varthabharthi


ಮುಂಬೈ ಮಾತು

ಶಾಲಾ ಶುಲ್ಕ ಏರಿಕೆ ತಡೆಯಲು ಸಾಮಾಜಿಕ ಜಾಲತಾಣಗಳ ಬಳಕೆ, ಬಯಲು ಶೌಚದವರಿಗೆ ‘ಗುಡ್ ಮಾರ್ನಿಂಗ್!

ವಾರ್ತಾ ಭಾರತಿ : 6 Jun, 2017

ಮುಂಬೈಯಲ್ಲಿ ಶಿಕ್ಷಣ ಪಡೆಯುವುದು ದಿನೇ ದಿನೇ ದುಬಾರಿ ಖರ್ಚಿನ ಬಾಬ್ತು ಆಗುತ್ತಿದ್ದು, ಶಾಲಾ ಆಡಳಿತದವರು ಪ್ರತೀ ವರ್ಷ ಅನಧಿಕೃತ ರೂಪದಿಂದ ಶಾಲಾಶುಲ್ಕ ಏರಿಸುತ್ತಲೇ ಬರುತ್ತಿದ್ದಾರೆ. ಈ ಕಾರಣ ಮಧ್ಯಮ, ಕೆಳಮಧ್ಯಮ ವರ್ಗದವರು ಪ್ರತೀವರ್ಷವೂ ತಮ್ಮ ಮಕ್ಕಳ ವಿದ್ಯಾಭ್ಯಾಸ ವಿಷಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಲೇ ಬಂದಿದ್ದಾರೆ. ನಗರದ ಅನೇಕ ಶಾಲೆಗಳಲ್ಲಿ ಪಾಲಕರ ಸಭೆ ಕರೆಯದೆಯೇ ಶುಲ್ಕ ಏರಿಸುತ್ತಿದ್ದಾರೆ. ಸಾಮಾಜಿಕ ಸಂಸ್ಥೆ ‘ಫೋರಂ ಫಾರ್ ಫೇರ್‌ನೆಸ್ ಇನ್ ಎಜುಕೇಶನ್’(ಎಫ್‌ಎಫ್‌ಇ) ಅಧ್ಯಕ್ಷ ಜಯಂತ್ ಜೈನ್ ಈ ಬಗ್ಗೆ ತಿಳಿಸುತ್ತಾ ಅನೇಕ ಶಾಲೆಗಳ ಆಡಳಿತವು ಶುಲ್ಕ ಹೊರತಾಗಿ ಇನ್ನಿತರ ಕೆಲವು ಖರ್ಚುಗಳನ್ನು ಮುಂದಿಟ್ಟು ವಸೂಲಿ ಮಾಡುತ್ತಿದ್ದಾರೆ. ಶಿಕ್ಷಣ ಮಂತ್ರಿ ಶಾಲೆಗಳ ಆಡಳಿತಗಳು ಶುಲ್ಕ ಏರಿಸುವುದಿಲ್ಲವೆಂದು ಪಾಲಕರಿಗೆ ಮೌಖಿಕ ಆಶ್ವಾಸನೆ ಕೂಡಾ ನೀಡಿದ್ದರು. ಈ ಬಗ್ಗೆ ಪಾಲಕರು ಆಝಾದ್ ಮೈದಾನ ದಲ್ಲಿ ಆಂದೋಲನದ ಮೂಲಕವೂ ಗಮನ ಸೆಳೆದಿದ್ದರು. ಇದೀಗ ಸೋಶಿಯಲ್ ಮೀಡಿಯಾಗಳಾದ ಫೇಸ್‌ಬುಕ್, ವಾಟ್ಸ್ ಆ್ಯಪ್, ಟ್ವಿಟರ್ ಮೊದಲಾದುವುಗಳ ಮೂಲಕ ಪಾಲಕರು ಈ ಬಗ್ಗೆ ಸರಕಾರದ ಶಿಕ್ಷಣಮಂತ್ರಿಯ ಗಮನ ಸೆಳೆಯುತ್ತಿದ್ದಾರೆ.

* * *

ಬಯಲು ಶೌಚಾಲಯಕ್ಕೆ ತೆರಳುವವರಿಗೆ ‘ಗುಡ್‌ಮಾರ್ನಿಂಗ್’

  ಸ್ವಚ್ಛ ಮಹಾರಾಷ್ಟ್ರ ಅಭಿಯಾನದಂತೆ ನಗರದಲ್ಲಿ ಕೊಳಕುಂಟು ಮಾಡುವವರನ್ನು ನಿಯಂತ್ರಿಸಲು ಸರಕಾರವು ‘ಗಾಂಧಿಗಿರಿ’ಯನ್ನು ಅನುಸರಿಸಲು ನಿರ್ಣಯಿಸಿದೆ. ಅದರಂತೆ ರಾಜ್ಯದ ನಗರ ಭಾಗಗಳಲ್ಲಿ ಬಯಲು ಶೌಚಾಲಯಕ್ಕೆ ತೆರಳುವವರಿಗೆ ‘ಗುಡ್ ಮಾರ್ನಿಂಗ್’ ಹೇಳಲಾಗುತ್ತಿದೆ! ಇದಕ್ಕಾಗಿ ಸರಕಾರವು ‘ಗುಡ್ ಮಾರ್ನಿಂಗ್’ ಘಟಕವನ್ನು ರಚಿಸುತ್ತಿದೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಗಳಲ್ಲಿನ ಸದಸ್ಯರನ್ನು ಗುಡ್‌ಮಾರ್ನಿಂಗ್ ತಂಡಕ್ಕೆ ಸೇರ್ಪಡೆಗೊಳಿಸುತ್ತಿದೆ. ಬಯಲು ಶೌಚಕ್ಕೆ ತೆರಳುವವರಿಗೆ ಮನವರಿಕೆ ಮಾಡಿಸುವ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ವಿಭಿನ್ನ ಸಮಾಜ ಸೇವಕ ಸಂಸ್ಥೆಗಳ ಪ್ರತಿನಿಧಿಗಳು ಈ ಗುಡ್ ಮಾರ್ನಿಂಗ್ ತಂಡದಲ್ಲಿರುವರು.

ಇವರೆಲ್ಲ ಬಯಲು ಶೌಚಕ್ಕೆ ತೆರಳುವವರಿಗೆ ಬಯಲು ಶೌಚದಿಂದ ಉಂಟಾಗಬಹುದಾದ ರೋಗಗಳು, ಮಾಲಿನ್ಯ....ಇತ್ಯಾದಿಗಳ ಬಗ್ಗೆ ಮನವರಿಕೆ ಮಾಡುತ್ತಾರೆ. ಗುಡ್ ಮಾರ್ನಿಂಗ್ ಘಟಕವು ಮುಂದಿನ ಅಕ್ಟೋಬರ್ 2, 2017ರ ತನಕ ಪ್ರತೀದಿನ ಬೆಳಗ್ಗೆ ನಗರದಲ್ಲಿ ಸುತ್ತಾಡಿ ಬಯಲು ಶೌಚಕ್ಕೆ ತೆರಳುವವರನ್ನು ಗಮನಿಸುತ್ತಾರೆ. ಈ ಕುರಿತಂತೆ ನಗರ ವಿಕಾಸ ಇಲಾಖೆ ವತಿಯಿಂದ ಸುತ್ತೋಲೆ ಜಾರಿಗೊಳಿಸಲಾಗಿದೆ. ಈಗಾಗಲೇ ಸ್ವಚ್ಛ ಮಹಾರಾಷ್ಟ್ರ ಅಭಿಯಾನದಂತೆ ನಗರದ ಭಾಗಗಳಲ್ಲಿ ಶೌಚಾಲಯ ರಹಿತ ಕುಟುಂಬಗಳನ್ನು ಕಂಡು ಹುಡುಕಿ 8.32 ಲಕ್ಷ ಕುಟುಂಬಗಳಿಗೆ ವೈಯಕ್ತಿಕ, ಸಾಮೂಹಿಕ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಒದಗಿಸಲಾಗಿದೆ.
* * *

ಎಸ್ಕಲೇಟರ್ ಹಗರಣ!

ಮುಂಬೈಯ ಲೋಕಲ್ ರೈಲ್ವೆ ನಿಲ್ದಾಣಗಳಲ್ಲಿ ಇದೀಗ ಎಸ್ಕಲೇಟರ್ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿನ ಎತ್ತರದ ಸೇತುವೆಗೆ ಮೆಟ್ಟಿಲು ಹತ್ತಿ ಹೋಗಲು ಹಿರಿಯ ಪ್ರಯಾಣಿಕರಿಗೆ ಕಷ್ಟವಾಗುತ್ತಿತ್ತು. ಈಗ ಅನೇಕ ಕಡೆ ಎಸ್ಕಲೇಟರ್ ಸೌಲಭ್ಯ ಸಿಗುವ ಕಾರಣ ಮೆಟ್ಟಿಲು ಹತ್ತುವ ಅವಶ್ಯಕತೆ ಬಹಳ ಕಡಿಮೆ ಇದೆ.

ಆದರೆ ಪಶ್ಚಿಮ ರೈಲ್ವೆ ಮತ್ತು ಮಧ್ಯ ರೈಲ್ವೆಯ ಸ್ಟೇಷನ್‌ಗಳಲ್ಲಿ ಎಸ್ಕಲೇಟರ್ ಅಳವಡಿಸಲು ತಗಲಿದ ಖರ್ಚುಗಳಲ್ಲಿ ಭಾರೀ ಅಂತರವಿರುವುದನ್ನು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರು ಮಾಹಿತಿ ಹಕ್ಕು ಅಧಿಕಾರದಡಿ ಪತ್ತೆಹಚ್ಚಿದ್ದು ಈ ಖರ್ಚುಗಳಲ್ಲಿ ದೊಡ್ಡ ಅಂತರವಿರುವುದರಿಂದ ತನಿಖೆಗೆ ಒಳಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ. ಇಲ್ಲಿಯ ವರೆಗೆ ಮಧ್ಯರೈಲ್ವೆಯ ವ್ಯಾಪ್ತಿಯಲ್ಲಿ 14 ನಿಲ್ದಾಣಗಳಲ್ಲಿ ಒಟ್ಟು 20 ಎಸ್ಕಲೇಟರ್ ಅಳವಡಿಸಲಾಗಿದೆ. ಇವುಗಳ ಒಟ್ಟು ವೆಚ್ಚ 11,90,60,388 ರೂಪಾಯಿ. ಪಶ್ಚಿಮ ರೈಲ್ವೆಯು 13 ಸ್ಟೇಷನ್‌ಗಳಲ್ಲಿ 34 ಎಸ್ಕಲೇಟರ್‌ಗಳನ್ನು ಅಳವಡಿಸಿದೆ. ಒಂದು ಎಸ್ಕಲೇಟರ್‌ನ ಬೆಲೆ ಸುಮಾರು 72,28,000 ರೂಪಾಯಿ ಆಗಿದೆ. ಆದರೆ ಬೇರೆ ಬೇರೆ ನಿಲ್ದಾಣಗಳ ವೆಚ್ಚ ಬೇರೆ ಬೇರೆ ಇರುವುದು ಯಾಕೆಂದು ಅವರು ಪ್ರಶ್ನಿಸಿದ್ದಾರೆ.
* * *

ವಿದ್ಯಾರ್ಥಿಗಳಿಗೆ ಓಟಿಂಗ್ ಕಾರ್ಡ್

ಮುಂಬೈಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ವಿದ್ಯಾರ್ಥಿಗಳ ಮತದಾನ ಸೂಚಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಅರ್ಜಿಯನ್ನೂ ಸ್ವೀಕರಿಸಲಾಗುವುದಂತೆ. ರಾಜ್ಯ ಚುನಾವಣಾ ಆಯೋಗವು ರಾಜ್ಯಾದ್ಯಂತ ವಿಶೇಷ ಅಭಿಯಾನವನ್ನು ನಡೆಸುವುದಾಗಿ ಘೋಷಿಸಿದೆ.
ಜುಲೈ 1 ರಿಂದ ಜುಲೈ 3 ರ ತನಕ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಅಭಿಯಾನ ನಡೆಸಿ 18 ವರ್ಷದ ಯುವ ವಿದ್ಯಾರ್ಥಿಗಳ ಅರ್ಜಿಯನ್ನು ಚುನಾವಣಾ ಆಯೋಗ ಸ್ವೀಕರಿಸಲಿದೆ. ಸಹ ಚುನಾವಣಾ ಅಧಿಕಾರಿ ಅನಿಲ್ ವಲ್ವಿ ಇದನ್ನು ತಿಳಿಸಿದ್ದಾರೆ.

ರಾಜ್ಯದ ಯುವ ಮತದಾರರನ್ನು ಆಕರ್ಷಿಸಿ ಮತದಾರ ಗುರುತು ಕಾರ್ಡ್ ಮಾಡಿಸುವಲ್ಲಿ ಚುನಾವಣಾ ಆಯೋಗ ಅಭಿಯಾನ ನಡೆಸುತ್ತಿದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶದ ಸಮಯದಲ್ಲಿಯೇ ವಿದ್ಯಾರ್ಥಿಗಳಿಂದ ಮತದಾರರ ಗುರುತು ಕಾರ್ಡ್‌ನ ಅರ್ಜಿಯನ್ನೂ ಸ್ವೀಕರಿಸಲಾಗುತ್ತದೆ. ಈ ಬಗ್ಗೆ ಸರಕಾರಿ ಮತ್ತು ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗುವುದು. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಅಡ್ಮಿಶನ್ ಫಾರ್ಮ್ ಜೊತೆಗೆ ಮತದಾನ ನೋಂದಣಿ ಅರ್ಜಿಯನ್ನೂ ನೀಡಬಹುದಾಗಿದೆ. ಈ ಅಭಿಯಾನದಲ್ಲಿ ಕಾಲೇಜುಗಳ ಪ್ರಾಧ್ಯಾಪಕರುಗಳನ್ನು ನೋಡಲ್ ಅಧಿಕಾರಿಯೆಂದು ನಿಯುಕ್ತಿಗೊಳಿಸಲಾಗಿದೆ. ಈ ಕ್ರಮದಿಂದ ವಿದ್ಯಾರ್ಥಿ ಗಳಿಗೆ ಸರಕಾರಿ ಕಾರ್ಯಾಲಯಗಳಿಗೆ ತೆರಳುವ ಶ್ರಮ ತಪ್ಪುತ್ತದೆ.
* * *
ಶತಾಬ್ದಿ ಸಮಾರಂಭಕ್ಕೆ ಜನಪರ ಕಾರ್ಯಕ್ರಮಗಳು

ಶಿರ್ಡಿಯ ಬಹು ಪ್ರಸಿದ್ಧ ಸಾಯಿಬಾಬಾ ಸಮಾಧಿ ಮಂದಿರಕ್ಕೆ ಶತಾಬ್ದಿ ಮಹೋತ್ಸವದ ಸಂಭ್ರಮ. ಶತಾಬ್ದಿ ಮಹೋತ್ಸವದ ಪ್ರಯುಕ್ತ ಶಿರ್ಡಿ ಸಂಸ್ಥಾನವು ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಾಯಿಬಾಬಾ ಸಮಾಧಿ ಶತಾಬ್ಧಿ ಮಹೋತ್ಸವ ಪ್ರಚಾರಕ್ಕಾಗಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಿದೆ. ‘‘ಶತಾಬ್ದಿಯ ಅಂಗವಾಗಿ 21 ಎಕ್ರೆ ಜಮೀನಿನಲ್ಲಿ ಮ್ಯೂಸಿಯಂ, ಪ್ಲಾನಿಟೋರಿಯಂ, ಗ್ಯಾಲರಿ ಮತ್ತು 125 ಕೋಟಿ ರೂ. ವೆಚ್ಚದಲ್ಲಿ ಸಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗುವುದು’’ ಎಂದು ಶಿರ್ಡಿ ಸಂಸ್ಥಾನದ ಅಧ್ಯಕ್ಷ ಸುರೇಶ್ ಹಾವ್ರೆ ತಿಳಿಸಿದ್ದಾರೆ.
* * *
ರೈಲ್ವೆಯ ಸ್ಮಾರ್ಟ್ ಸ್ಕೀವ್

ಪಶ್ಚಿಮ ರೈಲ್ವೆಯು ಮೊಬೈಲ್ ಟಿಕೆಟ್ ಮತ್ತು ಎಟಿವಿಎಂ ಕಾರ್ಡ್ ಗಳನ್ನು ಪ್ರಯಾಣಿಕರ ನಡುವೆ ಇನ್ನಷ್ಟು ಹೆಚ್ಚು ಪ್ರಚಾರ ನಡೆಸುವುದಕ್ಕೆ ಸ್ಮಾರ್ಟ್ ಸ್ಕೀಮ್ ತಂದಿದೆ. ಸ್ಮಾರ್ಟ್‌ಕಾರ್ಡ್‌ನ ರಿಚಾರ್ಜ್ ಮಾಡುವವರಿಗೆ ಇದುವರೆಗೆ 5 ಪ್ರತಿಶತ ಡಿಸ್ಕೌಂಟ್ ನೀಡಲಾಗುತ್ತಿತ್ತು. ಈಗ ಹೊಸ ಸ್ಕೀಮ್‌ನಂತೆ ಸ್ಮಾರ್ಟ್‌ಕಾರ್ಡ್ ರೀಚಾರ್ಜ್ ಮಾಡುವಾಗ ಪ್ರಯಾಣಿಕರಿಗೆ ವಾಣಿಜ್ಯ ವಿಭಾಗದ ವತಿಯಿಂದ ಒಂದು ಕಮರ್ಷಿಯಲ್ ಕೂಪನ್ ಕೂಡಾ ನೀಡಲಾಗುವುದು. ಈ ಕೂಪನನ್ನು ಆ ಪ್ರಯಾಣಿಕರು ರೈಲ್ವೆ ಸ್ಟೇಷನ್‌ಗಳ ಸ್ಟಾಲ್‌ಗಳಿಂದ ತಿಂಡಿ-ಪಾನೀಯ ವಸ್ತುಗಳನ್ನು ಖರೀದಿಸಬಹುದು.
ಈಗ ನೂರು ರೂಪಾಯಿಯ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸಿದರೆ 5 ಪ್ರತಿಶತ ಡಿಸ್ಕೌಂಟ್‌ನ ಹೊರತಾಗಿ 5 ರೂಪಾಯಿಯ ಒಂದು ಕೂಪನ್ ಕೂಡಾ ಸಿಗುತ್ತದೆ.

ರೈಲ್ವೆಯ ಟಿಕೆಟ್ ಕೌಂಟರ್‌ಗಳಲ್ಲಿ ಉದ್ದುದ್ದ ಸಾಲನ್ನು ಕಡಿಮೆ ಮಾಡಲು ಸ್ಮಾರ್ಟ್ ಕಾರ್ಡ್ ಜನಪ್ರಿಯಗೊಳಿಸುವುದು ರೈಲ್ವೆಯ ಉದ್ದೇಶ. ರೈಲ್ವೆ ಸ್ಟಾಲ್‌ಗಳಿಂದ 10 ರೂಪಾಯಿ ವಸ್ತು ಖರೀದಿಸುವುದಾದರೆ 5 ರೂ.ನ ಕೂಪನ್ ಮತ್ತು 5 ರೂ. ನಗದು ನೀಡಿದರೆ ಆಯ್ತು. ರೈಲ್ವೆಯ ಈ ಸ್ಕೀಮ್ ನವೆಂಬರ್ 30, 2017ರ ತನಕ ಲಭ್ಯರುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಮುಂಬೈ ಉಪನಗರ ಸ್ಟೇಷನ್‌ಗಳಲ್ಲಿ ರೈಲ್ವೆಯ 111ಕ್ಕೂ ಅಧಿಕ ಸಹಭಾಗಿತ್ವದ ಸ್ಟಾಲ್‌ಗಳಿವೆ.

* * *

ಪ್ರಕೃತಿ ವಿಕೋಪ ಎದುರಿಸಲು ಪ್ರತ್ಯೇಕ ಪ್ರಾಧಿಕಾರ

ಮಹಾರಾಷ್ಟ್ರದಲ್ಲಿ ಪ್ರಕೃತಿ ವಿಕೋಪ ಪರಿಹಾರ ಪ್ರಾಧಿಕಾರದ ರೂಪದಲ್ಲಿ ಒಂದು ಪ್ರತ್ಯೇಕವಾದ ಸ್ವತಂತ್ರ ಸಂಚಾಲಕ ಘಟಕ ಸ್ಥಾಪನೆಗೆ ಮಂಜೂರು ನೀಡಲಾಗಿದೆ. ಮುಖ್ಯಮಂತ್ರಿಯವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ವಿಕೋಪ ಪರಿಸ್ಥಿತಿಯ ಸಂದರ್ಭದಲ್ಲಿ ಸರಕಾರದ ವತಿಯಿಂದ ಸ್ವತಂತ್ರ ಪ್ರಾಧಿಕಾರವಿದ್ದು ಅದರಲ್ಲಿ 6 ಸಾವಿರ ಸಿಬ್ಬಂದಿಗೆ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥಾನದಿಂದ ತರಬೇತಿ ನೀಡಲಾಗುವುದು. ಇದಕ್ಕಾಗಿ ಸುಮಾರು 2 ಕೋಟಿ ರೂಪಾಯಿ ಖರ್ಚು ಬೀಳಲಿದೆ.

ಮಳೆಗಾಲ ಪೂರ್ವದ ಸಮೀಕ್ಷಾ ಬೈಠಕ್‌ನಲ್ಲಿ ಅಧಿಕಾರಿಗಳು ತಾವು ಮಳೆಗಾಲಕ್ಕೆ ಎಲ್ಲ ತಯಾರಿ ನಡೆಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಬಾಕಿ ಉಳಿದುದು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವ ಭರವಸೆ ಕೂಡಾ ನೀಡಿದ್ದಾರೆ.ಭಾರತೀಯ ಹವಾಮಾನ ವಿಜ್ಞಾನ ಇಲಾಖೆಯು ಈ ಬಾರಿ ಉತ್ತಮ ಮಳೆಯಾಗುವ ಭರವಸೆ ವ್ಯಕ್ತಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)