ರಮ್ಯಾ ಗೆ ಕಾಂಗ್ರೆಸ್ ನಲ್ಲಿ ಮಹತ್ವದ ಹುದ್ದೆ
ಹೊಸದಿಲ್ಲಿ, ಮೇ 10 : ಮಾಜಿ ಸಂಸದೆ, ನಟಿ ಹಾಗು ಕಾಂಗ್ರೆಸ್ ನಾಯಕಿ ರಮ್ಯಾ ಕಾಂಗ್ರೆಸ್ ನಲ್ಲಿ ಮಹತ್ವದ ಹುದ್ದೆ ಪಡೆದಿದ್ದಾರೆ. ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆಯಾಗಿ ರಮ್ಯಾರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಸಣ್ಣ ಅಂತರದಲ್ಲಿ ಸೋತ ಬಳಿಕ ಸ್ಥಾನಮಾನಕ್ಕಾಗಿ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದ ರಮ್ಯಾ ಇದೀಗ ರಾಷ್ಟ್ರ ಮಟ್ಟದಲ್ಲೇ ಮಹತ್ವದ ಹುದ್ದೆ ಪಡೆದಿದ್ದಾರೆ. ಇದರೊಂದಿಗೆ ರಮ್ಯಾ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿಗೂ ತೆರೆ ಬಿದ್ದಿದೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕವನ್ನು ಈವರೆಗೆ ಯುವ ಸಂಸದ ದಿಪೆಂದರ್ ಹೂಡಾ ಮುನ್ನಡೆಸುತ್ತಿದ್ದರು. ಆದರೆ ಬಿಜೆಪಿಯ ಅತ್ಯಂತ ಪರಿಣಾಮಕಾರಿ ಸಾಮಾಜಿಕ ಜಾಲತಾಣ ರಣನೀತಿಗೆ ತಕ್ಕ ಪ್ರತಿಕ್ರಿಯೆ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ದೇಶಾದ್ಯಂತ ಬಿಜೆಪಿಯ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜೋರಾಗಿ ಪಕ್ಷವನ್ನು ಸಮರ್ಥಿಸುವ, ಕಾಂಗ್ರೆಸನ್ನು ತುಳಿಯುವ ಕೆಲಸ ಮಾಡುತ್ತಿರುವಾಗ ಕಾಂಗ್ರೆಸ್ ನಲ್ಲಿ ಇದಕ್ಕೆ ಸೂಕ್ತ ತಿರುಗೇಟು ನೀಡುವ ಕೊರತೆ ಕಾಣುತ್ತಿತ್ತು. ಇದೀಗ ರಮ್ಯಾ ನೇಮಕದೊಂದಿಗೆ ಈ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿದೆ.
ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೇರ, ನಿಷ್ಠುರ ಹೇಳಿಕೆಗಳಿಗೆ ಭಾರೀ ಹೆಸರು ಮಾಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನೂ , ವಿರೋಧಿಗಳನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ಅತ್ಯಂತ ನಿಷ್ಠುರತೆಯಿಂದ , ತಡವಿಲ್ಲದೆ ತರ್ಕಬದ್ಧವಾಗಿ ವಿರೋಧಿಸುವ ಅವರ ಹೇಳಿಕೆಗಳು ತೀವ್ರ ಚರ್ಚೆಗೂ ಕಾರಣವಾಗಿವೆ. @divyaspandana ಎಂಬ ಟ್ವಿಟರ್ ಹ್ಯಾಂಡಲ್ ನಲ್ಲಿ ಅವರು ಟ್ವೀಟ್ ಮಾಡುತ್ತಿರುತ್ತಾರೆ. ಹೀಗಾಗಿಯೇ ಬಹುಶ ಅವರಿಗೆ ಈ ಹೊಸ ಜವಾಬ್ದಾರಿ ಸಿಕ್ಕಿದೆ.