ಓ ಮೆಣಸೇ…!
ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಪುರುಷ ಅಧ್ಯಕ್ಷರು ವಿಚಾರಣೆ ನಡೆಸುವುದು ಸರಿಯಲ್ಲ - ತಾರಾ ಅನುರಾಧಾ, ವಿ.ಪ.ಸದಸ್ಯೆ
ವಿಚಾರಣೆ ನಡೆಸಬೇಕಾದುದು ದೌರ್ಜನ್ಯ ನಡೆಸಿದ ಪುರುಷರನ್ನಲ್ಲವೇ?
---------------------
ಅಸ್ಪಶ್ಯ ಮುಕ್ತ ಭಾರತ ನಿರ್ಮಿಸುವುದು ನಮ್ಮ ಪ್ರಮುಖ ಕಾಯಕ - ಪ್ರವೀಣ್ ತೊಗಾಡಿಯಾ, ವಿ.ಹಿಂ.ಪ. ಕಾರ್ಯಾಧ್ಯಕ್ಷ
ಅಂದರೆ ದಲಿತರ ಕೊಲೆಗಳು ಹೆಚ್ಚುತ್ತಿರುವ ಕಾರಣ ತಿಳಿಯಿತು ಬಿಡಿ.
---------------------
ನಾವು ತ್ಯಾಜ್ಯವನ್ನು ಕೇವಲ ಕಸ ಎಂದು ಪರಿಗಣಿಸಬಾರದು -ನರೇಂದ್ರ ಮೋದಿ,
ಪ್ರಧಾನಿ ಪ್ರಧಾನಿಯೆಂದೇ ಕರೆದಿದ್ದೇವೆ, ಸಾಲದೇ?
---------------------
ದ.ಕ. ಜಿಲ್ಲೆಯ ಜನರು ಸೇವಾ ಮನೋಭಾವ ಉಳ್ಳವರು - ನಳಿನ್ ಕುಮಾರ್ ಕಟೀಲು,
ಸಂಸದ ಉಚಿತವಾಗಿ ಜಿಲ್ಲೆಗೆ ಬೆಂಕಿ ಹಚ್ಚುವುದು ಯಾವ ಸೇವೆಯ ಭಾಗ?
---------------------
ಭಗವಾನ್ ಬಾಹುಬಲಿ ಮಹಾ ಕಾವ್ಯ ರಚನೆಯ ಈ ನಾಲ್ಕೂವರೆ ವರ್ಷಗಳಿಂದ ಮಾಂಸಾಹಾರ ತ್ಯಜಿಸಿದ್ದೇನೆ -ವೀರಪ್ಪ ಮೊಯ್ಲಿ, ಸಂಸದ
ಬಟ್ಟೆಯೂ ಧರಿಸದೆ ನಿಂತು ಕೊಂಡೇ ಬರೆದಿದ್ದೇನೆ ಎಂದಿಲ್ಲವಲ್ಲ, ಪುಣ್ಯ.
---------------------
ದ.ಕ. ಜಿಲ್ಲೆಯ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಈ ಹೊತ್ತಿಗಾಗಲೇ ಜೈಲಿನಲ್ಲಿರಬೇಕಾಗಿತ್ತು - ಶ್ರೀರಾಮ ರೆಡ್ಡಿ, ಸಿಪಿಎಂ ರಾಜ್ಯ ಕಾರ್ಯದರ್ಶಿ
ಶಾಖೆಯಲ್ಲಿರಬೇಕಾದವರು ಪೊಲೀಸ್ ಠಾಣೆಯಲ್ಲಿ ಖಾಕಿ ಧರಿಸಿ ಕೂತರೆ ಇನ್ನೇನಾಗುತ್ತದೇ?
---------------------
ಈ ದೇವೇಗೌಡ ಏನೆಂಬುದನ್ನು ಕಾಲ ಬಂದಾಗ ತೋರಿಸುತ್ತೇನೆ - ದೇವೇಗೌಡ,ಮಾಜಿ ಪ್ರಧಾನಿ
ಕಾಲ ಎದುರು ಬಂದು ನಿಂತಾಗ ನಾವು ಏನನ್ನು ತೆಗೆದು ತೋರಿಸಿದರೂ ಪ್ರಯೋಜನವಿಲ್ಲ.
---------------------
ಯಡಿಯೂರಪ್ಪ ಮೂರನೆ ಬಾರಿಗೆ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರು ಖಚಿತ - ಅನಂತ್ ಕುಮಾರ್, ಕೇಂದ್ರ ಸಚಿವ
ಯಾವ ರಾಜ್ಯಕ್ಕೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲವಂತೆ.
---------------------
ನನ್ನ ಮನೆಯ ಅಡುಗೆಯವಳು ದಲಿತ ಮಹಿಳೆ -ಯಡಿಯೂರಪ್ಪ, ಮಾಜಿ ಮುಖ್ಯ ಮಂತ್ರಿ
ಇಂತಹ ಹೇಳಿಕೆ ಕೊಟ್ಟದ್ದಕ್ಕೆ ದಲಿತರ ಮನೆಯಲ್ಲಿ ಮುನಿಸಿಕೊಂಡ ಶೋಭಾ ಅವರು ಊಟ ಮಾಡದೆ ಉಪವಾಸ ಎಂದದ್ದು.
---------------------
ಗೋ ಮಾರಾಟ ನಿಷೇಧ ಕಾಯ್ದೆ ಬಲವಂತದ ಮತಾಂತರದಂತಿದೆ - ಡಾ.ಎಚ್.ಸಿ.ಮಹದೇವಪ್ಪ ,
ಸಚಿವ ಬಹುಶಃ ಗೋವುಗಳಿಗೆ ಬಲವಂತವಾಗಿ ಜನಿವಾರ ಹಾಕುವ ಪ್ರಯತ್ನ.
---------------------
ತೆರಿಗೆ ವಂಚಿಸುವವರಿಗೆ ಇನ್ನು ಉಳಿಗಾಲವಿಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ
ತೆರಿಗೆ ವಂಚನೆ ಒಂದು ಬಿಟ್ಟು ಉಳಿದೆಲ್ಲ ವಂಚನೆಗೆ ನಿಮ್ಮ ಸರಕಾರದಲ್ಲಿ ಅವಕಾಶವಿದೆ.
---------------------
ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ. ಸದಸ್ಯ
ಹಾಗಾದರೆ ಒಂದಿಷ್ಟು ಸಾಹಿತ್ಯ ಓದಿ ಇನ್ನಾದರೂ ವ್ಯಕ್ತಿತ್ವ ರೂಪಿಸಿಕೊಳ್ಳಬಾರದೇ?
---------------------
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದನ್ನು ತಡೆಯುವ ಶಕ್ತಿ ಈ ಭೂಮಿ ಮೇಲೆ ಯಾರಿಗೂ ಇಲ್ಲ - ಸಾಕ್ಷಿ ಮಹಾರಾಜ್,ಬಿಜೆಪಿ ಮುಖಂಡ
ಶ್ರೀರಾಮನಿಗೇ ನಿಮ್ಮ ಸವಾಲೇ?
---------------------
ಮೋದಿ ಮತ್ತು ಅಮಿತ್ ಶಾ ಆಟ ಕರ್ನಾಟಕದಲ್ಲಿ ನಡೆಯೋಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಆಟಕ್ಕೆ ನಿಮ್ಮನ್ನು ಸೇರಿಸಿಕೊಂಡರೆ ಸಹಕರಿಸುತ್ತೀರಾ?
---------------------
ಚುನಾವಣೆ ಮುನ್ನ ಬಿಜೆಪಿ ನೀಡಿದ ಆಶ್ವಾಸನೆಗಳೆಲ್ಲಾ ಕೇವಲ ಲಾಲಿಪಾಪ್ ಎಂದು ಸಾಬೀತಾಗಿದೆ - ಉದ್ಧವ್ ಠಾಕ್ರೆ , ಶಿವ ಸೇನೆ ಮುಖ್ಯಸ್ಥ
ಲಾಲಿಪಾಪ್‌ನ್ನು ರಾಷ್ಟ್ರೀಯ ಆಹಾರವೆಂದು ಶೀಘ್ರವೇ ಘೋಷಿಸಲಿದ್ದಾರೆ.
---------------------
ಬಹು ಸಂಖ್ಯಾತ ಮತೀಯವಾದ ದೇಶಕ್ಕೆ ಅಪಾಯ - ರಮಾನಾಥ ರೈ , ಸಚಿವ
ಮತೀಯ ಹಿಂಸೆಯ ಸಂದರ್ಭದಲ್ಲಿ ನಿಮ್ಮ ಮೌನ ಅವೆಲ್ಲಕ್ಕಿಂತ ಅಪಾಯ.
---------------------
ಗೃಹ ಖಾತೆ ತಪ್ಪುವುದರಿಂದ ಬೇಸರವಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಬೇಸರವೆಲ್ಲ ಮುಖ್ಯಮಂತ್ರಿ ಹುದ್ದೆ ತಪ್ಪಿರುವುದಕ್ಕೆ ಅಲ್ಲವೇ?
---------------------
ಇಂದು ಹೆಚ್ಚಿನವರಿಗೆ ಹಳೆಯದು ಬೇಡವಾಗಿದೆ - ವಿಶ್ವೇಶ ತೀರ್ಥ ಸ್ವಾಮೀಜಿ,ಪೇಜಾವರ ಮಠ
ಹೌದು. ಹಳೆಯದು ಬೇಡವೆಂದೇ ಮನುಶಾಸ್ತ್ರವನ್ನು ತಿರಸ್ಕರಿಸಿ, ಸಂವಿಧಾನವನ್ನು ಸ್ವೀಕರಿಸಿದ್ದು.
---------------------
ಗೋ ರಕ್ಷಣೆಗಾಗಿ ಬಂದೂಕು ಹಿಡಿಯಲೂ ಸಿದ್ಧ - ಬಸವನಗೌಡ ಪಾಟೀಲ ಯತ್ನಾಳ್, ವಿ.ಪ. ಸದಸ್ಯ
ಬಂದೂಕು ಹಿಡಿದು ಗಡಿಗೆ ತೆರಳಿ ದೇಶರಕ್ಷಣೆ ಮಾಡಬಾರದೇ?
---------------------
ಗಂಡು ನವಿಲು ಆಜೀವ ಬ್ರಹ್ಮಚಾರಿ -ನ್ಯಾ.ಶರ್ಮಾ,ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ
ಬಹುಶಃ ನರೇಂದ್ರ ಮೋದಿಯವರಂತೆ.
---------------------
ನಾವೇನು ಬಿಜೆಪಿಯವರ ಹಾಗೆ ಬೀದಿಯಲ್ಲಿ ಜಗಳ ಆಡುವುದಿಲ್ಲ - ದಿನೇಶ್ ಗುಂಡೂರಾವ್,
ಕೆಪಿಪಿಸಿ ಕಾರ್ಯಾಧ್ಯಕ್ಷ ಅಂದರೆ ಮನೆಯೊಳಗೆ ಜಟಾಪಟಿ ನಡೆಯುತ್ತದೆ ಎಂದಾಯಿತು.
---------------------
2019ರಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ - ಗಾಲಿ ಜನಾರ್ದನ ರೆಡ್ಡಿ,
ಮಾಜಿ ಸಚಿವ ಜೈಲಿಗೆ ಹೋಗದಂತೆ ಶಕ್ತಿ ಮೀರಿ ಶ್ರಮಿಸಿ ಎಂದು ದಿಲ್ಲಿ ಬಿಜೆಪಿ ವರಿಷ್ಠರಿಗೆ ಮನವಿಯೇ?
---------------------
ಕೇಂದ್ರ ಸರಕಾರಕ್ಕೆ ಧೈರ್ಯ ಇದ್ದರೆ ಗೋ ಮಾಂಸ ರಫ್ತು ನಿಲ್ಲಿಸಲಿ - ಯು.ಟಿ.ಖಾದರ್, ಸಚಿವ
ಗೋರಕ್ಷಕರ ಪರವಾಗಿ ಸುಪ್ರೀಂಕೋರ್ಟಿಗೆ ಹೇಳಿಕೆ ನೀಡುವಾಗ ನಿಮ್ಮ ಸರಕಾರದ ಧೈರ್ಯ ಎಲ್ಲಿತ್ತು?.