ದಿಲ್ಲಿ ದರ್ಬಾರ್
ಮಮತಾ ಯೋಜನೆ
ಮಮತಾ ಬ್ಯಾನರ್ಜಿ ಇತ್ತೀಚೆಗೆ ದಿಲ್ಲಿಗೆ ಆಗಮಿಸಿದ್ದಾಗ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಕಾರಣ ಗೊತ್ತೇ? ಪಶ್ಚಿಮ ಬಂಗಾಳದಿಂದ ರಾಜ್ಯಸಭೆಯ ಎರಡು ಸ್ಥಾನಗಳು ಖಾಲಿಯಾಗುತ್ತವೆ ಎಂಬ ಕಾರಣಕ್ಕೆ. ತಮ್ಮ ಸ್ವ-ಪರಿಚಯ ಪತ್ರಗಳನ್ನು ದೀದಿಗೆ ನೀಡಿ ಮನವೊಲಿಸಲು ಮುಖಂಡರು ಸಾಲುಗಟ್ಟಿ ನಿಂತಿದ್ದರು. ಎಲ್ಲರ ಸ್ವವಿವರ ಪತ್ರಗಳನ್ನು ಪಶ್ಚಿಮ ಬಂಗಾಳ ಸಿಎಂ ಸಾವಧಾನದಿಂದಲೇ ಸ್ವೀಕರಿಸಿದರು. ಆದರೆ ಸ್ಥಾನಗಳ ಬಗ್ಗೆ ತಮ್ಮ ಯೋಚನೆ ಏನು ಎನ್ನುವ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಡಲಿಲ್ಲ.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯೋಚನೆ ಅವರದ್ದು. ಪ್ರಣವ್ ಮುಖರ್ಜಿಯವರ ಮಗಳು ಸುಷ್ಮಿತಾ ಮುಖರ್ಜಿ ಅವರನ್ನು ರಾಜ್ಯಸಭೆೆಗೆ ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್ ಆಯ್ಕೆ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರನ್ನು ಮತ್ತೊಂದು ಅವಧಿಗೆ ಬೆಂಬಲಿಸಲು ಮುಂದಾಗಿರುವ ಕಾಂಗ್ರೆಸ್ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ. ಇದು ಬಂಗಾಳದಲ್ಲಿ ಕಾಂಗ್ರೆಸ್- ಸಿಪಿಎಂ ಮೈತ್ರಿಯನ್ನು ಕೂಡಾ ಕೊನೆಗಾಣಿಸಲಿದೆ. ತೃಣಮೂಲ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರೂ ವಿರೋಧಿಸಿದ್ದಾರೆ. ಆದರೆ ಕೇಂದ್ರ ನಾಯಕತ್ವ ಮಾತ್ರ ಬೇರೆಯದೇ ಯೋಚನೆ ಹೊಂದಿದಂತಿದೆ. ಏನು ಎಂದು ಕಾದು ನೋಡಬೇಕು.
ಮೂಢನಂಬಿಕೆಗೆ ಶರಣಾದ ಮೋದಿ
ಮಧ್ಯಪ್ರದೇಶದ ಅಮರಕಂಟಕ್‌ಗೆ ಭೇಟಿ ನೀಡುವ ಎಷ್ಟೇ ಗಣ್ಯವ್ಯಕ್ತಿ ಕೂಡಾ ವಿಮಾನ ತ್ಯಜಿಸಿ ಕಾರಿನಲ್ಲಿ ಪ್ರಯಾಣ ಬೆಳೆಸುವುದು ಸಂಪ್ರದಾಯ. ನರ್ಮದೆಯ ಉಗಮಸ್ಥಾನ ಮತ್ತು ವಿಂಧ್ಯಾ ಹಾಗೂ ಸಾತ್ಪುರ ಸಂಧಿಸುವ ಈ ಕ್ಷೇತ್ರಕ್ಕೆ ಪ್ರಧಾನಿ ಇತ್ತೀಚೆಗೆ ಭೇಟಿ ನೀಡಿದ್ದರು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಂಡಿರುವ ಅತೀದೊಡ್ಡ ಸಂರಕ್ಷಣಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಮೋದಿಯನ್ನು ಕರೆತಂದ ಹೆಲಿಕಾಪ್ಟರ್ ದಿಂದೋರಿಯಲ್ಲಿ ಇಳಿದು, ಬಳಿಕ ಪ್ರಧಾನಿ ಕಾರಿನಲ್ಲಿ ಅಮರಕಂಟಕಕ್ಕೆ ಪ್ರಯಾಣ ಬೆಳೆಸಿದರು. ಅಧಿಕಾರದಲ್ಲಿ ಇರುವವರು ಈ ನದಿಯ ಮೇಲೆ ವೈಮಾನಿಕ ಯಾನ ಕೈಗೊಳ್ಳಬಾರದು ಎಂಬ ಪ್ರತೀತಿ. ಇದನ್ನು ಉಲ್ಲಂಘಿಸಿ ನದಿಯ ಮೇಲೆ ವಿಮಾನಯಾನ ಕೈಗೊಂಡವರಿಗೆ ಏನಾಗಿದೆ ಎನ್ನುವುದಕ್ಕೆ ಸಾಲು ಸಾಲು ಗಣ್ಯರ ಉದಾಹರಣೆ ಸಿಗುತ್ತದೆ.
ಮೊರಾರ್ಜಿ ದೇಸಾಯಿ, ಅರ್ಜುನ್ ಸಿಂಗ್, ಮೋತಿಲಾಲ್ ವೋರಾ, ಉಮಾಭಾರತಿ ಹಾಗೂ ಇಂದಿರಾಗಾಂಧಿ ಕೂಡಾ ಹೀಗೆ ನರ್ಮದೆಯ ಮೇಲೆ ಅಮರಕಂಟಕಕ್ಕೆ ಯಾನ ಕೈಗೊಂಡಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎನ್ನುವುದು ನಂಬಿಕೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಸದಾ ಈ ನಿಯಮಕ್ಕೆ ಬದ್ಧರಾಗಿರುತ್ತಾರೆ. ಇದೀಗ ಈ ನಿಯಮಕ್ಕೆ ತಾವೂ ಅತೀತರಲ್ಲ ಎನ್ನುವುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ಇದನ್ನು ಮೂಢನಂಬಿಕೆ ಎನ್ನಲೇಬೇಕಲ್ಲವೇ?
ಚೌಹಾಣ್ ಅನುಶೋಧನೆ
ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌಹಾಣ್, ರಾಜ್ಯಕ್ಕೆ ಸೀಮಿತವಾಗಿ ಉಪಾಹಾರ ಸಂಸ್ಕೃತಿ ಹುಟ್ಟುಹಾಕಿದ್ದಾರೆ. ಇದರ ಪರಿಣಾಮವಾಗಿ ಸಚಿವರು ಮತ್ತು ಬಿಜೆಪಿ ಪದಾಧಿಕಾರಿಗಳು ಇದೀಗ ಮನೆಯಲ್ಲೇ ಸಿದ್ಧಪಡಿಸಿದ ಅಡುಗೆಯನ್ನು ತಂದು, ಸಭೆಗಳು ಮುಗಿದ ಬಳಿಕ ಅದನ್ನು ಹಂಚಿಕೊಳ್ಳಬೇಕು. ಉಪ್ಪಿನ ಋಣವನ್ನು ಹಸ್ತಾಂತರಿಸುವ ಸಂಪ್ರದಾಯವನ್ನು ಚೌಹಾಣ್ ಬಲವಾಗಿ ನಂಬುತ್ತಾರೆ. ಇದು ಎಲ್ಲರನ್ನೂ ಒಗ್ಗಟ್ಟು ತಂದು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಸಂವಹನ ಸಂಪರ್ಕ ಜಾಲ ಬೆಳೆಯಲು ಅನುಕೂಲವಾಗುತ್ತದೆ ಎಂಬ ನಂಬಿಕೆ ಅವರದ್ದು.
ಬಾಸ್ ಆದೇಶವನ್ನು ಇದೀಗ ಎಲ್ಲರೂ ಚಾಚೂ ತಪ್ಪದೇ ಅನುಸರಿಸುತ್ತಿದ್ದಾರೆ. ಭೋಪಾಲ್‌ನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆೆಯ ವೇಳೆ ರಾಜ್ಯ ಸಚಿವಾಲಯ ವಲ್ಲಭ ಭವನದಲ್ಲಿ ಇದು ಅನಾವರಣಗೊಂಡಿತು. ಸಭೆ ಮುಗಿಯುತ್ತಿದ್ದಂತೆ ಚೌಹಾಣ್ ತಮ್ಮ ಊಟದ ಡಬ್ಬಿಯನ್ನು ತೆರೆದು, ಸಹೋದ್ಯೋಗಿಗಳತ್ತ ಹೆಜ್ಜೆ ಹಾಕಿದರು. ಕುತೂಹಲದ ವಿಚಾರವೆಂದರೆ, ಈ ಊಟ ಹಂಚಿಕೊಳ್ಳುವ ಪರಿಕಲ್ಪನೆ ನೀಡಿರುವುದು ಹೊಸದಾಗಿ ರಚಿತವಾದ ಸಂತೋಷ ಇಲಾಖೆ. ಇದೀಗ ಸಿಎಂ ಸಂತೋಷ ಇಲಾಖೆಯನ್ನು ಪೂರ್ಣಪ್ರಮಾಣದ ಸಚಿವಾಲಯವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಕೇಂದ್ರದ ಒಪ್ಪಿಗೆ ನಿರೀಕ್ಷಿಸುತ್ತಿದ್ದಾರೆ. ಇಂಥ ಪರಿಕಲ್ಪನೆ ಸಿಎಂ ಹಾಗೂ ಸಚಿವರನ್ನಂತೂ ಸಂತಸವಾಗಿಡುವ ಸಾಧ್ಯತೆ ಇದೆ. ಇದರಿಂದ ಉತ್ತೇಜಿತವಾದ ಕೇಂದ್ರ ಸಚಿವಾಲಯ ಕೂಡಾ ಇದನ್ನು ಅನುಸರಿಸಿದರೆ ಅಚ್ಚರಿ ಇಲ್ಲ.
ಸಿಜೆ ಪರಿಹಾರ
ಸುಪ್ರೀಂಕೋರ್ಟ್‌ನಲ್ಲಿ ಅತ್ಯಂತ ಮಹತ್ವದ ಕಾರ್ಯಕಲಾಪಗಳು ನಡೆಯುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದಾಗ್ಯೂ ಚಮತ್ಕಾರಿ ಪರಿಕಲ್ಪನೆಗಳಿಗೆ ಕೂಡಾ ದೇಶದ ಸರ್ವೋಚ್ಚ ನ್ಯಾಯಾಲಯ ನಿರೀಕ್ಷೆ ಹುಟ್ಟಿಸಿರುವುದು ಸುಳ್ಳಲ್ಲ. ಉದಾಹರಣೆಗೆ ಒಬ್ಬ ಅರ್ಜಿದಾರ, ಭಾರತ- ಪಾಕಿಸ್ತಾನ ದೇಶದ ಗಡಿಗಳ ನಡುವೆ ದೊಡ್ಡ ಗೋಡೆ ನಿರ್ಮಿಸಲು ಸೂಚಿಸಬೇಕು ಎಂದು ಕೋರಿದ್ದಾರೆ.
ಇದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಒಂದು ಸಲಹೆ ಮುಂದಿಟ್ಟಿದ್ದಾರೆ. ಅಮೆರಿಕ ಕೂಡಾ ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವುದು ಸಾಧ್ಯವಾಗಿಲ್ಲ. ಅಂಥ ದೊಡ್ಡ ಯೋಜನೆಗೆ ಜನರೇ ನಿಧಿಸಹಾಯ ಮಾಡಬೇಕು ಎಂದು ಸಿಜೆಐ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಇತರ ಇಬ್ಬರು ನ್ಯಾಯಮೂರ್ತಿಗಳನ್ನೂ ಹೊಂದಿರುವ ನ್ಯಾಯಪೀಠ, ಇಂಥ ವಿಕ್ಷಿಪ್ತ ಅರ್ಜಿಗಳನ್ನು ಸಲ್ಲಿಸುವವರಿಗೆ ಭಾರೀ ದಂಡ ವಿಧಿಸಿದರೆ ಮಾತ್ರ ಅದು ಅರ್ಥಪೂರ್ಣವಾಗಬಹುದು. ಅರ್ಜಿದಾರರ ಪರ ವಕೀಲ ಅಂತಿಮವಾಗಿ ಅರ್ಜಿ ವಾಪಸ್ ಪಡೆದಿದ್ದಾರೆ.
ಕಾಂಗ್ರೆಸ್ ಅಗ್ನಿಶಮನ ಕಾರ್ಯ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುರುದಾಸ್ ಕಾಮತ್, ಇತ್ತೀಚೆಗಿನ ದಿನಗಳಲ್ಲಿ ಸಮರೋತ್ಸಾಹದಲ್ಲಿದ್ದಾರೆ. ಗುಜರಾತ್ ಉಸ್ತುವಾರಿಯಿಂದ ಅವರನ್ನು ಕಿತ್ತ ಬಳಿಕ ಇದೀಗ ಕಾಮತ್, ಪಕ್ಷಾಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಪತ್ರ ಬರೆದು, ರಾಜಸ್ಥಾನದ ಹೊಣೆಯಿಂದಲೂ ತಮ್ಮನ್ನು ಮುಕ್ತಗೊಳಿಸಬೇಕು ಎಂದು ಕೋರಿದ್ದಾರೆ. ಮುಂಬೈನ ಈ ಪ್ರಭಾವಿ ಮುಖಂಡ ಇತ್ತೀಚಿನ ಬೆಳವಣಿಗೆಗಳಿಂದ ವಿಷಣ್ಣರಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಪಕ್ಷಕ್ಕೆ ಯುವ ರೂಪಾಂತರ ನೀಡುವ ನಿಟ್ಟಿನಲ್ಲಿ ರಾಹುಲ್‌ಗಾಂಧಿ ನಿರತರಾಗಿರುವುದರಿಂದ ಈ ವಿಚಾರದಲ್ಲಿ ಸೋನಿಯಾಗಾಂಧಿ ವೌನ ವಹಿಸುವ ಸಾಧ್ಯತೆಯೇ ಹೆಚ್ಚು. ಯುವಕರು ಪಕ್ಷದ ಅನುಭವಿ ನಾಯಕರನ್ನು ಮೀರಿಸಬಲ್ಲರೇ ಎನ್ನುವುದು ಪಕ್ಷದಲ್ಲೇ ಕೇಳಿಬರುತ್ತಿರುವ ಪ್ರಶ್ನೆ. ಆದರೆ ಅಧಿಕಾರದಿಂದ ಹೊರಗಿರುವ ಪಕ್ಷ ಒಂದಲ್ಲ ಒಂದು ರೀತಿಯ ಸಂಘರ್ಷವನ್ನು ಎದುರಿಸುತ್ತಿರುತ್ತದೆ ಎನ್ನುವುದು ಅಕ್ಷರಶಃ ಸತ್ಯ.