ಕೋಮುವಾದದ ಕ್ಯಾನ್ಸರ್‌ಗೆ ಮಾನವೀಯ ಕಿಮೋಥೆರಪಿ
ಈ ಹೊತ್ತಿನ ಹೊತ್ತಿಗೆ
ಅಲೋಕ್ ಭಲ್ಲಾ ಸಂಪಾದಿಸಿರುವ ‘ಧರೆ ಹೊತ್ತಿ ಉರಿದಾಗ’ ಭಾರತ ವಿಭಜನೆಯ ದುರಂತ ಕಥೆಗಳ ಎರಡನೆ ಸಂಪುಟದಲ್ಲಿ ಒಟ್ಟು 23 ಕತೆಗಳಿವೆ. ಅಶ್ಫಾಕ್ ಅಹ್ಮದ್, ನರೇಂದ್ರನಾಥ ಮಿತಾ, ಸಾದತ್ ಹಸನ್ ಮಾಂಟೋ, ಎಸ್. ಎಚ್. ವಾತ್ಸಾಯನ ಅಜ್ಞೇಯ, ಇಂತಿಝಾರ್ ಹುಸೈನ್, ಆತಿಯಾ ಹುಸೈನ್, ಸುರಯ್ಯಾ ಖಾಸಿಂ, ಮೋಹನ್ ರಾಕೇಶ್, ರಮೇಶ ಚಂದ್ರ ಸೇನ್, ಕೃಷ್ಣಾ ಸೋಬಿ, ಇಬ್ರಾಹಿಂ ಜಾಲೀಸ್, ಖ್ವಾಜಾ ಅಹ್ಮದ್ ಅಬ್ಬಾಸ್, ಮಸೂದ್ ಅಶರ್, ಲಲಿತಾಂಬಿಕಾ ಅಂತರ್‌ಜನಮ್ ಮೊದಲಾದ ಖ್ಯಾತ ಲೇಖಕ, ಲೇಖಕಿಯರು ವಿಭಜನೆಯ ಸಂದರ್ಭದ ಹಿಂಸಾ ರಾಜಕೀಯ, ಮನುಷ್ಯನ ಕ್ರೌರ್ಯ, ಅದಕ್ಕೆ ಬಲಿಯಾಗುವ ಅಮಾಯಕ ಜೀವಗಳು ಮತ್ತು ಆ ಕ್ರೌರ್ಯದ ಮಧ್ಯೆಯೂ ಅಲ್ಪಸ್ವಲ್ಪ ಜೀವ ಉಳಿಸಿಕೊಳ್ಳುವ ಮನುಷ್ಯತ್ವಗಳ ಬಗ್ಗೆ ಬರೆಯುತ್ತಾರೆ. ಹಿಂದಿ, ಉರ್ದು, ಪಂಜಾಬಿ, ಪಸ್ತೋ, ಬೆಂಗಾಲಿ, ಇಂಗ್ಲಿಷ್ ಮೊದಲಾದ ಭಾಷೆಗಳಿಂದ ಇಲ್ಲಿರುವ ಕತೆಗಳನ್ನು ಆಯ್ದುಕೊಳ್ಳಲಾಗಿದೆ.
ಇಲ್ಲಿ ಎಲ್ಲರು ಆಯ್ದುಕೊಂಡಿರುವ ವಸ್ತು ಒಂದೇ ಆಗಿದ್ದರೂ ವಿವಿಧ ಭಾಷೆಗಳಲ್ಲಿ ಅದರ ನಿರೂಪಣೆ ವಿಭಿನ್ನವಾಗಿವೆ. ಕತೆ ಹೇಳುವವರಿಗೆ ಧರ್ಮವಿಲ್ಲ. ಇಲ್ಲಿ ಕತೆ ಹೇಳುವವರಲ್ಲಿ ಬೇರೆ ಬೇರೆ ಧರ್ಮಕ್ಕೆ ಸೇರಿದವರಿದ್ದಾರೆ. ಮಹಿಳಾ ಕತೆಗಾರ್ತಿಯರೂ ಇದ್ದಾರೆ. ಮಹಿಳೆಯರಲ್ಲಿಯೂ ಮುಸ್ಲಿಮ್ ಹಿನ್ನೆಲೆಯ ಕತೆಗಾರರ ನಿರೂಪಣೆ ಹೊಸ ಬಗೆಯಲ್ಲಿದೆ. ಆದುದರಿಂದಲೇ ಒಂದೇ ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಈ ಸಂಪುಟ ನೋಡುತ್ತದೆ. ಈ ಕತೆಗಳನ್ನು ‘ರಾ.ಹು. ಅವರು ಈ ಕತೆಗಳ ಉದ್ದೇಶವನ್ನೂ ಹೀಗೆ ಹಂಚಿಕೊಳ್ಳುತ್ತಾರೆ ‘‘ಹಿಂದೆ ಎಂದೋ ಆಗಿ ಹೋದ ಮತ್ತೆಂದೂ ನೆನಪಿಸಿಕೊಳ್ಳಬಾರದಾದ ಪಾಶವೀ ಘಟನೆಗಳ ಕುರಿತು ಬರೆದ ಕತೆಗಳನ್ನು ನಾವೇಕೆ ಓದಿ ಮನಸ್ಸು ಕಲಕಿಸಿಕೊಳ್ಳಬೇಕು? ಎಂಬ ಪ್ರಶ್ನೆ ಏಳುವುದು ಸಹಜ. ಧರ್ಮಾಂಧತೆಯನ್ನು ಆಧರಿಸಿದ ಕೋಮುವಾದವು ಒಂದು ಕ್ಯಾನ್ಸರ್ ಎಂಬುದು ನಿರ್ವಿವಾದ. ಅದನ್ನು ಮುಚ್ಚಿಡುವುದರ ಮೂಲಕ ಗುಣಪಡಿಸಲು ಸಾಧ್ಯವಿಲ್ಲ. ಆ ದುರ್ಗಂತಿಯ ಮೇಲೆ ಮಾನವೀಯ ಎಕ್ಸರೇಗಳನ್ನು ಹಾಯಿಸುವ ಮೂಲಕ ಸಮುಚಿತವಾದ ಕಿಮೋಥೆರಪಿ ಕೈಗೊಳ್ಳುವ ಮೂಲಕವೇ ಆ ದುಷ್ಟ ವ್ರಣವನ್ನು ಗುಣ ಪಡಿಸಲು ಸಾಧ್ಯ’’
ಲೇಖಕರ ಮೇಲಿನ ಮಾತು ಅಕ್ಷರಶಃ ಸತ್ಯ. ಅಲೋಕ್ ಭಲ್ಲಾ ಅವರ ‘ಧರೆ ಹೊತ್ತಿ ಉರಿದಾಗ’ ಮೂರೂ ಸಂಪುಟಗಳು ಇಂದು ಅತ್ಯವಶ್ಯವಾಗಿ ನಾವು ಮತ್ತೆ ಮತ್ತೆ ಓದಬೇಕಾಗಿದೆ. ವಿಭಜನೆಯೆನ್ನುವುದು ಬರೇ ಭೂಮಿಗೆ ಸಂಬಂಧಿಸಿದ ವಿಷಯವಲ್ಲ. ಅದು ಮನಸ್ಸಿಗೆ ಸಂಬಂಧಿಸಿದ್ದು. ಅಂತಹ ವಿಭಜನೆಯ ಕ್ರೌರ್ಯವನ್ನು ವರ್ತಮಾನ ದಲ್ಲೂ ನಾವು ಕಾಣುತ್ತಿದ್ದೇವೆ. ಮುಂದೆ ಇದು ಇನ್ನಷ್ಟು ಹೆಚ್ಚಬಹುದು. ಈ ಕೃತಿಯ ಓದು ನಮ್ಮಿಳಗಿನ ಮನುಷ್ಯತ್ವವನ್ನು ಎಚ್ಚರಿಸುತ್ತದೆ. ಆರಿದ ಗಾಯವನ್ನು ಮತ್ತೆ ಎಬ್ಬಿಸುವ ಕೆಲಸ ಎಷ್ಟು ಅಪಾಯಕಾರಿಯಾದುದು ಎನ್ನುವುದನ್ನು ನಮಗೆ ಪ್ರತೀ ಕತೆಗಳೂ ಹೇಳುತ್ತವೆ. ಸೃಷ್ಟಿ ಪಬ್ಲಿಕೇಶನ್ ಹೊರತಂದಿರುವ ಈ ಮೂರು ಸಂಪುಟಗಳನ್ನು ಪಡೆಯಬೇಕಾದರೆ 98450 96668 ದೂರವಾಣಿಯನ್ನು ಸಂಪರ್ಕಿಸಬಹುದು.