varthabharthi


ಕಮೆಂಟರಿ

ಪರ್ವತಗಳು ಮನುಷ್ಯನನ್ನು ವಿನೀತನನ್ನಾಗಿಸಿದ ಕತೆ

ಎವರೆಸ್ಟ್ ಗೆಲುವಿನ ನೆನಪು

ವಾರ್ತಾ ಭಾರತಿ : 28 May, 2017
ಪಾರ್ವತೀಶ ಬಿಳಿದಾಳೆ

ಜಗತ್ತಿನ ಮಹೋನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಿನ ನಾಳೆ. ಅರವತ್ತನಾಲ್ಕು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್‌ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದ ಈ ಮಂಜಿನ ಪರ್ವತವನ್ನು ವಶಪಡಿಸಿಕೊಂಡರು. ಮನುಷ್ಯನ ಇಚ್ಛಾಶಕ್ತಿಯೆದುರು ಅಂದು ಮಣಿದ ಎವರೆಸ್ಟ್‌ನ ಕತೆ ಕ್ರೀಡಾ ಜಗತ್ತಿನ ಒಂದು ಮಹೋನ್ನತ ಸಾಹಸದ ಕಥನವೂ ಹೌದು. 

ತೇನ್‌ಸಿಂಗ್ ನೋರ್ಗೆ ಮೂಲತಃ ಒಬ್ಬ ನೇಪಾಳಿ ಶೆರ್ಪಾ. ಶೆರ್ಪಾ ಎಂದರೆ ಪೂರ್ವ ದೇಶದ ಮನುಷ್ಯ ಎಂದು. ಅಂದರೆ ತೇನ್‌ಸಿಂಗ್‌ನ ಪೂರ್ವಿಕರು, ಮಂಗೋಲ್ ಬುಡಕಟ್ಟಿನವರು, ಜೀವನೋಪಾಯ ಹುಡುಕಿಕೊಂಡು ನೇಪಾಳಕ್ಕೆ ವಲಸೆ ಬಂದವರು. ಶೆರ್ಪಾ ಭಾಷೆಗೆ ಲಿಪಿ ಇಲ್ಲ. ಸರಳ ಶ್ರಮಜೀವಿಗಳಾದ ಇವರು ಹಿಮಾಲಯ ಪರ್ವತವೇರಲು ಬರುತ್ತಿದ್ದ ಪಶ್ಚಿಮ ದೇಶಗಳ ಸಾಹಸಿಗರ ತಂಡದಲ್ಲಿ ಸರಕು ಸಾಮಾನು ಸಾಗಿಸುವ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದವರು.

ಬಾಲ್ಯದಲ್ಲಿ ಚಮರಿ ಮೃಗಗಳನ್ನು ಮೇಯಿಸುತ್ತಾ, ಹಾಲು ಮಾರುತ್ತಾ, ಕೆಲಕಾಲ ಟೂರಿಸ್ಟ್ ಗೈಡ್ ಆಗಿರುತ್ತಾ, ಕಟ್ಟಡ ಕಾರ್ಮಿಕನಾಗಿಯೂ ಜೀವನ ಸಾಗಿಸಿದ ತೇನ್‌ಸಿಂಗ್ ಒಮ್ಮೆ ಹಿಮಾಲಯವೇರಲು ಬಂದಿದ್ದ ತಂಡವೊಂದನ್ನು ಸೇರುತ್ತಾನೆ. ಎರಡು ದಶಕಗಳ ಕಾಲ ಪರ್ವತಗಳನ್ನೇರುತ್ತಾ, ಇಳಿಯುತ್ತಾ ಪರಿಣಿತ ಪರ್ವತಾರೋಹಿಯಾಗಿ ಕೊನೆಗೆ ಕರ್ನಲ್ ಹಂಟ್ ನಾಯಕತ್ವದಲ್ಲಿ ಎವರೆಸ್ಟ್ ಆರೋಹಣಕ್ಕೆಂದು ಬಂದ ಬ್ರಿಟಿಷರ ತಂಡ ಸೇರಿ ಅಂತಿಮವಾಗಿ ಹಿಲರಿ ಜೊತೆ ಸೇರಿ ವಿಜಯಶಾಲಿಯಾಗುತ್ತಾನೆ.

ವಿಜಯವು ನಂತರ ಸೃಷ್ಟಿಸಿದ ಉನ್ಮಾದ, ಸಂಭ್ರಮ ಹಾಗೂ ವಿವಾದಗಳು ಊಹಾತೀತವಾಗಿದ್ದವು. ಆ ವಿಜಯವನ್ನು ಇಂಗ್ಲೆಂಡಿನ ರಾಣಿಯ ಕಿರೀಟಧಾರಣೆಯ ಮಹೋತ್ಸವಕ್ಕೆ ಅರ್ಪಿಸಲಾಯಿತು. ಆದರೆ ಆರೋಹಣಗೈದ ತಂಡ ಬ್ರಿಟಿಷರದ್ದೇ ಆದರೂ ಸಹ ಎವರೆಸ್ಟ್ ಮೇಲೆ ವಿಜಯದ ಬಾವುಟ ನೆಟ್ಟವರಲ್ಲಿ ಒಬ್ಬ ಹಿಲರಿ ನ್ಯೂಜಿಲ್ಯಾಂಡಿನವನಾಗಿದ್ದ. ಮತ್ತೊಬ್ಬ ತೇನ್‌ಸಿಂಗ್‌ನನ್ನು ಆವೊತ್ತಿನವರೆಗೂ ಆತ ಯಾವ ದೇಶದವನೆಂದು ಯಾರೂ ಗಮನಿಸಿರಲಿಲ್ಲ.

ನೇಪಾಳದ ಜನವಿರಳ ನಾಂ ಚೆ ಬಝಾರಿನ ಕಣಿವೆ ಪ್ರದೇಶದಲ್ಲಿ ತೇನ್‌ಸಿಂಗ್ ಹುಟ್ಟಿ ನಂತರ ಇಂಡಿಯಾದ ಡಾರ್ಜಿಲಿಂಗ್‌ನಲ್ಲಿ ನೆಲೆಸಿದ್ದ. ಹುಟ್ಟುಹಬ್ಬವನ್ನು ಆಚರಿಸದ, ವಾರದ ದಿನಗಳಾದ ದವಾ (ಸೋಮವಾರ), ಪಾಸಂಗ್ (ಶುಕ್ರವಾರ), ಪೆಂಬ (ಶನಿವಾರ) ಎಂಬ ಪದಗಳನ್ನೇ ತಮ್ಮ ಹೆಸರುಗಳನ್ನಾಗಿ ಇಟ್ಟುಕೊಳ್ಳುತ್ತಿದ್ದ ಜನಾಂಗವದು.

ಪ್ರಾಚೀನ ಪರಂಪರೆಯಂತೆ ಪುರುಷರೂ ಉದ್ದನೆಯ ಜಡೆ ಬಿಡುತ್ತಿದ್ದ ಜನಾಂಗವೊಂದರ ವ್ಯಕ್ತಿ ಎವರೆಸ್ಟ್ ಏರಿ ಬಂದನೆಂಬ ಸಾಹಸ ಕಥನವು ಅದೆಷ್ಟು ಉನ್ಮಾದ ಸೃಷ್ಟಿಸಿತ್ತೆಂದರೆ ಎವರೆಸ್ಟ್‌ನಿಂದ ಇಳಿದು ಬಂದ ತೇನ್‌ಸಿಂಗ್‌ನನ್ನು ಎಳೆದೊಯ್ದು ತಾನು ನೇಪಾಳಿ ರಾಷ್ಟ್ರೀಯನೆಂದು ಹೇಳಿಕೆ ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ ತೇನ್‌ಸಿಂಗ್‌ನನ್ನು ಅದಾಗಲೇ ಭಾರತ ಸರಕಾರ ವಶಪಡಿಸಿಕೊಂಡಿತ್ತು. ಆಗಿನ ಪ್ರಧಾನಿ ನೆಹರೂ ತೇನ್‌ಸಿಂಗ್‌ಗೆ ಅನೇಕ ಸವಲತ್ತುಗಳ ಆಮಿಷವೊಡ್ಡಿ ತಾನು ಭಾರತೀಯನೂ ಹೌದು ಎಂದು ಹೇಳಿಸಿದರು. ಆಗ ತಾನೆ ಉದಯಿಸಿದ ರಾಷ್ಟ್ರವೊಂದಕ್ಕೆ ಹಲವು ಸಾಧನೆಗಳ ರೆಕ್ಕೆಪುಕ್ಕಗಳೆಲ್ಲಾ ಬೇಕಾಗುತ್ತವಲ್ಲವೆ ?

ಈ ಪ್ರಹಸನಗಳೆಲ್ಲಾ ಮುಗಿದಾದ ನಂತರ ಸರ್ವೇ ಸಾಧಾರಣ ಜೀವನವಾಗಿ ಕಣ್ಮರೆಯಾಗಿ ಬಿಡಬಹುದಾಗಿದ್ದ ಶೆರ್ಪಾ ತೇನ್‌ಸಿಂಗ್‌ನ ಆತ್ಮಕತೆ ‘ಎವರೆಸ್ಟ್ ವೀರ’ ಪ್ರಕಟವಾಯಿತು. ಅದೇ ವೇಳೆಗೆ ಬ್ರಿಟಿಷರ ತಂಡದ ನಾಯಕ ಕರ್ನಲ್ ಹಂಟ್ ಹಾಗೂ ಎವರೆಸ್ಟ್ ಏರಿದ ಹಿಲರಿಯವರ ಸಾಹಸ ಕಥನಗಳು ಜಗತ್ತಿನ ಜನತೆಯೆದುರು ಅವತರಿಸಿದವು.

ಅಮೆರಿಕನ್ ಪತ್ರಕರ್ತ/ಬರಹಗಾರ ಅಲನ್ ರ್ಯಾಮ್ಲೆ ಆಲ್ಮನ್‌ಗೆ ತೇನ್‌ಸಿಂಗ್ ತನ್ನ ಬಾಲ್ಯ, ಶೆರ್ಪಾ ಜನಾಂಗದ ಸರಳ ಜೀವನ ಕ್ರಮಗಳು, ಎವರೆಸ್ಟ್ ಏರಬೇಕೆಂದಿದ್ದ ತನ್ನ ಕನಸುಗಳನ್ನು ಹಿಮಾಲಯದ ಚಾರಣ ಸಾಹಸಗಳಲ್ಲಿ ಸಂಭವಿಸಿದ ದುರಂತಗಳನ್ನೆಲ್ಲಾ ಹೃದಯಂಗಮವಾಗಿ ನಿರೂಪಿಸುತ್ತಾನೆ. ‘‘ಪರ್ವತಗಳು ಮನುಷ್ಯನನ್ನು ದೊಡ್ಡವನನ್ನಾಗಿ ಮಾಡುತ್ತವೆ’’ ಎಂಬ ಅವನ ಹೇಳಿಕೆ ಅವನೆಂತಹ ಸರಳ ಹಾಗೂ ದೊಡ್ಡ ವ್ಯಕ್ತಿ ಎಂಬುದಕ್ಕೆ ಸಾಕ್ಷಿಯಾಗಿವೆ.

ಪರ್ವತಾರೋಹಣವೆಂಬುದು ಒಂದು ಕ್ರೀಡೆಯೂ ಹೌದು. ಅದಕ್ಕಿಂತ ಹೆಚ್ಚಿನದಾಗಿ ಅದೊಂದು ಸಾಹಸ. ಮೌಂಟ್ ಎವರೆಸ್ಟ್ ಅನ್ನು ಏರಲು ಅರ್ಧ ಶತಮಾನ ಕಾಲ ಬಿಟ್ಟುಬಿಡದ ಪ್ರಯತ್ನ ನಡೆಯಿತಾದರೂ ಕೊನೆಗೊಂದು ದಿನ ಅದನ್ನು ಜಯಿಸಿದಾಗ ಹಿಮಾಲಯದ ಮಡಿಲಲ್ಲೇ ಹುಟ್ಟಿ-ಆಡಿ ಬೆಳೆದವನೊಬ್ಬ ಮೊದಲ ಬಾರಿಗೆ ಅಲ್ಲಿ ವಿಜಯ ಧ್ವಜ ನೆಟ್ಟನೆಂಬುದು ಅಭೂತಪೂರ್ವ, ನಿಸರ್ಗ ಸಹಜ ವಿಜಯದಂತೆ ಭಾಸವಾಗುತ್ತದೆ.

ಜನಾರ್ದನ ಗುರ್ಕಾರ್ ಹಾಗೂ ಕೊಡಲಿ ಚಿದಂಬರಂ ರವರು ಅನುವಾದಿಸಿರುವ ತೇನ್‌ಸಿಂಗ್‌ನ ಆತ್ಮಕತೆ ‘ಎವರೆಸ್ಟ್ ವೀರ’ ಕನ್ನಡದಲ್ಲೂ ಇದೆ. (ಕುವೆಂಪು ಭಾಷಾ ಭಾರತಿ ಪ್ರಕಟನೆ) ನಮ್ಮ ವ್ಯಕ್ತಿತ್ವಗಳನ್ನು ಸ್ವಚ್ಛಗೊಳಿಸಬಲ್ಲಷ್ಟು ಚೇತೋಹಾರಿಯಾಗಿರುವ ತೇನ್‌ಸಿಂಗ್‌ನ ಬದುಕಿನ ಕತೆಯನ್ನು ನಮ್ಮ ಯುವ ಜನ ಓದಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)