ಚೀನಾ ಪ್ರಾರಂಭಿಸಿರುವ ಹೊಸ ಸಿಲ್ಕ್ ರಸ್ತೆ
ಚೀನಾ ಪ್ರಾರಂಭಿಸಿರುವ ‘ಒನ್ ರೋಡ್-ಒನ್ ಬೆಲ್ಟ್’ (ಒಂದು ವಲಯ-ಒಂದು ರಸ್ತೆ) ಯೋಜನೆಯು ಅತ್ಯಂತ ಜಾಣತನದ ರಾಜಕೀಯ-ಭೌಗೋಳಿಕ ಮತ್ತು ಆರ್ಥಿಕ ನಡೆಯಾಗಿದೆ.
ಜಗತ್ತಿನ ಎರಡನೆ ದೊಡ್ಡ ಆರ್ಥಿಕತೆಯೆಂಬ ಸ್ಥಾನ ಪಡೆದಿರುವ ಚೀನಾ ಈಗ ಅತ್ಯಂತ ತ್ವರಿತವಾಗಿ ಮೊದಲನೆ ಸ್ಥಾನವನ್ನು ಆಕ್ರಮಿಸುವತ್ತ ದಾಪುಗಾಲಿಡುತ್ತಿದೆ. ಇದನ್ನು ಅದು ಏಕಕಾಲಕ್ಕೆ ರಾಜಕೀಯ-ಭೌಗೋಳಿಕ ಲಾಭವನ್ನೂ ಮತ್ತು ಸ್ಪರ್ಧಾತ್ಮಕ ಆರ್ಥಿಕ ಲಾಭಗಳೆರಡನ್ನೂ ಸಾಧಿಸುವ ಒಂದು ದೊಡ್ಡ ವ್ಯೆಹತಂತ್ರದ ಭಾಗವಾಗಿಯೇ ಯೋಜಿಸಿದೆ. ಮೇ 14 ಮತ್ತು 15 ರಂದು ಚೀನಾದ ಬೀಜಿಂಗ್‌ನಲ್ಲಿ ಆಯೋಜಿಸಲಾಗಿದ್ದ ‘ಬೆಲ್ಟ್ ಆ್ಯಂಡ್ ರೋಡ್ ಫೋರಂ ಫಾರ್ ಇಂಟರ್‌ನ್ಯಾಶನಲ್ ಕೋ ಆಪರೇಷನ್’ (ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ವಲಯ ಮತು ರಸ್ತೆ ಒಕ್ಕೂಟ) ಸಮ್ಮೇಳನದಲ್ಲಿ 28 ಸರಕಾರ/ಪ್ರಭುತ್ವಗಳ ಮುಖ್ಯಸ್ಥರುಗಳು, 100 ದೇಶಗಳ ಪ್ರತಿನಿಧಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳೂ ನೆರೆದಿದ್ದವು. ಅವರೆಲ್ಲರೂ ಸೇರಿ ಸಿಲ್ಕ್ ರೋಡ್ ಇಕಾನಾಮಿಕ್ ಬೆಲ್ಟ್ (ರೇಷ್ಮೆ ರಸ್ತೆಯ ಆರ್ಥಿಕ ವಲಯ)ಮತ್ತು 21ನೆ ಶತಮಾನದ ಮಾರಿಟೈಮ್ ಸಿಲ್ಕ್ ರೋಡ್ ಪ್ರಾಜೆಕ್ಟ್ (ರೇಷ್ಮೆ ನೌಕಾ ರಹದಾರಿ ಯೋಜನೆ)ಯನ್ನು ಪ್ರಾರಂಭಿಸಿದ್ದಾರೆ. ಅದನ್ನು ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇ ಟೀವ್ (ಬಿಆರ್‌ಐ- ವಲಯ ಮತ್ತು ರಸ್ತೆಗಾಗಿನ ಜಂಟಿ ಮುಂದೊಡಗು) ಅಥವಾ ಸರಳವಾಗಿ ಒನ್ ಬೆಲ್ಟ್ ಒನ್ ರೋಡ್ (ಒಂದು ವಲಯ ಮತ್ತು ಒಂದು ರಸ್ತೆ) ಎಂದು ಕರೆಯಲಾಗುತ್ತದೆ. ಈ ಬಿಆರ್‌ಐ ಎಂಬುದು ಒಂದು ಬೃಹತ್ ಅಂತಾರಾಷ್ಟ್ರೀಯ ಯೋಜನೆಯಾಗಿದ್ದು ಏನಿಲ್ಲವೆಂದರೂ ಅದು ಚೀನಾದ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಹಲವು ಮಾರ್ಗಗಳ ಮೂಲಕ ಯೂರೋಪಿನೊಂದಿಗೆ ಜೋಡಿಸುತ್ತದೆ. ಅದಕ್ಕಾಗಿ ಹಲವಾರು ರಸ್ತೆಗಳನ್ನೂ, ರೈಲ್ವೆ ಲೈನ್‌ಗಳನ್ನೂ, ಮತ್ತು ಬಂದರುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಹಾಗಿದ್ದರೂ ಏಶ್ಯಾದ ಎರಡನೆ ಮತ್ತು ಮೂರನೆ ಅತೀ ದೊಡ್ಡ ಆರ್ಥಿಕತೆಗಳಾದ ಜಪಾನ್ ಮತ್ತು ಭಾರತಗಳು ಈ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಭಾರತವು ಈ ಯೊಜನೆಯು ತನ್ನ ‘ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆ’ಗೆ ಧಕ್ಕೆ ತರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ.
ಚೀನಾದ ಅಧಕ್ಷ ಕ್ಸಿ ಜಿನ್‌ಪಿಂಗ್ ಅವರಂತೂ ಕ್ರಿ.ಪೂ.150 ರಿಂದ ಕ್ರಿ.ಶ. 1450ರವರೆಗೆ ಅಸ್ತಿತ್ವದಲ್ಲಿದ್ದ, ಏಶ್ಯಾ ಖಂಡದ ಪೂರ್ವ ಪಶ್ಚಿಮಗಳನ್ನು ಕೊರಿಯಾ ಮತ್ತು ಜಪಾನ್ ಪರ್ಯಾಯ ದ್ವೀಪಗಳ ಮೂಲಕ ಮೆಡಿಟರೇನಿಯನ್ ಸಮುದ್ರದೊಡನೆ ಸಂಪರ್ಕ ಕಲ್ಪಿಸುತ್ತಿದ್ದ ಐತಿಹಾಸಿಕ ಸಿಲ್ಕ್ ರೂಟ್ (ರೇಷ್ಮೆ ಮಾರ್ಗ)ನ ಐತಿಹಾಸಿಕ ನೆನಪುಗಳನ್ನು ಉಲ್ಲೇಖಿಸಿದರು. ಅತ್ಯಂತ ಸಂಪದ್ಭರಿತವಾಗಿದ್ದ ಮತ್ತು ಲಾಭದಾಯಕವಾಗಿದ್ದ ರೇಷ್ಮೆ ವ್ಯಾಪಾರದಿಂದಾಗಿಯೇ ಆ ಹೆಸರು ಚಾಲ್ತಿಗೆ ಬಂದಿತ್ತು. ಈ ಅಂತಾರಾಷ್ಟ್ರೀಯ ವಾಣಿಜ್ಯದ ಉಪ ಉತ್ಪನ್ನವಾಗಿ ಸಂಸ್ಕೃತಿ ಮತ್ತು ತಂತ್ರಜ್ಞಾನಗಳೂ ಸಹ ಹರಡಿಕೊಂಡವು. ಆ ಐತಿಹಾಸಿಕ ರೇಷ್ಮೆ ರಸ್ತೆಗೆ ಭಾವುಕ ಸ್ಪರ್ಶವನ್ನು ಕೊಟ್ಟ ಚೀನಾದ ಅಧ್ಯಕ್ಷ ಕ್ಸಿ ಯವರು ಈ ರಸ್ತೆಯಿಂದ ಪ್ರತಿಯೊಬ್ಬರೂ ಪಡೆದುಕೊಂಡ ‘‘ಅರಿವು ಮತ್ತು ಪ್ರಯೋಜನಗಳಿಗೆ’’, ‘‘ಮುಕ್ತತೆ ಮತ್ತು ಒಳಗೊಳ್ಳುವಿಕೆಗೆ’’ ಒತ್ತುಕೊಡುತ್ತಾ ಈ ಹೊಸ ರೇಷ್ಮೆ ರಸ್ತೆ-ಬಿಆರ್‌ಐ-ಅನ್ನು 21ನೆ ‘‘ಶತಮಾನದ ಯೋಜನೆ’’ ಎಂದು ಕರೆದಿದ್ದಾರೆ.
ಆದರೆ, ಈ ಘೋಷಿತ ಉದ್ದೇಶಗಳಾಚೆ ಇರುವ ರಾಜಕೀಯ- ಭೌಗೋಳಿಕ ಹಿತಾಸಕ್ತಿಗಳು ಮತ್ತು ರಾಜಕೀಯ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈ ಬಿಆರ್‌ಐ ಭೌಗೋಳಿಕವಾಗಿ ಆರು ರಸ್ತೆ ಕಾರಿಡಾರ್‌ಗಳನ್ನೂ ಮತ್ತು ಒಂದು ನೌಕಾ ಮಾರ್ಗವನ್ನೂ ಹೊಂದಿದೆ. ಈ ಆರು ರಸ್ತೆ ಕಾರಿಡಾರ್‌ಗಳು ಹೀಗೆ ಹಾದುಹೋಗುತ್ತವೆ-ಪಶ್ಚಿಮ ಚೀನಾದಿಂದ ಪಶ್ಚಿಮ ರಶ್ಯಾಗೆ; ಉತ್ತರ ಚೀನಾದಿಂದ ಮಂಗೋಲಿಯಾದ ಮೂಲಕ ಪೂರ್ವ ರಶ್ಯಾಗೆ; ಪಶ್ಚಿಮ ಚೀನಾದಿಂದ, ಪಶ್ಚಿಮ ಹಾಗೂ ಮಧ್ಯ ಏಶ್ಯಾದ ಮೂಲಕ ಟರ್ಕಿಗೆ; ದಕ್ಷಿಣ ಚೀನಾದಿಂದ ಇಂಡೋಚೀನಾದ ಮೂಲಕ ಸಿಂಗಾಪುರಕ್ಕೆ; ನೈರುತ್ಯ ಚೀನಾದಿಂದ ಸಿಂಗಾಪುರಕ್ಕೆ; ಮತ್ತು ದಕ್ಷಿಣ ಚೀನಾದಿಂದ, ಬಾಂಗ್ಲಾದೇಶ ಮತ್ತು ಮಯನ್ಮಾರ್ ಮೂಲಕ ಭಾರತಕ್ಕೆ. ‘ನೌಕಾ ರೇಷ್ಮೆ ಮಾರ್ಗ’ವು ಚೀನಾದ ಕರಾವಳಿಯಿಂದ ಸಿಂಗಪೂರ್-ಮಲೇಶ್ಯಾ, ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರಗಳ ಮೂಲಕ ಮೆಡಿಟರೇನಿಯನ್ ಮುದ್ರಕ್ಕೆ ಸಂಪರ್ಕ ಕಲ್ಪಿಸಲಿದೆ.
ಹಾಗಿದ್ದರೆ ಈ ಬಿಆರ್‌ಐನ ರಾಜಕೀಯ-ಭೌಗೋಳಿಕೆ ಮತ್ತು ರಾಜಕೀಯ ಆರ್ಥಿಕತೆ ಏನು?
ಈ ಬಿಆರ್‌ಐ ಯೋಜನೆಯು ಜಾಗತಿಕ ಆರ್ಥಿಕತೆಯಲ್ಲಿ ತನಗಿರುವ ಸ್ಥಾನಮಾನಕ್ಕೆ ಎರಗಿರುವ ದೊಡ್ಡ ಸವಾಲೆಂದೂ, ಜಾಗತಿಕ ಆರ್ಥಿಕತೆಗೆ ತಾನು ಕೊಡುತಿದ್ದ ನಾಯಕತ್ವ ಸ್ಥಾನವನ್ನು ಕಬಳಿಸಿಕೊಳ್ಳಲು ಚೀನಾ ಮಾಡಿರುವ ದೊಡ್ಡ ಹುನ್ನಾರವೆಂದು ಅಮೆರಿಕ ಭಾವಿಸುತ್ತಿದೆ. ಈ ಸಮಾವೇಶವನ್ನು ಬಹಿಷ್ಕರಿಸಿದ, ಅಮೆರಿಕದ ಕಿರಿಯ ಪಾಲುದಾರರಾದ ಜಪಾನ್ ಮತ್ತು ಭಾರತಕ್ಕೆ ಚೀನಾವು ಒಂದು ಬೃಹತ್ ಪ್ರಾದೇಶಿಕ ಶಕ್ತಿಯಾಗಿ ಬೆಳೆಯುವುದು ಪಥ್ಯವಾಗುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಿಆರ್‌ಐನ ಆರು ರಸ್ತೆ ಕಾರಿಡಾರ್‌ಗಳಲ್ಲಿ ಒಂದಾದ ಚೀನಾ-ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್ (ಚೀನಾ-ಪಾಕಿಸ್ತಾನ ಆರ್ಥಿಕ ರಹಮಾರ್ಗ) ಮಾರ್ಗವು ಭಾರತವು ತನಗೆ ಸೇರಿದ್ದೆಂದು ಪ್ರತಿಪಾದಿಸುವ ಮತ್ತು ಈಗ ಪಾಕಿಸ್ತಾನದ ಸುಪರ್ದಿಗೆ ಒಳಪಟ್ಟಿರುವ ಪಾಕಿಸ್ತಾನೀ ಕಾಶ್ಮೀರದ ಮೂಲಕ ಹಾದುಹೋಗುವುದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಶೀತಲ ಯುದ್ಧದ ನಂತರದ ಅವಧಿಯಲ್ಲಿ (ಎರಡನೆ ಪ್ರಪಂಚ ಯುದ್ಧದ ನಂತರದಲ್ಲಿ ಜಗತ್ತಿನ ಎರಡು ಬಲಶಾಲಿ ದೇಶಗಳಾಗಿ ಹೊರಹೊಮ್ಮಿದ ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳು ತಮ್ಮ ಜಾಗತಿಕ ಪ್ರಾಬಲ್ಯಕ್ಕಾಗಿ ಪರಸ್ಪರರ ವಿರುದ್ಧ ಮತ್ತವರ ಪ್ರಭಾವಿ ವಲಯಗಳ ವಿರುದ್ಧ ಪರೋಕ್ಷವಾಗಿ ನಡೆಸಿದ ಯುದ್ಧ ಮತ್ತಿತರ ಸೆಣಸಾಟಗಳನ್ನು ಶೀತಲ ಯುದ್ಧ ಎಂದು ಬಣ್ಣಿಸುತ್ತಾರೆ. 1990ರಲ್ಲಿ ಸೋವಿಯತ್ ಒಕ್ಕೂಟದ ಪತನದ ಮೂಲಕ ಈ ಶೀತಲ ಯುದ್ಧ ಕೊನೆಗೊಂಡಿತು. ಆ ನಂತರದ ಅವಧಿಯನ್ನು ಶೀತಲ ಯುದ್ಧದ ನಂತರದ ಅವಧಿಯೆಂದು ವಿಶ್ಲೇಷಕರು ವರ್ಗೀಕರಿಸುತ್ತಾರೆ - ಅನುವಾದಕನ ಟಿಪ್ಪಣಿ). ಅಮೆರಿಕವು ಜಗತ್ತಿನ ದೇಶಗಳ ಮೇಲೆ, ಭೂಭಾಗಗಳ ಮೇಲೆ, ಸಂಪನ್ಮೂಲಗಳ ಮೇಲೆ (ಮುಖ್ಯವಾಗಿ ತೈಲ ಮತ್ತು ಅನಿಲ), ಜಗತ್ತಿನ ಮಹಾ ಸಮುದ್ರಗಳು, ಬಂದರು ಮತ್ತು ನೌಕಾ ನಿಲ್ದಾಣಗಳ ಮೇಲೆ ಹತೋಟಿ ಸಾಧಿಸಲು ನಿರಂತವಾದ ಪ್ರಯತ್ನಗಳನ್ನು ನಡೆಸಿದೆ.
ತನ್ನ ಈ ಉದ್ದೇಶಕ್ಕೆ ರಶ್ಯಾ, ಜಪಾನ್ ಮತ್ತು ಜರ್ಮನಿಯ ನೇತೃತ್ವದಲ್ಲಿ ಒಂದುಗೂಡಿರುವ ಕೆಲವು ಐರೋಪ್ಯ ದೇಶಗಳು ಎದುರಾಳಿಗಳೆಂದು ಅಮೆರಿಕ ಪರಿಗಣಿಸುತ್ತಿದೆ. ಅಮೆರಿಕವು ತನ್ನ ಸೇನೆಯ ಮೇಲೆ ಎಷ್ಟು ವೆಚ್ಚವನ್ನು ಮಾಡುತ್ತಿದೆಯೆಂದರೆ ಸದ್ಯಕ್ಕಂತೂ ಅದರ ಯಾವ ಎದುರಾಳಿಗಳಾಗಲೀ, ಎದುರಾಳಿಗಳ ಕೂಟವಾಗಲೀ ಅದಕ್ಕೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. 2003ರ ಇರಾಕ್ ಯುದ್ಧ್ದ ಮತ್ತು ಆ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಅಮೆರಿಕವು ಯುರೇಶ್ಯಾದ ರಾಜಕೀಯ- ಭೌಗೋಳಿಕತೆಯ ಭೂಪಟವನ್ನು ತಿದ್ದಿ ಬರೆಯಲು ಸೈನಿಕವಾಗಿ ತೊಡಗಿಕೊಂಡಿದೆ ಯೆಂದು ಅನಿಸುತ್ತದೆ. (ಯೂರೇಶ್ಯಾ ಎಂಬುದು ಯೂರೋಪ್ ಮತ್ತು ಏಶ್ಯಾಗಳ ಒಟ್ಟು ಭೂಭಾಗ. ಏಕೆಂದರೆ ಅವೆರಡನ್ನು ಬೇರೆ ಮಾಡುವ ಯಾವುದೇ ಭೌಗೋಳಿಕ ಗಡಿಗಳಿಲ್ಲ.). ಅದರಲ್ಲೂ ವಿಶೇಷವಾಗಿ ಅದರ ಗಮನವು ಪರ್ಷಿಯನ್ ಕೊಲ್ಲಿ, ಕ್ಯಾಸ್ಪಿಯನ್ ಸಮುದ್ರಕ್ಕಂಟಿದ ಭೂಭಾಗ, ಮಧ್ಯ ಏಶ್ಯಾದ ಸುತ್ತ ಇರುವ ದೇಶಗಳ ಮೇಲಿದೆ. ಶೀತಲ ಯುದ್ಧದ ನಂತರದ ಅವಧಿಯಲ್ಲಿ ಯುರೇಷಿಯಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಅಮೆರಿಕವು ಹೊಸದಾಗಿ ಸ್ಥಾಪಿಸಿರುವ ನೌಕಾನೆಲೆಗಳ ಸಂಖ್ಯೆಯನ್ನು ಗಮನಿಸಿದರೆ ಸಾಕು, ಅದರ ವ್ಯೆಹತಂತ್ರಗಳು ಯಾರಿಗಾದರೂ ಸ್ಪಷ್ಟವಾಗುತ್ತವೆ. ಆದರೆ ಯುರೇಶ್ಯಾದ ಮಧ್ಯ ಹಾಗೂ ಕೇಂದ್ರ ಭಾಗಗಳ ಮೇಲೆ ತನ್ನ ಹಿಡಿತವನ್ನು ಗಟ್ಟಿಗೊಳಿಸುತ್ತಲೇ ಅಮೆರಿಕವು ಚೀನಾದ ಆರ್ಥಿಕ ಪುನರುತ್ಥಾನವನ್ನೂ ಮತ್ತು ಈ ಮಧ್ಯಯುಗೀನ ಸಾಮ್ರಾಜ್ಯವು ಏಶ್ಯಾದ ಪ್ರಾದೇಶಿಕ ಶಕ್ತಿಯಾಗಿ ಉಗಮವಾಗುವುದನ್ನು ತಡೆಗಟ್ಟಲು ಬೇಕಾದ ಎಲ್ಲಾ ತಂತ್ರಗಳನ್ನೂ ಹೆಣೆಯುತ್ತಿದೆ. ಈ ಉದ್ದೇಶದಿಂದಲೇ ಅದು 2011ರಲ್ಲಿ ‘‘ಪಿವಟ್ ಟು ಏಶ್ಯಾ’’ (ಏಶ್ಯಾದ ತಿರುಗಾಣಿ) ಎಂಬ ವ್ಯೆಹತಂತ್ರವನ್ನು ರೂಪಿಸಿದೆ. ಮತ್ತು ಏಶ್ಯಾ-ಪೆಸಿಫಿಕ್ ಪ್ರದೇಶದ ಭೂಭಾಗಗಳು ತನಗೆ ಸೈನಿಕವಾಗಿ ಎಟಕುವಂತೆ ಮಾಡಿಕೊಳ್ಳಲು ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತವನ್ನೂ ಸೆಳೆದುಕೊಂಡಿದೆ. ಚೀನಾವು ಅಮೆರಿಕ ಮಾಡುತ್ತಿರುವ ಸೈನಿಕ ವೆಚ್ಚಕ್ಕೆ ಸರಿಸಾಟಿ ಯಾಗಲು ಸಾಧ್ಯವೇ ಇಲ್ಲ. ಅಮೆರಿಕ ಸರಕಾರವು ತನ್ನ ಸೈನಿಕ ಬಲದ ಮೇಲೆ ವೆಚ್ಚ ಮಾಡುತ್ತಿರುವ ಕಾಲು ಭಾಗವನ್ನೂ ಸಹ ಚೀನಾ ವೆಚ್ಚ ಮಾಡುತ್ತಿಲ್ಲ. ಇದರೊಂದಿಗೆ ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತದಂಥ ಮಿತ್ರ ರಾಷ್ಟ್ರಗಳು ಮತ್ತು ಅವರೊಂದಿಗೆ ದಕ್ಷಿಣ ಕೊರಿಯಾ ಮತ್ತು ತೈವಾನ್‌ಗಳು ಹಾಗೂ ಅದರೊಂದಿಗೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಅದರ ಸೈನಿಕ ನೆಲೆಗಳು. (ಚೀನಾಗೆ ಯಾವುದೇ ಸೈನಿಕ ನೆಲೆಗಳಿಲ್ಲ).
ಆದರೆ ಹೀಗೆೆ ಜಗತ್ತಿನ ಸಾಮ್ರಾಜ್ಯಶಾಹಿ ಅಗ್ರರಾಷ್ಟ್ರವೊಂದು ದುರುದ್ದೇಶಪೂರ್ವಕವಾಗಿ ವಿಭಜಿಸಿ ಅವಲಂಬಿತವಾಗಿಸಿರುವ ಯುರೇಶ್ಯಾ ಪ್ರದೇಶವನ್ನು ಚೀನಾವು ಅಂತಾರಾಷ್ಟ್ರೀಯ ಸಹಕಾರದೊಂದಿಗೆ ಸಂಪೂರ್ಣವಾಗಿ ತನ್ನೆಡೆಗೆೆ ಗೆದ್ದುಕೊಳ್ಳಲು ಬಿಆರ್‌ಐ ಯೋಜನೆಯನ್ನು ರೂಪಿಸಿದೆ. ಇದರೊಂದಿಗೆ ಈ ಬಿಆರ್‌ಐ ಯೋಜನೆಯು ಹುಟ್ಟುಹಾಕುವ ಅಪಾರವಾದ ಬೇಡಿಕೆಯ ಮೂಲಕ ತನ್ನ ದೇಶದೊಳಗಿನ ಕಬ್ಬಿಣ ಮತ್ತು ಉಕ್ಕಿನಂಥ ಉದ್ದಿಮೆಗಳು ಎದುರಿಸುತ್ತಿರುವ ಅಪಾರ ಹೆಚ್ಚುವರಿ ಸಾಮರ್ಥ್ಯದ ಸಮಸ್ಯೆಯನ್ನೂ ನೀಗಿಸಿಕೊಳ್ಳಲಿದೆ. ಬಂಡವಾಳವೇ ಪ್ರಭುತ್ವವನ್ನು ನಿಯಂತ್ರಿಸುವುಂಥ ಪರಿಸ್ಥಿತಿಯನ್ನು ರಾಜಕೀಯ ನಾಯಕತ್ವವು ಬರಗೊಡುವುದಿಲ್ಲವೆಂಬುದು ದಿಟವಾದರೂ ಸಂಪತ್ತನ್ನು ಉತ್ಪಾದಿಸಲು ಅದು ಮಾರುಕಟ್ಟೆಯನ್ನಂತೂ ಖಂಡಿತಾ ಬಳಸಿಕೊಳ್ಳುತ್ತದೆ.
ಒಂದೆಡೆ ಚೀನಾದ ಉದಯವನ್ನು ತಡೆಗಟ್ಟಲು ಅಮೆರಿಕವು ಹೆಣಗಾಡುತ್ತಿದ್ದರೆ ಅದನ್ನು ಯಶಸ್ವಿಯಾಗಿ ಎದುರಿಸಲು ಚೀನಾವು ಒಂದು ಅಸಾಧಾರಣ ರಾಜಕೀಯ ನಾಯಕತ್ವವನ್ನೇ ಹುಟ್ಟುಹಾಕಿದೆ. ಈ ಬಿಆರ್‌ಐ ಎಂಬುದು ಅತ್ಯಂತ ಜಾಣತನದ ನಡೆಯಾಗಿದೆ. ಇನ್ನು ಅದರ ಹಿಂದಿರುವ ರಾಜಕೀಯ ಆರ್ಥಿಕತೆಯ ಬಗ್ಗೆ ಹೇಳುವುದಾದರೆ ಆ್ಯಡಮ್ ಸ್ಮಿತ್ ಮತ್ತು ಜಾನ್ ಮೆನಾರ್ಡ್ ಕೀನ್ಸ್ ಅವರ ಮೂಲ ರಾಜಕೀಯ ಚಿಂತನೆಗಳು ಬೀಜಿಂಗ್‌ನಲ್ಲಿ ಜೀಂತವಾಗಿವೆ ಎನ್ನುವುದಂತೂ ಸತ್ಯ..
ಕೃಪೆ: epw.in