ಪಂಪನ ಹಾದಿಯಲ್ಲಿ- ಹಿರಿ ಕಿರಿ ಲೇಖಕರ ಸಂಗಮ
ಈ ಹೊತ್ತಿನ ಹೊತ್ತಿಗೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಉತ್ತರ ಕನ್ನಡದ ಜಿಲ್ಲಾಮಟ್ಟದ ಕವಿಗೋಷ್ಠಿಯೊಂದರಲ್ಲಿ ಹಿರಿಯ ಕವಿಗಳ ಜೊತೆಗೆ ಹೊಸ ತಲೆಮಾರಿನ ಯುವ ಕವಿಗಳೂ ಮಾಡಿರುವ ಕವಿತೆ ವಾಚನ ನಡೆಸಿದರು. ಅದರ ಸಂಗ್ರಹವೇ ‘ಪಂಪನ ಹಾದಿಯಲ್ಲಿ’. ಇಲಾಖೆಯ ಸಹಾಯಕ ನಿರ್ದೇಶಕರಾದ ಶಫಿ ಸಾದುದ್ದೀನ್ ಮತ್ತು ನಾಗರಾಜ ಹರಪನ ಹಳ್ಳಿ ಈ ಕಿರು ಸಂಕಲನವನ್ನು ಸಂಗ್ರಹಿಸಿದ್ದಾರೆ. ಕವಿಗೋಷ್ಠಿಯ ಮೊದಲು ಪಂಪ ಪ್ರಶಸ್ತಿ ವಿಜೇತ ಕವಿ ಬಿ. ಎ. ಸನದಿಯೊಂದಿಗೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಆ ಸಂವಾದದ ಸಂಗ್ರಹ ರೂಪವೂ ಈ ಕೃತಿಯಲ್ಲಿದೆ. ಹಾಗೆಯೇ ಬಿ. ಎ. ಸನದಿಯವರ ಕುರಿತ ಪರಿಚಯ ಲೇಖನವನ್ನೂ ನೀಡಲಾಗಿದೆ. ಕಾರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹರಪನಹಳ್ಳಿಯವರು ಕವಿಯ ಪರಿಚಯದ ಜೊತೆಗೆ ಸಂವಾದದ ಸಾರವನ್ನು ಇಲ್ಲಿ ನಿರೂಪಿಸಿದ್ದಾರೆ.
ನವ್ಯ ಕಾವ್ಯದ ಬೇರು ವಚನ ಸಾಹಿತ್ಯದಲ್ಲಿದೆ ಎಂದು ಅಭಿಪ್ರಾಯ ಪಡುವ ಸನದಿ, ಕನ್ನಡ ಭಾಷೆಗೆ ಸಾವಿಲ್ಲ. ಇತರ ಭಾಷೆಗಳ ಸತ್ವ ಹೀರಿ ಬೆಳೆಯುತ್ತಿರುವ ಕನ್ನಡ ಆಲದ ಮರವಿದ್ದಂತೆ. ಈ ಕಾರಣಕ್ಕಾಗಿಯೇ ಮರಾಠಿ ಭಾಷೆ ತನ್ನೊಳಗಿನ ಅಂತಃಸತ್ವವನ್ನು ಕಡಿಮೆ ಮಾಡದೆ ಹಿಗ್ಗಿಸಿತು ಎಂದು ನೆನೆದುಕೊಳ್ಳುತ್ತಾರೆ. ತನ್ನ ‘ತುಳಸಿ ಕಟ್ಟೆ’ ಕವಿಯ ಹಿನ್ನೆಲೆಯನ್ನು ಹೇಳುತ್ತಾ ಸೌಹಾರ್ದದ ಅಗತ್ಯವನ್ನು ಕವಿ ಮಂಡಿಸುತ್ತಾರೆ. ಹಾಗೆಯೇ ಜನಸಾಮಾನ್ಯರ ಜೊತೆಗೆ ಹತ್ತಿರವಾಗುವುದರಿಂದ ಕವಿ, ಕಲಾವಿದರು ಬೆಳೆಯುತ್ತಾರೆ ಸಂಬಂಧ ಮತ್ತು ಸೌಹಾರ್ದವನ್ನು ಬೆಸೆಯುವ ಶಕ್ತಿ ಸಾಹಿತ್ಯ ಮತ್ತು ಸಂಗೀತಕ್ಕಿದೆ ಎಂದು ಹೇಳುತ್ತಾರೆ. ಸೈಯದ್ ಝಮೀರುಲ್ಲಾ ಶರೀಫ್ ಅವರು ‘ಹೊರನಾಡ ನದಿ-ಸನದಿ’ ಎನ್ನುವ ಕಿರು ಬರಹದಲ್ಲಿ ಸನದಿಯವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ.
ಬಿ. ಎ. ಸನದಿ ಅವರ ‘ತುಳಸಿ ಕಟ್ಟೆ’, ಡಾ. ಬಸು ಬೇವಿನ ಗಿಡದ ಅವರ ‘ಅಪ್ಪ ಹೊಡೆಯದ ದಿನ’, ಗಣೇಶ ಹೊಸ್ಮನೆ ಅವರ ‘ಗಜಲ್’, ರೇಣುಕಾ ರಮಾನಂದ ಶೆಟಗೇರಿ ಅವರ ‘ನನಗಾಗಿ ಕಾದಿರುವಂತೆ ಹೇಳಬೇಕು ನೀನು’ ಸಹಿತ ಹಲವು ಯುವ ಕವಿಗಳ ಕವಿತೆಗಳು ಇಲ್ಲಿ ಗಮನ ಸೆಳೆಯುತ್ತವೆ. ಸುಮಾರು 26 ಕವಿತೆಗಳು ಈ ಕೃತಿಯಲ್ಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕೃತಿಯನ್ನು ಹೊರ ತಂದಿದೆ.