ಐಎಎಸ್ ಅಧಿಕಾರಿಗಳ ವಿರುದ್ಧ ಕೆಎಎಸ್ ಅಧಿಕಾರಿಗಳಿಂದ ದೂರು
ಬೆಂಗಳೂರು, ಮೇ 24: ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳು ಕೆ.ಎ.ಎಸ್ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಐ.ಎ.ಎಸ್ ಅಧಿಕಾರಿಗಳಾದ ರಮಣ ರೆಡ್ಡಿ, ಡಾ. ಕಲ್ಪನಾ, ಡಾ. ಟಿ.ಕೆ. ಅನಿಲ್ ಕುಮಾರ್ ಹಾಗೂ ಲಕ್ಷ್ಮಿನಾರಾಯಣ ವಿರುದ್ಧ ಮಥಾಯಿ ಅವರು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ಸಲ್ಲಿಸಿದರು. ಐಎಎಸ್ ಅಧಿಕಾರಿಗಳ ವಿರುದ್ಧ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೂರು ದಾಖಲಾಗಿದೆ. ಇದರಿಂದ ಐಎಎಸ್ ಅಧಿಕಾರಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಕೆ.ಮಥಾಯಿ ಮಾತನಾಡಿ, ಈ ಹಿಂದೆ ತಾನು ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದಾಗ 2 ಸಾವಿರ ಕೋಟಿ ರೂ. ಅಕ್ರಮ ಜಾಹೀರಾತು ದಂಧೆಯ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದೆ. ಇದನ್ನೇ ಗುರಿಯಾಗಿಸಿ ಕಿರುಕುಳ ನೀಡಲು ಆರಂಭಿಸಿದರು. ಅಕ್ರಮ ಜಾಹೀರಾತು ಸಂಬಂಧಿಸಿದ ವರದಿಯನ್ನು ಸರಕಾರವೇ ಅಂಗೀಕರಿಸಿ ಸಿಐಡಿಗೆ ಒಪ್ಪಿಸಿ ತಮಗೆ ಅಭಿನಂದನೆ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಮಾತ್ರ ತನ್ನ ಸೇವಾ ವರದಿಯಲ್ಲಿ ನಿಮ್ಮ ಸೇವೆ ತೃಪ್ತಿ ತಂದಿಲ್ಲ ಎಂದು ಬರೆದು ತನ್ನ ಮುಂದಿನ ಸೇವೆಗೆ ಹಾಗೂ ಬಡ್ತಿಗೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಿದರು.
ಬಿಬಿಎಂಪಿಯಿಂದ ಸಕಾಲ ಯೋಜನೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕವೂ ಕಿರುಕುಳ ಮುಂದುವರೆದಿದೆ. ಇಲ್ಲಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಅವರು, ದಿನನಿತ್ಯ ತಮಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ನಿನ್ನೆ ಬೆಳಿಗ್ಗೆ 9.45ಕ್ಕೆ ಕಚೇರಿಯಲ್ಲಿದ್ದರೂ 11 ಗಂಟೆಗೆ ಆಗಮಿಸಿದ ಡಾ. ಕಲ್ಪನಾ ಅವರು, ಹಾಜರಾತಿ ಪುಸ್ತಕದಲ್ಲಿ ನಾನು ಗೈರು ಹಾಜರಾಗಿದ್ದೇನೆಂದು ನಮೂದಿಸಿದ್ದಾರೆ. ಇಂತಹ ಅನೇಕ ರೀತಿಯ ಕಿರುಕುಳ ಸಹಿಸಲಾಗದೆ, ಲೋಕಾಯುಕ್ತರಿಗೆ ದೂರು ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಸಕಾಲ ಯೋಜನೆಗೆ ನಾನು ಸೇರುವ ಒಂದು ದಿನ ಮೊದಲು ಆಡಳಿತಾಧಿಕಾರಿಗೆ ವಾಹನ ಸೌಲಭ್ಯ ಇತ್ತು. ಆದರೆ ನಾನು ಕರ್ತವ್ಯಕ್ಕೆ ಹಾಜರಾದ ಬಳಿಕ ಆ ಸೌಲಭ್ಯವನ್ನೂ ಕಡಿತಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಸಕಾಲ ಯೋಜನೆಯ ಪ್ರಚಾರಕ್ಕಾಗಿ ಬಿಡುಗಡೆಯಾಗಬೇಕಿದ್ದ 2 ಕೋಟಿ ರೂ. ಹಣವನ್ನು ಬಿಡುಗಡೆ ಮಾಡದೆ ಅದರ ಹೊಣೆಯನ್ನು ನನ್ನ ಮೇಲೆ ಹಾಕಲಾಗಿದೆ ಹೇಳಿದರು.
ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಹೆಚ್ಚಿನ ಕಚೇರಿಗಳಲ್ಲಿ ಇಲ್ಲ. ಹಿರಿಯ ಅಧಿಕಾರಿಗಳು ಮಾಫಿಯಾದಲ್ಲಿ ತೊಡಗಿದ್ದು, ಕಾನೂನು ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ನಿರಂತರ ಒತ್ತಡ, ಕಿರುಕುಳ ಸಹಿಸಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಿಎಂ ಭೇಟಿಗೂ ಬಿಡುತ್ತಿಲ್ಲ: ಬಿಬಿಎಂಪಿ ಜಾಹೀರಾತು ಹಗರಣದ ಬಗ್ಗೆ ವರದಿ ನೀಡಿದಾಗ ಸಾಕಷ್ಟು ಕಿರುಕುಳ ಅನುಭವಿಸಿದ್ದೆ. ಆಗಲೇ ಮುಖ್ಯಮಂತ್ರಿಯವರ ಭೇಟಿಗೆ ಅವಕಾಶ ಕೋರಿದ್ದೆ. ಆದರೆ ಹಿರಿಯ ಅಧಿಕಾರಿಗಳು ಅದಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.