varthabharthi


ನನ್ನೂರು ನನ್ನ ಜನ

ನಮ್ಮೆಲ್ಲರ ಈಗಿಲ್ಲದ ಅಂದಿನ 28ಎ ಬಸ್ಸು

ವಾರ್ತಾ ಭಾರತಿ : 17 May, 2017
ಚಂದ್ರಕಲಾ ನಂದಾವರ

ದಡ್ಡಲ್‌ಕಾಡಿನ ಹೆಣ್ಣು ಮಕ್ಕಳಲ್ಲಿ ಅನುಪಮಾ ಎಂಬವಳು ನನ್ನ ಮಗಳನ್ನು ಮಾತನಾಡಿಸದೆ, ಅವಳಿಗೆ ಬಿಸ್ಕತ್ತು ಅಥವಾ ಚಾಕಲೇಟ್ ಕೊಡದೆ ಹೋಗುತ್ತಿರಲಿಲ್ಲ. ನನ್ನ ಮಗಳೂ ಕೂಡಾ ಅವಳಿಗೆ ನಾನು ಡಬ್ಬದಲ್ಲಿ ತುಂಬಿಟ್ಟ ಬಿಸ್ಕತ್ತು ಖಾಲಿಯಾಗುವಾಗ ಒಂದನ್ನು ಹಾಗೆಯೇ ಇಟ್ಟು ಇದು ಅನುಪಮಕ್ಕನಿಗೆ ಎಂದು ಹೇಳುತ್ತಿದ್ದಳು. ದಾರಿಯಲ್ಲಿ ಹೋಗುವವರನ್ನೆಲ್ಲಾ ಮಾಮ, ಅಕ್ಕ, ಅತ್ತೆ ಎಂದು ಕರೆದು ಮಾತನಾಡಿಸುತ್ತಿದ್ದ ನನ್ನ ಮಗಳನ್ನು ಎತ್ತಿಕೊಂಡು ಒಂದಷ್ಟು ದೂರ ಹೋದರೂ ಅವಳಿಗೆ ಗಾಬರಿಯಾಗುತ್ತಿರಲಿಲ್ಲ. ನನಗೂ ಗಾಬರಿಯಿಲ್ಲ.

ಆದರೆ ಒಂದು ವೇಳೆ ಅಪರಿಚಿತರು ಯಾರಾದರೂ ಒಯ್ದರೆ ಎಂಬ ಆತಂಕ. ಆದ್ದರಿಂದ ನನ್ನ ಮಗಳಿಗೆ ಅವಳ ಅಪ್ಪನ ಹಾಗೂ ನನ್ನ ಅಂದರೆ ಅಮ್ಮನ ಹೆಸರು ಹೇಳಿಕೊಟ್ಟು ಅವಳಿಂದ ಹೇಳಿಸುತ್ತಿದ್ದೆ. ಇದನ್ನು ಕಂಡ ನನ್ನ ಮಾವ ಅದೆಂತಹದು ಅಪ್ಪನ, ಅಮ್ಮನ ಹೆಸರು ಹೇಳುವುದು ಎಂದು ಅಸಮಾಧಾನಗೊಂಡರು. ಅವರ ದೃಷ್ಟಿಯಲ್ಲಿ ಮಗು ಅಪ್ಪನ ಅಮ್ಮನ ಅಥವಾ ದೊಡ್ಡವರ ಹೆಸರನ್ನು ಮಾತುಕಲಿಯುವಾಗಲೇ ಹೇಳುವುದು ಅಪರಾಧವಾಗಿತ್ತು. ನಾನು ಯಾಕೆ ಹೇಳಬಾರದು? ಎಂದು ಕೇಳಿದರೆ ಅದಕ್ಕೆ ಅವರಲ್ಲಿ ಉತ್ತರವಿಲ್ಲ. ಅದು ರೂಢಿ. ಆದರೆ ನಾನು ನಮ್ಮ ಹೆಸರು ಹೇಳಿಸುವುದಕ್ಕೆ ಕಾರಣ ಇದೆ.

ರಸ್ತೆ ಬದಿಯ ಮನೆ. ಯಾರಾದರೂ ಕೇಳಿದಾಗ ಅಪ್ಪ ಅಮ್ಮನ ಹೆಸರು ಹೇಳಲು ತಿಳಿದಿರಬೇಕು. ಸ್ವತಃ ನನ್ನ ಮಾವನಿಗೆ ನಮ್ಮಿಬ್ಬರ ಅಫಿಶಿಯಲ್ ಹೆಸರು ಗೊತ್ತಿರಲಿಲ್ಲವಲ್ಲ. ಅವರು ಮಗನನ್ನು ‘ಬಾಲೆ’ ಎಂದರೆ ನನ್ನನ್ನು ‘ಕಲಾ’ ಎಂದು ಹೇಳಿದರೆ ಊರವರಿಗೆ ನಾವು ಯಾರೆಂದು ಹೇಗೆ ಗೊತ್ತಾಗಬೇಕು. ಪೇಟೆಯಲ್ಲಿ ಹಳ್ಳಿಯ ಇಂತಹ ರೂಢಿಗಳು ಬದಲಾಗಬೇಕಾದ ಅಗತ್ಯವನ್ನು ಅವರಿಗೆ ತಿಳಿಸಿ ಹೇಳಿದ ಮೇಲೆ ಸುಮ್ಮನಾದರು. ಇಷ್ಟು ಚಿಕ್ಕ ವಯಸ್ಸಿಗೆ ಅವಳು ಅಪ್ಪ ಅಮ್ಮನ ಹೆಸರು ಹೇಳುವುದು ಅವಳನ್ನು ಮಾತನಾಡಿಸುವವರಿಗೆಲ್ಲಾ ಖುಷಿಯ ವಿಷಯವೇ. ಅವರು ಅವಳಿಂದ ಕೇಳಿ ಕೇಳಿ ಹೇಳಿಸಿದ್ದರಿಂದ ಮಗಳು ನಮ್ಮ ಹೆಸರನ್ನು ಹೇಳಲು ಬೇಗನೆ ಕಲಿತಳು. ನಮ್ಮ ರಜೆಯ ದಿನಗಳಲ್ಲಿ ಅವಳನ್ನು ಕರೆದುಕೊಂಡು ನಾವೆಲ್ಲಾದರೂ ಹೋಗುವುದಿದ್ದರೆ ಅವಳಿಗೆ ಈಗ ಅವಳ ಆತ್ಮೀಯ ಸ್ನೇಹಿತೆ ದಿನೇಶ್ ಬೇಕರಿಯವರ ಚಿಕ್ಕಮಗಳು ಬೇಬಿ ಜತೆಗೇ ಇರಬೇಕು. ಅವಳು ನಮ್ಮಿಂದಿಗೆ ಬಂದರೆ ಮಾತ್ರ ಹೊರಡುವ ಹೊಸ ಅಭ್ಯಾಸ ಪ್ರಾರಂಭಿಸಿಕೊಂಡಿದ್ದಳು.

ನಾವೂ ‘ಬೇಬಿ’ ಅಪ್ಪ ಅಮ್ಮನಿಂದ ಅನುಮತಿ ಪಡೆದು ಕರೆದುಕೊಂಡು ಹೋಗುತ್ತಿದ್ದೆವು. ನನ್ನ ಮಗಳು ನಡೆ ಕಲಿತಂತೆ, ಮಾತು ಕಲಿತಂತೆ ನಮ್ಮ ಮನೆಯ ಕೋಣೆಯೊಳಗೆ ಉಳಿಸಿಕೊಳ್ಳುವುದು ನಮಗೂ ಕಷ್ಟ. ಇರುವುದು ಅವಳಿಗೂ ಕಷ್ಟ. ಆದ್ದರಿಂದಲೇ ಈಗ ಅವಳು ‘ಬೇಬಿ’ಯೊಂದಿಗೆ ಅವಳ ಅಕ್ಕ ಅಣ್ಣನವರೊಂದಿಗೆ ಆಡಲು ಹೋಗುತ್ತಿದ್ದಳು. ಇಲ್ಲವೇ ‘ಲತಿಕಾ’ನ ಮನೆಗೆ ಹೋಗುತ್ತಿದ್ದಳು. ಇಲ್ಲವೇ ಧಣಿಯವರ ಮನೆಯ ಇವಳಿಗಿಂತ ಸ್ವಲ್ಪ ದೊಡ್ಡವನಾದ ಕೃಷ್ಣನೊಂದಿಗೆ ಆಡಲು ಅವರ ಮನೆಯ ಕೆಲಸದ ಹುಡುಗಿ ಕರೆದೊಯ್ಯುತ್ತಿದ್ದಳು.

ಕೃಷ್ಣನ ಮನೆಯಲ್ಲಿ ಮರದ ಕುದುರೆ, ಮೂರು ಚಕ್ರದ ಸೈಕಲುಗಳೆಲ್ಲ ಇದ್ದು ಆಟವಾಡಲು ಖುಷಿಯಾಗುತ್ತಿದ್ದುದು ನಿಜವಾದರೂ ಇಬ್ಬರೂ ಸೈಕಲಲ್ಲೇ ಕುಳಿತುಕೊಳ್ಳಬೇಕು. ಕುದುರೆಯೇ ಬೇಕು ಎಂದು ಹಟ ಹಿಡಿದರೆ ಆ ಕೆಲಸದವಳಿಗೆ ಅವರನ್ನು ಸಮಾಧಾನಪಡಿಸುವ ಜಾಣ್ಮೆ ಇಲ್ಲದೆ ಇದ್ದಾಗ ಅದು ಮಕ್ಕಳ ಅಳುವಿಗೆ ಕಾರಣವಾಗುತ್ತಿತ್ತು. ಮಾತ್ರವಲ್ಲ ಆಟಿಕೆ ‘ತನ್ನದು’ ಎಂಬ ಭಾವನೆಯಲ್ಲಿ ಅದು ಕೃಷ್ಣನದ್ದು ತನ್ನದಲ್ಲ ಎಂಬ ಪರೋಕ್ಷ ತಿಳುವಳಿಕೆ ಮಗಳಿಗೆ ಬಂದಾಗ ತನಗೂ ಬೇಕು ಎಂದು ಹಟ ಶುರುವಾಯಿತು. ಆಗ ಸಹಜವಾಗಿ ನಾವು ಅಲ್ಲಿಗೆ ಹೋಗುವುದು ಬೇಡ, ಅಲ್ಲಿಗೆ ಕರೆದೊಯ್ಯಬಾರದು ಎಂದು ಕೆಲಸದ ಹುಡುಗಿಯೊಂದಿಗೆ ಹೇಳಿದ ಮಾತು ದೊಡ್ಡವರ ಕಿವಿಗೆ ಬಿದ್ದು ಅದು ಅಸಮಾಧಾನಕ್ಕೆ ಕಾರಣವಾಯಿತು.

ಜತೆಗೆ ನೆರೆಮನೆಯವರು ಅದಕ್ಕೆ ಒಂದಿಷ್ಟು ಅವರವರ ಮಾತು ಸೇರಿಸಿದರೆ ಏನಾದೀತು? ಜಗಳವೇ ಆಗುವುದು ನಿಜವಲ್ಲವೇ? ಜತೆಗೆ ಮನೆಯ ಮೆಟ್ಟ್ಟಿಲಿಳಿದರೆ ರಸ್ತೆ ಎಂದಿರುವಾಗ ರಸ್ತೆಯ ಪಕ್ಕದಲ್ಲಿ ಆಡುವುದು ಸರಿಯಾದುದಲ್ಲ. ಇಂತಹ ತಿಳುವಳಿಕೆಯ ಮಾತುಗಳು ಕೆಲವರಿಗೆ ರುಚಿಸುವುದಿಲ್ಲ. ಆದರೆ ಎಲ್ಲರಿಗೂ ರುಚಿಯಾಗುವ ಮಾತುಗಳನ್ನೇ ಆಡಲು ಸಾಧ್ಯವೇ? ಇಂತಹ ಹೊತ್ತಿನಲ್ಲಿ ಚುರುಕಾದ ನನ್ನ ಮಗಳನ್ನು ಮನೆಯೊಳಗೆ ಇರಿಸಿಕೊಳ್ಳಬೇಕಾದ, ಅವಳು ಆಟಿಕೆಗಳೊಂದಿಗೆ ಆಡುವುದನ್ನು ಕಲಿಯಬೇಕಾದ ಅನಿವಾರ್ಯತೆಯ ಅರಿವು ನಮಗಾಯಿತು.

ನಾವು ತಂದುಕೊಡುವ ಆಟಿಕೆಗಳು ಬಣ್ಣದ ಪೆನ್ಸಿಲ್, ಪುಸ್ತಕಗಳು, ಅಕ್ಷರಗಳನ್ನು ಜೋಡಿಸಿ ಶಬ್ದಗಳನ್ನು ನಿರ್ಮಿಸುವ ಬ್ಲಾಕ್‌ಗಳು, ಇತರ ಬುದ್ಧಿ ಕೌಶಲದ, ಎಣಿಕೆಯ, ಬಣ್ಣಬಣ್ಣದ ಹಕ್ಕಿ, ಪ್ರಾಣಿಗಳ ಆಟಿಕೆಗಳು, ಇವು ಯಾವುವೂ ಕೃಷ್ಣನಿಗೆ ಮೆಚ್ಚುಗೆಯಾಗದೆ ಉಳಿದಾಗ, ಅವಳ ಪಾಡಿಗೆ ಅವಳು ಆಡಿಕೊಂಡಿರಬೇಕಾದರೆ ಅವಳ ಆರೈಕೆಗೆ ಮನೆಯಲ್ಲೇ ಇರುವ ಹೆಣ್ಣು ಮಗಳೊಬ್ಬಳು ನಮಗೂ ಬೇಕಾಗಿತ್ತು. ಈ ವಿಷಯದ ಕುರಿತು ಚರ್ಚಿಸಿದಾಗ ಹಳ್ಳಿಯಲ್ಲಿದ್ದ ದೊಡ್ಡ ಅತ್ತಿಗೆಯ ಮದುವೆ ವಯಸ್ಸಿನ ಮಗಳು ನಮಗೆ ಸಹಕರಿಸುವುದಕ್ಕಾಗಿ ನಮ್ಮಾಡನೆ ಇರಲು ಬಂದಳು. ಅವಳಿಗೋ ಅಕ್ಷರಜ್ಞಾನವಿರಲಿಲ್ಲ. ಪೇಟೆಯಲ್ಲಿ ಹೇಗೆ ನಿಭಾಯಿಸುತ್ತಾಳೋ ಎಂಬ ಆತಂಕ ಇದ್ದರೂ ಅವಳು ಚೆನ್ನಾಗಿ ಮನೆಗೆಲಸ, ಮಗುವಿನ ಆರೈಕೆ, ಅವಳ ಅಜ್ಜ, ಅಜ್ಜಿಯಂದಿರ ಕಾಳಜಿ ಎಲ್ಲವನ್ನೂ ಪ್ರೀತಿಯಿಂದ ಮತ್ತು ಶ್ರದ್ಧೆಯಿಂದ ಮಾಡಿದಳು. ಅವಳು ಮದುವೆಯಾಗುವವರೆಗೆ ನನ್ನ ಇಬ್ಬರೂ ಮಕ್ಕಳನ್ನು ನೋಡಿಕೊಂಡ ರೀತಿಗೆ ನಾನು ಅವಳಿಗೆ ಆಜನ್ಮ ಋಣಿಯಾಗಿರಲೇಬೇಕು.

ನಾನು ಹೆಚ್ಚಾಗಿ ಕಾಲೇಜಿಗೆ ಹೋಗುತ್ತಿದ್ದ ಬಸ್ಸು ನಮ್ಮ ಮನೆ ಮುಂದೆಯೇ ಕೊಟ್ಟಾರಕ್ಕೆ ಹೋಗುತ್ತಿದ್ದ 28ಎ ನಂಬ್ರದ ಬಸ್ಸು. ಈ ಬಸ್ಸು ನಮಗೆ ಆತ್ಮೀಯವಾಗುವುದಕ್ಕೆ ಕಾರಣವಾಗಿದ್ದವರು ಅದರ ಡ್ರೈವರ್ ‘‘ಚಾರ್ಲಿಮಾಮ’’. ಗೋವಾದವರಂತೆ ಚಡ್ಡಿ ಹಾಕುತ್ತಿದ್ದ ಅವರು ಎತ್ತರದ ಹಾಗೂ ಭಾರೀ ಗಾತ್ರದ ಫೈಲ್ವಾನನಂತೆ ಇದ್ದವರು. ಜತೆಗೆ ಭಾರೀ ಮೀಸೆ. ಆದರೆ ಅವರ ಮುಗುಳ್ನಗೆ, ಪ್ರೀತಿಯಿಂದ ಕೂಡಿದ ಮಾತುಗಳು ಎಲ್ಲರೂ ಅವರನ್ನು ಗೌರವಿಸುವಂತೆ ಮಾಡಿದ್ದವು. ಅವರ ಮನೆ ನಮ್ಮ ಮನೆಯ ಎದುರಿನ ಓಣಿಯೊಳಗೇ ಇತ್ತು. ಅವರ ಮಡದಿ ಮಾರ್ಕೆಟ್‌ಗೆ ಮಲ್ಲಿಗೆ ಹೂ ಮಾರಾಟಕ್ಕೆ ಹೋಗುತ್ತಿದ್ದರು. ಕೊಟ್ಟಾರಕ್ರಾಸ್‌ನ ಆಸುಪಾಸಿನ ಮನೆಗಳ ಮಲ್ಲಿಗೆ ತೋಟಗಳ, ಹೂಗಳನ್ನು ಕಟ್ಟಿ ಒಯ್ಯುವುದು ಅವರೇ ಆಗಿತ್ತು.

ಅವರು ಸುಮಾರು 11ಗಂಟೆಗೆ ಮಾರ್ಕೆಟ್‌ಗೆ ಇದೇ 28ಎ ಬಸ್ಸಲ್ಲಿ ಹೋಗುತ್ತಿದ್ದರು. ಒಮ್ಮಿಮ್ಮೆ ತಡವಾದರೆ ನಾನು ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹಿಂದಿರುಗುವಾಗ ನನ್ನ ಜತೆಗೆ ಸಿಗುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಬಂದಾಗ ಒಂದೆರಡು ನಿಮಿಷ ತಡವಾದರೆ ಚಾರ್ಲಿ ಮಾಮ ನಮಗಾಗಿ ಬಸ್ಸು ನಿಲ್ಲಿಸಿ ಕಾಯುತ್ತಿದ್ದರು. ಹಾಗೆಯೇ ಈ ಬಸ್ಸಿನಲ್ಲಿ ಚೆಕ್‌ಇನ್‌ಸ್ಪೆಕ್ಟರಾಗಿದ್ದವರಿಬ್ಬರು ನಮ್ಮ ನೆರೆಯವರೇ ಆಗಿದ್ದುದು ಕೂಡ ಅನುಕೂಲವೇ ಆಗಿತ್ತು. ಅಂದು ಬಸ್ಸುಗಳು ಜನರಿಗಾಗಿ ಓಡುತ್ತಿತ್ತು ಎನ್ನುವಂತಿತ್ತು. ಇಂದು ಬಸ್ಸುಗಳ ಸಂಖ್ಯೆ ಎಷ್ಟೇ ಹೆಚ್ಚಾಗಿದ್ದರೂ ಜನಗಳೂ ಹೆಚ್ಚಾಗಿದ್ದಾರೆ ಎನ್ನುವುದೂ ನಿಜ. ಆದರೆ ಈಗಿನ ಡ್ರೈವರ್ ಕಂಡಕ್ಟರ್‌ಗಳಿಗೆ ಪ್ರಯಾಣಿಕರು ಹತ್ತಿದರೋ, ಇಳಿದರೋ ಎನ್ನುವುದನ್ನು ನೋಡಬೇಕೆನ್ನುವ ಕಾಳಜಿಯೂ ಇಲ್ಲ, ಕರ್ತವ್ಯವೂ ಇಲ್ಲ. ಈಗ ಅವರ ಕಾಳಜಿ ಎಲ್ಲವೂ ಪರ್ಸ್ ತುಂಬಬೇಕಾದ ಹಣದ ಕಡೆಗೆ ಮಾತ್ರ ಎಂದರೆ ತಪ್ಪಲ್ಲ.

ಇದಕ್ಕೆ ಕೇವಲ ಡ್ರೈವರ್ ಮತ್ತು ಕಂಡಕ್ಟರ್ ಮಾತ್ರ ಹೊಣೆಯಲ್ಲ. ಅವರ ಮೇಲೆ ಒತ್ತಡ ಹಾಕುವ ಬಸ್ಸಿನ ಮಾಲಕರು ಕೂಡಾ ಕಾರಣವೇ. ಆ ದಿನಗಳಲ್ಲಿ ವಿದ್ಯಾರ್ಥಿಗಳು ಯಾವ ಕಾರಣಕ್ಕೆ ಪ್ರತಿಭಟನೆ ಮಾಡಿದರೂ ಆ ಪ್ರತಿಭಟನೆಯ ಉದ್ಘಾಟನೆಗೆ ಬಸ್ಸಿಗೆ ಕಲ್ಲು ಹೊಡೆಯುವುದು, ಗಾಜು ಪುಡಿಮಾಡುವುದು. ಬಸ್ಸಿನ ಟಯರ್ ಸುಟ್ಟು ಹಾಕುವುದು, ಮೊದಲಾಗಿ ಜನಸ್ನೇಹಿಯಾಗಿದ್ದ ನಿರ್ಜೀವ ಬಸ್ಸುಗಳು ಬಲಿಯಾಗುತ್ತಿತ್ತು. ಮುಂದೆ ಬಸ್ಸು ವಿದ್ಯಾರ್ಥಿಗಳ ಈ ಹೊಡೆತದಿಂದ ತಪ್ಪಿಸಿಕೊಂಡುದು ಖಾಸಗಿ ಬಸ್ಸು ಮಾಲಕರು ಒಟ್ಟು ಸೇರಿ ಬಸ್ಸು ಮಾಲಕರ ಸಂಘ ಕಟ್ಟಿಕೊಂಡು ಅದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ಸು ಪ್ರಯಾಣ ಒದಗಿಸಿದ ಮೇಲೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ನ್ಯಾಯ ಪಡೆಯುವಲ್ಲಿ ತೊಂದರೆ ಉಂಟಾದಾಗ ಪ್ರತಿಭಟನೆ ಅನಿವಾರ್ಯ. ಆದರೆ ಅದು ನಮ್ಮ ಜವಾಬ್ದಾರಿಯನ್ನು ಕೂಡ ತೋರಿಸುವಂತಹದ್ದಾಗಿರಬೇಕು.

ಇನ್ನೊಂದು ಪಿಡುಗು ಕಾಲೇಜು ವಿದ್ಯಾರ್ಥಿಗಳಲ್ಲಿ ಇದ್ದುದು ಬಸ್ಸಿನ ಮೆಟ್ಟಿಲುಗಳ ಮೇಲೆ ನಿಂತುಕೊಂಡು ತೂಗುತ್ತಿರುವುದು. ಒಳಗೆ ಜಾಗ ಇದ್ದರೂ ಹೀಗೆ ಹೋಗುವುದು ಅವರ ಕುಶಾಲು. ಆಗೆಲ್ಲಾ ಹೀಗೆ ಮೆಟ್ಟಿಲ ಮೇಲೆ ನಿಂತಿದ್ದವರನ್ನು ಪೊಲೀಸರು ಹಿಡಿದು ಲಾಠಿ ಬೀಸುವುದು ಕೂಡಾ ಇತ್ತು. ಈಗ ಶಾಲಾ ಕಾಲೇಜುಗಳಿಗೆ ಅವರವರದ್ದೇ ವಾಹನಗಳಿವೆ. ಆದ್ದರಿಂದ ವಿದ್ಯಾರ್ಥಿಗಳ ಇಂತಹ ದುಸ್ಸಾಹಸ ಕಡಿಮೆಯಾಗಿದೆ ಎಂದರೂ ಕೆಲವು ವಿದ್ಯಾರ್ಥಿಗಳು ಬೇರೆ ಬೇರೆ ದುಸ್ಸಾಹಸಗಳಲ್ಲಿ ಸಿಕ್ಕಿ ಬೀಳುತ್ತಿರುವುದನ್ನೂ ನೋಡುತ್ತಿರುತ್ತೇವೆ. ಬಸ್‌ಸ್ಟಾಂಡ್‌ನ ಎದುರಲ್ಲಿ ಇದ್ದ ಒಂದು ಮನೆ ಈ ಹಿಂದೆ ನಾನು ನೆನಪಿಸಿಕೊಂಡ ನಮ್ಮ ಮೂರು ತಲೆಮಾರಿನ ಸ್ನೇಹದ ಮನೆ ನೋಟರಿ ನಾರಾಯಣ ದೇವಾಡಿಗರದ್ದು.

ಈಗ ಹಿಂದಿನಂತೆ ಹೋಗಿಬರಲು ಸಮಯಾವಕಾಶ ಇಲ್ಲದಿದ್ದರೂ ಆತ್ಮೀಯತೆ ಹಾಗೇ ಉಳಿದಿತ್ತು. ಹಾಗೆಯೇ ಅಲ್ಲಿದ್ದ ನನ್ನ ತಮ್ಮನ ಸಹಪಾಠಿ ಗಣೇಶ್ ಹಾಗೂ ಅವರ ಇನ್ನೊಬ್ಬ ಸಹಪಾಠಿ ನರಸಿಂಹನ ಮನೆಯೂ, ಜೀನಸಿನ ಅಂಗಡಿಯೂ ಇದ್ದು ನರಸಿಂಹನೊಬ್ಬ ವಿದ್ಯಾರ್ಥಿಯಾಗಿದ್ದು, ಅವನ ಅಕ್ಕಂದಿರು ವಿವಾಹವಾಗಿ ತೆರಳಿದ್ದರು. ಈ ಎಲ್ಲಾ ಹುಡುಗರು ಇವರ ಜತೆ ಕಾಪಿಕಾಡಿನಲ್ಲಿದ್ದ ನನ್ನ ಕಾಲೇಜಿನ ಕೆಲವು ವಿದ್ಯಾರ್ಥಿಗಳೂ ನಮ್ಮ ಮನೆಯ ರಸ್ತೆಯಲ್ಲಿ ಅಪರೂಪಕ್ಕೆ ವಾಕಿಂಗ್ ಬರುವುದಿತ್ತು. ಆಗ ನನ್ನ ಮಗಳು ಅವರನ್ನು ಗುರುತು ಹಿಡಿದು ಕರೆದರೆ ಬಂದು ಮಾತನಾಡಿ ಹೋಗುತ್ತಿದ್ದವರು ಆ ಹುಡುಗರು. ನರಸಿಂಹನೂ ಕಲಿತು ಬ್ಯಾಂಕ್‌ನ ಉದ್ಯೋಗಿಯಾದ ಬಳಿಕ ಜೀನಸಿನ ಅಂಗಡಿ ಮುಚ್ಚಲ್ಪಟ್ಟಿತ್ತು. ಸ್ವಲ್ಪ ಸಮಯಕ್ಕೆ ಅದನ್ನು ಕೊಂಚಾಡಿಯ ಕಾಮತರು ವಹಿಸಿಕೊಂಡು ನಡೆಸಿದರು.

ಮುಂದೆ ನರಸಿಂಹನವರು ಆ ಅಂಗಡಿ ಮನೆಯ ಜಾಗಗಳನ್ನೆಲ್ಲಾ ಮಾರಾಟ ಮಾಡಿದಾಗ ಕಾಮತರವರೇ ಕೊಂಡು ಕೊಂಡು ಜೀನಸಿನ ಅಂಗಡಿಯೂ ವೃದ್ಧಿಯಾಯಿತು. ಈ ಕಾಮತರ ಕುಟುಂಬವೂ ನನಗೆ ಪರಿಚಿತವೇ. ಹಿರಿಯ ಕಾಮತರು ಕೊಂಚಾಡಿಯವರಾಗಿದ್ದು, ನನ್ನ ಅಪ್ಪ ಕೊಂಚಾಡಿಯ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಅವರ ಮನೆಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದರು. ಈಗ ನಮ್ಮ ಜೀನಸಿನ ಅಂಗಡಿಯೂ ಅವರದ್ದೇ ಆಗಿ ಪರಿಚಯ ಇನ್ನೂ ಹೆಚ್ಚಾಯಿತು. ಇದೇ ವೇಳೆ ಅವರ ಕಿರಿಯ ಮಗ ಮುರಳೀಧರ ಕಾಮತ್ ನನ್ನ ಕಾಲೇಜಿನಲ್ಲಿ ವಿದ್ಯಾರ್ಥಿಯೂ ಆಗಿದ್ದ. ಹೀಗೆ ಪರಿಚಿತರಾದವರು ಮತ್ತೆ ಮತ್ತೆ ಬೇರೆ ಬೇರೆ ಕಾರಣಗಳಿಂದ ಪುನಃ ಸಿಗುವ ಸಂದರ್ಭಗಳು ದೊರೆತಾಗ ಆ ಸಂತೋಷ, ಪ್ರೀತಿ, ವಿಶ್ವಾಸಗಳು ಇಮ್ಮಡಿ, ಮುಮ್ಮಡಿಯಾಗುವುದು ಸಹಜವೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)