ವಿದ್ಯುತ್ ಶಾಕ್: ಕೆಎಸ್‌ಇಬಿ ನೌಕರ ಮೃತ್ಯು
ಮಂಜೇಶ್ವರ, ಮೇ 31: ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸುತ್ತಿದ್ದ ವೇಳೆ ಶಾಕ್ ತಗಲಿ ನೌಕರ ಮೃತಪಟ್ಟ ದಾರುಣ ಘಟನೆ ಬಂದ್ಯೋಡು ಸಮೀಪದ ಪಚ್ಚಂಬಳ ಪರಿಸರದಲ್ಲಿ ಸಂಭವಿಸಿದೆ.
ಮೂಲತಃ ಮಡಿಕೇರಿ ಇಂದಿರಾನಗರ ನಿವಾಸಿಯೂ ಇದೀಗ ಕಾಸರಗೋಡು ಅಣಂಗೂರು ಕಾಪಿಹಿತ್ತಿಲು ಬಳಿ ವಾಸವಾಗಿದ್ದ ಉದಯ ಕುಮಾರ್ (43) ಮೃತರು ಎಂದು ಗುರುತಿಸಲಾಗಿದೆ.
ಉಪ್ಪಳ ವಿದ್ಯುತ್ ಕಚೇರಿ ವ್ಯಾಪ್ತಿಯ ಪಚ್ಚಂಬಳ ಕಲ್ಪಾರೆ ಎಂಬಲ್ಲಿ ಮಂಗಳವಾರ ರಾತ್ರಿ 11.30ರ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಉದಯ ಕುಮಾರ್ ಉಪ್ಪಳ ವಿದ್ಯುತ್ ಕಚೇರಿಯಲ್ಲಿ ರಾತ್ರಿ ವೇಳೆಯ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು.
ಗಾಳಿ, ಮಳೆಗೆ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಇದರಿಂದ ಈ ಪ್ರದೇಶದಲ್ಲಿ ವಿದ್ಯುತ್ ಮೊಟಕುಗೊಂಡ ಬಗ್ಗೆ ನಾಗರಿಕರು ವಿದ್ಯುತ್ ಕಚೇರಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅದರ ದುರಸ್ತಿಗಾಗಿ ಕರೆ ಬಂದ ಅರ್ಧ ಗಂಟೆಯೊಳಗೆ ಸ್ಥಳಕ್ಕೆ ಭೇಟಿ ನೀಡಿದ ಉದಯ ಕುಮಾರ್ ಹಾಗೂ ಸಹಾಯಕ ಅಭಿಯಂತರ ನಿತೀಶ್ ದುರಸ್ತಿ ಕಾರ್ಯ ಕೈಗೊಂಡಿದ್ದರು. ಬಳಿಕ ವಿದ್ಯುತ್ ಕಂಬಕ್ಕೆ ಹತ್ತಿ ತಂತಿಯನ್ನು ಜೋಡಿಸುತ್ತಿದ್ದಂತೆ ಉದಯ ಕುಮಾರ್‌ಗೆ ಶಾಕ್ ತಗಲಿ ಅವರು ಬಿದ್ದಿದ್ದು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಮೃತಪಟ್ಟರು ಎಂದು ತಿಳಿದುಬಂದಿದೆ.
ತಂತಿ ದುರಸ್ತಿಯ ಮುಂಚಿತವಾಗಿ ಲೈನ್‌ನಿಂದ ಫ್ಯೂಸ್ ಬೇರ್ಪಡಿಸಲಾಗಿತ್ತೆಂದೂ ಆದರೂ ಆ ತಂತಿಯಿಂದ ಹೇಗೆ ಶಾಕ್ ತಗಲಿದೆಯೆಂದು ತಿಳಿದು ಬಂದಿಲ್ಲವೆಂದು ಅಧಿಕೃತರು ತಿಳಿಸಿದ್ದಾರೆ.
ಉದಯ ಕುಮಾರ್‌ರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತಲುಪಿಸಲಾಗಿದೆ.