ತ್ವರಿತಗೊಂಡಿರುವ ಸೇನಾಪಡೆಗಳ ಕೇಸರೀಕರಣ
ಭಾಗ- 2
ಸೇನಾ ನೇಮಕಾತಿಯಲ್ಲಿ ಹಸ್ತಕ್ಷೇಪ
ಸೇನೆಯಲ್ಲಿ ರಾಜಕೀಯ ಕೈವಾಡ ತಪ್ಪಿಸುವ ಸಲುವಾಗಿ ಬಹಳ ಹಿಂದಿನಿಂದಲೂ ಅತ್ಯಂತ ಹಿರಿಯ ಹಾಗೂ ಅರ್ಹ ಅಧಿಕಾರಿಯನ್ನು ಮುಖ್ಯಸ್ಥನಾಗಿ ನೇಮಿಸುವ ಸಂಪ್ರದಾಯವನ್ನು ಅನುಸರಿಸುತ್ತ ಬರಲಾಗಿದೆ. ಆದರೆ ಮೋದಿ ಸರಕಾರ ಈ ಸತ್ಸಂಪ್ರದಾಯವನ್ನು ಮುರಿದು ತನಗೆ ಬೇಕಾದ ಅಧಿಕಾರಿಯನ್ನು ನೇಮಿಸಿದೆ. ಮೋದಿ ಸರಕಾರದ ಹಸ್ತಕ್ಷೇಪದ ಪರಿಣಾಮವಾಗಿಯೇ ಜ ಬಿಪಿನ್ ರಾವತ್ ಸೇನಾ ಮುಖ್ಯಸ್ಥರಾಗಿದ್ದಾರೆ. ಬೇರೆ ಇಬ್ಬರು ಹಿರಿಯ ಅಧಿಕಾರಿಗಳಿದ್ದರೂ ಅವರನ್ನು ಕಡೆಗಣಿಸಿ ರಾವತ್ರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ‘‘ರಾವತ್ಗೆ ಕದನ ವಲಯಗಳಲ್ಲಿ ಕೆಲಸ ಮಾಡಿರುವ ಅನುಭವ ಇದೆ; ಭಯೋತ್ಪಾದನೆ, ಪಾಕಿಸ್ತಾನದಿಂದ ಬದಲಿ ಸಮರ, ಈಶಾನ್ಯ ರಾಜ್ಯಗಳಲ್ಲಿ ಕೆಟ್ಟ ಪರಿಸ್ಥಿತಿ ಇರುವಂತಹ ಪ್ರಸಕ್ತ ಸನ್ನಿವೇಶವನ್ನು ಎದುರಿಸಲು ಅಂತಹ ವ್ಯಕ್ತಿಯ ಅಗತ್ಯವಿದೆ’’ ಎಂಬಿತ್ಯಾದಿ ಸಮರ್ಥನೆಗಳಿಗೇನೂ ಬರವಿಲ್ಲ! ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ಪ್ರಾರಂಭವಾಗಿರುವುದು ಆತಂಕಕಾರಿಯಾಗಿದ್ದು ಇದು ರಾಜಕೀಯರಹಿತ ಸೇನೆಯ ಅಂತ್ಯದ ಆರಂಭ ಎಂದು ಅನೇಕ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. (27-12-2016ರ ದ ಹಿಂದೂ)
ಅಯೋಧರ ನೇಮಕ
ಇತ್ತೀಚೆಗೆ ಪಾಕಿಸ್ತಾನ ಮತ್ತು ಚೀನಾ ಜತೆಗಿನ ಗಡಿಭಾಗಗಳಲ್ಲಿ ಕಾರ್ಯಾಚರಿಸುತ್ತಿರುವ ತುಕಡಿಗಳಲ್ಲಿ ಇಬ್ಬರು ಅಯೋಧರ ಸ್ಥಾನಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಇವರಿಗೆ ಅಲ್ಲಿ ನಡೆಯುವ ಇಂಜಿನಿಯರಿಂಗ್ ಯೋಜನೆಗಳನ್ನು ನೋಡಿಕೊಳ್ಳುವ ಕರ್ತವ್ಯವನ್ನು ವಹಿಸಲಾಗಿದೆ. ಈ ಹುದ್ದೆಗಳಿರುವುದು ಉಧಮ್ಪುರ ನೆಲೆಯ ಉತ್ತರ ಕಮಾಂಡ್ ಮತ್ತು ಕೋಲ್ಕತ್ತ ನೆಲೆಯ ಪೂರ್ವ ಕಮಾಂಡ್ಗಳಲ್ಲಾದರೂ ಕಚೇರಿಗಳಿರುವುದು ಜಮ್ಮು, ಗುವಾಹಾಟಿಗಳಲ್ಲಿ. ಇದರಿಂದಾಗಿ ಗಂಭೀರ ಹೊಂದಾಣಿಕೆಯ ಸಮಸ್ಯೆಗಳಾಗಲಿವೆ ಮತ್ತು ವ್ಯಕ್ತಿಗಳ ನಡುವೆ ಸಂಘರ್ಷಗಳು ಹುಟ್ಟಿಕೊಳ್ಳಲಿವೆ. ಅಂತಿಮವಾಗಿ ಇದು ಸೇನೆಯ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟುಮಾಡಲಿದೆ. ರಕ್ಷಣಾ ಸಚಿವ ಪಾರಿಕ್ಕರರ ಈ ನಡೆಯಿಂದಾಗಿ ಸೇನೆಯ ಹಿರಿಯ ಅಧಿಕಾರಿಗಳು ಕಳವಳಕ್ಕೊಳಗಾಗಿದ್ದಾರೆ. ಏಕೆಂದರೆ ಈ ನಿರ್ಧಾರಕ್ಕೆ ಬರುವ ಮುನ್ನ ಸೇನೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. ಈ ಕುರಿತಂತೆ ದೂರುಗಳು ಬಂದ ಬಳಿಕ ಆದೇಶದ ಅನುಷ್ಠಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. (27-10-2016ರ ದ ಹಿಂದೂ)
ಸೇನಾ, ಅರೆಸೇನಾ ಪಡೆಗಳ ದುರ್ಬಳಕೆ
ಪಶ್ಚಿಮ ಬಂಗಾಳದಲ್ಲಿ Greater Cooch Behar People’s Association (GCPA) ಎಂಬ ಸಂಘಟನೆಯ ಅಡಿಯಲ್ಲಿ ಕಾರ್ಯಾಚರಿಸುವ ಖಾಸಗಿ ಸೇನಾಪಡೆ ‘ನಾರಾಯಣಿ ಸೇನಾ’ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿದೆ. ವರದಿಗಳ ಪ್ರಕಾರ ಇದೇ ನಾರಾಯಣಿ ಸೇನೆಯ 81 ಯುವತಿಯರು ಮತ್ತು 309 ಯುವಕರಿಗೆ 2016ರ ಆಗಸ್ಟ್ 16ರಿಂದ 20ರ ತನಕ ಬಿಎಸ್ಎಫ್ ಸಿಬ್ಬಂದಿ ವತಿಯಿಂದ ತರಬೇತಿ ನೀಡಲಾಗಿದೆ. ಇದರ ಹಿಂದೆ ಮೋದಿ ಸರಕಾರದ ಕೈವಾಡವಿರುವ ಕುರಿತು ಬಲವಾದ ಶಂಕೆಗಳಿವೆ. ಏಕೆಂದರೆ ಈ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದಿಂದ ಅನುಮತಿ ಪಡೆದುಕೊಳ್ಳಲಾಗಿಲ್ಲ. ಇದು ಮೋದಿ ಸರಕಾರ ಇಂದು ಪಶ್ಚಿಮ ಬಂಗಾಳದಲ್ಲಿ ಅಶಾಂತಿಯನ್ನು ಹರಡಿ ಅದರ ರಾಜಕೀಯ ಲಾಭ ಪಡೆಯುವುದಕ್ಕಾಗಿ ಅರೆಸೇನಾಪಡೆಗಳನ್ನು ಬಳಸುತ್ತಿದೆ ಎಂಬ ವಾದಕ್ಕೆ ಪುಷ್ಟಿ ನೀಡುತ್ತದೆ. (25-8-2016ರ ಡೆಕ್ಕನ್ ಹೆರಾಲ್ಡ್)
ಸಂಘ ಪರಿವಾರದಿಂದ ಸಮಾಜದ ಮಿಲಿಟರೀಕರಣ ಮತ್ತು ನಿವೃತ್ತ ಸೇನಾಧಿಕಾರಿಗಳು
ಸಂಘ ಪರಿವಾರ ಮತ್ತು ನಿವೃತ್ತ ಸೇನಾಧಿಕಾರಿಗಳ ನಂಟು ಸಾಕಷ್ಟು ಹಳೆಯದು. ಆರೆಸ್ಸೆಸ್ನ ಭೋನ್ಸಾಲಾ ಮಿಲಿಟರಿ ಶಾಲೆಯ ತರಬೇತುದಾರರಲ್ಲಿ ಮೇಜರ್ ಪ್ರಭಾಕರ್ ಕುಲಕರ್ಣಿ, ಕರ್ನಲ್ ಶೈಲೇಶ್ ರಾಯ್ಕರ್ ಮುಂತಾದ ಅನೇಕ ನಿವೃತ್ತ ಸೇನಾಧಿಕಾರಿಗಳಿದ್ದಾರೆ. ಕೆಲವೊಮ್ಮೆ ಗುಪ್ತದಳದ ಹಿರಿಯ ಅಧಿಕಾರಿಗಳ ಹೆಸರು ಕೂಡ ಕೇಳಿಬಂದಿದೆ. ನಿಮಗೆ ಬಹುಶಃ ನೆನಪಿರಬಹುದು, ಮಾಲೆಗಾಂವ್ ಮತ್ತಿತರ ಸ್ಫೋಟಗಳನ್ನು ನಡೆಸಿದಂತಹ ಕೇಸರಿ ಭಯೋತ್ಪಾದಕರಿಗೆ ಇದೇ ನಾಗಪುರದ ಶಾಲೆಯಲ್ಲಿ ತರಬೇತಿ ನೀಡಲಾಗಿತ್ತು.
ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಆರೆಸ್ಸೆಸ್ನಲ್ಲಿರುವ ನಿವೃತ್ತ ಯೋಧರ ಮೂಲಕ ಕ್ಯಾಂಪಸ್ಗಳನ್ನು ಮಿಲಿಟರೀಕರಣ ಮಾಡುವ ಹುನ್ನಾರವೊಂದು ಪ್ರಾರಂಭವಾಗಿದೆ. ಇದರ ಭಾಗವಾಗಿಯೆ ವಿಶ್ವವಿದ್ಯಾನಿಲಯಗಳಲ್ಲಿ ಯುದ್ಧ ಟ್ಯಾಂಕುಗಳನ್ನು ಪ್ರದರ್ಶಿಸಬೇಕು ಎಂಬ ಪ್ರಸ್ತಾಪವೊಂದನ್ನು ಹರಿಯಬಿಡಲಾಗಿದೆ. ಇಂತಹುದೇ ಇನ್ನೊಂದು ಐಡಿಯ ತರುಣ್ ವಿಜಯ್ರಿಂದ ಹೊರಬಿದ್ದಿದೆ. ವಿಶ್ವವಿದ್ಯಾನಿಲಯಗಳೂ, ಕಾಲೇಜುಗಳೂ ತಂತಮ್ಮ ಕ್ಯಾಂಪಸ್ಗಳಲ್ಲಿ 21 ಪರಮವೀರ ಚಕ್ರ ಪ್ರಶಸ್ತಿ ವಿಜೇತರ ಚಿತ್ರಗಳನ್ನು ಪ್ರದರ್ಶಿಸಬೇಕಂತೆ, ಅದೂ ಸ್ವಂತ ಖರ್ಚಿನಲ್ಲಿ! ಆರೆಸ್ಸೆಸ್ನ ಸರಸಂಘಚಾಲಕ ಮೋಹನ್ ಭಾಗವತ್ ಕೂಡ ಹಿಂದೆ ಬಿದ್ದಿಲ್ಲ. ಇವರು ‘‘ಪ್ರತಿಯೊಬ್ಬ ಭಾರತೀಯ ಮಗುವಿಗೂ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲು ಕಲಿಸಬೇಕು’’ ಎಂದು ಕರೆಕೊಟ್ಟವರು. ‘ಭಾರತ್ ಮಾತಾ’ ಎಂಬ ಪದದ ಒಳಾರ್ಥ ಹಿಂದೂರಾಷ್ಟ್ರ ಎಂದಾಗಿದೆ.
ಮತ್ತೊಂದು ಘಟನೆಯಲ್ಲಿ ಕಳೆದ ವರ್ಷ ಡಿಸೆಂಬರ್ 25ರಂದು ನಡೆದ ಧರ್ಮ ಸಂಸ್ಕೃತಿ ಮಹಾಕುಂಭದಲ್ಲಿ ಸೇನಾಪಡೆಯ ಹಿರಿಯ ನಿವೃತ್ತ ಅಧಿಕಾರಿಗಳಾದ ಜ ಎನ್.ಸಿ. ವಿಜ್, ಏ ಮಾ ಭೂಷಣ್ ಗೋಖಲೆ, ಲೆ ಜಸೈಯದ್ ಅಟಾ ಹಸನೈನ್ ಭಾಗವಹಿಸಿದ್ದರು. ಇವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸ್ವಾಮೀಜಿಗಳ ಜೊತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂದಿನ ಸಭೆಯಲ್ಲಿ ಹಿಂದುತ್ವದ ವಿಷಯದಲ್ಲಿ ಬೆಂಕಿ ಉಗುಳುವ ಭಾಷಣಗಳು ಕೇಳಿಬಂದಿದ್ದವು. ಮೊಘಲರ ಆಳ್ವಿಕೆಯ ವಿರುದ್ಧ ವಾಗ್ದಾಳಿ ನಡೆಸಿದ ಮೋಹನ ಭಾಗವತ್, ‘‘ಪ್ರಜಾಪ್ರಭುತ್ವದಲ್ಲಿ ಜನರ ಆಡಳಿತ ಇರಬೇಕಿದ್ದರೂ ಕಳೆದ ಸಾವಿರ ವರ್ಷಗಳಲ್ಲಿ ದೇಶದ ಜನರಿಗೆ ಆಳುವ ಅವಕಾಶ ಸಿಕ್ಕಿಲ್ಲ’’ ಎಂದಿದ್ದರು.
ವಾಜಪೇಯಿ ಸರಕಾರದ ಕಾಲದಲ್ಲಿ
ವಾಜಪೇಯಿ ಸರಕಾರದ ಕಾಲದಲ್ಲಿಯೂ ಸೇನೆಯ ಕೇಸರೀಕರಣದ ಪ್ರಕ್ರಿಯೆ ಸಾಕಷ್ಟು ವೇಗವಾಗಿ ನಡೆದಿತ್ತು. ಉದಾಹರಣೆಗೆ ಅಂದು ಅಡ್ವಾಣಿಯವರ ಸೂಚನೆಯಂತೆ ಆರೆಸ್ಸೆಸ್ ವತಿಯಿಂದ ಲಡಾಕ್ನ ಲೆಹ್ನಲ್ಲಿ ‘ಸಿಂಧು ದರ್ಶನ’ ಎಂಬ ಧಾರ್ಮಿಕ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳ ಲಾಗಿತ್ತು. ಆದರೆ ಆ ಕಾರ್ಯಕ್ರಮದ ಆತಿಥೇಯನಾಗಿ ಯಾರನ್ನು ನೇಮಿಸಲಾಯಿತು ಗೊತ್ತೆ? ಭಾರತೀಯ ಸೇನೆಯನ್ನು! 500ಕ್ಕೂ ಅಧಿಕ ಸಂಘಪರಿವಾರಿಗರು, ತರುಣ್ ವಿಜಯ್ ಮುಂತಾದವರು ಭಾಗವಹಿಸಿದ್ದ ಆ ಕಾರ್ಯಕ್ರಮದಲ್ಲಿ ಊಟ, ವಸತಿ, ವೇದಿಕೆ ಮತ್ತು ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿರುವುದು ಲಡಾಕ್ನ ತೃತೀಯ ಪದಾತಿ ದಳ (3rd infantry division).
ಇಂದು ಮೋದಿ ಸರಕಾರ ಭಾರತ ಮಾತೆಯನ್ನು ಓರ್ವ ಸಮರಪ್ರಿಯ ದೇವಿಯಂತೆ ಪರಿವರ್ತಿಸುತ್ತಿರುವುದು ಸ್ಪಷ್ಟವಿದೆ. ವಿಷಯ ಏನೆಂದರೆ ಸಂಘ ಪರಿವಾರದ ಹಿಂದೂರಾಷ್ಟ್ರ ಅಸ್ತಿತ್ವಕ್ಕೆ ಬಂತೆಂದಾದರೆ ಅಲ್ಲಿ ಸೇನಾಪಡೆಗಳಿಗೆ ಭಾರೀ ಪ್ರಾಮುಖ್ಯತೆ ಇರುತ್ತದೆ. ಕಾರಣವೇನೆಂದರೆ ಹೇಗೂ ಹಿಂದೂರಾಷ್ಟ್ರಕ್ಕೆ ಅವಶ್ಯವಾಗಿ ಇರಲೇಬೇಕಾದ, ಒಂದು ವೇಳೆ ಇಲ್ಲದಿದ್ದರೂ ಸೃಷ್ಟಿಸಲಾಗುವ, ಬಾಹ್ಯ ಶತ್ರುಗಳನ್ನಷ್ಟೇ ಅಲ್ಲದೆ ಹಿಂದುತ್ವವಾದದ ಆಂತರಿಕ ವಿರೋಧಿಗಳನ್ನು ಸಹಿತ ಹತ್ತಿಕ್ಕಲು ಸೇನೆ ಬೇಕೇ ಬೇಕು. ಆದುದರಿಂದಲೆ ಸಂಘ ಪರಿವಾರಕ್ಕೆ ಸೇನಾಪಡೆಗಳ ಬಗ್ಗೆ ಅತಿಯಾದ ಒಲವು. ಸೇನೆಗೆ ಅದರ ಬಲವನ್ನು ಮನಗಾಣಿಸಿದ್ದೇ ಬಿಜೆಪಿ ಸರಕಾರ ಎಂಬ ಮಾಜಿ ರಕ್ಷಣಾ ಸಚಿವ ಪಾರಿಕ್ಕರ್ರ ಹೇಳಿಕೆಯೂ ಇದನ್ನೇ ಧ್ವನಿಸುತ್ತದೆ. ವಾಸ್ತವದಲ್ಲಿ ಇದು ಸೇನೆಗೆ ಮಾಡಿದ ಅವಮಾನವಾಗಿದ್ದು ಇದನ್ನು ಯಾರೂ ಪ್ರತಿಭಟಿಸಿದಂತಿಲ್ಲ. ಇಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕು. ಸಂಘಪರಿವಾರಿಗರ ಅತ್ಯಾಸಕ್ತಿ, ಅನುಕಂಪಗಳೆಲ್ಲವೂ ಕೇವಲ ಹುತಾತ್ಮ ಯೋಧರಿಗಷ್ಟೆ ಸೀಮಿತವಾಗಿರುವಂತಿದೆ. ಇವರ್ಯಾರೂ ಸೇವೆಯಲ್ಲಿರುವ ಯೋಧರು ದಿನಾ ಎದುರಿಸುವ ಕಳಪೆ ಆಹಾರ, ಆರ್ಡರ್ಲಿ ಡ್ಯೂಟಿಗಳಂತಹ ಹಲವಾರು ಜ್ವಲಂತ ಸಮಸ್ಯೆಗಳ ಕಡೆ ತಿರುಗಿಯೂ ನೋಡಿದವರಲ್ಲ. ಗಮನಿಸಬೇಕಿರುವ ಅಂಶವೆಂದರೆ ಸೇನೆ ಮತ್ತು ಅರೆಸೇನಾ ಪಡೆಗಳ ಪದಾತಿ ದಳಗಳಲ್ಲಿರುವವರಲ್ಲಿ ಹೆಚ್ಚಿನವರು ಕೆಳವರ್ಗಗಳಿಂದ ಬಂದವರು. ಇವರು ಮುಖ್ಯವಾಗಿ ತಮ್ಮ ಕುಟುಂಬಗಳಿಗೆ ಆಸರೆಯಾಗುವ ಉದ್ದೇಶದಿಂದ ಅಲ್ಲಿದ್ದಾರೆ ಹೊರತು ಆರೆಸ್ಸೆಸ್ಸಿಗರು ಕಿರುಚಾಡುತ್ತಿರುವ ದೇಶಭಕ್ತಿಯ ಕಾರಣಕ್ಕಲ್ಲ. (ಆಧಾರ:scroll.inನಲ್ಲಿ ಅಪೂರ್ವಾನಂದ್; 5-1.2017ರ AlterNetನಲ್ಲಿ ತೀಸ್ತಾ ಸೆಟಲ್ವಾದ್; ಕೇಸರಿ ಭಯೋತ್ಪಾದನೆ, ಪುಟ 75, 76, 77)