ಯಾರದೋ ದುಡ್ಡು ಅಂಬಾನಿಯ ಜಾತ್ರೆ!
ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಆರ್ಥಿಕ ದುಸ್ಥಿತಿಯ ಭಾರವನ್ನು ಸಾರ್ವಜನಿಕ ವಲಯವೇಕೆ ಹೊರಬೇಕು?
ಇದೇ 2017ರ ಮೇ 4 ರಂದು ದಿ ಬ್ಯಾಂಕಿಂಗ್ ರೆಗ್ಯುಲೇಷನ್ (ಅಮೆಂಡ್‌ಮೆಂಟ್) ಆರ್ಡಿನೆನ್ಸ್, 2017 (ಬ್ಯಾಂಕ್‌ಗಳ ನಿಯಂತ್ರಣ (ತಿದ್ದುಪಡಿ) ಸುಗ್ರೀವಾಜ್ಞೆ, 2017) ಅನ್ನು ಘೋಷಿಸಲಾಯಿತು. ಇದು 1949ರ ಬ್ಯಾಂಕಿಂಗ್ ನಿಯಂತ್ರಣಾ ಕಾಯ್ದೆಗೆ ಪ್ರಮುಖ ತಿದ್ದುಪಡಿಯನ್ನು ತಂದಿದೆೆ. ಈ ತಿದ್ದುಪಡಿಯು 2016ರ ದಿವಾಳಿತನ ಸಂಹಿತೆ (ಇನ್ಸಾಲ್‌ವೆನ್ಸಿ ಮತ್ತು ಬ್ಯಾಂಕ್‌ರಪ್ಟಸಿ ಕೋಡ್)ಯಡಿಯಲ್ಲಿ ಸಾಲ ಮರುಪಾವತಿ ಮಾಡದಿರುವ ಖಾತೆಗೆಳ ವಿರುದ್ಧ ದಿವಾಳಿತನದ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಬ್ಯಾಂಕ್‌ಗಳಿಗೆ ಆದೇಶ ನೀಡುವ ಅಧಿಕಾರವನ್ನು ರಿಸರ್ವ್ ಬ್ಯಾಂಕಿಗೆ ನೀಡುತ್ತದೆ. ಅಷ್ಟು ಮಾತ್ರವಲ್ಲದೆ ಸಾಲ ಮರುಪಾವತಿ ಮಾಡಲಾಗದಷ್ಟು ದುಸ್ಥಿಯಲ್ಲಿರುವ ಬ್ಯಾಂಕ್‌ಗಳ ಸಂಪತ್ತುಗಳ (ಸ್ಟ್ರೆಸ್ಡ್ ಅಸೆಟ್ಸ್) ಕುರಿತು ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುವ ಮತ್ತು ಬ್ಯಾಂಕಿಂಗ್ ಕಂಪೆನಿಗಳಿಗೆ ಸಲಹೆಗಳನ್ನು ಸೂಚಿಸುವ ಸಮಿತಿಯನ್ನು ನೇಮಕ ವಾಡುವ ಅಧಿಕಾರವನ್ನೂ ನೀಡುತ್ತದೆ.
ಆದರೆ ಈ ತಿದ್ದುಪಡಿಗಳು ಏನನ್ನು ಸಾಧಿಸುವ ಉದ್ದೇಶ ಹೊಂದಿದೆ ಎಂಬುದು ಈಗಲೂ ಅಸ್ಪಷ್ಟವಾಗಿದೆ. ಏಕೆಂದರೆ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯೇ ಬ್ಯಾಂಕಿಂಗ್ ಸಂಸ್ಥೆಗಳ ಕಾರ್ಯನಿರ್ವಹಣೆಗಳನ್ನು ಮೇಲುಸ್ತುವಾರಿ ಮಾಡುವ ಮತ್ತು ನಿರ್ದೇಶನನಗಳನ್ನು ನೀಡುವ ಅಧಿಕಾರವನ್ನು ಈಗಾಗಲೇ ರಿಸರ್ವ್ ಬ್ಯಾಂಕಿಗೆ ನೀಡಿದೆ. ಹಾಗಿರುವಾಗ ಈ ತಿದ್ದುಪಡಿಯು ದುಸ್ಥಿತಿಯಲ್ಲಿರುವ ಬ್ಯಾಂಕ್‌ಗಳ ಸಂಪತ್ತಿನ ವಿಲೇವಾರಿಯನ್ನು ತ್ವರಿತಗತಿಯಲ್ಲೇನಾದರೂ ಮಾಡಬಹುದೇ ಎಂಬುದನ್ನಷ್ಟೇ ಕಾದುನೋಡಬೇಕಾಗಿದೆ. ಹಾಗಿದ್ದರೂ ಸರಕಾರಗಳು ಮತ್ತದರ ಸಂಸ್ಥೆಗಳು ದುಸ್ಥಿತಿಯಲ್ಲಿರುವ ಸಂಪತ್ತುಗಳ ಸಮಸ್ಯೆಗೆ ಕೇವಲ ತೇಪೆ ಹಾಕುವಂಥ ಕ್ರಮಗಳನ್ನು ಮಾತ್ರ ಸೂಚಿಸುತ್ತಿವೆ. ಸಾರಾಂಶದಲ್ಲಿ ಈ ಎಲ್ಲಾ ಕ್ರಮಗಳು ಖಾಸಗಿ ಕ್ಷೇತ್ರದ ಸಾಲ ಮತ್ತು ದಿವಾಳಿತನದ ಹೊರೆಯನ್ನು ಸರಕಾರ ಮತ್ತದರ ಸಂಸ್ಥೆಗಳು ಹೊರುವಂೆ ಮಾಡುವ ಕಡೆಗೆ ಮುಖ ಮಾಡಿವೆ.
ಈ ಹಿಂದೆಯೂ ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಸೂಚಿಸಲಾಗಿತ್ತು. ಆರ್ಥಿಕ ಸರ್ವೇಕ್ಷಣೆಯು ಸಾರ್ವಜನಿಕ ಬ್ಯಾಂಕ್‌ಗಳಿಂದ ಹದಗೆಟ್ಟ ಸಾಲಗಳನ್ನು ಕೊಳ್ಳುವ ಸಲುವಾಗಿ ಪಬ್ಲಿಕ್ ಸೆಕ್ಟರ್ ಅಸೆಟ್ ರಿಹಾಬಿಲೇಷನ್ ಏಜೆನ್ಸಿ-ಪಾರಾ (ಸಾರ್ವಜನಿಕ ವಲಯದ ಸಂಪತ್ತುಗಳ ಪುನರ್ವಸತಿ ಏಜೆನ್ಸಿ)ಯೊಂದನ್ನು ನಿರ್ಮಿಸುವ ಪ್ರಸ್ತಾಪವನ್ನು ಇಟ್ಟಿತ್ತು. ಈ ಪ್ರಸ್ತಾವಿತ ಪಾರಾಗೆ ಬೇಕಿರುವ ಸಂಪನ್ಮೂಲಗಳನ್ನು ಮೂರು ಮೂಲಗಳಿಂದ ಒದಗಿಸಿಕೊಳ್ಳಲು ಯೋಜಿಸಲಾಗಿತ್ತು: ಸರಕಾರದ ಬಾಂಡುಗಳ ಮಾರಾಟದ ಮೂಲಕ, ಖಾಸಗಿ ಹೂಡಿಕೆದಾರರ ಈಕ್ವಿಟಿ ಶೇರುಗಳ ಮೂಲಕ ಮತ್ತು ರಿಸರ್ವ್ ಬ್ಯಾಂಕಿನ ಹೆಚ್ಚುವರಿ ಆದಾಯಗಳ ಮೂಲಕ. ಅದೇ ರೀತಿ ಖಾಸಗಿ ವಲಯವು ಸಾಲವನ್ನು ಮರುಪಾವತಿ ಮಾಡದೆ ಇರುವುದರಿಂದ ದುಸ್ಥಿತಿಯಲ್ಲಿರುವ ಬ್ಯಾಂಕ್‌ಗಳ ಆಯ-ವ್ಯಯ ಪಟ್ಟಿಯನ್ನು (ಬ್ಯಾಲೆನ್ಸ್ ಶೀಟನ್ನು) ಸರಿದೂಗಿಸಲು ಈವರೆಗೆ ಮುಂದಿಡಲಾಗಿರುವ ಎಲ್ಲಾ ಸಲಹೆಗಳು ಸಹ ಇದೇ ರೀತಿ ಸರಕಾದ ಸಂಪನ್ಮೂಲಗಳನ್ನೇ ಆಧರಿಸಿವೆ.
ಇದೆಲ್ಲಕ್ಕಿಂತ ಹೀನಾಯವಾದ ಮತ್ತೊಂದು ಗಂಭೀರವಾದ ವಿಷಯವಿದೆ. ವರದಿಯೊಂದರ ಪ್ರಕಾರ ಇತ್ತೀಚೆಗೆ ಸಾಕ್ಷಾತ್ ಪ್ರಧಾನಿಗಳ ಸಮಕ್ಷಮದಲ್ಲಿ ಸಭೆಯೊಂದು ನಡೆಯಿತೆನ್ನಲಾಗಿದ್ದು ಅದರಲ್ಲ್ಲಿ ಮರುಪಾವತಿಯಾಗದ ಖಾಸಗಿ ಕಾರ್ಪೊರೇಟ್ ಕ್ಷೇತ್ರಕ್ಕೆ ಕೊಟ್ಟ ಸಾಲಗಳನ್ನು (ನಾನ್ ಪರ್ಫಾರ್ಮಿಂಗ್ ಅಸೆಟ್ಸ್- ನಿಷ್ಕ್ರಿಯ ಸಂಪತ್ತು) ಸಾರ್ವಜನಿಕ ವಲಯದ ಘಟಕಗಳು ಕೊಂಡುಕೊಳ್ಳುವಂತೆ ಪುಸಲಾಯಿಸಬೇಕೆಂಬ ಪ್ರಸ್ತಾಪವೂ ಚರ್ಚೆಗೆ ಬಂದಿದೆ. ಪ್ರಾಸಂಗಿಕವಾಗಿ ಹೇಳುವುದಾದರೆ ಈ ರೀತಿ ಬ್ಯಾಂಕಿಂಗ್ ವಲಯವಲ್ಲದ ಇತರ ಸಾರ್ವಜನಿಕ ಸಂಸ್ಥೆಗಳಿಗೆ ದುಸ್ಥಿತಿಯಲ್ಲಿರುವ ಸಂಪತ್ತುಗಳನ್ನು ವರ್ಗಾಯಿಸುವುದರಲ್ಲಿ ಸರಕಾರಕ್ಕೆ ಮತ್ತು ಸಾಲ ನೀಡಿದ ಬ್ಯಾಂಕ್‌ಗಳಿಗೆ ಒಂದು ಲಾಭವಿದೆ. ಅದೇನೆಂದರೆ ಅಂತಹ ಸಾಲಗಳನ್ನು ಕೊಂಡುಕೊಂಡ ಸಾರ್ವಜನಿಕ ವಲಯದ ಘಟಕಗಳು ಸಾರ್ವಜನಿಕ ಬ್ಯಾಕಿಂಗ್ ಸಂಸ್ಥೆಗಳು ಎದುರಿಸಬೇಕಿರುವಷ್ಟು ಪರಾಮರ್ಶೆಯನ್ನು ತನಿಖೆ ಅಥವಾ ವಿಚಾರಣೆಗಳನ್ನ್ನು ಎದುರಿಸಬೇಕಾಗುವುದಿಲ್ಲ. ಖಾಸಗಿ ಕಾರ್ಪೊರೇಟ್ ಕ್ಷೇತ್ರಕ್ಕೆ ಸಾಲವನ್ನು ಕೊಟ್ಟು ದುಸ್ಥಿತಿಯಲ್ಲಿರುವ ಸಾಲಿಗರು ಅದನ್ನು ಮಾರುವ ಮೂಲಕ ಅದರ ಹೊಣೆಗಾರಿಕೆಯನ್ನು ಸಾರ್ವಜನಿಕ ವಲಯದ ಘಟಕಗಳಿಗೆ ವರ್ಗಾಯಿಸುತ್ತವೆ. ಆ ಮೂಲಕ ಅವು ಲಾಭದಾಯಕವಾಗಿರುವ ಸಾರ್ವಜನಿಕ ವಲಯದ ಘಟಕಗಳನ್ನೂ ಸಹ ಕ್ರಮೇಣವಾಗಿ ದುಸ್ಥಿತಿಗೆ ದೂಡುತ್ತವೆ.
ಇದರ ಬದಲಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಹೆಚ್ಚುವರಿ ಬಂಡವಾಳವನ್ನು ಪೂರಣ ಮಾಡಿ ಸಾಲ ಮರುಪಾವತಿ ಮಾಡದ ಖಾಸಗಿ ಕಾರ್ಪೊರೇಟ್ ಬೇಪಾವತಿದಾರರನ್ನು ಉತ್ತರದಾಯಿಗಳನ್ನಾಗಿ ಏಕೆ ಮಾಡಬಾರದು? ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಬಂಡವಾಳ ಮರುಪೂರಣ ಮಾಡುವ ಕ್ರಮ ಮತ್ತು ನಷ್ಟದಲ್ಲಿರುವ ಸಾರ್ವಜನಿಕ ವಲಯದ ಘಟಕಗಳಿಗೆ ಬಜೆಟ್‌ನಲ್ಲಿ ಒದಗಿಸುವ ಹಣಕಾಸು ಸಹಾಯದ ಕ್ರಮಗಳೆರಡೂ ಒಂದೇ ಅಲ್ಲ. ಆದರೂ ಅವೆರಡು ಒಂದೇ ಎಂದು ಧ್ವನಿಸುವಂತೆ ಮಾತನಾಡಲಾಗುತ್ತದೆ. ಆ ಮೂಲಕ ಸತ್ಯವನ್ನು ತಿರುಚಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್‌ಗಳು ಲಾಭದಾಯಕ ಸಂಸ್ಥೆಗಳಾಗಿದ್ದು ಸರಕಾರದ ತೆರಿಗೆ ಮತ್ತು ತೆರಿಗೆಯೇತರ ಆದಾಯಗಳಿಗೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡುತ್ತಿವೆ. ಉದಾಹರಣೆಗೆ 2005-6 ಮತ್ತು 2016-17ರ ಅವಧಿಯಲ್ಲಿ ಅವು ಬಜೆಟ್‌ಗಳ ಮೂಲಕ ಪಡೆದುಕೊಂಡ ನೆರವಿಗಿಂತ ಹೆಚ್ಚು ಮೊತ್ತವನ್ನು ಸರಕಾರದ ಬೊಕ್ಕಸಕ್ಕೆ ನೀಡಿವೆ. ಸಾರ್ವಜನಿಕ ಬ್ಯಾಂಕ್‌ಗಳನ್ನು ಮತ್ತೆ ಖಾಸಗೀಕರಣಗೊಳಿಸಬೇಕೆಂಬ ಕೂಗಿನ ಹಿಂದೆ ಈ ಬ್ಯಾಂಕ್‌ಗಳಲ್ಲಿ ಹೆಚ್ಚಾಗುತ್ತಿರುವ ನಿಷ್ಕ್ರಿಯ ಸಂಪತ್ತಿನ ಪ್ರಮಾಣಕ್ಕೆ ಆಡಳಿತದ ತಪ್ಪು ನಿರ್ವಹಣೆಯೇ ಕಾರಣವೆಂಬ ತಪ್ಪು ಗ್ರಹಿಕೆ ಇದೆ. ಹಾಗೆಯೇ ಈ ವಲಯದಲ್ಲಿ ಖಾಸಗಿ ಬ್ಯಾಂಕ್‌ಗಳು ಹೆಚ್ಚಿನ ಮಟ್ಟದಲ್ಲಿ ವ್ಯವಹಾರ ನಡೆಸಲು ಅವಕಾಶ ಮಾಡಿಕೊಟ್ಟರೆ ಇಂತಹ ಅವಡಗಳು ಸಂಭವಿಸುವುದಿಲ್ಲವೆಂಬ ತಪ್ಪು ತಿಳುವಳಿಕೆ ಕೆಲಸ ಮಾಡುತ್ತದೆ.
ಅಂತಹ ದೃಷ್ಟಿಕೋನವು ಕಳೆದ ಒಂದು ದಶಕದಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಹೂಡಿಕೆಯ ವಿನ್ಯಾಸ ಮತ್ತು ಅಭಿವೃದ್ಧಿಯ ಮಾದರಿಯ ಬಗ್ಗೆ ಅಜ್ಞಾನವನ್ನು ಹೊಂದಿದೆ. ಈ ವೇಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿರುವುದು ಬ್ಯಾಂಕ್‌ಗಳು ನೀಡುತ್ತಿದ್ದ ಉದಾರವಾದ ಸಾಲಗಳು. ಆದರೆ 2007ರಲ್ಲಿ ಸಂಭವಿಸಿದ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ ಸ್ವಲ್ಪ ಮಟ್ಟಿಗೆ ಈ ಅಭಿವೃದ್ಧಿಯ ಗತಿ ಎಲ್ಲಾ ಕಡೆಗಳಲ್ಲೂ ಕುಂಠಿತವಾಯಿತು. ಇದರಿಂದಾಗಿ ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಅದರಲ್ಲೂ ಮೂಲಭೂತ ಸೌಕರ್ಯಗಳ ಉದ್ಯಮದಲ್ಲಿದ್ದ ಕಾರ್ಪೊರೇಟ್ ಕಂಪೆನಿಗಳ ಲಾಭ ಗಳಿಕೆಯಲ್ಲಿ ಇಳಿಕೆಯಾಯಿತು. ಆದ್ದರಿಂದ ಸಾಲ ಮರುಪಾವತಿ ಮಾಡದ ಪರಿಸ್ಥಿತಿಯೂ ಉಂಟಾಯಿತು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಸಾಲ ನೀಡುವಾಗ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಉದಾಹರಣೆಗಳು ಇದ್ದಾಗ್ಯೂ ಬ್ಯಾಂಕಿಂಗ್ ಬಿಕ್ಕಟ್ಟಿನ ಪ್ರಧಾನವಾದ ಕಾರಣಗಳು ಇದ್ದದ್ದು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೇ ಎಂಬುದನ್ನು ಮರೆಯಲಾಗದು. ವಾಸ್ತವವಾಗಿ ವಿದ್ಯುತ್, ಉಕ್ಕು, ಟೆಲಿಕಾಂ ಮತ್ತು ವಿಮಾನಯಾನದಂಥ ಮೂಲಭೂತ ಸೌಕರ್ಯಗಳ ಕ್ಷೇತ್ರದ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಗೆ ಹೆಚ್ಚೆಚ್ಚು ಸಾಲ ನೀಡಬೇಕೆಂಬ ಒತ್ತಡವನ್ನು ಸರಕಾರವು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೇಲೆ ಹೇರುತ್ತಿತ್ತು. ಆದರೆ ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಅಂತಹ ಒತ್ತಡಗಳೇನೂ ಇರಲಿಲ್ಲ. ಇಂತಹ ಮೂಲಭೂತ ಸೌಕರ್ಯಗಳ ಉದ್ದಿಮೆಗಳಿಗೆ ಅಪಾರವಾದ ಬಂಡವಾಳದ ಅಗತ್ಯವಿರುತ್ತದೆ ಮತ್ತು ಅವುಗಳು ಲಾಭ ಮಾಡಲು ದೀರ್ಘ ಕಾಲ ಬೇಕಾಗುತ್ತದೆ. ಹೀಗಾಗಿ ಖಾಸಗಿ ಬ್ಯಾಂಕ್‌ಗಳು ಇಂತಹ ಉದ್ದಿಮೆಗಳಿಗೆ ಸಾಲ ನೀಡುವ ರಿಸ್ಕು ತೆಗೆುಕೊಳ್ಳಲು ಬಿಲ್‌ಕುಲ್ ಸಿದ್ಧವಿರಲಿಲ್ಲ.
ಸ್ಪಷ್ಟವಾಗಿ ಸರಕಾರದ ಮುಂದೆ ಇರುವ ಆಯ್ಕೆಗಳೆಂದರೆ: ಒಂದೆಡೆ ಸಾಲ ವಸೂಲಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತಲೇ ಬ್ಯಾಂಕ್‌ಗಳಿಗೆ ಹೆಚ್ಚಿನ ಬಂಡವಾಳವನ್ನು ಮರುಪೂರಣ ಮಾಡುವುದು ಅಥವಾ ಬ್ಯಾಂಕ್‌ಗಳ ಖಾತೆಗಳಲ್ಲಿರುವ ವಸೂಲಾಗದ ಸಾಲಗಳನ್ನು ಹೇಗಾದರೂ ಮಾಡಿ ಹೊರಹಾಕಿ ಅವುಗಳ ಬ್ಯಾಲೆ್ಸ್ ಶೀಟನ್ನು ಸ್ವಚ್ಛಗೊಳಿಸುವುದು.
ಈ ಎರಡು ಆಯ್ಕೆಗಳಲ್ಲಿ ಎರಡನೆಯದು ಒಂದು ರೀತಿಯ ತೇಪೆ ಹಚ್ಚುವ ಕ್ರಮವಷ್ಟೇ. ಇಲ್ಲಿಯೂ ಸಹ ಈ ವಸೂಲಾಗದ ಸಾಲಗಳ ಭಾರವನ್ನು ಹೊರವುದು ಸರಕಾರವೇ. ಅದು ಸಾಲ ಮರುಪಾವತಿ ಮಾಡದ ಖಾಸಗಿ ಕಾರ್ಪೊರೇಟ್ ಕಂಪೆನಿಗಳನ್ನು ನೆಪಮಾತ್ರದ ಪರಿಶೀಲನೆಗೊಳಪಡಿಸಿ ಅವುಗಳ ಒಂದಷ್ಟು ಸಾಲವನ್ನು ಮನ್ನಾ ಮಾಡುವುದರ ಜೊತೆಗೆ ಉಳಿದ ಸಾಲವನ್ನು ಆ ಕಂಪೆನಿಗಳ ಹಿತವನ್ನು ಅತ್ಯುತ್ತಮವಾಗಿ ಕಾಯುವ ರೀತಿಯಲ್ಲೇ ಪುನರ್ ರಚಿಸಿಕೊಡುತ್ತದೆ. ಆದರೆ ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಸಾಲವನ್ನು ಮನ್ನಾ ಮಾಡಿ ಉಳಿದವನ್ನು ಅವುಗಳ ಹಿತಕ್ಕೆ ತಕ್ಕಂತೆ ಪುನರ್ ರಚಿಸಿ ಕೊಟ್ಟರೆ ತನ್ನ ನೆಚ್ಚಿನ ಬಂಡವಾಳಿಗರ (ಕ್ರೋನಿ) ಪರವಾಗಿ ಪಕ್ಷಪಾತ ಮಾಡಿದ ಆರೋಪಕ್ಕೆ ಗುರಿಯಾಗಬೇಕಾಗಬಹುದೆಂಬುದು ವಿತ್ತ ಸಚಿವಾಲಯಕ್ಕೆ ಚೆನ್ನಾಗಿ ಗೊತ್ತಿದೆ.
ಹೀಗಾಗಿ ಸರಕಾರ ಮತ್ತದರ ನೆಚ್ಚಿನ ಕಾರ್ಪೊರೇಟ್ ಕ್ರೋನಿಗಳು ಸಾರ್ವಜನಿಕರ ಗಮನಕ್ಕೆ ಬೀಳದಂತೆ ಸರಕಾರವೇ ಈ ಕಾರ್ಪೊರೇಟಿಗರ ಸಾಲವನ್ನು ಹೊರುವ ಪರೋಕ್ಷ ತಂತ್ರವೊಂದನ್ನು ಹೆಣೆದಂತಿದೆ. ದುಸ್ಥಿಯಲ್ಲಿರುವ ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಸಂಪತ್ತನ್ನು ಹಾಗೂ ಅವುಗಳ ಸಾಲ ಮತ್ತಿತರ ಹೊಣೆಗಾರಿಕೆಗಳನ್ನು ಇತರ ಸಾರ್ವಜನಿಕ ವಲಯದ ಘಟಕಗಳು ಕೊಳ್ಳುವಂತೆ ಪುಸಲಾಯಿಸುವುದೇ ಆ ತಂತ್ರವಾಗಿದೆ.
PÜê±æ: Economic and Political Weekly