ಜಿಎಸ್‌ಟಿಯಿಂದ ಮಹಾರಾಷ್ಟ್ರಕ್ಕೆ ನಷ್ಟ?!, ಮತ್ತೆ ಮಾಥೆರಾನ್ ಟಾಯ್‌ಟ್ರೈನ್ ಅರಂಭ
ಮಹಾರಾಷ್ಟ್ರದ ಬಿಜೆಪಿ ಸರಕಾರವು ಜಿಎಸ್‌ಟಿ (ವಸ್ತು ಮತ್ತು ಸೇವಾ ತೆರಿಗೆ)ಯನ್ನು ಮುಂದಿಟ್ಟು ಹೆಚ್ಚಿನ ಉತ್ಸಾಹ ತೋರಿಸುತ್ತಿದೆ. ಬೈಠಕ್ ನಡೆಸುತ್ತಿದೆ. ಆದರೆ ಒಳಗಿಂದೊಳಗೆ ಸರಕಾರ ಭಯ ಪಡುತ್ತಿದೆ. ಕಾರಣ ಜಿಎಸ್‌ಟಿ ಜಾರಿಗೊಳಿಸಿದರೆ ಸರಕಾರಕ್ಕೆ ಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಲಿದೆ. ಇದಲ್ಲದೆ ಬೇರೆ ಕೆಲವು ವಿಭಾಗಗಳಿಗೂ ನಷ್ಟ ಸಂಭವಿಸಲಿದೆ. ಅರ್ಥಾತ್ ಬರಲಿರುವ ದಿನಗಳು ತನಗೆ ಒಳ್ಳೆಯದಿಲ್ಲ ಎನ್ನುವುದು ಸರಕಾರಕ್ಕೆ ಚಿಂತೆ ಆವರಿಸಿದೆ. ಜಿಎಸ್‌ಟಿಯ ವಿಶೇಷ ಬೈಠಕ್ ಜಮ್ಮುವಿನಲ್ಲಿ ನಡೆದಿದೆ. ಇತ್ತ ಮಹಾರಾಷ್ಟ್ರದ ವಿತ್ತ ವಿಭಾಗವು ಜಿಎಸ್‌ಟಿ ಬರುವುದರಿಂದ ತನಗೆ ಯಾವ ನಷ್ಟ? ಹಾಗೂ ಏನು ತಾಪತ್ರಯ ಎದುರಾಗಲಿದೆ? ಎಂಬ ಬಗ್ಗೆ ಅವಲೋಕನ ನಡೆಸಲಾರಂಭಿಸಿದೆ.
ಮಹಾರಾಷ್ಟ್ರದ ಬಿಜೆಪಿ ಸರಕಾರವು ಆಗಸ್ಟ್ 1, 2015ರಂದು ರಾಜ್ಯದಿಂದ ಆಂಶಿಕ ಎಲ್.ಬಿ.ಟಿ. ತೆಗೆದು ಹಾಕಿ ಎಲ್ಲರಿಂದಲೂ ಪ್ರಶಂಸೆ ಪಡೆದಿತ್ತು. ಆಗ ಸರಕಾರವು ‘‘ಯಾರ ವ್ಯವಹಾರ 50 ಕೋಟಿ ರೂಪಾಯಿಗಿಂತ ಕಡಿಮೆ ಇದೆಯೋ ಅವರು ಎಲ್.ಬಿ.ಟಿ. ತುಂಬಿಸಬೇಕಾಗಿಲ್ಲ. ಯಾರ ಟರ್ನ್‌ಓವರ್ 50 ಕೋಟಿ ರೂಪಾಯಿಗಿಂತ ಹೆಚ್ಚಿಗಿದೆಯೋ ಅವರು ಎಲ್.ಬಿ.ಟಿ. ತುಂಬಿಸಬೇಕಾಗುವುದು’’ ಎಂದು ಘೋಷಣೆ ಮಾಡಿತ್ತು. ಇದು ಈಗ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಎಲ್.ಬಿ.ಟಿ. ತೆಗೆದು ಹಾಕಿದ್ದರಿಂದ ಸರಕಾರಕ್ಕೆ ವರ್ಷಕ್ಕೆ ಸುಮಾರು 3,500 ಕೋಟಿ ರೂಪಾಯಿ ನಷ್ಟವಾಗಿದೆ.
ಮಹಾರಾಷ್ಟ್ರದಲ್ಲಿ ಸರಕಾರವೇ ಎಲ್.ಬಿ.ಟಿ. ತೆರಿಗೆ ರದ್ದು ಮಾಡಿದ್ದು, ಇಂತಹ ಸ್ಥಿತಿಯಲ್ಲಿ ಕೇಂದ್ರ ಸರಕಾರದಿಂದ ಎಲ್.ಬಿ.ಟಿ.ಯ ಪರಿಹಾರ ಕೇಳಲು ಹೇಗೆ ಸಾಧ್ಯ? ಒಂದೊಮ್ಮೆ ಮಹಾರಾಷ್ಟ್ರದ ಬೇಡಿಕೆ ಕೇಂದ್ರ ಸ್ವೀಕರಿಸಿದರೆ ಈ ರೀತಿಯ ರಿಯಾಯಿತಿಯನ್ನು ಅನ್ಯ ರಾಜ್ಯಗಳಿಗೂ ನೀಡಬೇಕಾಗುತ್ತದೆ. ಈ ನಡುವೆ ‘‘ಜಿಎಸ್‌ಟಿ ನಂತರವೂ ಮುಂಬೈ ಮನಪಾದ ಸ್ವಾಯತ್ತತೆ ಉಳಿಯುವುದು ಎನ್ನುತ್ತಾರೆ’’ ಶಿವಸೇನೆಯ ಉದ್ಧವ್ ಠಾಕ್ರೆ.
* * *
ಒಡಿಶಾದ ಗಮನ ಸೆಳೆದ ನವಿಮುಂಬೈ ಮನಪಾ ಅಂಗವಿಕಲ ಸೇವಾಕೇಂದ್ರ
ನವಿಮುಂಬೈ ಮಹಾನಗರ ಪಾಲಿಕೆಯ ಸರ್ವ ಸೌಕರ್ಯ ಗಳನ್ನೊಳಗೊಂಡ ‘ದಿವ್ಯಾಂಗ ಸೇವಾ ಕೇಂದ’್ರದ ಕಲ್ಯಾಣಕಾರಿ ಕಾರ್ಯ ಪ್ರಣಾಳಿಕೆಯು ಇದೀಗ ಒಡಿಶಾ ಸರಕಾರವನ್ನು ಆಕರ್ಷಿಸಿದೆ. ಈ ಕೇಂದ್ರದ ಯೋಜನೆಗಳ ಅವಲೋಕನ ನಡೆಸುವುದಕ್ಕೆ ಒಡಿಶಾ ಸರಕಾರದ ಸಾಮಾಜಿಕ ಸುರಕ್ಷಾ ವಿಭಾಗ ಮತ್ತು ದಿವ್ಯಾಂಗ ವ್ಯಕ್ತಿ ಸಕ್ಷಮೀಕರಣ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತೆನ್ ಚಂದ್ರ ತಂಡ, ಯುನಿಸೆಫ್ ಪರವಾಗಿ ಮಧುಮಿತಾ ದಾಸ್‌ರನ್ನು ಒಳಗೊಂಡ ಪ್ರತಿನಿಧಿ ಮಂಡಲವು ನವಿಮುಂಬೈ ಮನಪಾದ ಈ ಕೇಂದ್ರಕ್ಕೆ ಭೇಟಿ ನೀಡಿತು.
ನವಿಮುಂಬೈ ಮನಪಾದ ಈ ಇ.ಟಿ.ಸಿ. ಕೇಂದ್ರವು ಅಂಗವಿಕಲರಿಗೆ ಶಿಕ್ಷಣ, ಪರೀಕೆ,್ಷ ಸೇವಾ ಸೌಲಭ್ಯ ಒದಗಿಸುವ ಮೂಲಕ ಪ್ರಧಾನಿ ಪುರಸ್ಕಾರ ಸಹಿತ ಅನೇಕ ರಾಷ್ಟ್ರೀಯ, ರಾಜ್ಯ ಪುರಸ್ಕಾರಗಳಿಂದ ಸಮ್ಮಾನಿತಗೊಂಡಿದೆ. ಅಂಗವಿಕಲರಿಗೆ ಆತ್ಮಸ್ಥೈರ್ಯ ನೀಡುವಲ್ಲಿ ಈ ಸೇವಾ ಕೇಂದ್ರ ದೇಶದಲ್ಲೇ ಗಮನ ಸೆಳೆದಿದೆ.
* * *
ಶೀಘ್ರವೇ ಮಾಥೆರಾನ್ ಟಾಯ್ ಟ್ರೈನ್
ಮುಂಬೈ ಸಮೀಪದ ಮಾಥೆರಾನ್ ಹಿಲ್ ಸ್ಟೇಷನ್ ಸುತ್ತಾಡುವ ಪ್ರವಾಸಿಗರಿಗೆ ಖುಷಿಯ ಸುದ್ದಿ ಕೇಳಿ ಬಂದಿದೆ. ಶೀಘ್ರವೇ ಅಮನ್ ಲಾಜ್‌ನಿಂದ ಮಾಥೆರಾನ್ ನಡುವೆ ಟಾಯ್ ಟ್ರೈನ್ ಆರಂಭವಾಗಲಿದೆ. ಕಳೆದ ಕೆಲವು ತಿಂಗಳಿನಿಂದ ಮಧ್ಯ ರೈಲ್ವೆಯು ಈ ಮೂರು ಕಿ.ಮೀ. ಸೆಕ್ಷನ್‌ನಲ್ಲಿ ಟಾಯ್ ಟ್ರೈನ್‌ನ ಟ್ರಯಲ್ ಮಾಡಿದೆ. ಅರ್ಥಾತ್ ಜೂನ್ ತಿಂಗಳಲ್ಲಿ ಈ ಟಾಯ್ ಟ್ರೈನ್ ಓಡಾಡಲಿದೆ. ಇದರಿಂದ ಪ್ರವಾಸಿಗರ ಜೊತೆಗೆ ಸ್ಥಳೀಯ ನಿವಾಸಿಗಳೂ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಒಂದೆರಡು ದುರ್ಘಟನೆ ಕಾಣಿಸಿಕೊಂಡ ನಂತರ ಕಳೆದ ವರ್ಷ ಮೇ 2016ರಿಂದ ಮಾಥೆರಾನ್ ಟಾಯ್ ಟ್ರೈನ್ ಸರ್ವಿಸ್ ನಿಲ್ಲಿಸಲಾಗಿತ್ತು. ಈಗ ಈ ರೂಟ್‌ನಲ್ಲಿ ವಿಭಿನ್ನ ಸುರಕ್ಷೆಯ ಸಮೀಕ್ಷೆ ನಡೆಸಲಾಗಿದೆ. ನಂಬಿಕೆ ಬಂದ ನಂತರವೇ ಈ ಟ್ರೈನ್ ಚಲಿಸಲು ಅನುಮತಿ ನೀಡಲಾಗುವುದು. ಕಳೆದ ವರ್ಷ ಮೇ 2016ರ ತನಕ ಮಧ್ಯ ರೈಲ್ವೆಯು ವೀಕೆಂಡ್‌ನಲ್ಲಿ ಪ್ರತೀ ದಿನ 24 ಸರ್ವಿಸ್ ಟಾಯ್ ಟ್ರೈನ್ ಕಾಣಿಸುತ್ತಿತ್ತು.
ಇದೀಗ ಜೂನ್‌ನಲ್ಲಿ ಒಂದು ವೇಳೆ ಟಾಯ್ ಟ್ರೈನ್ ಓಡಾಟ ಆರಂಭಿಸಿದರೂ ದಿನಕ್ಕೆ ಸದ್ಯ 4 ಅಥವಾ 6 ಬಾರಿ ಮಾತ್ರವಂತೆ.
* * *
ಪಾಕಿಸ್ತಾನಿ ಪ್ರಜೆಗಳಿಗೆ ಇಬ್ಬರು ‘ಗ್ಯಾರಂಟರ್’ ಅಗತ್ಯ
ಮುಂಬೈಯಲ್ಲಿ ಇತ್ತೀಚೆಗೆ 26 ಪಾಕಿಸ್ತಾನಿ ಪ್ರಜೆಗಳು ‘ನಾಪತ್ತೆ’ಯಾಗಿರುವ ಘಟನೆ ಭಾರೀ ಸುದ್ದಿಯಾದ ನಂತರ, ಈ ಸುದ್ದಿ ತಪ್ಪುಎಂದು ಸಾಬೀತಾದರೂ, ಇದೀಗ ತನಿಖಾ ಏಜೆನ್ಸಿಗಳು ಎಚ್ಚೆತ್ತುಕೊಂಡಿವೆ. ಈ ಸುದ್ದಿ ಮಾಧ್ಯಮದಲ್ಲಿ ವರದಿಯಾದ ನಂತರ ಮುಂಬೈ ಪೊಲೀಸ್, ಮಹಾರಾಷ್ಟ್ರ ಎಟಿಎಸ್, ಎಸ್-ಬಿ ವನ್ ಹಾಗೂ ಗುಪ್ತಚರ ಏಜನ್ಸಿಗಳು ಇನ್ನು ಮುಂದೆ ಇಂತಹ ಸುದ್ದಿಗಳನ್ನು ನಿಯಂತ್ರಿಸಲು ನಿಶ್ಚಯಿಸಿವೆ. ಇನ್ನು ಮುಂದೆ ಮಾಧ್ಯಮಗಳು ಇಂತಹ ಸುದ್ದಿಗಳನ್ನು ಪ್ರಕಟಿಸುವಾಗ ಜಾಗ್ರತೆ ವಹಿಸಬೇಕಾಗಿದೆ. ಮುಂಬೈಗೆ ಬಂದಿರುವ ಪಾಕಿಸ್ತಾನಿಗಳ ದಾಖಲೆ ತೆಗೆದು ಎಲ್ಲಾ ಮಗ್ಗಲುಗಳ ತನಿಖೆ ನಡೆಸಿದ ನಂತರ ಈ ಏಜೆನ್ಸಿಗಳು ಈಗ ನೆಮ್ಮದಿಯ ಉಸಿರು ಬಿಟ್ಟಿವೆ.
ಪೊಲೀಸ್ ಅಧಿಕಾರಿಗಳು ಹೇಳುವಂತೆ ಮುಂಬೈಗೆ ಬಂದಿರುವ ಪಾಕಿಸ್ತಾನಿಗಳು ಅಷ್ಟು ಸುಲಭದಲ್ಲಿ ನಾಪತ್ತೆ ಆಗುವುದು ಸಾಧ್ಯವಿಲ್ಲ. ಮುಂಬೈ ಸಹಿತ ಮಹಾರಾಷ್ಟ್ರದಾದ್ಯಂತ ದೀರ್ಘ ಸಮಯದಿಂದ ಅಧಿಕವೆಂದರೆ ಇನ್ನೂರು ಪಾಕಿಸ್ತಾನಿಯರೂ ಇರಲಿಕ್ಕಿಲ್ಲವಂತೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು. ಇವರು ಪಾಕಿಸ್ತಾನದವರಾಗಿದ್ದರೂ ಮಹಾರಾಷ್ಟ್ರದ ಪುರುಷರನ್ನು ಮದುವೆಯಾಗಿದ್ದಾರೆ. ಇಂತಹ ಮಹಿಳೆಯರಿಗೆ ಲಾಂಗ್ ಟರ್ಮ್ ವೀಸಾ ನೀಡಲಾಗುತ್ತದೆ. ಇದನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತದೆ. ಹೆಚ್ಚಿನ ಪಾಕಿಸ್ತಾನಿಯರು ಶುಶ್ರೂಷೆಗಾಗಿಯೋ, ತಮ್ಮ ಕುಟುಂಬಿಕರ ಮದುವೆಗೋ ಮಹಾರಾಷ್ಟ್ರಕ್ಕೆ ಬರುತ್ತಾರೆ. ಕೆಲವರು ಬಾಲಿವುಡ್‌ನ ಶೂಟಿಂಗ್‌ಗೂ ಬಂದಿರುತ್ತಾರೆ. ಇವರಿಗೆ ಟೂರಿಸ್ಟ್ ವೀಸಾ ನೀಡಲಾಗುತ್ತದೆ. ಇದನ್ನು ಭಾರತೀಯ ರಾಯಭಾರಿ ಕಚೇರಿ ಮೂಲಕ ನೀಡುತ್ತಾರೆ. ಆದರೆ ಮುಖ್ಯ ಶರ್ತದಲ್ಲಿ ವೀಸಾ ಅರ್ಜಿ ನೀಡುವಾಗ ಮಹಾರಾಷ್ಟ್ರದಲ್ಲಿ ಇಬ್ಬರು ಗ್ಯಾರಂಟರ್ ಮತ್ತು ಅವರ ವಿಳಾಸ ಕೂಡಾ ನೀಡಬೇಕು. (ಯಾರಿಗೆ ಅವರ ಪರಿಚಯವಿದೆಯೋ ಅವರ ವಿಳಾಸ) ಆನಂತರ ಪೊಲೀಸ್ ಪರಿಶೀಲನೆ ನಡೆಯುತ್ತದೆ. ನಂತರವೇ ಪಾಕಿಸ್ತಾನಿಯರು ಮಹಾರಾಷ್ಟ್ರಕ್ಕೆ ಬರುತ್ತಾರೆ. ಹೀಗಾಗಿ ಅಷ್ಟು ಸುಲಭವಾಗಿ ಪರಾರಿಯಾಗಲು ಸಾಧ್ಯವಿಲ್ಲ.
ಇತ್ತ ವಿಮಾನ ನಿಲ್ದಾಣದಲ್ಲೂ ಪಾಕಿಸ್ತಾನಿಯರು ಫಾರ್ಮ್ ತುಂಬಿಸಬೇಕು. ಹಾಗೂ ಮುಂಬೈಯ ಆಝಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಎಸ್.ಬಿ.-ವನ್ ಬ್ರ್ಯಾಂಚ್‌ನ ಐ ಸೆಲ್‌ಗೆ 24 ಗಂಟೆ ಒಳಗೆ ವರದಿ ಸಲ್ಲಿಸಬೇಕು. ಅಲ್ಲೂ ಫಾರ್ಮ್ ತುಂಬಿಸಬೇಕು. ಅವರಲ್ಲಿ ಕೇವಲ ಮುಂಬೈಯ ವೀಸಾ ಮಾತ್ರ ಇದ್ದರೆ ಬೇರೆ ನಗರಕ್ಕೆ ಹೋಗುವಂತಿಲ್ಲ. ಹೀಗಾಗಿ ಒಂದು ವೇಳೆ ಆ ಪಾಕಿಸ್ತಾನಿ ನಾಪತ್ತೆಯಾದರೆ ಗ್ಯಾರಂಟರ್‌ನ್ನು ಪೊಲೀಸರು ವಿಚಾರಿಸುತ್ತಾರೆ. ಇಷ್ಟೆಲ್ಲ ನಿಯಮಗಳು ಇರುವಾಗ ಪಾಕಿಸ್ತಾನಿಯರು ‘ನಾಪತ್ತೆ’ ಎನ್ನುವ ಅವಸರದ ಸುದ್ದಿ ಹೇಗೆ ಬಂತೋ!
* * *
ಪಿನ್ ನಂಬರ್ ಕೇಳುವ ಸರಕಾರಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್!
ಮುಂಬೈಯ ಪ್ರಖ್ಯಾತ ಕೆ.ಇ.ಎಂ. ಆಸ್ಪತ್ರೆಯಲ್ಲಿನ ಮೆಡಿಕಲ್ ಸ್ಟೋರ್‌ಗಳಲ್ಲಿ ರೋಗಿಗಳು ಔಷಧಿ ಪಡೆಯುವಾಗ ಕ್ರೆಡಿಟ್‌ಕಾರ್ಡ್, ಎಟಿಎಂ ಕಾರ್ಡ್ ನೀಡಿದ್ದರೆ ಅಂಗಡಿಯವರು ಕಾರ್ಡ್‌ಗಳ ಪಿನ್‌ನಂಬರ್ ಕೇಳುತ್ತಾರೆ. ಈ ವಿಷಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾದ ನಂತರ ಇದೀಗ ಮೆಡಿಕಲ್ ಸ್ಟೋರ್‌ಗಳಲ್ಲಿ ಪಿನ್‌ನಂಬರ್ ಕೇಳುವುದನ್ನು ನಿಲ್ಲಿಸಲಾಗಿದೆ.
ಮಾಧ್ಯಮಗಳಲ್ಲಿ ಈ ವಿಷ ಪ್ರಕಟವಾದ ನಂತರ ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸುಪೆ ಅವರು ರೋಗಿಗಳಿಂದ ಪಿನ್ ನಂಬರ್ ಕೇಳುವುದು ತಕ್ಷಣ ನಿಲ್ಲಿಸುವಂತೆ ಮೆಡಿಕಲ್ ಸ್ಟೋರ್‌ಗೆ ಆದೇಶ ನೀಡಿದ್ದಾರೆ.
ಈ ಬಗ್ಗೆ ಕೆಲವು ರೋಗಿಗಳು ಮಾಧ್ಯಮಗಳಿಗೆ ದೂರು ನೀಡಿದ್ದರು.
* * *
ಮಂಗಲದಾಸ್ ಮಾರ್ಕೆಟ್: ವ್ಯವಹಾರ ಇಳಿೆ
ಮುಂಬೈಯ ನೂರು ವರ್ಷ ಹಳೆಯದಾದ ರಖಂ ಮತ್ತು ಚಿಲ್ಲರೆ ಮಾರುಕಟ್ಟೆ ‘ಮಂಗಲದಾಸ್ ಮಾರ್ಕೆಟ್’ ತಿಂಗಳಲ್ಲಿ ಕೋಟಿಗಟ್ಟಲೆ ರೂ. ವ್ಯವಹಾರ ನಡೆಸುತ್ತದೆ. ಆದರೆ ನೋಟ್‌ಬಂದಿಯ ನಂತರ ಮಾರುಕಟ್ಟೆಯಲ್ಲಿ ಶೇ. 50-60 ವ್ಯವಹಾರ ಇಳಿಕೆಯಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ಕಳೆದ ವರ್ಷ ನವೆಂಬರ್‌ನಿಂದ ವ್ಯವಹಾರ ತಣ್ಣಗಾಗಿದೆ. ಮಳೆಗಾಲದ ನಂತರ ಈ ಸ್ಥಿತಿ ಬದಲಾಗಬಹುದು ಎನ್ನುವ ಭರವಸೆಯನ್ನು ವ್ಯಾಪಾರಿಗಳು ಇಟ್ಟುಕೊಂಡಿದ್ದಾರೆ. ಬಟ್ಟೆ ಮತ್ತು ರೆಡಿಮೇಡ್ ಉಡುಪುಗಳ ಬಹುದೊಡ್ಡ ಮಾರುಕಟ್ಟೆ ಇದು. ಇಲ್ಲಿನ ಹೆಚ್ಚಿನ ವ್ಯಾಪಾರಿಗಳು ಇದೀಗ ಡಿಜಿಟಲ್ ಮಾಧ್ಯಮವನ್ನು ಅವಲಂಬಿಸಿದ್ದಾರೆ.
* * *
ಗಟಾರಕ್ಕೆ ಬಿದ್ದ ಮೊಬೈಲ್: ಇಬ್ಬರ ಸಾವು
ಮುಂಬೈಯ ಚಾಂದಿವಲಿಯ ಬಳಿ ಇರುವ ಕಮಾನಿ ಆಯಿಲ್ ಮಿಲ್‌ನ ಬಳಿ ಗಟಾರ ಸ್ವಚ್ಛ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ತಮ್ಮ ಮೊಬೈಲ್ ಗಟಾರಕ್ಕೆ ಬಿತ್ತೆಂದು ಕೆಳಗಿಳಿದವರು ಅಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಗ್ನಿಶಾಮಕ ದಳ ಮತ್ತು ಸಾಕಿನಾಕ ಪೊಲೀಸರು ಬಂದು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಅವರನ್ನು ಮೃತರಾಗಿದ್ದಾರೆ ಎಂದು ಘೋಷಿಸಲಾಯಿತು. ಈ ಗಟಾರದೊಳಗೆ ವಿಷಯುಕ್ತ ಅನಿಲವಿತ್ತು ಎನ್ನಲಾಗಿದೆ.