ದಿಲ್ಲಿ ದರ್ಬಾರ್
ಪ್ರಣವ್‌ಗೆ ಮನೆ ಸಿದ್ಧವಾಗುತ್ತಿದೆ
ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆಂಬ ಕುರಿತು ದಿಲ್ಲಿಯ ಲುತಿಯೆನ್ಸ್ (ರಾಷ್ಟ್ರಪತಿ ಭವನವಿರುವ ಪ್ರದೇಶ)ನಲ್ಲಿ ಊಹಾಪೋಹಗಳು ತಾರಕಕ್ಕೇರಿವೆ. ಈ ಮಧ್ಯೆ ನಿರ್ಗಮನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತನ್ನ ನಿವೃತ್ತಿಯ ಆನಂತರ ವಾಸಿಸಲಿರುವ ಮನೆಯನ್ನು ಸದ್ದಿಲ್ಲದೆ ಸಜ್ಜುಗೊಳಿಸುತ್ತಿದ್ದಾರೆಂದು ಕೆಲವರು ಹೇಳುತ್ತಾರೆ. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಪ್ರಣವ್ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ತೆರವುಮಾಡಿರುವ ಬಂಗಲೆಗೆ ತೆರಳಲಿದ್ದಾರೆ. ಶರ್ಮಾರಂತಹ ಸಹಾಯಕ ದರ್ಜೆಯ ಸಚಿವರಿಗೆ ಅತ್ಯಂತ ದೊಡ್ಡ ಬಂಗಲೆಗಳಲ್ಲೊಂದನ್ನು ನೀಡಿದ್ದಕ್ಕಾಗಿ ಕೇಂದ್ರ ಸರಕಾರವು ಬಹಳಷ್ಟು ಟೀಕೆಯನ್ನು ಎದುರಿಸಬೇಕಾಗಿ ಬಂದಿತ್ತು. ಎರಡು ಅಂತಸ್ತುಗಳ ಈ ಕಟ್ಟಡವನ್ನು ಪ್ರಣವ್ ದೊಡ್ಡ ಮಟ್ಟದಲ್ಲಿ ದುರಸ್ತಿ ಮಾಡಿಸುತ್ತಿದ್ದಾರೆಂದು ವರದಿಯಾಗಿದೆ. ಈ ಬಂಗಲೆಯಲ್ಲಿ ಲಿಫ್ಟ್ ಅಳವಡಿಸುವ ಯೋಜನೆಯೂ ಇದೆಯಂತೆ. ರಾಷ್ಟ್ರದ ರಾಜಧಾನಿಯಲ್ಲಿ ಎರಡು ಅಂತಸ್ತುಗಳ ಬಂಗಲೆಗಳು ಕೆಲವೇ ಕೆಲವು ಇವೆ. 1978ರಲ್ಲಿ 20, ಅಕ್ಬರ್ ರಸ್ತೆಯಲ್ಲಿರುವ ಇಂತಹದ್ದೊಂದು ಬಂಗಲೆಯಲ್ಲಿ ಲಿಫ್ಟ್ ಅಳವಡಿಸಲಾಗಿತ್ತು. ಲೋಕಸಭೆಯ ಆಗಿನ ನಿಯೋಜಿತ ಸ್ಪೀಕರ್, ಮೂಲತಃ ದ.ಕ.ಜಿಲ್ಲೆಯವರಾದ ಕೆೆ.ಎಸ್.ಹೆಗ್ಡೆ ವಾಸ್ತವ್ಯವಿದ್ದ ಬಂಗಲೆ ಅದಾಗಿತ್ತು. ಅವರು ಬಂಗಲೆಯ ಮೊದಲ ಅಂತಸ್ತಿನಲ್ಲಿದ್ದಾಗ ಹೃದಯಾಘಾತಕ್ಕೊಳಗಾಗಿದ್ದರು. ಕೆ.ಎಸ್.ಹೆಗ್ಡೆಯವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಂತೆಯೇ ಕೇಂದ್ರೀಯ ಲೋಕೋಪಯೋಗಿ ಇಲಾಖೆಯು 15 ದಿನಗಳೊಳಗೆ ಆ ಬಂಗಲೆಗೆ ಲಿಫ್ಟ್ ಅಳವಡಿಸಿತ್ತು.
ನಿತೀಶ್‌ರ ಸ್ವಚ್ಛತೆಯ ಗೀಳು
ತನ್ನ ಜೊತೆ ಕುಳಿತುಕೊಳ್ಳುವ ಯಾರೇ ಆಗಿರಲಿ ಅವರಿಗೆ ಕೈಒರೆಸುವ ಕಾಗದ (ಸ್ಯಾನಿಟೈಸರ್)ವನ್ನು ನೀಡುವ ‘ಹೆಗ್ಗಳಿಕೆ’ಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಂದಿದ್ದಾರೆ. ವಾಸ್ತವವಾಗಿ ಅವರು ಎಲ್ಲಿಗೇ ಪ್ರಯಾಣಿಸಲಿ, ತನ್ನೊಂದಿಗೆ ಹಲವಾರು ಕಾಗದದ ಸ್ಯಾನಿಟೈಸರ್‌ಗಳನ್ನು ಒಯ್ಯುತ್ತಾರೆ. ತನ್ನ ಸಂಪುಟ ಸಹದ್ಯೋಗಿಗಳು .ಯಾರಾದರೂ ಆಹಾರ ಸೇವನೆಗೆ ಮುನ್ನ ಕೈತೊಳೆಯದೆ ಇದ್ದಲ್ಲಿ ಅವರತ್ತ ನಿತೀಶ್ ಉರಿದುಬೀಳುತ್ತಾರೆ. ಆದಾಗ್ಯೂ ಅವರ ಈ ಪ್ರವೃತ್ತಿಯನ್ನು ಕೆಲವು ಬಿಜೆಪಿ ನಾಯಕರು ಮೋದಿಯವರ ಸ್ವಚ್ಛ ಭಾರತ ಆಭಿಯಾನದ ಜೊತೆ ಥಳಕು ಹಾಕಿರುವುದು ಅವರ ಪಕ್ಷವಾದ ಜೆಡಿಯುಗೆ ಅಸಮಾಧಾನವುಂಟು ಮಾಡಿದೆ. ನರೇಂದ್ರ ಮೋದಿಯವರು 2014ರಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿರುವುದಕ್ಕಿಂತಲೂ ಬಹಳ ಸಮಯದ ಮೊದಲೇ ನಿತೀಶ್ ಈ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆಂದು ಜೆಡಿಯು ನಾಯಕರು ಪ್ರತಿಪಾದಿಸುತ್ತಿದ್ದಾರೆ. ವಾಸ್ತವವಾಗಿ ಇದೊಂದು ನಿತೀಶ್‌ರ ಹಳೆಯ ಅಭ್ಯಾಸವಾಗಿದೆ ಹಾಗೂ ಅವರು ಒಬ್ಸೆಸಿವ್ ಕಂಪಲ್ಸಿವ್ ಡಿಸ್‌ಆರ್ಡರ್ (ಅತಿಯಾದ ಗೀಳು) ನಿಂದ ಬಳುತ್ತಿದ್ದಾರೆಂದು ಅವರಿಗೆ ನಿಕಟವಾಗಿರುವ ಕೆಲವರು ಒಪ್ಪಿಕೊಳ್ಳುತ್ತಾರೆ. ಆದಾಗ್ಯೂ ಇದನ್ನು ಕೆಟ್ಟಚಟವೆಂದು ಕರೆಯಲಾಗದು.
ಸಂಕಟದಲ್ಲಿ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಈಗ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲರಿಗಿಂತಲೂ ಅವರಿಗೇ ಇದು ಹೆಚ್ಚು ತಿಳಿದಿದೆ. ಈ ವಿಷಯದ ಬಗ್ಗೆ ಯಾರ ಜೊತೆ ಸಮಾಲೋಚನೆ ನಡೆಸಬೇಕೆಂಬುದನ್ನು ಕೂಡಾ ಅವರು ಚೆನ್ನಾಗಿ ಬಲ್ಲರು. ಕೇಜ್ರಿವಾಲ್ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಕೆಲವು ಪತ್ರಕರ್ತರು ಅವರ ಸಲಹೆಗಾರರಾಗಿದ್ದರು. ಇತ್ತೀಚೆಗೆ ಕೇಜ್ರಿವಾಲ್ ಅವರು ದಿಲ್ಲಿಯ ಹಿರಿಯ ಪತ್ರಕರ್ತರನ್ನು ಭೇಟಿಯಾಗಿ, ಅವರ ಬಳಿ ಸಲಹೆ ಕೇಳಿದ್ದರು. ಎಎಪಿಯು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಮಿತಿ ಮೀರಿ ವಾಗ್ದಾಳಿಗಳನ್ನು ನಡೆಸಿದ್ದುದೇ ಎಎಪಿಗೆ ತಿರುಗುಬಾಣವಾಗಿ ಪರಿಣಮಿಸಿರಬಹುದೆಂದು ಪತ್ರಕರ್ತರೊಬ್ಬರು ಅಭಿಪ್ರಾಯಿಸಿದ್ದರು ಹಾಗೂ ಎಎಪಿಯು ದಿಲ್ಲಿಯ ಬಗ್ಗೆ ಗಮನವನ್ನು ಕೇಂದ್ರೀಕರಿಸದೆ ದೇಶದಾದ್ಯಂತ ತನ್ನ ನೆಲೆಯನ್ನು ವಿಸ್ತರಿಸತೊಡಗಿದ್ದುದು ಪಕ್ಷದ ಹಿನ್ನಡೆಗೆ ಇನ್ನೊಂದು ಕಾರಣವೆಂದು ಅವರು ಹೇಳಿದ್ದರು. ಕೇಜ್ರಿವಾಲ್ ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ತನಗೂ ಇದೇ ರೀತಿಯ ಭಾವನೆಯುಂಟಾಗಿದ್ದು, ನ್ನ ಪಕ್ಷವು ಈ ಪ್ರಮಾದಗಳನ್ನು ಸರಿಪಡಿಸುವುದು ಹಾಗೂ ಅದು ದಿಲ್ಲಿಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಲಿದೆ ಮತ್ತು ಬಿಜೆಪಿಯನ್ನು ಎದುರಿಸಲು ಇತರ ಪಕ್ಷಗಳ ಜೊತೆ ಕೈಜೋಡಿಸಲಿದೆಯೆಂದು ಅವರು ಹೇಳಿದ್ದರು. ಪ್ರಧಾನಿ ಅಭ್ಯರ್ಥಿಯಾಗುವ ಕೇಜ್ರಿವಾಲ್ ಕನಸು ಕೊನೆಗೊಂಡಿದೆಯೇ?. ಕನಿಷ್ಠ ಪಕ್ಷ ಸದ್ಯಕ್ಕಂತೂ ಹಾಗಾಗಿದೆ.
ಜಿವಿಎಲ್‌ಗೆ ‘ಭೂತಕಾಲ’ದ ಕಾಟ
ಕೆಲವು ಸಮಯಗಳಲ್ಲಿ, ವ್ಯಕ್ತಿಯ ಭೂತ ಕಾಲದ ಘಟನೆಗಳು ಆತನನ್ನು ಮರಳಿ ಕಾಡತೊಡಗುತ್ತವೆ. ಇದಕ್ಕೆ ಜಿವಿಎಲ್ ನರಸಿಂಹರಾವ್ ಅವರ ಪ್ರಕರಣವೇ ನಿದರ್ಶನವಾಗಿದೆ. ಮತಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿ ಬಿಜೆಪಿಯ ವಕ್ತಾರ ಜಿ.ವಿ.ಎಲ್. ನರಸಿಂಹರಾವ್ ಬರೆದಿದ್ದ ‘ಇವಿಎಂಸ್-ಡೆಮಾಕ್ರಸಿ ಎಟ್ ರಿಸ್ಕ್ ! ಕ್ಯಾನ್ ವಿ ಟ್ರಸ್ಟ್ ಇಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್ಸ್’ ( ಇವಿಎಂಗಳು- ಪ್ರಜಾಪ್ರಭುತ್ವ ಅಪಾಯದಲ್ಲಿ! ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ನಾವು ನಂಬಬಹುದೇ?) ಕೃತಿಯು, ಲೇಖಕನಿಗೆ ಈಗ ನಿದ್ದೆಯಿಲ್ಲದ ರಾತ್ರಿಗಳನ್ನು ತಂದುಕೊಟ್ಟಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ, ಆ ಪಕ್ಷದ ಎದುರಾಳಿಗಳಿಂದಲೇ ಈ ಪುಸ್ತಕಕ್ಕಾಗಿ ಭಾರೀ ಬೇಡಿಕೆಯುಂಟಾಗಿದೆ. ಬಹುಜನ ಸಮಾಜ ಪಕ್ಷವು, ರಾವ್ ಅವರನ್ನು ಭೇಟಿಯಾಗಿ ಅವರ ಪುಸ್ತಕದ ಪ್ರತಿಗಳನ್ನು ಖರೀದಿಸುವ ಬಗ್ಗೆ ಸಮಾಲೋಚನೆ ನಡೆಸಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣಾ ಸಮೀಕ್ಷಕರೂ ಆಗಿರುವ ರಾವ್ ಈ ಕೃತಿಯನ್ನು 2009ರ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಪ್ರಕಟಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಮೈತ್ರಿಕೂಟದ ಮುಂದೆ ಭಾರೀ ಸೋಲನ್ನು ಕಂಡಿತ್ತು. ಇದೀಗ ರಾವ್ ಅವರು, ತನ್ನ ಪುಸ್ತಕದ ಫೋಟೊ ಪ್ರತಿಯನ್ನು ಮುದ್ರಿಸಿ ಹಂಚುತ್ತಿರುವ ‘ಬೆಹೆನ್‌ಜೀ’ಯ ಪಕ್ಷದ ವಿರುದ್ಧ ಹಕ್ಕುಪ್ರತಿ ಸ್ವಾಮ್ಯ ಉಲ್ಲಂಘನೆಗಾಗಿ ಮೊಕದ್ದಮೆ ದಾಖಲಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅದರೆ ಇಲ್ಲೂ ಅಪಾಯವಿದೆ. ಒಂದು ವೇಳೆ ಈ ಪ್ರಕರಣವು ನ್ಯಾಯಾಲಯದ ಮೆಟ್ಟಲೇರಿದಲ್ಲಿ ಖಂಡಿತವಾಗಿಯೂ ತನ್ನ ಪುಸ್ತಕದ ಬಗ್ಗೆ ಮಾಧ್ಯಮಗಳ ಗಮನ ಹರಿಯಲಿದೆ ಎಂಬ ಆತಂಕ ಜಿವಿಲ್ ಅವರನ್ನು ಕಾಡುತ್ತಿದೆ.. ಒಟ್ಟಿನಲ್ಲಿ ಅವರೀಗ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಸೋಲಿನಲ್ಲೂ ಲಾಭ ಕಂಡ ಮಾಕನ್
ಕಾಂಗ್ರೆಸ್ ಪಕ್ಷವು ದಿಲ್ಲಿ ನಗರಾಡಳಿತ ಚುನಾವಣೆಗಳಲ್ಲಿ ಪರಾಭವಗೊಂಡಿರಬಹುದು. ಆದರೆ ಅಜಯ್ ಮಾಕನ್ ನೇತೃತ್ವದಲ್ಲಿ ಚುನಾವಣೆಯನ್ನೆದುರಿಸಿದ ಈ ಪಕ್ಷವು ಸೋತರೂ ತನಗೆ ಗಣನೀಯವಾದ ಲಾಭವಾಗಿರುವುದಾಗಿ ಹೇಳಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ಬೆಂಬಲ ತನಗೆ ಮರಳಿ ಲಭಿಸಿರುವುದಾಗಿ ಅದು ಭಾವಿಸಿದೆ. ಇದೇ ಕಾರಣಕ್ಕಾಗಿ ಕುಮಾರ್ ವಿಶ್ವಾಸ್ ಅವರನ್ನು ಬಿಜೆಪಿ ಏಜೆಂಟ್ ಎಂದು ಆರೋಪಿಸಿದ್ದಕ್ಕಾಗಿ ಆಪ್ ತನ್ನ ಶಾಸಕ ಅಮಾನುಲ್ಲಾ ಖಾನ್ ಅವರನ್ನು ಅಮಾನತುಗೊಳಿಸಿದ ಘಟನೆ ನಡೆಯಿತು. ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಕೂಡಾ ಸಂಘಪರಿವಾರದ ಏಜೆಂಟರೆಂದು ದಿಲ್ಲಿ ಕಾಂಗ್ರೆಸ್ ವರಿಷ್ಠ ಅಜಯ್ ಮಕಾನ್ ಆರೋಪಿಸಿದ್ದರು. ಆಪ್ ಪಕ್ಷವು ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಪ್ಲಾನ್ ಬಿ’ ಘಟಕವಾಗಿದೆಯೆಂದು ಹಲವು ಕಾಂಗ್ರೆಸ್ ನಾಯಕರು ದಿಲ್ಲಿ ಪೌರಾಡಳಿತ ಚುನಾವಣೆಯ ಸಂದರ್ಭದಲ್ಲಿ ಪ್ರತಿಪಾದಿಸುತ್ತಾ ಬಂದಿದ್ದರು. ಮನಮೋಹನಸಿಂಗ್ ಸರಕಾರದ ದಿನಗಳಲ್ಲಿ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರು ಆರೆಸ್ಸೆಸ್ ಹಾಗೂ ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು, ಕೆಲವು ಕಾಂಗ್ರೆಸ್ ನಾಯಕರು ಬೆಟ್ಟು ಮಾಡಿ ತೋರಿಸಿದ್ದರು. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿ ಆಪ್ ಪಕ್ಷವನ್ನು ತೊರೆಯಲಿದ್ದಾರೆಂಬುದು ಮಾಕನ್ ಅವರ ನಿರೀಕ್ಷೆಯಾಗಿದೆ. ಆದರೆ ಹಾಗಾಗುವುದೇ ಅಥವಾ ಇಲ್ಲವೇ ಎಂಬುದನ್ನು ಮುಂದಿನ ಚುನಾವಣೆಯು ಸಾಬೀತುಪಡಿಸಲಿದೆ.