಚರ್ಚ್ ನಲ್ಲಿದ್ದ ಪತ್ರಿಕಾ ಕಚೇರಿಗೆ ಕೆಲಸಕ್ಕೆ ಹೋಗುತ್ತಿದ್ದವಳು ಕೂಡ ನನ್ನ ಬಸ್ಸು ಪ್ರಯಾಣದ ಜತೆಗಾತಿ. ಇನ್ನೊಬ್ಬಾಕೆ ನನ್ನ ಬಸ್ಸಿನ ಪ್ರಯಾಣದ ಜತೆಗಾತಿ ನಮ್ಮ ಮನೆಯ ಸಮೀಪದ ಮನೆಯಲ್ಲೇ ಇದ್ದವಳು. ಅವಳನ್ನು ಮನೆ ಹೆಸರಲ್ಲೇ ಕರೆದು ರೂಢಿಯಾಗಿದ್ದ ನಾನು ಅವಳ ನಿಜ ಹೆಸರನ್ನು ಈಗ ಮರೆತಿದ್ದೇನೆ. ಅವಳೇ ಡಿಲ್ಲಾ, ಕಾರ್ಪೊರೇಷನ್ ಬ್ಯಾಂಕ್‌ನ ಉದ್ಯೋಗಿ. ಅವರ ಮನೆಯಲ್ಲಿ ಅವಳು ಮತ್ತು ತಾಯಿ ಇದ್ದರೆಂಬ ನೆನಪು. ಅವರ ಮನೆಯಿಂದ ನಾವು ತೆಂಗಿನಕಾಯಿ ತರುತ್ತಿದ್ದೆವು. ಕೊಟ್ಟಾರಕ್ರಾಸ್‌ನ ಬಸ್‌ಸ್ಟಾಂಡ್‌ನಲ್ಲಿ ಬಸ್ಸಿಗೆ ಕಾಯುತ್ತಿದ್ದವರಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿದ್ದರು ಅನ್ನಿಸುತ್ತಿತ್ತು. ಜತೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಇರುತ್ತಿದ್ದರು. ಈಗ ಎಲ್ಲಾದರೂ ಬಸ್‌ಸ್ಟಾಂಡ್‌ನಲ್ಲಿ ಬಸ್ಸಿಗೆ ಕಾದು ನಿಂತಾಗ ಹತ್ತಿರ ಇದ್ದವರೆಲ್ಲ ಅಪರಿಚಿತರಂತೆಯೇ ಇರುವುದನ್ನು ಗಮನಿಸುತ್ತಿದ್ದೇನೆ. ಆದರೆ ನಾವು ಅಂದು ಎಲ್ಲರೂ ಎಷ್ಟೊಂದು ಮಾತನಾಡಿಕೊಳ್ಳುತ್ತಿದ್ದೆವು.
ಲೋಕಾಭಿರಾಮವೇ ಹೊರತು ಮನೆ ಹಾಳು ಮಾಡುವ ಮಾತುಗಳಲ್ಲ. ಹಾಗೆಯೇ ಯಾರ್ಯಾರ ಬಗೆಗಿನ ಮಾತುಗಳೂ ಇರುತ್ತಿರಲಿಲ್ಲ. ನಮ್ಮ ಅವರ ವಿಷಯಗಳೇ ಮುಖ್ಯವಾಗಿರುತ್ತಿತ್ತು. ನನ್ನ ಮನೆಯಿಂದ ಎರಡು ಹಿತ್ತಿಲು ಮುಂದೆ ಸಾಗಿದರೆ ಕೋಟೆಕಣಿ ರಸ್ತೆ, ಆ ರಸ್ತೆಯಲ್ಲಿ ಸಾಗಿದರೆ ಉರ್ವಸ್ಟೋರ್ ಬಸ್‌ಸ್ಟಾಪ್, ಒಮ್ಮಾಮ್ಮೆ ಕುಂಟಿಕಾನದ 28 ನಂಬ್ರ ಇಲ್ಲ ಎಂದು ತಿಳಿದರೆ, 28 ಎ, ತಪ್ಪಿಹೋದರೆ ಉರ್ವಸ್ಟೋರಲ್ಲಿ ಸಿಗುವ ಬಸ್ಸುಗಳಲ್ಲಿ ಹೋಗುವುದು ಕೂಡಾ ಸಾಧ್ಯವಿತ್ತು. ಆ ಕಡೆಯಿಂದ ಹೋಗುವ 13 ನಂಬ್ರ, 7 ನಂಬ್ರ ಬಸ್ಸುಗಳು ನನಗೆ ಬಸ್ಸಿಳಿದು ಕಾಲೇಜಿಗೆ ನಡೆದು ಹೋಗಲು ಹತ್ತಿರವೂ ಹೌದು. ಈ ದಾರಿಯಲ್ಲಿ ನಡೆವಾಗಲೂ ಜತೆಯಾಗುತ್ತಿದ್ದವರು ಸಾಕಷ್ಟು ಮಂದಿ. ನಾನು ಮಾತುಗಾತಿ ಎನ್ನುವ ಕಾರಣಕ್ಕೆ ನನಗೆ ಮಾತನಾಡಲು ಜನ ಸಿಗುತ್ತಿದ್ದರೋ ಅಥವಾ ಆ ಕಾಲದಲ್ಲಿ ಯಾವುದೇ ವೃತ್ತಿಯ ಮೇಲರಿಮೆ ಅಥವಾ ಕೀಳರಿಮೆ ಇಲ್ಲದೆ ಮನುಷ್ಯತ್ವದ ಕಾರಣಗಳಿಂದಲೇ ಮಾತನಾಡುತ್ತಿದ್ದೆವೋ ಎಂದು ಅನ್ನಿಸುತ್ತದೆ.
ನಮ್ಮ ಮನೆಯಿಂದ ಉರ್ವಸ್ಟೋರ್‌ಗೆ ದಡ್ಡಲ್‌ಕಾಡ್ ದಾರಿಯಲ್ಲಿ ನಡೆದರೆ ಇಕ್ಕಡೆಗಳಲ್ಲಿ ಹಿಂದೆ ನಾನು ಟೈಲರಿಂಗ್ ಕ್ಲಾಸ್‌ಗೆ ಬರುತ್ತಿದ್ದಾಗಿನ ಮನೆಗಳೆಲ್ಲಾ ಸಾಕಷ್ಟು ಬದಲಾವಣೆ ಕಂಡಿತ್ತು. ಅಂದು ಸಾಮಾನ್ಯ ಗುಡಿಸಲುಗಳಾಗಿದ್ದುದು ಹೆಂಚಿನ ಮನೆಗಳಾಗಿತ್ತು. ಹಂಚಿನ ಮನೆಗಳಿದ್ದುದು ಟೆರೇಸ್ ಮನೆಗಳಾಗಿತ್ತು. ಇಲ್ಲಿನ ಎರಡು ಮೂರು ಮನೆಗಳವರು ನನಗೆ ಮೊದಲೇ ಪರಿಚಿತರು. ನನ್ನ ಸಹಪಾಠಿ ಲಿಂಗಪ್ಪನವರ ಮನೆ. ಅವರ ತಂದೆಗೆ ಆ ಕಾಲದಲ್ಲೇ ಎತ್ತಿನಗಾಡಿ ಇದ್ದು ಅವರ ಗಂಡು ಮಕ್ಕಳು ಸಾಕಷ್ಟು ವಿದ್ಯಾವಂತರಾಗಿದ್ದು ಸರಕಾರಿ ನೌಕರಿಯಲ್ಲಿದ್ದರು. ಅವರ ಮಗಳು ವಿಜಯಲಕ್ಷ್ಮೀ ನನ್ನ ತಂಗಿಯ ಸಹಪಾಠಿಯಾಗಿದ್ದವಳು ಗಣಪತಿ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿನಿಯೂ ಆಗಿದ್ದಳು. ಇನ್ನೊಂದು ಮನೆ ನನ್ನ ತರಗತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿ ಜಗನ್ನಾಥನ ಮನೆ. ಅವನೂ ಕೂಡ ವಿದ್ಯಾವಂತನಾಗಿ ಸರಕಾರದ ಉತ್ತಮ ನೌಕರಿಯಲ್ಲಿ ಬೇರೆ ಊರಿನಲ್ಲಿದ್ದ. ಅವನ ತಾಯಿ ಶಾಂತಿ ಟೀಚರ್ ಮಣ್ಣಗುಡ್ಡ ಶಾಲೆಯಲ್ಲಿ ಟೀಚರ್ ಆಗಿದ್ದರು. ಹಾಗೆಯೇ ನಾನು ಕಾಪಿಕಾಡು ಶಾಲೆಗೆ ಹೋಗುತ್ತಿದ್ದ ವೇಳೆ ಇದ್ದ ರಂಗ ಮಾಸ್ಟ್ರ ಮನೆಯೂ ದಡ್ಡಲ್ ಕಾಡಿನಲ್ಲೇ ಇತ್ತು.
ಹಾಗೆಯೇ ಇನ್ನುಳಿದ ಮನೆಯ ಹಿರಿಯ ಕಿರಿಯರು ನನ್ನ ಶಾಲೆಯಲ್ಲೇ ಓದಿದವರು ಪಣಂಬೂರಿನ ಎನ್.ಎಮ್.ಪಿ.ಟಿ., ಎಂ.ಸಿ.ಎಫ್. ಅಲ್ಲದೆ ಸರಕಾರದ ಬೇರೆ ಬೇರೆ ಕಚೇರಿಗಳಲ್ಲಿ ಉದ್ಯೋಗಿಗಳಾಗಿ ಇದ್ದು ಅವರ ಬದುಕು ವಿದ್ಯೆಯಿಂದಾಗಿ ಸುಧಾರಣೆಗೊಂಡಿತ್ತು ಎಂದರೆ ತಪ್ಪಲ್ಲ. ಈಗ ಇಲ್ಲಿನ ಹುಡುಗಿಯರು ಶಾಲೆಬಿಟ್ಟು ಮನೆಯಲ್ಲಿ ಕುಳಿತು ಬೀಡಿ ಕಟ್ಟುವ ಸ್ಥಿತಿಯಿಂದ ಮುಂದುವರಿದು ಪ್ರೌಢ ಶಾಲೆಗಳಿಗೆ, ಕಾಲೇಜುಗಳಿಗೆ ಹೋಗಲು ಅವರ ಸಮುದಾಯವೇ ಅವರಿಗೆ ಮಾದರಿಯಾಗಿತ್ತು. ಮಾರ್ಗದ ಎರಡು ಕಡೆಗಳಲ್ಲಿ ಹುಡುಗರು ವಾಲಿಬಾಲ್, ತ್ರೋಬಾಲ್ ಆಡುವುದಕ್ಕೆ ಗ್ರೌಂಡ್ ನಿರ್ಮಿಸಿಕೊಂಡಿದ್ದರು.
ಇನ್ನೊಂದು ಮನೆಯವರು ನನಗೆ ಹೊಸತಾಗಿ ಪರಿಚಿತರಾದವರು. ಆಗ ಕಾಪಿಕಾಡು ಶಾಲೆಯಲ್ಲಿ ಟೀಚರ್ ಆಗಿದ್ದ ಚಂದ್ರಾವತಿ ಟೀಚರ್ ಮನೆಯವರು. ಅವರ ಮಗ ಸರಕಾರಿ ಪ್ರಾಕ್ಟಿಸಿಂಗ್ ಹೈಸ್ಕೂಲಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದರು. ಹೆಣ್ಣು ಮಕ್ಕಳಿಬ್ಬರೂ ನನ್ನ ಜತೆಗೆ ಬಸ್ಸಿನ ಜತೆಗಾತಿಯರು. ಒಬ್ಬಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ, ಇನ್ನೊಬ್ಬಾಕೆ ಬ್ಯಾಂಕ್ ಉದ್ಯೋಗಿ ಎಂದು ನೆನಪು. ಹೀಗೆ ಉದ್ಯೋಗಕ್ಕೆ ಹೋಗುವ ಹೆಣ್ಣು ಮಕ್ಕಳ ಸಂಖ್ಯೆಯನ್ನು ಗಮನಿಸಿದರೆ ಬಸ್ಸಿನಲ್ಲಿ ಮೂರು ಸೀಟುಗಳ ಮೀಸಲಾತಿ ಆ ದಿನಗಳಲ್ಲೇ ಸಾಕಾಗುತ್ತಿರಲಿಲ್ಲ. ಆದರೆ ಬಸ್ಸು ತುಂಬಾ ರಶ್ ಇದ್ದರೂ ಒಬ್ಬರಿಗೊಬ್ಬರು ಸಹಕರಿಸುತ್ತಾ ಇದ್ದುದನ್ನು ನೆನೆದರೆ ಈಗ ಯಾಕೆ ಜನರಲ್ಲಿ ಪರಿಚಿತರ ನಡುವೆಯೂ ಸಹಕಾರ ಮನೋಭಾವ ಇಲ್ಲವಾಗಿದೆ ಎಂಬ ಯೋಚನೆ ಸುಳಿದರೆ ವಿಷಾದವುಂಟಾಗುತ್ತದೆ.
ದಡ್ಡಲ್‌ಕಾಡಿನ ಜನ ವಿದ್ಯಾವಂತರಾದಂತೆ ಅವರ ಮನೆ ಹಿತ್ತಲುಗಳು ಮಾವು, ಹಲಸು ಮರಗಳಿಂದಲೂ ಕೂಡಿದ್ದು, ತರತರದ ಹೂಗಳಿಂದಲೂ ಕಂಗೊಳಿಸುತ್ತಿತ್ತು. ತಮ್ಮ ಮನೆ ಹಿತ್ತಲುಗಳಲ್ಲಿಯೇ ಬಾಡಿಗೆಗೆ ಬಿಡಾರಗಳನ್ನೂ ಕೊಡುವ ಸಾಮರ್ಥ್ಯ ಅವರಿಗೆ ಬಂದಿತ್ತು. ಇದು ಒಂದರ್ಥದಲ್ಲಿ ಒಂದು ಸಾಮಾಜಿಕ ಪರಿವರ್ತನೆ ಎಂದೇ ಹೇಳಬೇಕು. ಇಲ್ಲಿನ ಕೆಲವು ಮನೆಗಳಲ್ಲಿ ದಲಿತರಲ್ಲದ ಹಿಂದೂಗಳು, ಬ್ರಾಹ್ಮಣರು ಬಾಡಿಗೆಗೆ ಇದ್ದರು ಎನ್ನುವುದು ಸಾಮಾಜಿಕ ಬದಲಾವಣೆಯ ಧನಾತ್ಮಕ ಅಂಶ. ಲಿಂಗಪ್ಪನವರ ಮನೆ ಹಿತ್ತಲಲ್ಲಿ ನನ್ನ ಗೆಳತಿಯ ಸಂಸಾರ ಹಾಗೂ ಇನ್ನೊಂದು ಡಾಕ್ಟರರ ಸಂಸಾರ ನೆಲೆಸಿತ್ತು. ಆ ದಿನಗಳಲ್ಲಿ ನಾನು ನಮ್ಮವರು ನನ್ನ ಮಗಳೊಂದಿಗೆ ಅವರ ಮನೆಗೆ ಆಗಾಗ ಹೋಗುತ್ತಿದ್ದೆ.
ಎಲ್ಲೂ ನಮಗೆ ನಾವು ದಲಿತರ ಕೇರಿಗೆ ಹೋಗುತ್ತಿದ್ದೇವೆ ಎಂದು ಅನ್ನಿಸಿದ್ದಿಲ್ಲ. ಇದೇ ಸಂದರ್ಭದಲ್ಲಿ ನನ್ನ ವಿದ್ಯಾರ್ಥಿನಿ ವಿಜಯಲಕ್ಷ್ಮಿಯ ಮದುವೆ ನಡೆದಿತ್ತು. ಆಕೆಯ ವರ ಹೈಕೋರ್ಟ್‌ನ ವಕೀಲರಾಗಿದ್ದರು ಎಂಬ ನೆನಪು. ನಾವು ಮದುವೆಗೆ ಹೋಗಿದ್ದೆವು. ಆಗ ಮುಖ್ಯಮಂತ್ರಿಗಳಾಗಿದ್ದ ಗುಂಡೂರಾಯರು ಆ ಮನೆಗೆ ಬಂದು ವಧುವರರಿಗೆ ಶುಭಾಶಯ ಹೇಳಲು ಬಂದದ್ದು ಬಹುದೊಡ್ಡ ಸಂಭ್ರಮದ ವಿಷಯವೇ ಆಗಿತ್ತು. ಹೀಗೆ ಕೊಟ್ಟಾರ ಕ್ರಾಸ್‌ನ ‘ಮಂಜುನಾಥ ನಿಲಯ’ದ ಬಾಡಿಗೆದಾರರಾಗಿದ್ದ ದಿನಗಳು ರಸ್ತೆಯುದ್ದಕ್ಕೂ ಇದ್ದ ಮನೆ ಮಂದಿಯ ಹಳೆಯ ನೆನಪುಗಳನ್ನು ಮರುಕಳಿಸುವುದರೊಂದಿಗೆ ಹೊಸಬರೂ ಬೇರೆ ಬೇರೆ ಕಾರಣಗಳಿಂದ ಹೆಚ್ಚಾಗಿ ನನ್ನ ಅಪ್ಪನ ಕಾರಣದಿಂದಲೇ ಆತ್ಮೀಯರಾದರೆಂದರೆ ತಪ್ಪಲ್ಲ.