ಮೋದಿ ಸರಕಾರದ ಮೂರು ವರ್ಷಗಳು
ಒಂದು ಅವಲೋಕನ
ಭಾಗ - 1
ಮೋದಿ ಸರಕಾರ ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಘಿಗಳು 900 ನಗರಗಳಲ್ಲಿ ಮೋದಿ ಉತ್ಸವ ಆಚರಿಸುತ್ತಾ ಸರಕಾರದ ಸಾಧನೆಗಳನ್ನು ಕೊಂಡಾಡುತ್ತಿದ್ದಾರೆ. ಹಾಗಾದರೆ ಮೋದಿ ಸರಕಾರ ನಿಜಕ್ಕೂ ಅಷ್ಟೊಂದು ಸ್ತುತ್ಯಾರ್ಹವಾದ ಸಾಧನೆ ಗಳನ್ನು ಮಾಡಿದೆಯೇ ಎಂದು ನೋಡ ಬೇಡವೇ? ಚುನಾವಣಾ ಭರವಸೆ ಗಳ ಜಾಡು ಹಿಡಿಯುವ ತಂಡ(Election Promises Tracker) ನಡೆಸಿರುವ ಅಧ್ಯಯನವೊಂದು ಹೇಳುವಂತೆ 2014ರ ಚುನಾವಣೆಗೆ ಮೊದಲು ಬಿಜೆಪಿ ನೀಡಿದ್ದ 126 ಭರವಸೆಗಳ ಪೈಕಿ ಇದುವರೆಗೆ ಬರೀ ಶೇ. 8ರಷ್ಟನ್ನು ಮಾತ್ರ ಈಡೇರಿಸಲಾಗಿದೆ.
ಇವೆಲ್ಲವೂ ಯೋಗ, ಆಯುಷ್, ಕೃಷಿ ವಿಮೆ, ಕೆಲವೊಂದು ಪುರಾತನ ಕಾಯ್ದೆಗಳ ಪರಿಷ್ಕರಣೆ/ರದ್ದತಿಯಂತಹ ಅಷ್ಟೇನೂ ಮುಖ್ಯವಲ್ಲದ ವಿಷಯಗಳಿಗೆ ಸಂಬಂಧಿಸಿವೆ! ‘ಪ್ರಧಾನ ಮಂತ್ರಿ ಕೃಷಿ ವಿಮೆ ಯೋಜನೆ’ಯಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲದಿರುವುದನ್ನು ಹಿಂದಿನ ಅಂಕಣವೊಂದರಲ್ಲಿ ವಿವ ರಿಸಲಾಗಿದೆ. ನಿಜಕ್ಕೂ ಅತ್ಯಾವಶ್ಯಕ ವಾದ ಎಲ್ಲಾ ಜನವರ್ಗಗಳ ಅಭಿವೃದ್ಧಿ, ಸೌಹಾರ್ದಯುತ ಸಮಾಜ ನಿರ್ಮಾಣ, ಭ್ರಷ್ಟಾಚಾರ ಮತ್ತು ಕಾಳಧನ ನಿರ್ಮೂಲನ, ಹೂಡಿಕೆ, ಉತ್ಪಾದನೆಯಲ್ಲ್ಲಿ ಹೆಚ್ಚಳ, ನಿರುದ್ಯೋಗ ನಿವಾರಣೆ ಮೊದಲಾದ ಬಹುಮುಖ್ಯ ಕ್ಷೇತ್ರಗಳಲ್ಲಿ ಸರಕಾರದ ವೈಫಲ್ಯ ಎದ್ದುಕಾಣುವಂತಿದೆ.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’
ಜನಸಾಮಾನ್ಯರು ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಹುಬೇಗನೆ ಮರೆಯುತ್ತಾರೆ ಎಂಬ ಸತ್ಯವನ್ನು ಅರಿತಿರುವು ದರಿಂದಲೇ ನಟಸಾರ್ವಭೌಮ ಮೋದಿ ಅಂದು ಜನಪ್ರಿಯ ಘೋಷಣೆ ಗಳ ಮೂಲಕ ಮತದಾ ರರನ್ನು ಸೆಳೆಯುವಲ್ಲಿ ಯಶಸ್ಸು ಸಾಧಿಸಿದರು. ಅವರ ಸು(ಕು)ಪ್ರಸಿದ್ಧ ಘೋಷಣೆಗಳಲ್ಲೊಂದಾದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕೂಡಾ ಅವರ ಇನ್ನಿತರ ಘೋಷಣೆಗಳ ಹಾಗೆ ಬರೀ ಬಾಯಿಮಾತಿಗೆ ಸೀಮಿತವಾಗಿಬಿಟ್ಟಿದೆ. ಒಟ್ಟಾರೆಯಾಗಿ ನೋಡಿ ದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅತ್ತ ರೈತರ ವಿಕಾಸವೂ ಆಗಿಲ್ಲ, ಇತ್ತ ಕಾರ್ಮಿಕರ ವಿಕಾಸವೂ ಆಗಿಲ್ಲ, ಬಡವರ ವಿಕಾಸವೂ ಆಗಿಲ್ಲ, ನಿರುದ್ಯೋಗಿಗಳ ವಿಕಾಸವೂ ಆಗಿಲ್ಲ, ಅಲ್ಪಸಂಖ್ಯಾತರ ವಿಕಾಸವೂ ಆಗಿಲ್ಲ.
ಮೋದಿ ಸರಕಾರದಡಿ ‘ಅಭಿವೃದ್ಧಿ’ ಆಗಿರುವುದೆಂದರೆ ಗುಂಪುಗಳು ಕಾನೂನಿನ ಭಯವಿಲ್ಲದೆ ಕೊಲೆ, ಹಿಂಸಾಚಾರಗಳಲ್ಲಿ ತೊಡಗುವಲ್ಲಿ! ದಲಿತ, ದಮನಿತರ ಮೇಲಿನ ದೌರ್ಜನ್ಯಗಳಲ್ಲಿ! ಗೋರಕ್ಷಕರ ಹಲ್ಲೆಗಳಲ್ಲಿ! ಅನೈತಿಕ ಪೊಲೀಸ್‌ಗಿರಿಯಲ್ಲಿ! ಲವ್ ಜಿಹಾದ್ ಆರೋಪಗಳಲ್ಲಿ! ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವಲ್ಲಿ! ಆಡಳಿತದ ಪ್ರಮುಖ ಸ್ಥಾನಗಳಲ್ಲಿ ಆರೆಸ್ಸೆಸ್‌ಗರ ನೇಮಕದಲ್ಲಿ! ಶ್ರೀಮಂತರ ಸಂಪತ್ತಿನಲ್ಲಿ! ಬ್ಯಾಂಕುಗಳ ಅನುತ್ಪಾದಕ ಆಸ್ತಿಯ (ಎನ್‌ಪಿಎ; ಮರಳಿಸದ ಸಾಲ) ಪ್ರಮಾಣದಲ್ಲಿ! ಮೂರು ವರ್ಷಗಳ ಹಿಂದೆ 2.3 ಲಕ್ಷ ಕೋಟಿಯಷ್ಟಿದ್ದ ಬ್ಯಾಂಕು ಗಳ ಎನ್‌ಪಿಎ ಇಂದು 6.8 ಲಕ್ಷ ಕೋಟಿಯಷ್ಟಾಗಿದೆ. ಅಂದರೆ ಸುಮಾರು ಮೂರುಪಟ್ಟು ಏರಿಕೆಯಾಗಿದೆ! ಈ ಮರಳಿಸದ ಸಾಲದ ಶೇ.70ರಷ್ಟಕ್ಕೆ ಬೆರಳೆಣಿಕೆಯ ಕಾರ್ಪೊರೇಟುಗಳೇ ಕಾರಣ.
ಇದರರ್ಥ ಕಾರ್ಪೊರೇಟು ಗಳಿಗೆ ಲೂಟಿ ಹೊಡೆದು ಅಭಿವೃದ್ಧಿ ಯಾಗಲು ಮುಕ್ತ ಅವಕಾಶಗಳನ್ನು ನೀಡಲಾಗಿದೆ. ಇಂತಹ ಕಾರ್ಪೊರೇಟುಗಳಿಗೆ ಸದ್ಯದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳನ್ನು ಖರೀದಿಸುವ ಅವಕಾಶವೂ ದೊರೆಯಲಿದೆ! Credit Suisse ಸಂಸ್ಥೆಯ ಸಮೀಕ್ಷಾ ವರದಿ ಪ್ರಕಾರ ಭಾರತದ ಜನಸಂಖ್ಯೆಯ ಶೇ.1ರಷ್ಟಿರುವ ಆಗರ್ಭ ಶ್ರೀಮಂತರ ಸಂಪತ್ತು 2015ರಲ್ಲಿ ಶೇ.53ರಷ್ಟಿದ್ದರೆ 2016ರಲ್ಲಿ ಅದು ಶೇ.58.4ಕ್ಕೇರಿದೆ. ಮೋದಿ ಸರಕಾರದ ಆಡಳಿತದಲ್ಲಿ ನಿಜವಾಗಿ ಯಾರ ವಿಕಾಸ ಆಗಿದೆ ಎಂಬುದಕ್ಕೆ ಬೇರೆ ನಿದರ್ಶನಗಳ ಆವಶ್ಯಕತೆ ಇದೆಯೇ?
ಮನರೆಗಾ
ಮೋದಿ ಸರಕಾರ ತೀರ ದಾರಿದ್ರ್ಯದಲ್ಲಿರುವ ಭೂರಹಿತ ಕಾರ್ಮಿಕರ ಸಂಕಷ್ಟಗಳಿಗೆ ಮನರೆಗಾ ಕಾರ್ಯಕ್ರಮದ ಮೂಲಕ ಸ್ಪಂದಿಸುವ ಬದಲು 2014 ಮತ್ತು 2015ರಲ್ಲಿ ಮನರೆಗಾ ಅನುದಾನಗಳಲ್ಲಿ ಕಡಿತ ಮಾಡಿದೆ! 2016ರಲ್ಲಿ ಹಿಂದಿನ ಅನುದಾನ ಮೊತ್ತಕ್ಕೆ ಮರಳಲಾಗಿದೆಯಾದರೂ ಅನೇಕ ರಾಜ್ಯಗಳಲ್ಲಿ ಆಗಿರುವ ಹೆಚ್ಚಳ ಬರೀ ರೂ. 1. 2017-18ರ ಸಾಲಿನಲ್ಲಿ ಆಗಿರುವ 2.7 ಪ್ರತಿಶತ ಹೆಚ್ಚಳ ಯೋಜನೆಯ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಹೆಚ್ಚಳವಾಗಿದೆ! 2014-15ರ ಸಾಲಿನಲ್ಲಿ 4.65 ಕೋಟಿ ಕುಟುಂಬಗಳು ಕೆಲಸಕ್ಕಾಗಿ ಬೇಡಿಕೆ ಇಟ್ಟಿದ್ದರೆ 2015-16ರಲ್ಲಿ ಅದು 5.35 ಕೋಟಿಗೆ ಏರಿದೆ. ಮುಂದೆ 2016-17ರಲ್ಲಿ 5.69 ಕೋಟಿಯಷ್ಟಾಗಿದೆ. ಆದರೆ ಅರ್ಜಿ ಹಾಕಿದವರಲ್ಲಿ ಶೇ.10-11ರಷ್ಟು ಜನರಿಗೆ ಕೆಲಸ ನೀಡಲಾಗುತ್ತಿಲ್ಲ. ಕಳೆದ ವರ್ಷ ಸುಮಾರು 58 ಲಕ್ಷ ಕುಟುಂಬಗಳನ್ನು ವಾಪಸ್ ಕಳುಹಿಸಲಾಗಿದೆ.
ಕೃಷಿ ವಲಯ
ಚುನಾವಣಾ ಪ್ರಚಾರದ ಕಾಲದಲ್ಲಿ ರೈತ ರ್ಯಾಲಿಗಳಲ್ಲಿ ರಂಗುರಂಗಿನ ಭರವಸೆಗಳನ್ನು ಕೊಟ್ಟಿದ್ದ ಮೋದಿ, ಬಿಜೆಪಿಯನ್ನು ಗೆಲ್ಲಿಸಿದರೆ ಕೃಷಿ ಉತ್ಪನ್ನಗಳ ಖರೀದಿ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ವರದಿಗೆ ಅನುಸಾರವಾಗಿ (ರೈತರಿಗೆ ಶೇ.50ರಷ್ಟು ಲಾಭ ಸಿಗುವ ಹಾಗೆ) ನಿಗದಿಪಡಿಸಲಾಗುವುದೆಂದು ವಾಗ್ದಾನ ಮಾಡಿದ್ದರು. ಆದರೆ ಇಂದು ಕೃಷಿ ಉತ್ಪನ್ನ ಖರೀದಿ ನೀತಿಯನ್ನು ವಿಶ್ವ ವಾಣಿಜ್ಯ ಮಂಡಳಿಯ ನಿಯಮಗಳಿಗೆ ಅನುಸಾರವಾಗಿ ರೂಪಿಸುವ ಮೂಲಕ ಹಿಂದಿನ ಭರವಸೆಗೆ ಬೆನ್ನು ತೋರಿಸಲಾಗುತ್ತಿದೆ. 2022ರೊಳಗಾಗಿ ಕೃಷಿ ವಲಯದಲ್ಲಿನ ಆದಾಯಗಳನ್ನು ಎರಡು ಪಟ್ಟು ಹೆಚ್ಚಿಸಲಾಗುವುದು ಎಂಬುದು ಮೋದಿ ಸರಕಾರದ ಮತ್ತೊಂದು ಭರವಸೆಯಾಗಿತ್ತು. ಆದರೆ ಕೃಷಿ ವಲಯದ ಜಿಡಿಪಿಯನ್ನು ನೋಡಿದರೆ ಸಾಕು, ಮೋದಿ ಸರಕಾರದ ಬಣ್ಣವೆಲ್ಲ ಬಯಲಾಗುತ್ತದೆ. ಯುಪಿಎ 2ರ ಕಾಲದಲ್ಲಿ ಜಿಡಿಪಿಯಲ್ಲಿ ಶೇ.3.6ರಷ್ಟು ಏರಿಕೆ ಆಗಿದ್ದರೆ 2014ರ ನಂತರದ 3 ವರ್ಷಗಳಲ್ಲಿ ಜಿಡಿಪಿಯಲ್ಲಿ ಆಗಿರುವ ಹೆಚ್ಚಳ ಕೇವಲ ಶೇ.1.7 ಅಷ್ಟೆ! ಆದರೆ ಈ ಬಿಕ್ಕಟ್ಟಿಗೆ ಮೋದಿ ಸೂಚಿಸಿರುವ ಪರಿಹಾರಗಳಾದ ಕೃಷಿ ವಿಮೆ ಮತ್ತು ಸಾಲ ಮನ್ನಾಗಳೆರಡೂ ಭೂಮಿ ಉಳ್ಳವರ ಪರವಾಗಿವೆ.
ಭಾರತದ ಜನಸಂಖ್ಯೆಯ ಶೇ.1ರಷ್ಟಿರುವ ಆಗರ್ಭ ಶ್ರೀಮಂತರ ಸಂಪತ್ತು 2015ರಲ್ಲಿ ಶೇ.53ರಷ್ಟಿದ್ದರೆ 2016ರಲ್ಲಿ ಅದು ಶೇ.58.4ಕ್ಕೇರಿದೆ. ಮೋದಿ ಸರಕಾರದ ಆಡಳಿತದಲ್ಲಿ ನಿಜವಾಗಿ ಯಾರ ವಿಕಾಸ ಆಗಿದೆ ಎಂಬುದಕ್ಕೆ ಬೇರೆ ನಿದರ್ಶನಗಳ ಆವಶ್ಯಕತೆ ಇದೆಯೇ?