ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ವಿರುದ್ದ ಆಸ್ಪತ್ರೆ ಆಡಳಿತ ಮಂಡಳಿಯಿಂದ ದೂರು
ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಪ್ರಕರಣ
ಶಿವಮೊಗ್ಗ, ಜೂ. 4: ಇಲ್ಲಿನ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರ್ಡ್‌ನಿಂದ ಎಕ್ಸ್‌ರೇ ಕೊಠಡಿಗೆ ಕರೆದೊಯ್ಯಲು ಸಿಬ್ಬಂದಿ ವ್ಹೀಲ್ ಚೇರ್ ನೀಡಲು ನಿರಾಕರಿಸಿದ್ದರಿಂದ ವೃದ್ದ ಪತ್ನಿಯು ಅನಾರೋಗ್ಯ ಪೀಡಿತ ವಯೋವೃದ್ದ ಪತಿಯ ಕಾಲುಗಳನ್ನು ಹಿಡಿದು ಎಳೆದೊಯ್ಯುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ವ್ಯಕ್ತಿಯ ವಿರುದ್ದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 'ಈ ವೀಡಿಯೋ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ದುರುದ್ದೇಶದಿಂದ, ಉದ್ದೇಶಪೂರ್ವಕವಾಗಿ ಈ ವೀಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಶಂಕೆಯಿದೆ. ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆಯ ಹೆಸರು ಹಾಳುಗೆಡಿಸುವ ಕಾರಣದಿಂದ ಈ ವೀಡಿಯೋ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ವೀಡಿಯೋ ಚಿತ್ರೀಕರಣ ನಡೆಸಿದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕು’ ಎಂದು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿಯು ಜಿಲ್ಲಾ ರಕ್ಷಣಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದೆ ಎಂದು ತಿಳಿದುಬಂದಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಈ ದೂರನ್ನು ಸ್ವೀಕರಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಆದರೆ ಈ ದೂರಿನ ಆಧಾರದ ಮೇಲೆ ಆಸ್ಪತ್ರೆಯ ವ್ಯಾಪ್ತಿ ಬರುವ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಮಧ್ಯಾಹ್ನದವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲವೆಂಬ ಮಾಹಿತಿಯಿದ್ದು, ಅಧಿಕೃತವಾಗಿ ಪೊಲೀಸರು ತನಿಖೆ ಆರಂಭಿಸಿರುವ ಬಗ್ಗೆ ವಿವರಗಳು ಲಭ್ಯವಾಗಿಲ್ಲವಾಗಿದೆ. ಯುವಕನ ಮಾಹಿತಿಯಿದೆ: ವೀಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಯ ಸಮಗ್ರ ವಿವರ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿದೆ ಎಂದು ಹೇಳಲಾಗುತ್ತಿದೆ. ಆ ವ್ಯಕ್ತಿಯ ಕಡೆಯವರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅಮೀರ್‌ಸಾಬ್ ದಾಖಲಾಗಿದ್ದ ವಾರ್ಡ್‌ನಲ್ಲಿಯೇ ಆ ವ್ಯಕ್ತಿಯ ಕಡೆಯ ರೋಗಿಯು ಇದ್ದರು ಎಂದು ಹೇಳಲಾಗುತ್ತಿದೆ. ದಿನಕ್ಕೊಂದು ತಿರುವು: ವೃದ್ದ ದಂಪತಿಗಳ ಪರದಾಟದ ವೀಡಿಯೋ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಡೀ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಈ ಸುದ್ದಿ ಬಿತ್ತರವಾಗಿತ್ತು. ಇದರಿಂದ ಮೆಗ್ಗಾನ್ ಆಸ್ಪತ್ರೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ನಡುವೆ ಆಸ್ಪತ್ರೆ ಆಡಳಿತ ಮಂಡಳಿಯು ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಆಸ್ಪತ್ರೆಯ ನಾಲ್ವರು ಶುಶ್ರೂಷಕರು ಹಾಗೂ ಓರ್ವ ಡಿ ಗ್ರೂಪ್ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿತ್ತು. ಬೆಂಗಳೂರಿಗೆ: ಈ ಎಲ್ಲ ವಿದ್ಯಮಾನಗಳ ನಡುವೆಯೇ ಸರ್ಕಾರಿ ಮೆಡಿಕಲ್ ಕಾಲೇಜು ಡೀನ್ ಸುಶೀಲ್‌ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರು ರವಿವಾರ ಬೆಂಗಳೂರಿಗೆ ತೆರಳಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಪ್ರಕರಣದ ಕುರಿತಂತೆ ಸವಿವರವಾದ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಹಿನ್ನೆಲೆ: ನಗರದ ಇಮಾಮ್‌ಬಾಡ ಬಡಾವಣೆಯ ನಿವಾಸಿಯಾದ ಅಮೀರ್‌ಸಾಬ್ ಎಂಬವರು ಕಳೆದ ಕೆಲ ದಿನಗಳ ಹಿಂದೆ ಉಬ್ಬಸದ ಕಾರಣದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಎಕ್ಸ್‌ರೇ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ಎಕ್ಸ್‌ರೇ ಕೊಠಡಿಗೆ ಕರೆದೊಯ್ಯಲು ವ್ಹೀಲ್ ಚೇರ್ ನೀಡಿರಲಿಲ್ಲ. ಇದರಿಂದ ಫಮಿದಾರವರು ತಮ್ಮ ಪತಿಯನ್ನು ನೆಲದ ಮೇಲೆಯೇ ಅವರ ಕಾಲುಗಳನ್ನು ಹಿಡಿದು ದರದರನೇ ಎಳೆದೊಯ್ದಿದ್ದರು. ಇದನ್ನು ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೋರ್ವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲು ಪ್ರಕರಣದ ಕೇಂದ್ರಬಿಂಧು ಅಮೀರ್ ಸಾಬ್ (72) ರವರನ್ನು ರವಿವಾರ ಬೆಳಿಗ್ಗೆ ಮೆಗ್ಗಾನ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಮೀರ್‌ರವರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನ್ಯೂಮಾನ್ಸ್ ಕರೆದೊಯ್ಯಲು ಆಸ್ಪತ್ರೆ ವೈದ್ಯರು ಶಿಫಾರಸ್ಸು ಮಾಡಿದ್ದರು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ ತಜ್ಞ ನ್ಯೂರೋ ಸರ್ಜನ್ ಇರುವ ಕಾರಣದಿಂದ ಈ ಆಸ್ಪತ್ರೆಗೆ ದಾಖಲಿಸುವ ನಿರ್ಧಾರವನ್ನು ಕುಟುಂಬದವರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಮೀರ್‌ರವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ. ಯಾವುದೇ ತೊಂದರೆಯಿಲ್ಲವೆಂದು ಖಾಸಗಿ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಅಮೀರ್‌ರವರ ಚಿಕಿತ್ಸೆಗೆ ಕೆಲ ಸಂಘಟನೆಗಳು ಸಹಾಯಹಸ್ತ ನೀಡುತ್ತಿವೆ. ಸಿ. ಸಿ. ಕ್ಯಾಮರಾದ ದೃಶ್ಯಾವಳಿ ಸಂಗ್ರಹ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಪ್ರತಿಯೊಂದು ವಿಭಾಗದಲ್ಲಿಯೂ ಸಿ. ಸಿ. ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಘಟನೆ ನಡೆದ ಆಸ್ಪತ್ರೆಯ ಸ್ಥಳದ ಪ್ರದೇಶದಲ್ಲಿರುವ ಸಿ. ಸಿ. ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿ ಪರಿಶೀಲನೆ ಮಾಡುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಘಟನೆ ನಡೆದ ದಿನ ಹಾಗೂ ಅದರ ಹಿಂದಿನ ಕೆಲ ದಿನಗಳ ವೀಡಿಯೋ ದೃಶ್ಯಾವಳಿಗಳನ್ನು ಈಗಾಗಲೇ ಆಸ್ಪತ್ರೆ ಆಡಳಿತ ಮಂಡಳಿಯು ಪರಿಶೀಲನೆ ಮಾಡಿದ್ದು, ಕೆಲ ಮಹತ್ವದ ವಿವರಗಳು ಸಿ. ಸಿ. ಕ್ಯಾಮರಾದ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಇದರ ಆಧಾರದ ಮೇಲೆ ಆಸ್ಪತ್ರೆ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ ಎಂದು ಹೇಳಲಾಗುತ್ತಿದೆ.
Next Story