ಯುವತಿಯ ಕೊಲೆ: ದೂರು
ಬೆಂಗಳೂರು, ಮೇ 24:ಮನೆಯೊಂದರಲ್ಲಿ ಯುವತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ದುರ್ಘಟನೆ ಇಲ್ಲಿನ ವಿವೇಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಈಜಿಪುರದ ರಾಮಮಂದಿರದಲ್ಲಿ ಬಾಡಿಗೆ ಮನೆಯಲ್ಲಿದ್ದ ತಮಿಳುನಾಡು ಮೂಲದ ಪ್ರಿಯಾ (25) ಎಂಬಾಕೆ ಹತ್ಯೆಗೀಡಾದ ಯುವತಿ ಎಂದು ಪೊಲೀಸರು ಗುರುತಿಸಿದ್ದಾರೆ.
3 ದಿನದ ಹಿಂದೆಯೇ ಹತ್ಯೆ:
ರಾಮಮಂದಿರದ ಬಳಿಯ ಮನೆಯಲ್ಲಿ ಸ್ನೇಹಿತೆ ರಿಯಾ ಎಂಬಾಕೆಯೊಂದಿಗೆ ವಾಸವಿದ್ದ ಪ್ರಿಯಾ, ಐದು ದಿನಗಳ ಹಿಂದಷ್ಟೆ ಬೆಂಗಳೂರಿಗೆ ಬಂದಿದ್ದಾಳೆ. ಆದರೆ, ಘಟನೆ ಬಳಿಕ ಸ್ನೇಹಿತೆ ರಿಯಾ ನಾಪತ್ತೆಯಾಗಿದ್ದು, ಮೂರು ದಿನಗಳ ಹಿಂದೆಯೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ, ಇದರಿಂದ ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಒಳಗಿನಿಂದ ದುರ್ವಾಸನೆ ಬರುತ್ತಿತ್ತು. ಬಾಗಿಲು ಒಡೆದು ಪರಿಶೀಲಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಸ್ನೇಹಿತೆಯಿಂದಲೇ ಕೊಲೆ: ಪ್ರಿಯಾ ಜೊತೆ ಬಂದಿದ್ದ ರಿಯಾ ಎಂಬಾಕೆಯೇ ಕೊಲೆಗೈದಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ಪ್ರಿಯಾ ಬಳಿಯಿದ್ದ ಹಣ, ಆಭರಣ ಕದ್ದು ಪರಾರಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಿಯಾ ಪೋಷಕರನ್ನು ಸಂಪರ್ಕ ಮಾಡಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಿಯಾ, ರಿಯಾ ಇಬ್ಬರು ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಕರೆತಂದು ಕೊಲೆ ಮಾಡಿರಬಹುದು ಎಂಬ ಶಂಕೆಯೂ ಇದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ವಿವೇಕನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.