ನಾಗರಾಜ್, ಪುತ್ರರಿಬ್ಬರು 10 ದಿನ ಪೊಲೀಸ್ ವಶಕ್ಕೆ
ವಿಶೇಷ ಪೊಲೀಸ್ ತಂಡಕ್ಕೆ 2 ಲಕ್ಷ ರೂ. ಬಹುಮಾನ
ಬೆಂಗಳೂರು, ಮೇ 12: ಅಮಾನ್ಯಗೊಂಡಿದ್ದ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಪ್ರಕರಣ ಸಂಬಂಧ ಬಂಧನವಾಗಿರುವ ರೌಡಿಶೀಟರ್ ವಿ.ನಾಗರಾಜ್ ಹಾಗೂ ಪುತ್ರರಿಬ್ಬರನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಬೆಂಗಳೂರಿನ 11ನೆ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೆ ಹೆಣ್ಣೂರು ಠಾಣೆ ಪೊಲೀಸರು, ನಾಗರಾಜ್ ಹಾಗೂ ಪುತ್ರರಾದ ಗಾಂಧಿ, ಶಾಸ್ತ್ರಿ ಅವರನ್ನು ನಗರದ ಮೇಯೋಹಾಲ್ ನ್ಯಾಯಾಲಯದ ಆವರಣದಲ್ಲಿರುವ 11ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪೊಲೀಸರು 15 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನಾಗನ ಪರ ವಕೀಲರು ಮೂರು-ನಾಲ್ಕು ದಿನಗಳ ಕಾಲ ಮಾತ್ರ ನಾಗನನ್ನು ಪೊಲೀಸ್ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ವಾದ-ಪ್ರತಿವಾದವನ್ನು ಆಲಿಸಿದ 11ನೆ ಎಸಿಎಂಎಂ ನ್ಯಾಯಾಲಯ ರೌಡೀಶೀಟರ್ ನಾಗರಾಜ್ ಹಾಗೂ ಆತನ ಇಬ್ಬರು ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿಯನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
2 ಲಕ್ಷ ಬಹುಮಾನ: ಕಾರ್ಯಾಚರಣೆ ನಡೆಸಿ ವಿ.ನಾಗರಾಜ್ ಮತ್ತು ಪುತ್ರರಿಬ್ಬರನ್ನು ಬಂಧಿಸಿರುವ ಬಾಣಸವಾಡಿ ಎಸಿಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ನಾಗನನ್ನು ತಮಿಳುನಾಡಿನ ಆರ್ಕಾಟ್‌ನಲ್ಲಿ ಗುರುವಾರ ಸೆರೆಹಿಡಿದ ಬೆಂಗಳೂರು ಪೊಲೀಸರು ಅದೇ ದಿನ ರಾತ್ರಿ ಬೆಂಗಳೂರಿಗೆ ಕರೆತಂದು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದರು ಎಂದು ಗೊತ್ತಾಗಿದೆ.
ಹಿಂದೆ ಸರಿದ ವಕೀಲ: ನಾಗನ ಬಂಧನದ ನಂತರ ಆತನ ಪರ ವಕೀಲ ಶ್ರೀರಾಮರೆಡ್ಡಿ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ತಾವು ನೀಡಿದ ಸಲಹೆಗಳನ್ನು ನಾಗರಾಜ್ ಸ್ವೀಕರಿಸದ ಹಿನ್ನೆಲೆಯಲ್ಲಿ ಬೇಸರಗೊಂಡು ನಾಗನ ಪ್ರಕರಣದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಗುರುವಾರ ಪೊಲೀಸರು ಬೆನ್ನಟ್ಟಿದಾಗಲೂ ನಾಗ ನನಗೆ ಕರೆ ಮಾಡಿದ್ದ, ನನ್ನ ಸಲಹೆಗಳು ಆತನಿಗೆ ಇಷ್ಟವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ. 20 ವರ್ಷಗಳಿಂದ ನಾಗನ ಪರ ವಕಾಲತ್ತು ವಹಿಸಿದ್ದೇನೆ" ಎಂದು ಶ್ರೀರಾಮರೆಡ್ಡಿ ಹೇಳಿದರು.
ಲಕ್ಷ್ಮಿ ಬಂಧನಕ್ಕೆ ಕ್ರಮ: ಹಳೆ ನೋಟು ಬದಲಾವಣೆ ದಂಧೆಯಲ್ಲಿ ನಾಗನ ಪತ್ನಿ ಲಕ್ಷ್ಮಿ ನಾಗರಾಜ್ ತೊಡಗಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹೆಣ್ಣೂರು ಠಾಣಾ ಪೊಲೀಸರು ಆಕೆಯನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಬಂಧನದಲ್ಲಿರುವ ನಾಗರಾಜ್ ಸಹಚರ ಸೌಂದರ್ಯ ರಾಜ್, ಲಕ್ಷ್ಮಿ ಕೂಡ ದಂಧೆಯಲ್ಲಿ ತೊಡಗಿದ್ದಳು ಎಂದು ಹೇಳಿದ್ದಾನೆ ಎನ್ನಲಾಗಿದೆ. ಆದರೆ, ಗುರುವಾರದಿಂದ ಶ್ರೀರಾಂಪುರದಲ್ಲಿರುವ ನಿವಾಸಕ್ಕೆ ಬೀಗ ಹಾಕಿ ಲಕ್ಷ್ಮಿ ಪರಾರಿಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.