ಖರ್ಗೆಗಾಗಿ ಪದತ್ಯಾಗಕ್ಕೆ ಸಿದ್ಧ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಮೇ 11: ಹೈಕಮಾಂಡ್ ಸೂಚಿಸಿದರೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗಾಗಿ ಪದತ್ಯಾಗಕ್ಕೆ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಮರಳಿದರೆ ನಮಗೆ ಹೆಚ್ಚಿನ ಶಕ್ತಿ ಬರುತ್ತದೆ. ಎಲ್ಲಾ ಮುಖಂಡರು ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಈಗಾಗಲೆ ಸ್ಪಷ್ಟಪಡಿಸಿದ್ದಾರೆ ಎಂದರು.
ನನ್ನ ಸಾಮರ್ಥ್ಯದ ಬಗ್ಗೆ ಸಂಸದ ಕೆ.ಎಚ್.ಮುನಿಯಪ್ಪಗೆ ಗೊತ್ತಿಲ್ಲ. ಒಬ್ಬರಿಗೆ ಒಂದೇ ಹುದ್ದೆ ಎಂಬುದು ಎಐಸಿಸಿ ನಿಯಮ. ಆದರೆ, ನನ್ನ ವಿಚಾರದಲ್ಲಿ ಹೈಕಮಾಂಡ್ ವಿನಾಯಿತಿ ನೀಡಿದೆ. ನನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿದ್ದ ಕಾರಣಕ್ಕಾಗಿಯೆ ಹೈಕಮಾಂಡ್ ನನಗೆ ಎರಡು ಹುದ್ದೆಗಳ ಜವಾಬ್ದಾರಿ ನೀಡಿದೆ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಎರಡು ಸ್ಥಾನಗಳನ್ನು ನಾಳೆ ಬೆಳಗ್ಗೆಯೆ ಬಿಡುವಂತೆ ಹೈಕಮಾಂಡ್ ಸೂಚನೆ ನೀಡಿದರೆ, ಆ ಕ್ಷಣವೆ ಬಿಟ್ಟು ಬಿಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.