ಗದಗ: ಗ್ರಾಮಸ್ಥರನ್ನು ಕಂಗೆಡಿಸಿದ ಪ್ಲಾಸ್ಟಿಕ್ ಸಕ್ಕರೆ
ಪ್ಯಾಕೇಟ್ ಮೇಲೆ ಬೀಳಗಿ ಶುಗರ್ಸ್ ಹೆಸರಿನ ಲೇಬಲ್; ಅಧಿಕಾರಿಗಳ ನಿರ್ಲಕ್ಷ: ಗ್ರಾಮಸ್ಥರ ಆರೋಪ
ಗದಗ, ಮೇ 29: ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿ ಸರತಿ ಮುಗಿಯಿತು. ಇದೀಗ ಪ್ಲಾಸ್ಟಿಕ್ ಸಕ್ಕರೆಯ ಸರತಿ ಬಂದಾಗಿದೆ. ಜಿಲ್ಲೆಯ ಜನರಲ್ಲಿ ಈ ಪ್ಲಾಸ್ಟಿಕ್ ಸಕ್ಕರೆ ನಡುಕ ಹುಟ್ಟಿಸಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಇಟಗಿಯಲ್ಲಿ ಹಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಸಕ್ಕರೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.
ಇದು ನೋಡೋದಕ್ಕೆ ಥೇಟ್ ಸಕ್ಕರೆಯಂತೆಯೇ ಕಂಡರು ನಿಜವಾದ ಸಕ್ಕರೆ ಅಲ್ಲ. ಈ ಸಕ್ಕರೆಯನ್ನು ಕೆಲ ಸಮಯ ನೀರೊಳಗೆ ಕುದಿಸಿದಾಗ ಮಾತ್ರ ಇದರ ನಿಜ ಬಣ್ಣ ಬಯಲಾಗುತ್ತದೆ. ಇದರಿಂದ ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಗ್ರಾಮಸ್ಥರಿಗೆ ಆತಂಕ ಮನೆ ಮಾಡಿದೆ.
ಇಟಗಿ ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಮಾರಾಟ ಆಗುತ್ತಿರುವ ಸಕ್ಕರೆ, ಪ್ಲಾಸ್ಟಿಕ್ ಸಕ್ಕರೆ ಅನ್ನುವುದು ಗ್ರಾಮಸ್ಥರನ್ನು ಕಂಗೆಡಿಸಿದೆ. ಇಲ್ಲಿನ ಜನರು ಈ ಸಕ್ಕರೆ ಪ್ಲಾಸ್ಟಿಕ್ ಸಕ್ಕರೆ ಎಂದು ಸಾಬೀತುಪಡಿಸಲು ಪ್ರಾಯೋಗಿಕವಾಗಿಯೂ ಸಹ ಪರೀಕ್ಷಿಸಿಕೊಂಡಿದ್ದಾರೆ.
ನೀರಿನಲ್ಲಿ ಕೇವಲ ಈ ಸಕ್ಕರೆಯನ್ನು ಮಾತ್ರ ಹಾಕಿ, ಕೆಲಕಾಲ ಕುದಿಸಿದರೆ ಇದರ ನಿಜಬಣ್ಣ ಏನೇಂಬುವುದು ಬಯಲಾಗುತ್ತದೆ. ಕುದಿಯುವ ಸಮಯದಲ್ಲಿ ಸುಟ್ಟ ಪ್ಲಾಸ್ಟಿಕ್ ವಾಸನೆಯಿಂದ, ಸಕ್ಕರೆಯಲ್ಲಾ ಕರಕಲಾಗುತ್ತೆ. ಇದರಿಂದಾಗಿ ಇದು ಪ್ಲಾಸ್ಟಿಕ್ ಸಕ್ಕರೆ ಅನ್ನುವ ವಿಷಯ ಬಹಿರಂಗವಾಗಿದೆ.
ಇಡೀ ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಈ ಸಕ್ಕರೆಯೇ ಪೂರೈಕೆಯಾಗಿದೆ. ಇಟಗಿ ಗ್ರಾಮದ ಅಂಗಡಿಗೆ ಪೂರೈಕೆಯಾದ ಸಕ್ಕರೆ ರೋಣ ಪಟ್ಟಣದ ಭವಾನಿ ಕಿರಾಣಿ ಸ್ಟೋರ್ಸ್‌ನಿಂದ ಸಂದಾಯಿಸಲಾಗಿದೆ. ಸಕ್ಕರೆ ಪ್ಯಾಕೆಟ್ ಮೇಲೆ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಬೀಳಗಿ ಶುಗರ್ಸ್ ಹೆಸರಿನ ಲೇಬಲ್ ಇದ್ದು, ಈ ರೀತಿಯ ಸಕ್ಕರೆ ಹೇಗೆ ಮಾರುಕಟ್ಟೆಗೆ ಕಾಲಿಟ್ಟಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ.
ಪ್ಲಾಸ್ಟಿಕ್ ಸಕ್ಕರೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಕಂದಾಯ ಇಲಾಖೆಯ ಆಹಾರ ಇಲಾಖೆ ಅಧಿಕಾರಿ ಭೇಟಿ ನೀಡಿ ಸಕ್ಕರೆ ಪರಿಶೀಲಿಸಿದ್ದಾರೆ. ನಂತರ ರೋಣದ ಭವಾನಿ ಕಿರಾಣಿ ಸ್ಟೋರ್ಸ್‌ನಲ್ಲಿರುವ ಸಕ್ಕರೆಯನ್ನು ಪರಿಶೀಲಿಸಿದ್ದಾರೆ.
ಕಳೆದ ನಾಲ್ಕು ದಿನದಿಂದ ಇಟಗಿ ಹಾಗೂ ಸುತ್ತಲಿನ ಗ್ರಾಮದಲ್ಲಿ ಪ್ಲಾಸ್ಟಿಕ್ ಸಕ್ಕರೆ ಪೂರೈಕೆಯಾಗಿರುವ ವಿಷಯ ತಿಳಿದಿದ್ದರು ಸಹ ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಯಾವೊಬ್ಬ ಅಧಿಕಾರಿಗಳು ಬಂದು ಪರಿಶೀಲಿಸಿಲ್ಲ ಎನ್ನುವುದು ಇಲ್ಲಿನ ಜನರ ಗಂಭೀರ ಆರೋಪವಾಗಿದೆ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದ ಅಧಿಕಾರಿಗಳ ಈ ನಿರ್ಲಕ್ಷಧೋರಣೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ಸಕ್ಕರೆಯಿಂದ ಜನರಿಗೆ ಗಂಭೀರ ಸಮಸ್ಯೆ ಎದುರಾಗುವ ಮೊದಲು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ನೈಜವಾಗಿ ತನಿಖೆ ಮಾಡಿದಾಗ, ಈ ಅಕ್ರಮದಲ್ಲಿರುವ ಮುಖ ಬಯಲಾಗಲು ಸಾಧ್ಯ. ಜನರ ಜೀವನದ ಜೊತೆ ಚಲ್ಲಾಟವಾಡುವ ದುಷ್ಟ ಶಕ್ತಿಗಳ ಮಟ್ಟ ಹಾಕಲು ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ.
ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಿದರೆ ಮನೆ ತಂಬಾ ಪ್ಲಾಸ್ಟಿಕ್ ಸುಟ್ಟ ವಾಸನೆ ಬರುತ್ತದೆ. ಅಷ್ಟೆ ಅಲ್ಲ ಪಾತ್ರೆಯ ತಳಭಾಗದಲ್ಲಿ ಪ್ಲಾಸ್ಟಿಕ್‌ನಂತಹ ಪದಾರ್ಥ ಶೇಖರಣೆಯಾಗುತ್ತಿದೆ. ಇದರಿಂದ ನಾವಿದನ್ನು ಪ್ಲಾಸ್ಟಿಕ್ ಸಕ್ಕರೆ ಎಂದು ಕರೆಯುತ್ತಿದ್ದೇವೆ.
-ಶಕುಂತಲಾ, ಗ್ರಾಮಸ್ಥೆ.
ಗ್ರಾಮದಲ್ಲಿ ತಾಂಡವಾಡುತ್ತಿರುವ ಈ ಪ್ಲಾಸ್ಟಿಕ್ ಸಕ್ಕರೆ ಗ್ರಾಮಸ್ಥರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಇಡೀ ಗ್ರಾಮಕ್ಕೆ ಮಾರಕವಾಗಿರುವ ಈ ಪ್ಲಾಸ್ಟಿಕ್ ಸಕ್ಕರೆಯ ಮೂಲವನ್ನು ಪತ್ತೆ ಹಚ್ಚಿ ಇದರಲ್ಲಿ ಶಾಮೀಲಾದವರ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಬೇಕು.
-ಕರಿಯಪ್ಪ ತುಪ್ಪಲಕಟ್ಟಿ, ಕಿರಾಣಿ ವ್ಯಾಪರಸ್ಥ.