ಸಿಇಟಿ ಫಲಿತಾಂಶ: ಮೇ 30ಕ್ಕೆ ಸಾಧ್ಯತೆ
ಬೆಂಗಳೂರು, ಮೇ 25: ಸಿಬಿಎಸ್‌ಇ ಹಾಗೂ ಐಬಿಎಸ್‌ಇ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ 2017ನೆ ಸಾಲಿನ ಸಿಇಟಿ ಫಲಿತಾಂಶ ವಿಳಂಬವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಹಾಗೂ ಐಬಿಎಸ್‌ಇ ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆ ವಿಳಂಬವಾಗುವ ಕಾರಣ ಸಿಇಟಿ ಫಲಿತಾಂಶವನ್ನು ಮುಂದೂಡುವ ಅನಿವಾರ್ಯತೆ ಉಂಟಾಗಿದೆ. ಈ ಮೊದಲು ಮೇ 27ರಂದು ಸಿಇಟಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೀಗ ಮೇ 30ಕ್ಕೆ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಫಲಿತಾಂಶದ ಮೊದಲೇ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧಿಕಾರಕ್ಕೆ ಗೊಂದಲ ಉಂಟಾಗಲಿದೆ. ಹೀಗಾಗಿ 3ದಿನ ವಿಳಂಬವಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 30ರಂದು ಸಿಇಟಿ ಫಲಿತಾಂಶ ಪ್ರಕಟವಾದರೆ, ದಾಖಲೆಗಳ ಪರಿಶೀಲನೆಗೆ ಕೇವಲ ಒಂದು ದಿನ ಉಳಿಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೇಳಾಪಟ್ಟಿಯಂತೆ ಜೂ.1ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ. ಆದರೆ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ತನ್ನ ಫಲಿತಾಂಶ ಪ್ರಕಟಣೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ.