ಕಡಬ ಪರಿಸರದಲ್ಲಿ ವ್ಯಾಪಕ ಡೆಂಗ್ಯೂ
ಕಡಬ, ಜೂ. 2: ಕಳೆದ ಬಾರಿ ಮಳೆಗಾಲದಲ್ಲಿ ಕಡಬ ಭಾಗದಲ್ಲಿ ಡೆಂಗ್ಯೂ ಮಹಾಮಾರಿ ಬಾಧಿಸಿ ಹಲವಾರು ಮಂದಿಯನ್ನು ಹೈರಾಣಾಗಿಸಿತ್ತು. ಮತ್ತೆ ಮುಂಗಾರು ಮಳೆ ಆರಂಭಕ್ಕೂ ಮುನ್ನ ಸುರಿಯುತ್ತಿರುವ ಮಳೆಯಿಂದಾಗಿ ಈ ವರ್ಷವೂ ಗ್ರಾಮೀಣ ಭಾಗದ ಜನತೆಗೆ ಡೆಂಗ್ಯೂ ಜ್ವರ ಅವರಿಸಿದ್ದು, ಗ್ರಾಮಸ್ಥರನ್ನು ಕಂಗಾಲಾಗಿಸಿದೆ.
ಸುಮಾರು 2 ತಿಂಗಳ ಹಿಂದೆ ಕಡಬ ಸಮೀಪದ ಪುಳಿಕುಕ್ಕು ಭಾಗದಲ್ಲಿ ಕಂಡುಬಂದ ಡೆಂಗ್ಯೂ ಹಾವಳಿಗೆ ಹಲವರು ತುತ್ತಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುವ ಮೂಲಕ ಕೋಡಿಂಬಾಳ ಪ್ರದೇಶಕ್ಕೂ ಹಬ್ಬಿದೆ. ಇನ್ನೊಂದೆಡೆ ಕಳೆದ ಒಂದು ತಿಂಗಳಿಂದ ಮರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟ್ರ ಹಾಗೂ 102 ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ತಲಾ ಒಬ್ಬರಂತೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ.
ಬಂಟ್ರ ಗ್ರಾಮ ವ್ಯಾಪ್ತಿಯ ಮುಂಚಿಕಾಪು, ಕಂಪ, ಕೇನ್ಯ, ಪಾಲೆತ್ತಡ್ಕ, ನೀರಾಜೆ, ದೇವರಮಾರು, ಕೆದಿಲ, ಪಿಲಿಮಜಲು, ಚಾಕೋಟೆಕೆರೆ, ಕೆಂಚಬಟ್ರೆ, ನೆಕ್ಕಿತ್ತಡ್ಕ, ಕುಡಲ ಮೊದಲಾದ ಪರಿಸರದಲ್ಲಿ ಡೆಂಗ್ಯೂ ಜ್ವರ ಬಾಧೆ ತೀವ್ರಗೊಂಡಿದೆ. ಡೆಂಗ್ಯೂ ಜ್ವರಕ್ಕೆ ಸಮರ್ಪಕ ಚಿಕಿತ್ಸೆಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳು ಲಭ್ಯವಾಗದೆ ರೋಗಿಗಳು ಪರದಾಡುವಂತಾಗಿದೆ.
ಹಲವಾರು ಉಪ್ಪಿನಂಗಡಿ, ನೆಲ್ಯಾಡಿ, ಪುತ್ತೂರಿನ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವಂತಾಗಿದೆ. ಕಡಬದಲ್ಲಿ ಈ ತಿಂಗಳಲ್ಲಿ ಸುಮಾರು 45 ಕ್ಕೂ ಅಧಿಕ ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಬಹುತೇಕಮಂದಿ ಬಂಟ್ರ ಗ್ರಾಮದವರದ್ದಾಗಿದೆ.
ಆರೋಗ್ಯ ಇಲಾಖೆಯಿಂದ ಜನಜಾಗೃತಿ:
ಈ ಬಗ್ಗೆ ಜಾಗೃತವಾಗಿರುವ ಆರೋಗ್ಯ ಇಲಾಖೆಯು ಜನಜಾಗೃತಿಯನ್ನು ಮೂಡಿಸುತ್ತಿದ್ದು, ಮರ್ಧಾಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯೂ ಸಾಥ್ ನೀಡುತ್ತಿದೆ. ಪರಿಸರಕ್ಕೆ ಆರೋಗ್ಯ ಇಲಾಖಾ ಉನ್ನತ ಮಟ್ಟದ ಅಧಿಕಾರಿಗಳು ಭೇಟ ನೀಡಿ ಪರಿಶೀಲನೆ ನಡೆಸಿದ್ದು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆ ಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ ಫಾಗಿಂಗ್ ನಡೆಸುತ್ತಿದ್ದಾರೆ. ಮರ್ಧಾಳ ಗ್ರಾಮ ಪಂಚಾಯತ್ ವತಿಯಿಂದ ಫಾಗಿಂಗ್ ಯಂತ್ರಕ್ಕೆ ಇಂಧನ, ಕಾರ್ಮಿಕರಿಗೆ ಕೂಲಿ ಹಾಗೂ ಮನೆ ಮನೆ ಭೇಟಿಗೆ ವಾಹನದ ವ್ಯವಸ್ಥೆಯನ್ನು ನೀಡಲಾಗಿದೆ. ಆದರೆ ಫಾಗಿಂಗ್ ನಡೆಸುವುದರಿಂದ ಪರಿಸರದಲ್ಲಿ ಹೊಗೆಯಾದಾಕ್ಷಣ ಮಾತ್ರಕ್ಕೆ ಪ್ರಯೋಜನವಾಗುತ್ತಿದೆಯಲ್ಲದೆ ಹೊಗೆ ನಿಂತ ಬಳಿಕ ಸೊಳ್ಳೆ ಮತ್ತೆ ಗುಂಯ್ಗುಟ್ಟುತ್ತವೆ.
ನೀರಡಿಕೆ, ಅಡಿಕೆ ಹಾಳೆಯಲ್ಲಿ ಸೊಳ್ಳೆ ಉತ್ಪತ್ತಿ:
ಡೆಂಗ್ಯೂ ಜ್ವರ ತೀರಾ ಗ್ರಾಮಾಂತರ ಭಾಗದಲ್ಲಿ ಅಧಿಕವಾಗಿ ಕಾಣಿಸಿಕೊಂಡಿದೆ. ಬಹುತೇಕ ಅಡಿಕೆ ರೈತರು ಹಣ್ಣಡಿಕೆಯನ್ನು ನೀರಿನಲ್ಲಿ ಹಾಕಿ ಇಡುತ್ತಾರೆ. ಇಲ್ಲಿ ಅಡಿಕೆ ಸೀದುಕೊಂಡು ಶೇಖರಣೆ ಆಗುವ ನೀರಿನಲ್ಲಿ ಏಡಿಸ್ ಈಜಿಪ್ಟೈ ಎಂಬ ಟೈಗರ್ ಸೊಳ್ಳೆ ಉತ್ಪತ್ತಿಯಾಗಿ ನಂತರ ಮನುಷ್ಯರಿಗೆ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಜ್ವರ ಭಾದಿಸುತ್ತಿದೆ. ಮತ್ತು ಅಡಿಕೆ ತೋಟಗಳಲ್ಲಿ ಅಲ್ಲಲ್ಲಿ ಅದರ ಹಾಳೆ ಬಿದ್ದಿರುತ್ತದೆ, ಅದರಲ್ಲಿ ನೀರು ನಿಂತು ಆ ಮೂಲಕವೂ ಈ ರೀತಿಯ ಸೊಳ್ಳೆ ಉತ್ಪತ್ತಿ ಆಗುತ್ತಿದ್ದೆ. ಉಳಿದಂತೆ ಎಳನೀರು ಸಿಪ್ಪೆ, ಟಯರ್ ಒಳಗಡೆ ನೀರು ನಿಂತು ಅದರ ಒಳಗಡೆ ಸೊಳ್ಳೆ ಉತ್ಪತ್ತಿ ಆಗುತ್ತಿದ್ದು, ಈ ಎಲ್ಲಾ ಕಾರಣದಿಂದ ಒಟ್ಟಿನಲ್ಲಿ ಸ್ವಚ್ಛತೆ ಇಲ್ಲದ ಕಡೆಗಳಲ್ಲಿ ಸೊಳ್ಳೆ ಉತ್ಪತ್ತಿ ಆಗಿ ಈ ಜ್ವರ ಭಾದೆಗೆ ಕಾರಣ ಆಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭೀತಿಯನ್ನುಂಟು ಮಾಡಿದ ಮರಣ
ಮರ್ಧಾಳ ಸಮೀಪದ ಕಂಪ ನಿವಾಸಿ ಜನಾರ್ಧನ ಎಂಬವರ ಪತ್ನಿ ಪುಷ್ಪಾವತಿ(37) ಜ್ವರದಿಂದಾಗಿ ಅಸ್ವಸ್ಥಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ವಾರದ ಹಿಂದೆ ಮೃತಪಟ್ಟಿದ್ದು, ಸ್ಥಳೀಯರಲ್ಲಿ ಭೀತಿಯನ್ನುಂಟು ಮಾಡಿದೆ. ಆದರೆ ಆಕೆ ಡೆಂಗ್ಯೂವಿನಿಂದಾಗಿ ಮೃತಪಟ್ಟಿದ್ದಾರೆನ್ನುವುದನ್ನು ಆರೋಗ್ಯ ಇಲಾಖೆಯು ನಿರಾಕರಿಸಿದ್ದು, ಆಕೆಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ ವರದಿ ಬಂದ ಬಳಿಕವೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಆರೋಗ್ಯ ಇಲಾಖೆಯ ಮೂಲಕಗಳು ತಿಳಿಸಿವೆ.
ಕಡಬ ಪರಿಸರದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ಯಾವ ರೋಗಿಗೂ ಮಾರಣಾಂತಿಕ ತೊಂದರೆ ಕಾಣಿಸಿಕೊಂಡಿಲ್ಲ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಜನಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಯಾರೂ ಆತಂಕಪಡಬೇಕಾಗಿಲ್ಲ.
ಡಾ ಸುಚಿತ್ರಾ ರಾವ್. ವೈದ್ಯಾಧಿಕಾರಿ, ಸಮುದಾಯ ಆಸ್ಪತ್ರೆ, ಕಡಬ