varthabharthi


ಅಂಬೇಡ್ಕರ್ ಚಿಂತನೆ

ಸ್ವಾಭಿಮಾನದ ಜ್ಯೋತಿಯನ್ನು ಉರಿಸುತ್ತಿರಿ!

ವಾರ್ತಾ ಭಾರತಿ : 26 May, 2017

‘‘ಸ್ವಾಭಿಮಾನದ ಜ್ಯೋತಿಯನ್ನು ಉರಿಸುತ್ತಿರಿ! ಸುಸಂಘಟಿತರಾಗಿ! ಅಲ್ಲದೆ ಯಾವತ್ತೂ ಅನ್ಯಾಯದ ವಿರುದ್ಧ ಹೋರಾಡುತ್ತಿರಿ!’’ ತಮ್ಮ ಹುಟ್ಟುಹಬ್ಬದ ದಿನವಾದ 14 ಎಪ್ರಿಲ್ 1953ರಂದು ಡಾ. ಬಾಬಾಸಾಹೇಬ ಅಂಬೇಡ್ಕರರು ಈ ಸಂದೇಶವನ್ನು ನೀಡಿದರು. ನಾವು ಹೂಹಾರವನ್ನು ತೆಗೆದುಕೊಂಡು ಮುಂಬೈಯ ಜನರ ವತಿಯಿಂದ ಅವರನ್ನು ಕಾಣಲು ಹೋದಾಗ ನಮಗೆ ಈ ಸಂದೇಶ ಕೇಳಲು ಸಿಕ್ಕಿತು. ಆ ದಿನ ಡಾಕ್ಟರ್ ಸಾಹೇಬರ ಹಲವು ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗ ಬಂದು, ಅವರ ಕೈಕುಲುಕಿ, ಅವರಿಗೆ ದೀರ್ಘಾಯುಷ್ಯ ಲಭಿಸಲೆಂದು ಕೋರುತ್ತಿದ್ದರು. ಹೊರಬದಿಯಲ್ಲಂತೂ ಅವರ ದರ್ಶನಕ್ಕಾಗಿ ನೂರಾರು ಜನ ಸ್ತ್ರೀ- ಪುರುಷರು ಹೂಹಾರಗಳನ್ನು ಹಿಡಿದು ಕಾದು ನಿಂತಿದ್ದರು.

ಡಾ. ಬಾಬಾಸಾಹೇಬರು ಪ್ರಸನ್ನಚಿತ್ತರಾಗಿ ಎಲ್ಲರಿಗೂ ಭೇಟಿಯನ್ನು ನೀಡಿದರು. ‘ಪರಬ್ರಹ್ಮನು ಪುಂಡಲಿಕನ ಭೇಟಿಗಾಗಿ ಬರುತ್ತಿದ್ದನು’ ಎಂಬ ಉಕ್ತಿಯಂತೆ, ಜನತಾ ಜನಾರ್ದನನ ತುಂಬು ಪ್ರೀತಿಯನ್ನು ಕಂಡು ಅವರ ಅಂತಃಕರಣ ಸಂತೋಷದಿಂದ ಕರಗಿತು. ಅವರು ಎಲ್ಲರ ಕುಶಲವನ್ನು ಕುರಿತು ವಿಚಾರಿಸಿದರು. ನಿಕಟ ಪರಿಚಿತರೊಡನೆ ಹಾಸ್ಯ ವಿನೋದದ ಮಾತುಗಳನ್ನು ಆಡಿದರು. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಮಿತವ್ಯಯಿಗಳಾಗಿರಲು ಸಲಹೆ ನೀಡಿದರು. ನಿಧಾನವಾಗಿ ಜನರ ಗುಂಪು ಚದುರಿತು. ನಮ್ಮ ಒಬ್ಬ ಸ್ನೇಹಿತನು ಕೆಲವು ದಿನಗಳ ಕೆಳಗೆ ನಮಗೆ ಹೀಗೆಂದು ಹೇಳಿದ್ದನು; ‘‘ಡಾ. ಬಾಬಾಸಾಹೇಬರು ಬಹಳಷ್ಟು ಮಟ್ಟಿಗೆ ಬುದ್ಧಮಯರಾಗಿರುವರು. ಬುದ್ಧನ ವಿಚಾರಸರಣಿಯು ಅವರ ಮೇಲೆ ತುಂಬ ಹಿಡಿತವನ್ನು ಸಾಧಿಸಿದೆ. ಅವರು ಹಗಲಿರುಳು ಅದೇ ಗುಂಗಿನಲ್ಲಿರುತ್ತಾರೆ.’’

ಈ ಸಲವೂ ನಮಗೆ ಅದೇ ಬಗೆಯ ಅನುಭವ ಬಂದಿತು. ಡಾ. ಬಾಬಾಸಾಹೇಬರ ಸುತ್ತು ವಿಚಾರಗಳ ವಲಯಗಳು ಸುತ್ತುತ್ತಿರುವಾಗಲೇ, ಹೆದರುತ್ತಾ ಹೆದರುತ್ತಲೇ ನಾವು, ‘ಸಾಹೇಬರೇ, ಏನಾದರೂ ಸಂದೇಶವನ್ನು ನೀಡುವಿರಾದರೆ ಒಳ್ಳೆಯದು!’ ಎಂದೆವು. ಈ ವರೆಗೆ ಅವರ ಹಲವಾರು ಜಯಂತಿಗಳಾಗಿ ಹೋದವು. ಆದರೆ ಅವರು ತಮ್ಮ ಹುಟ್ಟುಹಬ್ಬದ ದಿನ ಯಾರಿಗೇ ಆಗಲಿ, ಯಾವುದೇ ಬಗೆಯ ಸಂದೇಶವನ್ನು ನೀಡಿದುದನ್ನು ಕೇಳಿರಲಿಲ್ಲ, ಓದಿರಲಿಲ್ಲ. ಈ ಸಲ ಮಾತ್ರ ವಿಚಾರಮಗ್ನ ಅವ್ಯವಸ್ಥೆಯಲ್ಲಿಯೇ ಅವರು ಮೇಲಿನಂತೆ ಉದ್ಗರಿಸಿರು. ಬಾಬಾಸಾಹೇಬರು ದಲಿತ ವರ್ಗದ ಎದುರಿರುವ ಸಮಸ್ಯೆಗಳ ಕುರಿತು ಹಗಲಿರುಳು ಯೋಚಿಸುತ್ತಿರಬಹುದು, ಶೀಘ್ರದಲ್ಲಿಯೇ ಅವರು ಯಾವುದಾದರೂ ಕ್ರಾಂತಿಕರವಾದ ತೀರ್ಮಾನವನ್ನು ಘೋಷಿಸುವರೆಂದು ನಮಗೆ ಅನ್ನಿಸಿತು.

ಸದ್ಯದಲ್ಲಿ ನಡೆಯುತ್ತಿದೆಯಾದರೂ ಏನು?
ಅವರು ಮಾತನಾಡುತ್ತಾ ಆಡುತ್ತಾ ಹೀಗೆಂದರು; ‘‘ಸದ್ಯಕ್ಕೆ ಇದೇನು ನಡೆದಿದೆ? ಸರಕಾರವು ಮದ್ಯಪಾನ ನಿಷೇಧಕ್ಕಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ. ಆದರೆ ಜನರು ವಿಷಮತೆಯಿಂದ ಬೆಂದುಹೋಗುತ್ತಿರುವುದು ಮಾತ್ರ ಇಂದು ಸರಕಾರಕ್ಕೆ ಕಾಣುತ್ತಿಲ್ಲ. ಕಾಗದದ ಹಾಳೆಯ ಮೇಲಿನ ಯೋಜನೆಗಳಿಗಾಗಿ ಲಕ್ಷಗಟ್ಟಲೆ ರೂಪಾಯಿಗಳು ಖರ್ಚಾಗುತ್ತಿವೆ. ಆದರೆ ಸರಕಾರವು ದಲಿತ ವರ್ಗಕ್ಕಾಗಿ ಗಟ್ಟಿಯಾದ ಒಂದೂ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ನೆಹರೂರಂಥ ಹೊಣೆಗಾರ ವ್ಯಕ್ತಿಯು, ‘ನಾನು ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ ಅಲೆದಾಡಿದೆ. ಆದರೆ ನನಗೆಲ್ಲೂ ಅಸ್ಪಶ್ಯತೆ ಎನ್ನುವುದು ಕಾಣಸಿಕ್ಕಲೇ ಇಲ್ಲ!’ ಎನ್ನುತ್ತಾರೆ.

ದೇಶದಲ್ಲಿ ಲಕ್ಷಗಟ್ಟಲೆ ಎಕರೆಯಷ್ಟು ಭೂಮಿಯು ಉಳದೆ ಪಾಳು ಬಿದ್ದಿರುವಾಗಲೂ ಬಡಬಗ್ಗರಿಗಾಗಲಿ ದಲಿತರಿಗಾಗಲಿ ಅದನ್ನು ಉಳಲು ಕೊಡಲಾಗುತ್ತಿಲ್ಲ. ಗೇಣುದ್ದದ ವತನದ ಭೂಮಿಗೆ ಬದಲಾಗಿ ಊರಿನ ಹೊಲೆಯರನ್ನೆಲ್ಲ ದುಡಿಸಿಕೊಳ್ಳಲಾಗುತ್ತದೆ. ಪವಿತ್ರವಾದ ಸಂವಿಧಾನ ಕಾಲ್ಕೆಳಗೆ ಮೆಟ್ಟಲಾಗುತ್ತಿರುವುದು ನಿಜಕ್ಕೂ ವಿಷಾದನೀಯ! ಇಂದಿನ ರಾಜ್ಯ ಸರಕಾರಗಳು, ಸಂವಿಧಾನವು ದಲಿತ ವರ್ಗಕ್ಕೆ ನೀಡಿದ ಅಧಿಕಾರಗಳನ್ನು ಸರಾಸಗಟಾಗಿ ತಳ್ಳಿಹಾಕುತ್ತಿವೆ. ಪ್ರಜಾಪ್ರಭುತ್ವದ ಇದೆಲ್ಲ ಫಾರ್ಸ್‌ನ್ನು ಕಂಡು, ಈಗಿನ ಪ್ರಜಾಪ್ರಭುತ್ವದ ಸರಕಾರವನ್ನು ಎಷ್ಟರಮಟ್ಟಿಗೆ ನಂಬಬೇಕೋ ಎಂದು ಹೊಟ್ಟೆಯಲ್ಲಿ ಕಿಚ್ಚು ಉರಿಯುತ್ತಿದೆ.’’

ಡಾಕ್ಟರ್ ಸಾಹೇಬರ ಈ ವಿಚಾರಗಳನ್ನು ಗಮನಿಸಿದರೆ ಇಲ್ಲವೆ ಆಲಿಸಿದರೆ ಈ ದೇಶದ ದಲಿತ ವರ್ಗದೆದುರು ಇರುವ ಸಮಸ್ಯೆ ಅರ್ಥವಾಗುತ್ತದೆ. ಸರಕಾರವು ದಿನದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆಗೆ ಕಡಿವಾಣ ಹಾಕಲಾರದು. ನಿರುದ್ಯೋಗದ ಆ ಕಂದರಕ್ಕೆ ಹೆಚ್ಚುಹೆಚ್ಚಾಗಿ ತಳ್ಳಲಾಗುತ್ತಿರುವ ವರ್ಗವೆಂದರೆ ಅಸ್ಪಶ್ಯ ವರ್ಗ. ಹಳ್ಳಿಹಳ್ಳಿಗಳಲ್ಲಿ ಪರಿಸ್ಥಿತಿಯ ಹೊಂಡದಲ್ಲಿ ಸಿಕ್ಕಿಕೊಂಡಿರುವ ವರ್ಗವೆಂದರೆ ದಲಿತ ವರ್ಗವೇ ಸರಿ! ಕಾನೂನಿನಂತೆ ಸರಕಾರಿ ನೌಕರಿಗಳಲ್ಲಿ ಶೇಕಡಾವಾರು ಸ್ಥಳಗಳನ್ನೇನೋ ಮೀಸಲಾಗಿರಿಸಲಾಗಿದೆ, ಆದರೆ ಅದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆಯೋ ಅಲ್ಲವೋ ಎಂಬುದನ್ನು ನಿಯಂತ್ರಿಸಲು ಸರಕಾರವು ಸಿದ್ಧವಿಲ್ಲ. ಪಾಳು ಬಿದ್ದ ನೆಲವನ್ನು ದಲಿತ ವರ್ಗಕ್ಕೆ ಉಳುಮೆಗಾಗಿ ಕೊಡಬೇಕೆಂದರೆ ಅವು ಅವರಿಗೆ ದೊರೆಯದಂತೆ ನೋಡಿಕೊಳ್ಳಲಾಗುತ್ತಿದೆ. ಇಂಥ ಹಲವಾರು ದೂರುಗಳು ನಮ್ಮಲ್ಲಿಗೆ ಬರುತ್ತವೆ. ಇದಲ್ಲದೆ ಬ್ರಿಟಿಷರ ಸಂಪ್ರದಾಯವನ್ನು ಮುಂದುವರಿಸಲೋ ಎಂಬಂತೆ ಒಡೆ ಮತ್ತು ಹೊಡೆ ನೀತಿಯನ್ನು ಅನುಸರಿಸಿ ಸರಕಾರವು ದಲಿತ ವರ್ಗದ ಸಂಘಟನೆಯನ್ನು ಗೊಂದಲಕ್ಕೆ ಈಡುಮಾಡಲು ಬಯಸುತ್ತಿದೆ. ಸ್ವಾತಂತ್ರ ಬಂದ ತರುವಾಯ ಎಲ್ಲವೂ ಒಳ್ಳೆಯದಾಗಲಿದೆ ಎಂದು ಅನ್ನುವ ಹಾಗೂ ಇಂದು ಸರಕಾರದ ಹೊಣೆ ಹೊತ್ತಿರುವ ಜನ ಇವರೇನೇ, ಎಂಬ ಸಂದೇಹ ತಲೆದೋರುತ್ತಿದೆ.

ಇದಕ್ಕೆ ಉಪಾಯವೆಂದು ಸುಸಂಘಟಿತರಾಗಿ!

ರಾಜ್ಯಕರ್ತರ ಹೂಟವನ್ನು ಹಾಳುಗೆಡಹುವುದಿದ್ದರೆ ದಲಿತ ವರ್ಗವು ತನ್ನೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಸುಸಂಘಟಿತವಾಗಬೇಕು. ನಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಿ ನಾವು ನಮ್ಮ ಸಾಮರ್ಥ್ಯದ ಪ್ರಭಾವವನ್ನು ತೋರಿಸಬೇಕು. ಬಾಬಾಸಾಹೇಬರು ಯಾವತ್ತೂ ಹೀಗೆನ್ನುತ್ತಾರೆ: ‘‘ಸಾವಿರಾರು ಜನ ಕೆಲಸಕ್ಕೆ ಬಾರದ ಸೈನಿಕರಿಗಿಂತ ಹತ್ತು ಜನ ಶಿಸ್ತಿನ, ಪ್ರಾಮಾಣಿಕ ಸೈನಿಕರಿದ್ದರೂ ನನಗೆ ಸಾಕು. 85 ವರ್ಷ ವಯಸ್ಸಿನ ಶೇಲಾರ ಮಾಮಾ ಕೋಂಡಾಣಾ ಕೋಟೆಯ ಮೇಲೆ ದಾಳಿ ಇಕ್ಕಿದಾಗ ಕೇವಲ ಇಪ್ಪತ್ತೈದು ಜನ ಯುವಕ ಸೈನಿಕರು ತಮ್ಮ ಜೀವದ ಹಂಗು ತೊರೆದು ಮುನ್ನುಗ್ಗಿದ್ದರು. ಬೆರಳೆಣಿಕೆಯ ಆಂಗ್ಲರು ನೂರೈವತ್ತು ವರ್ಷಗಳ ಕಾಲ ಇಷ್ಟೊಂದು ದೊಡ್ಡ ದೇಶವನ್ನು ಆಳಿದುದು ಯಾವ ಸಾಮರ್ಥ್ಯವನ್ನಾಧರಿಸಿ! ಅದೆಂದರೆ ಸಂಘಟನೆ ಹಾಗೂ ಶಿಸ್ತು. ಹೀಗಾಗಿ ನಮಗೆ ಬರೀ ಸಂಘಟನೆ ಬೇಡ, ಸುಸಂಘಟನೆ ಬೇಕು. ಈರ್ಷ್ಯೆ ಹಾಗೂ ಸ್ವಾಭಿಮಾನದ ಬೆಂಕಿಯು ಅದರಲ್ಲಿ ಸತತವಾಗಿ ಧಗಧಗನೆ ಉರಿಯುತ್ತಿರಬೇಕು.’’

ಈ ಬೆಂಕಿಯನ್ನು ಧಗಧಗಿಸುವಂತೆ ಇರಿಸಬೇಕಿದ್ದರೆ ನಮ್ಮ ಸಂಘಟನೆಯಾದ ಫೆಡರೇಶನ್‌ನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕು. ಫೆಡರೇಶನ್‌ನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕಿದ್ದರೆ ಎಲ್ಲ ವಯಸ್ಸಿನ ಸ್ತ್ರೀ-ಪುರುಷರು ವರ್ಷಕ್ಕೆ ನಾಲ್ಕಾಣೆಯನ್ನು ಭರಿಸಿ ಅದರ ಸದಸ್ಯರಾಗಬೇಕು. ಹೀಗೆ ನೂರಾರು, ಅಲ್ಲ ಸಾವಿರಾರು, ಅಲ್ಲ ಲಕ್ಷಗಟ್ಟಲೆಯ ಜನರು ಸದಸ್ಯರಾಗಿ ಅದರ ನೀಲಿ ಬಣ್ಣದ ಪತಾಕೆಯನ್ನು ಹಾರಿಸಬೇಕು. ಆ ನೀಲಿ ಪತಾಕೆಯಡಿಯೇ ಹಲವು ಆವೇಶಪೂರ್ಣವಾದ ಹೋರಾಟಗಳನ್ನು ಕೈಗೊಂಡಿದ್ದೇವೆ. ಅದೇ ನಮ್ಮಲ್ಲಿ ಸೋದರಭಾವ ಹಾಗೂ ಅತ್ಮೀಯತೆಗಳನ್ನು ಹುಟ್ಟುಹಾಕಿ ಮಾನವೀಯತೆಯನ್ನು ಜಾಗೃತವಾಗಿ ಇರಿಸಿತು. ಕೇವಲ ಮುಂಬೈಯಲ್ಲಿಯೇ ದಲಿತ ವರ್ಗದ ಜನಸಂಖ್ಯೆಯು ಮೂರರಿಂದ ನಾಲ್ಕು ಲಕ್ಷದಷ್ಟು ಇದ್ದೀತು. ಒಂದು ಲಕ್ಷದಷ್ಟು ಮಕ್ಕಳು, ಕೂಸುಗಳನ್ನು ಬಿಟ್ಟರೂ ಕೂಡ ಮೂರು ಲಕ್ಷ ಜನರು ಫೆಡರೇಶನ್‌ನ ನೀಲಿಯ ಪತಾಕೆಯಡಿ ಒಟ್ಟಿಗೆ ಬಂದರೆ ನಾವು ಪ್ರಪಂಚದ ಮಾನಬಿಂದುವನ್ನು ತಲುಪಿದವೆಂದೇ ತಿಳಿಯಿರಿ.

ಪರಿಣಾಮ ಏನಾದೀತು
 ಇಂದು ಈ ದೇಶದಲ್ಲಿ ಹಲವಾರು ರಾಜಕೀಯ ಪಕ್ಷಗಳಿವೆ. ಅವೆಲ್ಲವುಗಳ ಬಂಡವಾಳವು ಮುಂಬೈಯಂತಹ ನಗರಗಳಲ್ಲಿಯೇ ಇದೆ. ಬರಿ ಮುಂಬೈ ಒಂದರಲ್ಲೇ ಕಾಂಗ್ರೆಸ್, ಸಮಾಜವಾದಿ, ಕಮ್ಯುನಿಸ್ಟ್, ಹಿಂದೂ ಮಹಾಸಭಾ, ಮೊದಲಾದ ಪಕ್ಷಗಳು ತಳವೂರಿ ಕುಳಿತಿವೆ. ಪ್ರತಿಯೊಬ್ಬರ ಕಚೇರಿಗೆ ಹೋಗಿ ಆ ಪಕ್ಷದ ಸದಸ್ಯರನ್ನು ನೋಂದಣಿಯ ರಿಜಿಸ್ಟರನ್ನು ನೋಡಿದರೆ ಯಾರ ಸದಸ್ಯ ಸಂಖ್ಯೆಯೂ ಕೂಡ ಒಂದು ಲಕ್ಷವನ್ನು ತಲುಪಲು ಸಾಧ್ಯವಿಲ್ಲ. ಇದಕ್ಕೆ ಕಾರಣವೆಂದರೆ ಈ ಪಕ್ಷಗಳ ರಾಜಕೀಯ ಅಧಿಷ್ಠಾನ ಈ ದೇಶದ ಬಂಡವಾಳದಾರರು, ಜಮೀನುದಾರರು, ಜಹಗೀರುದಾರರು, ಕಾರ್ಖಾನೆದಾರರು ಹಾಗೂ ಧರ್ಮಾಮಾರ್ತಂಡರಂಥ ಪ್ರತಿಗಾಮಿ ವಿಚಾರ ಸರಣಿಯ ಜನರನ್ನು ಅವಲಂಬಿಸಿದೆ.

ಫೆಡರೇಶನ್ ಹಾಗೆ ಅವರಾರೊಂದಿಗೂ ಸಂಬಂಧವನ್ನು ಹೊಂದಿದುದಲ್ಲ. ಈ ವಿಚಾರ ಸರಣಿಗೆ ಫೆಡರೇಶನ್‌ನಲ್ಲಿ ಸ್ಥಾನವೇ ಇಲ್ಲ. ಸ್ವಲ್ಪದರಲ್ಲಿ, ಈ ದೇಶದಲ್ಲಿ ಫೆಡರೇಶನ್‌ನಂತಹ ಶಾಲೀನ ಸ್ವರೂಪದ ಪಕ್ಷವೇ ಅಸ್ತಿತ್ವದಲ್ಲಿಲ್ಲ ಎಂಬುದು ನಮ್ಮ ಖಚಿತವಾದ ಅಭಿಪ್ರಾಯ. ಇಂಥ ಈ ಶಾಲೀನ ಮತ್ತು ಸ್ವಂತದ ಸಾಮರ್ಥ್ಯದಿಂದ ಮುಂದಕ್ಕೆ ಹೆಜ್ಜೆಯಿಕ್ಕುವ ಪಕ್ಷದ ಭವಿಷ್ಯವು ಸೂರ್ಯಪ್ರಕಾಶದಷ್ಟು ಸ್ಪಷ್ಟ. ಹೀಗಾಗಿ ಮುಂಬೈಯ ಫೆಡರೇಶನ್ ಒಂದು ಲಕ್ಷ ಸದಸ್ಯರನ್ನು ನೋಂದಾಯಿಸುವ ಅಭಿಯಾನವನ್ನು ಶುರು ಮಾಡಿದೆ. ಈ ಅಭಿಯಾನವು ಯಶಸ್ವಿಯಾದರೆ ಫೆಡರೇಶನ್‌ನ ಕೆಲಸವನ್ನು ಎತ್ತಿಕೊಳ್ಳಲು ನಮಗೆ ಹಗುರಾಗುವುದಲ್ಲದೆ ನಮ್ಮ ಪಕ್ಷದ ಸಾಮರ್ಥ್ಯವು ಗಣನೀಯವಾಗಿ ಚೇತರಿಸಿಕೊಳ್ಳಲಿದೆ. ಸರಕಾರವು ಇಷ್ಟರಲ್ಲಿಯೇ ದಲಿತ ವರ್ಗಗಳ ಪರಿಸ್ಥಿತಿಯ ಸರ್ವೇಕ್ಷಣೆಯನ್ನು ಮಾಡಲೆಂದು ಕೆಲವು ಹೊಗಳುಭಟರ ಒಂದು ಕಮಿಶನ್‌ನನ್ನು ನೇಮಿಸಿದೆ.

ಫೆಡರೇಶನ್ ಇದೇ ಬಗೆಯ, ಆದರೆ ವಿಶಿಷ್ಟವಾಗಿ ಅಸ್ಪಶ್ಯರ ಜೀವನದೊಂದಿಗೆ ಹ್ತತಿರದ ನಂಟುಳ್ಳ, ತಮ್ಮ ರಕ್ತ ಮಾಂಸಗಳ ಸಂಬಂಧವುಳ್ಳವರೇ ಆದ, ಅವರ ಹೊಟ್ಟೆಯಿಂದಲೇ ಹುಟ್ಟಿ ಬಂದು ಹಗಲಿರುಳು ಹೋರಾಡುತ್ತಿರುವ, ಇಂಥ ನಿಜವಾದ ಅಸ್ಪಶ್ಯರ ಒಂದು ಕಮಿಶನ್‌ನ್ನು ನೇಮಿಸಲಿದೆ. ಈ ಕಮಿಶನ್ ಅಸ್ಪಶ್ಯರ ಜೀವನವನ್ನು ಕೂಲಂಕಷವಾಗಿ ಜಾಲಾಡಿಸಿ ಅವರ ಸಂಪೂರ್ಣವಾದ ವಿವರಗಳ ವರದಿಯನ್ನು ತಯಾರಿಸುವುದು. ಫೆಡರೇಶನ್ ಈ ವರದಿಯನ್ನು ಪುಸ್ತಕ ರೂಪದಲ್ಲಿ ಮುದ್ರಿಸಿಕೊಳ್ಳುವುದು. ಅದರ ಒಂದೊಂದು ಪ್ರತಿಯನ್ನು ಭಾರತ ಸರಕಾರ ಹಾಗೂ ಬೇರೆ ರಾಷ್ಟ್ರಗಳಿಗೂ ಕಳುಹಿಸಲಾಗುವುದು. ಇಷ್ಟೆಲ್ಲವನ್ನು ಮಾಡಿಯೂ ಭಾರತ ಸರಕಾರದ ದೃಷ್ಟಿಕೋನದಲ್ಲಿ ಯಾವುದೇ ಬಗೆಯ ಬದಲಾವಣೆ ಆಗದಿದ್ದರೆ, ಬ್ಯಾ. ಕಾಂಬಳೆ ಅವರಂತಹ ಸಮರ್ಥ ಬ್ಯಾರಿಸ್ಟರರನ್ನು ನೇಮಿಸಿ, ವಿಶ್ವ ನ್ಯಾಯಾಲಯ(ಯುನೊ)ದಲ್ಲಿ ವ್ಯಾಜ್ಯವನ್ನು ಆರಂಭಿಸಿ ರಾಜ್ಯಕರ್ತರು ಹಾಗೂ ಹಿಂದ್ ಎನ್ನಿಸಿಕೊಳ್ಳುವವರ ಚಿಂದಿಬಟ್ಟೆಗಳನ್ನು ಪ್ರಪಂಚದ ಅಗಸೆಯ ಬಾಗಿಲಿಗೆ ನೇತು ಬಿಡೋಣ. ಇದು ನಮ್ಮ ಪಕ್ಷದ ಕಾನೂನುಬದ್ಧವಾದ ಮಾರ್ಗವಾಗಿದೆ.

ರಾಜ್ಯಕರ್ತರು ಈ ಸಂಗತಿಯನ್ನು ಗಮನಕ್ಕೆ ತಂದುಕೊಂಡರೆ ಇದು ಆರು ತಿಂಗಳ ಕೆಳಗೆ ಬಾಬಾಸಾಹೇಬರು ನೀಡಿದ ಇಶಾರೆ ಎನ್ನಿಸಲಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)