ಹೋಬಳಿಗೊಂದು ಆದರ್ಶ ಶಾಲೆ: ಶಿಕ್ಷಣ ಸಚಿವ ತನ್ವೀರ್ ಸೇಠ್
ಬೆಂಗಳೂರು, ಮೇ 17: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಆದರ್ಶ ಶಾಲೆಗಳಲ್ಲಿ ಶೇ.93ರಷ್ಟು ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಹೋಬಳಿಗೊಂದು ಆದರ್ಶ ಶಾಲೆಯನ್ನು ತೆರೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಬುಧವಾರ ನಗರದ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 62 ಆದರ್ಶ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಪೋಷಕರಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಆದರ್ಶ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರಿಯ ವಿದ್ಯಾಲಯದಿಂದ ತರಬೇತಿ: ಆದರ್ಶ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ ಹಾಗೂ ಬೋಧಕೇತರರಿಗೆ ಕೇಂದ್ರಿಯ ವಿದ್ಯಾಲಯದಿಂದ ತರಬೇತಿ ನೀಡಲಾಗುವುದು. ಆ ಮೂಲಕ ಶಿಕ್ಷಣದಲ್ಲಿ ಗುಣಾತ್ಮಕತೆ ತರುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
176 ಶಿಕ್ಷಣ ಸಂಸ್ಥೆಗಳನ್ನು ಹೈಟೆಕ್: 2016-17ನೆ ಸಾಲಿನಲ್ಲಿ 'ಶಿಕ್ಷಣ ಕವಚ' ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, 1ರಿಂದ 12ನೆ ತರಗತಿಯವರೆಗೆ ಒಂದು ಕಡೆ ಇರುವ 176 ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಹೈ ಟೆಕ್‌ಗೊಳಿಸಲಾಗುವುದು. ಆಕರ್ಷಕ ಕಟ್ಟಡ, ಉತ್ತಮ ಶೌಚಾಲಯ, ಡಿಜಿಟಲ್ ಗ್ರಂಥಾಲಯ, ಲ್ಯಾಬ್ ಸೇರಿದಂತೆ ಆಧುನಿಕ ಪರಿಕರಗಳನ್ನು ಅಳವಡಿಸುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಮೀರಿಸುವಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತನ್ವೀರ್ ಸೇಠ್ ಹೇಳಿದರು.
3770 ಸರಕಾರಿ ಆಂಗ್ಲ ಮಾಧ್ಯಮ ಶಾಲೆ: ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಹಲವು ವರ್ಷಗಳ ಹಿಂದೆಯೇ 3770 ಶಾಲೆಗಳನ್ನು ಆಂಗ್ಲ ಮಾಧ್ಯಮವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಆಂಗ್ಲ ವಿಷಯವನ್ನು ಬೋಧಿಸುವ ಶಿಕ್ಷಕರ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಆದರೆ, ಶೈಕ್ಷಣಿಕ ಸಾಲಿನಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಶಿಥಿಲ ಶಾಲಾ ಕಟ್ಟಡ ನೆಲಸಮ: ರಾಜ್ಯದಲ್ಲಿ ಶಿಥಿಲ ಶಾಲಾ ಕಟ್ಟಡವನ್ನು ಗುರುತಿಸಲಾಗಿದ್ದು, ಅದಕ್ಕೆ ಪರ್ಯಾಯವಾಗಿ ಸುಸಜ್ಜಿತವಾದ ಶಾಲಾ ಕಟ್ಟಡವನ್ನು ಕಟ್ಟಲಾಗಿದೆ. ಹೀಗಾಗಿ ಶಿಥಿಲವಾದ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.
ಮೇ 30ರವರೆಗೆ ಅಭಿಯಾನ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಶಾಲೆ ಪ್ರಾರಂಭವಾದ ಒಂದು ವಾರದ ಒಳಗೆ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಗ್, ಶೂ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.-ತನ್ವೀರ್ ಸೇಠ್, ಶಿಕ್ಷಣ ಸಚಿವ