ಪಾರ್ವತಮ್ಮ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ
ಬೆಂಗಳೂರು, ಮೇ 31: ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಯಶಸ್ಸಿನ ಒಂದು ಭಾಗವೆ ಆಗಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಪ್ರತಿ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆಂಬ ನಾಣ್ಣುಡಿಗೆ ಉತ್ತಮ ಉದಾಹರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಸದಾಶಿವನಗರದಲ್ಲಿನ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಾರ್ವತಮ್ಮ ಅವರು ಮೂಲತಃ ನಮ್ಮ ಮೈಸೂರು ಜಿಲ್ಲೆಯವರು ಎಂದು ಸ್ಮರಿಸಿದ್ದಾರೆ.
ಎಂಬತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಹಣ ಮತ್ತು ಹೆಸರು ಎರಡನ್ನೂ ಗಳಿಸಿದ ಪ್ರತಿಭಾವಂತೆ. ಒಂದೆಡೆ ಕನ್ನಡ ಚಲನಚಿತ್ರರಂಗಕ್ಕೆ ಹಲವು ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಪರಿಚಯಿಸಿ, ಅವರಿಗೆ ಬದುಕು ಕಟ್ಟಿಕೊಟ್ಟ ಕೀರ್ತಿಯೂ ಅವರದ್ದು. ಮತ್ತೊಂದೆಡೆ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಮೌಲ್ಯವನ್ನು ವೃದ್ಧಿಸಿದ ಹಾಗೂ ವ್ಯಾಪ್ತಿಯನ್ನು ವಿಸ್ತರಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಾರ್ವತಮ್ಮ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಪಾರ್ವತಮ್ಮ ಅವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.