varthabharthi


ತಾರಸಿ ನೋಟ

ಉತ್ತಮ ಆರ್ಥಿಕ ಸುಧಾರಣೆ ಲೊಳಲೊಟ್ಟೆ?!

ವಾರ್ತಾ ಭಾರತಿ : 27 May, 2017
ವೆಂಕಟಲಕ್ಷ್ಮೀ ವಿ.ಎನ್.

ಇದು ಅಲ್ಲಿಗೆ ಬಂದು ನಿಂತಿದೆ. ಸರಕಾರಿ ಯಂತ್ರ ಹಗಲೂ ರಾತ್ರಿ ದುಡಿದು ಜಾರಿಗೊಳಿಸಲು ತಯಾರಾಗಿರುವ ಏಕ ರೂಪದ ಸರಕು ಮತ್ತು ಸೇವಾ ತೆರಿಗೆಯಿಂದ ಒಳ್ಳೆಯದಾಗುತ್ತದೋ ಅಥವ ಕೆಟ್ಟದಾ ಗುತ್ತದೋ? ಪರಿಣತರ ಭವಿಷ್ಯವಾಣಿ ಎರಡನ್ನೂ ಧ್ವನಿಸುತ್ತಿದೆ. ಅಂತಿಮ ರೂಪುರೇಷೆಗೆ ಇನ್ನೊಂದೇ ಒಂದು ಹೆಜ್ಜೆ ಕಾಯ್ದಿರಿಸಿಕೊಂಡಿರುವ ಜಿಎಸ್‌ಟಿ ಮಂಡಳಿ ಸಭೆ, ಅದರ ಅನುಷ್ಠಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಕೊನೆ ಕ್ಷಣದ ತನಕ ತನ್ನ ಹೊಸ ತೆರಿಗೆ ದರಗಳನ್ನು ಗುಪ್ತವಾಗಿರಿಸಿಕೊಂಡಿದ್ದು ಕಳೆದ ವಾರವಷ್ಟೇ ಪ್ರಕಟಪಡಿಸಿತು.

ಸಕ್ಕರೆಯಿಂದ ಸ್ಟೀಲ್ ಪೈಪ್‌ವರೆಗೆ ಸುಮಾರು 1,200 ಸರಕುಗಳನ್ನು ಒಳಗೊಂಡ ದರಪಟ್ಟಿ. ಬಹುತೇಕ ಸರಕು ಹಾಗೂ ಸೇವೆಗಳಿಗೆ ಐದು, 12, 18, 28 ಶೇಕಡಾವಾರುಗಳ ವಿಭಾಗಗಳಲ್ಲಿ ದರ ನಿಗದಿಪಡಿಸಲಾಗಿದ್ದರೆ, ಶೂನ್ಯ ತೆರಿಗೆ ವಿಧಿಸಿದವುಗಳ ಪಟ್ಟಿಯೂ ಒಂದಿದೆ. ಅದರಿಂದ ಉಂಟಾಗುವ ಕೊರತೆಯನ್ನು ಭರಿಸಲೆಂಬಂತೆ, ಆಯ್ದ ಕೆಲ ಹೆಚ್ಚಿನ ತೆರಿಗೆಯ ಸರಕುಗಳಿಗೆ ಶೇ.3ರಿಂದ ಶೇ.290ರ ತನಕ ಸರ್‌ಚಾರ್ಜ್! ‘ಹೋ! ಕೆಲಸ ಕೆಟ್ಟಿತು’ ಎಂಬ ಉದ್ಗಾರ ಇದೀಗ ತಜ್ಞರಿಂದ. ‘ಒಂದು ದೇಶ, ಒಂದು ತೆರಿಗೆ’ ಘೋಷವಾಕ್ಯದಡಿ, ದೇಶವ್ಯಾಪಿ ಸರಳ, ಏಕ, ಕನಿಷ್ಠ, ತೆರಿಗೆ ದರ ವಿಧಿಸಿ ತೆರಿಗೆ ಸಂಗ್ರಹ ಹೆಚ್ಚಿಸಿಕೊಳ್ಳಬೇಕು ಎಂದಿದ್ದ ಉದ್ದೇಶ ಕಾವು ಕಳೆದುಕೊಂಡಿತೆ? ಹಾಗಾಗಿದ್ದರೆ ಅದಕ್ಕೆ ಕಾರಣಗಳೇನು? ಒಂದೇ ಸೇವೆಗೆ ಶೂನ್ಯದಿಂದ ಶೇ.28ರ ವರೆಗೆ ತೆರಿಗೆ ನಿಗದಿಪಡಿಸಿದರೆ, ಅತ್ಯಂತ ಲಾಭದಾಯಕವಾದುದಕ್ಕೆ ಎಲ್ಲರೂ ಮುಗಿಬೀಳುವ ಹಾಗೂ ಅದಕ್ಕಾಗಿ ಅಕ್ರಮಗಳನ್ನು ಅನುಸರಿಸುವ ಸಾಧ್ಯತೆ ಕಣ್ಣಿಗೆ ಹೊಡೆಯುವುದಿಲ್ಲವೆ?

ಉದಾಹರಣೆಗೆ ಹೊಟೇಲ್ ವಾಸ್ತವ್ಯ. ಶೂನ್ಯ ದರದ ಕನಿಷ್ಠ ಸೌಲಭ್ಯಗಳನ್ನೇ ಹೊಂದಿದ್ದರೂ ಅದಕ್ಕೆ ಇಂತಿಷ್ಟು ತೆರಿಗೆ ವಸೂಲು ಮಾಡಲು ಹೋಟೆಲ್ ಮುಂದಾಗಬಹುದು. ಅದನ್ನು ಸಕ್ರಮಗೊಳಿಸಲು ತಮ್ಮ ಸೇವೆ ಈ ದರ್ಜೆಯಲ್ಲಿದೆ ಎಂದು ಸುಳ್ಳು ಪ್ರಮಾಣಪತ್ರ ಪಡೆಯುವುದು, ಅದಕ್ಕಾಗಿ ಲಂಚ ನೀಡುವುದು ನಡೆಯಬಹುದು ಅಥವಾ ತಮಗೆ ಹಣ ನೀಡಲು ತಯಾರಿಲ್ಲದ ಮಾಲಕರನ್ನು ತೆರಿಗೆ ಅಧಿಕಾರಿಗಳು ಪೀಡಿಸುವುದು, ಹಿಂದೆಂದೋ, ಯಾರಿಗೋ ನೀಡಿದ ಕೋಣೆಗೆ ಸರಿಯಾದ ತೆರಿಗೆ ವಿಧಿಸಿರಲಿಲ್ಲ ಎಂದವರು ದೌರ್ಜನ್ಯಕ್ಕಿಳಿಯುವುದು ಎಲ್ಲದಕ್ಕೆ ಹಾದಿ ಮಾಡಿಕೊಟ್ಟಂತಲ್ಲವೆ? ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ‘‘ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ, ಜಿಡಿಪಿ ವರ್ಧನೆ ಎಲ್ಲಿ ಎಲ್ಲಿ ಎಲ್ಲಿ?’’ ಎಂದು ವಿರೋಧ ಪಕ್ಷಗಳು ಹಾಗೂ ಪರಿಣತರು ತರಾಟೆ ಆರಂಭಿಸಿರುವಾಗ ಮೂರು ವರ್ಷ ಪೂರೈಸಿರುವ ಆಡಳಿತಾರೂಢ ಪಕ್ಷಕ್ಕೆೆ ಬೆವರೊಡೆಯುತ್ತಿದೆಯೆ?

ಹೊಸ ರೂಪದ ಜಿಎಸ್‌ಟಿ ಅನುಷ್ಠಾನ ಎಂದರೆ ಜೀವನಾವಶ್ಯಕ ವಸ್ತುಗಳ ಬೆಲೆ ಏರುವುದು ಕಟ್ಟಿಟ್ಟ ಬುತ್ತಿ. ಹೀಗಾದರೆ ಮುಂಬರುವ ಚುನಾವಣೆಯಲ್ಲಿ ಜನ ಮುಲಾಜಿಲ್ಲದೆ ಗದ್ದುಗೆಯಿಂದ ಕೆಳಗಿಳಿಸುತ್ತಾರೆ. ವಿಶ್ವಾದ್ಯಂತ ಇದನ್ನು ಬೆಂಬಲಿಸುವ ದೃಷ್ಟಾಂತಗಳಿವೆ. ಇಂತಹ ಪರಿಸ್ಥಿತಿಯಲ್ಲಿ ‘ಹಾವೂ ಸಾಯಬಾರದು; ಕೋಲೂ ಮುರಿಯಬಾರದು’ ಎಂಬ ಕಸರತ್ತಿಗೆ ಸರಕಾರ ಇಳಿಯಿತೇ? ಆಹಾರ ಧಾನ್ಯಗಳು, ಹಾಲು ಇತ್ಯಾದಿ ಸರಕನ್ನು ಶೂನ್ಯ ತೆರಿಗೆ ಪಟ್ಟಿಗೆ ಸೇರಿಸುವ ಸಂರಕ್ಷಣಾ ತಂತ್ರಕ್ಕೆ ಮುಂದಾಯಿತೆೆ? ಈ ಚಾತುರ್ಯಕ್ಕೆ ತೆರಬೇಕಾಗಿ ಬಂದ ಬೆಲೆ ಏನು? ಆರ್ಥಿಕಾಭಿವೃದ್ಧಿಗೆ ನಿಶ್ಚಿತವಾಗಿಯೂ ಉನ್ನತ ಸುಧಾರಣಾ ಕ್ರಮ ಎಂದು ಎಲ್ಲರೂ ಕೊಂಡಾಡುವ ಜಿಎಸ್‌ಟಿಯ ಸಮರ್ಪಕ, ಪರಿಣಾಮಕಾರಿ ಅನುಷ್ಠಾನ ಎಂದು ಆರ್ಥಿಕ ತಜ್ಞರು ಪೇಚಾಡುತ್ತಿದ್ದಾರೆ.

‘ಲೋಕಕ್ಕೆಲ್ಲ ಒಂದು ನಿಯಮವಾದರೆ ನಮಗೇ ಒಂದು ನಿಯಮ’ ಎಂಬ ಧಾಡಸೀತನದಲ್ಲಿ ತೆರಿಗೆ ಕದಿಯುವುದು ವ್ಯಾಪಾರ-ವಾಣಿಜ್ಯ ವಹಿವಾಟುಗಳ ಪರಿಪಾಠ. ನಿಯತ್ತಿನ ವ್ಯವಹಾರ ನಡೆಸಲು ಇಷ್ಟಪಟ್ಟರೂ ನಡೆಸಲಾಗದು ಎಂಬ ಅಲಿಖಿತ ನಿಯಮ ಇಲ್ಲೆಲ್ಲ. ತೆರಿಗೆ ತಪ್ಪಿಸುವವರು ವರ್ಷದಿಂದ ವರ್ಷಕ್ಕೆ ಜಮಾಯಿಸುವ ಲಾಭ ಚಕ್ರಬಡ್ಡಿಯಂತೆ ಏರುತ್ತಾ ಹೋಗಿ, ಪ್ರಾಮಾಣಿಕವಾಗಿ ತೆರಿಗೆ ನೀಡಿ ವ್ಯವಹಾರ ನಡೆಸುತ್ತೇವೆ ಎನ್ನುವವರನ್ನು ಮುಳುಗಿಸಿಬಿಡುತ್ತದೆ. ಇದರೊಂದಿಗೆ ರಾಜಿಯಾಗದೆ ಗತ್ಯಂತರವಿಲ್ಲ ಎಂಬ ಬದುಕಿ ಉಳಿಯುವ ತಂತ್ರ ಕಲಿಸುತ್ತದೆ. ಹೀಗೆ ಸೋರಿಹೋಗುವ ಸಂಪತ್ತನ್ನು ಕಟ್ಟಿಹಾಕಲು ಮುಖ್ಯವಾಗಿ ರೂಪಿಸಲಾಗಿರುವ ಸರಕು ಮತ್ತು ಸೇವಾತೆರಿಗೆೆ ನಿಯಮಿತವಾಗಿ ಅದನ್ನು ಪಾವತಿಸಿ, ದೇಶವ್ಯಾಪಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂಬ ಆಮಿಷವನ್ನೂ ವ್ಯಾಪಾರಿಗಳಿಗೆ ಒಡ್ಡಿದೆ.

ಎಷ್ಟು ವಿಶಾಲವಾದ ಮಾರುಕಟ್ಟೆ ಇದು, ಅಮೆರಿಕ, ಯುರೋಪ್, ಬ್ರೆಝಿಲ್, ಮೆಕ್ಸಿಕೊ ಹಾಗೂ ಜಪಾನ್ ದೇಶಗಳ ಜನಸಂಖ್ಯೆ ಒಟ್ಟುಗೂಡಿಸಿದರೆ ಸಿಗುವ ಏಷ್ಯಾದ ಮೂರನೆಯ ಅತಿ ದೊಡ್ಡ ಮಾರುಕಟ್ಟೆ ಎಂದು ದೂರನೋಟದಿಂದ ಗಮನಿಸುವ ವಿದೇಶಿ ಆರ್ಥಿಕ ತಜ್ಞರು ಉದ್ಗರಿಸುತ್ತಿದ್ದಾರೆ. ಯಾವುದೋ ರಾಜ್ಯದಲ್ಲಿ ಸರಕು ಕೊಂಡು ಇನ್ಯಾವುದೋ ರಾಜ್ಯದಲ್ಲಿ ಮಾರಿದರೂ ಏಕ ರೂಪದ ತೆರಿಗೆಯನ್ನು ಒಂದೇ ಹಂತದಲ್ಲಿ ಪಾವತಿಸಲು ಈಗ ಅವಕಾಶ. ವಹಿವಾಟು ನಡೆಯುವುದೆಲ್ಲ ಒಂದು ಜಾಲದಲ್ಲಿ ಸಂಪರ್ಕಿತಗೊಂಡ ಡಿಜಿಟಲ್ ಮಾಧ್ಯಮದಲ್ಲಿ. ಸರಕಾರ, ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು...ಎಲ್ಲದರ ಜಾತಕ ಅಲ್ಲಿ ಖುಲಂಖುಲ್ಲ. ಇಷ್ಟೆಲ್ಲ ಇದ್ದೂ, ತೆರಿಗೆ ಸಂಗ್ರಹಿಸುವ ಸರಕಾರಿ ಸಂಸ್ಥೆಗಳಲ್ಲಿ ಬೀಡುಬಿಟ್ಟಿರುವ ಭ್ರಷ್ಟಾಚಾರದಿಂದ ಎಲ್ಲ ಲೊಳಲೊಟ್ಟೆಯಾಗಲು ಆಸ್ಪದ ಇದೆ ಎಂಬುದು ಅವುಗಳ ಒಡನಾಟ ಇರುವ, ಒಳನೋಟ ಸಿಗುವ ಜನರು ವ್ಯಕ್ತಪಡಿಸುತ್ತಿರುವ ಆತಂಕ.

‘ಆದರೆ, ಹೋದರೆ, ಹತ್ತಿ ಬೆಳೆದರೆ ಅಜ್ಜಿಗೊಂದು ಪಟ್ಟೆ ಸೀರೆ’ ಗಾದೆಯ ಗೂಢಾರ್ಥ ಬಿಂಬಿಸುತ್ತಿದೆಯೆ ಈ ‘ಬೃಹತ್ ಹಾಗೂ ಸ್ವಾತಂತ್ರ್ಯೋತ್ತರ ಮಹತ್ ಸುಧಾರಣೆ?’ ಎಂದು ಅನುಮಾನಿಸುತ್ತಿರುವವರೂ ಇದ್ದಾರೆ. ಅವರು ಹೇಳುವಂತೆ, ಎಲ್ಲವೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿದೆ: ಕೊಸರಾಡುವ 29 ರಾಜ್ಯಗಳ ಮನವೊಲಿಸಿದ್ದು, ಒಮ್ಮತಕ್ಕೆ ತಯಾರು ಮಾಡಿದ್ದು, ಖಾಸಗಿ ಕ್ಷೇತ್ರದ ಸುಮಾರು ಎರಡು ಸಹಸ್ರ ಕೋಟಿ ಅಮೆರಿಕನ್ ಡಾಲರ್ ವರಮಾನದಲ್ಲಿ ನ್ಯಾಯಯುತ ಪಾಲನ್ನು ಪರೋಕ್ಷ ತೆರಿಗೆ ರೂಪ ದಲ್ಲಿ ಸಂಗ್ರಹಿಸಲು ಬಿಗಿ ಪಟ್ಟು ಹಾಕಿರುವುದು, ಜನಸಂಖ್ಯೆಯ ಕೇವಲ ಶೇ. ಒಂದು ಭಾಗ ತೆರಿಗೆ ನೀಡುವ, ಸುಧಾರಿಸಲು ಬಾರದ ಸ್ಥಿತಿಗೆ ಇಳಿದಿದ್ದ ತೆರಿಗೆ ಜಾಲ ವಿಸ್ತರಿಸಿದ್ದು...ಎಲ್ಲವೂ ಅಂದುಕೊಂಡಂತೆ ಆದರೆ ಭಾರತದಂತಹ ದೈತ್ಯ ರಾಷ್ಟ್ರ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ, ಯುವಜನರ ತರಬೇತಿ, ಉದ್ಯೋಗ ಸೃಷ್ಟಿಗೆ ವೆಚ್ಚವನ್ನು ಧಾರಾಳವಾಗಿ ಬೊಕ್ಕಸದಿಂದ ಭರಿಸುವುದು ಸಾಧ್ಯ.

ಆದರೆ ವಸ್ತುಸ್ಥಿತಿ ಅಷ್ಟು ಆಶಾದಾಯಕವಾಗಿಲ್ಲ. ಜಿಡಿಪಿಗೆ ದೊಡ್ಡ ಕಾಣಿಕೆ ಸಲ್ಲಿಸುವ ಉಕ್ಕಿನ ಉದ್ಯಮ ರೋಗಗ್ರಸ್ತವಾಗಿದೆ. ಶೇ.30ರಷ್ಟು ವರಮಾನ ತರುವ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಹತ್ತು ತಿಂಗಳ ಹಿಂದೆಯಷ್ಟೇ ಬಿದ್ದ ನೋಟು ಅಮಾನ್ಯೀಕರಣ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂಬ ತಗಾದೆಯೂ ಎದ್ದಿದೆ. ಕೇಂದ್ರದ ಬಿಜೆಪಿ ಸರಕಾರ, ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಲು ತವಕಿಸಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ದಿಡ್ಡಿ ಬಾಗಿಲು ತೆರೆಯಿತೇನೋ ಹೌದು. ಆದರೆ ಅದರ ಈ ನಡೆ ಅಪೇಕ್ಷಿತ ಮಟ್ಟದಲ್ಲಿ ಸಫಲವಾಗಲಿಲ್ಲ. ಏಕೆ ಹೀಗಾಯಿತು, ಎಲ್ಲಿ ತಪ್ಪಾಯಿತು ಎಂದು ತರ್ಕಿಸುತ್ತಿರುವಾಗಲೇ ನೋಟು ಅಮಾನ್ಯೀಕರಣ ವಿಲಕ್ಷಣ ಗೊಂದಲ ಸೃಷ್ಟಿಸಿ ಮಬ್ಬು ಕವಿಯಿತು. ಜಿಎಸ್‌ಟಿ ವಿರಾಟ್ ಸುಧಾರಣೆಯಿಂದ ಏನಾದರೂ ಪರಿಸ್ಥಿತಿ ಸುಧಾರಿಸಬಹುದೇ ಎಂದು ಭರವಸೆ ತಾಳಲೂ ಆಧಾರಗಳಿಲ್ಲ.

ಏಕೆಂದರೆ, ವ್ಯಾಪಾರ-ವಹಿವಾಟಿಗೆ ಸೂಕ್ತ ಪ್ರದೇಶ, ಪರವಾನಿಗೆ-ಹೂಡಿಕೆ-ವ್ಯವಹಾರಗಳು ಇಲ್ಲಿ ಸುಲಭ ಎಂದು ವಿದೇಶಿ ಕಂಪೆನಿಗಳು ಬಂದು ಭಾರತದಲ್ಲಿ ತಳವೂರಲು ಸಾಕಷ್ಟು ಸಮಯಾವಕಾಶ ಬೇಕು. ಸ್ಥಳೀಯ ವಾಣಿಜ್ಯ ಸಂಸ್ಥೆಗಳಿಗೇ ಜಿಎಸ್‌ಟಿಯ ಗೋಜಲುರಹಿತ, ವ್ಯವಸ್ಥಿತ ತ್ವರಿತ ಅನುಷ್ಠಾನ ಕುರಿತು ಶಂಕೆ ಇರುವಾಗ ದೂರದಲ್ಲಿರುವವರು ಅನುಮಾನಿಸುವುದು ಅತ್ಯಂತ ಸಹಜ. ಇಷ್ಟೆಲ್ಲ ಅಡೆತಡೆಗಳು ಇದ್ದೂ ದಿಟ್ಟ ಮೊದಲ ಹೆಜ್ಜೆ ಇಟ್ಟ ಭಾರತ, ಜಿಎಸ್‌ಟಿ ಅಳವಡಿಸಿಕೊಂಡಿರುವ ಸುಮಾರು 160 ದೇಶಗಳ ಗುಂಪನ್ನು ಉತ್ಸಾಹದಿಂದ ಸೇರಿಕೊಳ್ಳಲಿದೆ. ಗೊಂದಲ ಹಾಗೂ ವ್ಯಾಜ್ಯಗಳನ್ನು ಆಹ್ವಾನಿಸುವ ಬಹುರೂಪಿ ದರಗಳು ಅನೇಕ ತಜ್ಞರಿಗೆ ಸಮಸ್ಯೆಯಾಗಿಯೇ ಕಂಡಿದ್ದರೂ ತೃಪ್ತಿದಾಯಕ ಗಣಕೀಕರಣ ಅದನ್ನು ಪರಿಹರಿಸಬಲ್ಲುದು ಎಂಬ ಸಮಾಧಾನ ಇದೆ. ಸೇವೆಯ ಕ್ಷೇತ್ರದಿಂದ ಸಂದಾಯವಾಗುವ ಜಿಡಿಪಿ ವರಮಾನ ಶೇ.60 ರಷ್ಟಿರುವ ದೇಶದಲ್ಲಿ ಹಿಂದಿನದಕ್ಕಿಂತ ಅಧಿಕವಾಗಿ ನಿಗದಿಪಡಿಸಿರುವ ತೆರಿಗೆ ದರ, ಬೆಲೆ ಏರಿಕೆಗೆೆೆ ತನ್ನ ದೇಣಿಗೆ ಸಲ್ಲಿಸುವುದು ನಿಸ್ಸಂದೇಹ. ವಹಿವಾಟುಗಳು ತೆರಿಗೆ ಸಾಲ ಪಡೆಯಲು ಅವಕಾಶ ಇದ್ದರೂ ಅದರ ಮರುಪಾವತಿಗೆ ದೀರ್ಘವಾಗಿ ಕಾಯಬೇಕಾಗಬಹುದು.

ಅಷ್ಟರಲ್ಲಿ ಆಗುವ ಏರುಪೇರು ಸಹ ಗಂಭೀರ ಪರಿಣಾಮ ಉಂಟುಮಾಡಬಲ್ಲುದು. ಸೇವನೆಗೆ ಯೋಗ್ಯ ಮದ್ಯ, ಕಚ್ಚಾ ತೈಲ, ನೈಸರ್ಗಿಕ ಅನಿಲ, ಡೀಸೆಲ್, ಪೆಟ್ರೋಲ್, ವಿಮಾನಯಾನ ಇಂಧನ ವಿದ್ಯುತ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸದ್ಯ ಒಳಪಡಿಸಲು ಆಗದೇ ಇರುವುದು ಒಂದು ದೊಡ್ಡ ಲೋಪ ಎಂಬುದು ವಿಶ್ಲೇಷಕರ ಅಭಿಮತ. ಬಡಜನರಿಗೆ ಹೊರೆ ಮಾಡದಿರಲು, ಹಣದುಬ್ಬರ ಏರಿಸದಿರಲು ಕೈಗೊಂಡ ಉಪಾಯಗಳನ್ನೆಲ್ಲ ಈ ನಡೆ ನುಂಗಿಹಾಕಬಹುದು. ‘Hoping against hope ’ ಅಂದರೆ, ಭರವಸೆಗೆ ಎದುರಾಗಿ ಭರವಸೆ ತಾಳುವುದು ಎಂಬುದು ಅತ್ಯಂತ ನಿರಾಶಾದಾಯಕ ಸನ್ನಿವೇಶದಲ್ಲೂ ಆಶಾಭಾವನೆಯ ಮನಸ್ಥಿತಿ ತಾಳುವುದು ಎಂದು ಹೇಳುವ ಪದಪುಂಜ. ನಾವು ಲೊಳಲೊಟ್ಟೆ ಎಂದುಕೊಳ್ಳುತ್ತಾ ಒಳಿತಾಗಲಿ ಎಂದು ಒಳಗೊಳಗೇ ಹಂಬಲಿಸುವುದೂ ಸುಮಾರಾಗಿ ಹೀಗೆಯೇ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)