ಮಹಾರಾಷ್ಟ್ರದಲ್ಲಿ ಕನ್ನಡದ ಬೇರುಗಳು...
ಈ ಹೊತ್ತಿನ ಹೊತ್ತಿಗೆ
ಏಕೀಕರಣದಿಂದಾಗಿ ಕನ್ನಡದ ವ್ಯಾಪ್ತಿ ಕುಗ್ಗಿತೇ? ಮಹಾರಾಷ್ಟ್ರ, ಗೋವಾ, ಮದ್ರಾಸ್‌ಗಳಿಗೆ ವಿಸ್ತರಿಸಿದ್ದ ಕನ್ನಡ, ಬರೇ ಕರ್ನಾಟಕಕ್ಕೆ ಸೀಮಿತವಾಯಿತೇ? ಮಹಾರಾಷ್ಟ್ರದಾದ್ಯಂತ ಹರಡಿದ್ದ ಕನ್ನಡ ನಿಧಾನಕ್ಕೆ ಅಳಿದು ಹೋಗಲು ಈ ಗಡಿ ರೇಖೆಗಳ ನಿರ್ಧಾರವೂ ಒಂದು ಕಾರಣವಾಗಿರಬಹುದೇ? ಇಂತಹದೊಂದು ಪ್ರಶ್ನೆಗಳನ್ನಿಟ್ಟುಕೊಂಡು ಹಲವು ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ಇತ್ತೀಚೆಗೆ ಹಿರಿಯ ಸಾಹಿತಿಯೊಬ್ಬರು, ಏಕೀಕರಣದಿಂದ ಕನ್ನಡ ಭಾಷೆಗೆ ಅನ್ಯಾಯವಾಗಿದೆ ಎಂಬ ಅರ್ಥದಲ್ಲಿ ಮಾತನಾಡಿದರು. ಅಂದರೆ ಒಂದು ಕಾಲದಲ್ಲಿ ಕನ್ನಡ ಗಡಿಯಾಚೆಗೂ ವಿಸ್ತರಿಸಿತ್ತು ಎನ್ನುವುದನ್ನು ತಿಳಿಸುವ ಪ್ರಯತ್ನ ಅದಾಗಿತ್ತು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಮಹಾರಾಷ್ಟ್ರದ ನಡುವಿನ ಸಂಬಂಧವನ್ನು, ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಡಾ. ಜಿ. ಎನ್. ಉಪಾಧ್ಯ ಅವರು ಬರೆದಿರುವ ಸಂಶೋಧನಾ ಕೃತಿ ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’ ಮಾಡುತ್ತದೆ. ಕನ್ನಡ ವಿಭಾಗ ಮುಂಬೈ ವಿವಿ ಈ ಕೃತಿಯನ್ನು ಪ್ರಕಟಿಸಿದೆ. ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಬಾಂಧವ್ಯ, ಮಹಾರಾಷ್ಟ್ರ ಕನ್ನಡ ಶಾಸನಗಳಲ್ಲಿ ಸ್ಥಳನಾಮಗಳು, ಮಹಾರಾಷ್ಟ್ರದ ಗ್ರಾಮನಾಮಗಳ ಕನ್ನಡತನ, ಸೊಲ್ಲಾಪುರ ಜಿಲ್ಲೆಯ ಗ್ರಾಮನಾಮಗಳು, ದೇಗಲೂರು-ಅಮರಾವತಿಯಾದ ಬಗೆಗಿಷ್ಟು, ನಾವು ಮರೆತ ಮಂಗಳವಾಡ...ಹೀಗೆ ಮಹಾರಾಷ್ಟ್ರದಲ್ಲಿ ಕನ್ನಡ ಬೇರುಗಳನ್ನು ತಡಕಾಡುವ ಆರು ಅಧ್ಯಾಯಗಳಿವೆ ಈ ಕೃತಿಯಲ್ಲಿ. ‘‘ಯಾವುದೇ ಪ್ರಾಂತದ ಮೇಲೆ ಅರಸರ ಪ್ರಭುತ್ವ ಆಗಾಗ ಬದಲಾಗಬಹುದು. ಆದರೆ ಸ್ಥಳೀಯ ಭಾಷೆಯ ಭಾಗವಾಗಿರುವ ವ್ಯಕ್ತಿ-ಗ್ರಾಮಗಳಿಗೆ ಹೆಸರನ್ನಿಡುವ ಪದ್ಧತಿ ಬದಲಾಗದು. ಜನತೆಯ ಸಂಸ್ಕೃತಿಯ ಘಟಕವಾಗಿರುವ ಈ ಪದ್ಧತಿ ಬಹುಕಾಲ ಗಟ್ಟಿಯಾಗಿ ನಿಲ್ಲುತ್ತದೆ. ಆದುದರಿಂದ ಒಂದು ಸ್ಥಳದ ಪ್ರಾಚೀನ ಇತಿಹಾಸವನ್ನು ಅರಿಯಲು ಈ ಸ್ಥಳನಾಮಗಳು ಬಹುಮುಖ್ಯ ಆಧಾರ’’ ಎಂದು ಹಿರಿಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯ ಮಾತಿನ ತಳಹದಿಯ ಮೇಲೆ ಈ ಕೃತಿ ರೂಪುಗೊಂಡಿದೆ. ಕರ್ನಾಟಕ -ಮಹಾರಾಷ್ಟ್ರದ ನಡುವಿನ ಸಂಬಂಧಗಳ ಹಲವು ಕುತೂಹಲಕಾರಿ ಅಂಶಗಳನ್ನು ಕೃತಿ ತೆರೆದಿಡುತ್ತದೆ.
165 ಪುಟಗಳ ಕೃತಿಯ ಮುಖಬೆಲೆ 140 ರೂ.