ಅರ್ಧ-ಅರ್ಧಗಳನ್ನು ಸೇರಿಸಿ ಮೂರು ಉಪವಾಸಗಳನ್ನು ಹಿಡಿದ ಮಗಳು!
ನನ್ನ ರಮಝಾನ್ ಅನುಭವ
ಸಾಂದರ್ಭಿಕ ಚಿತ್ರ
"ರಮಝಾನ್ ತಿಂಗಳ ಎಲ್ಲಾ ದಿನಗಳಲ್ಲೂ ಮುಸ್ಲಿಮರ ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಮನೆಯಲ್ಲಿರುವ ಹಿರಿಯರು ಅಲರಾಂ ಇಟ್ಟು "ಸಹರಿ"ಗೆ ಮನೆಮಂದಿಯನ್ನೆಲ್ಲ ಎಬ್ಬಿಸುವುದು, ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಊಟ ಮಾಡುವುದು ರಮಝಾನಿನಲ್ಲಿ ಮಾತ್ರ ಕಂಡು ಬರುವ ವೈಶಿಷ್ಟ್ಯವಾಗಿದೆ. ಹಿರಿಯರನ್ನು ಕಂಡ ಮನೆಯಲ್ಲಿರುವ ಸಣ್ಣಪುಟ್ಟ ಮಕ್ಕಳು ತಮ್ಮನ್ನು ಕೂಡ ಸಹರಿಗೆ ಎಬ್ಬಿಸುವಂತೆ ಹಠ ಮಾಡುವುದು, ಕೊನೆಗೆ ಮಕ್ಕಳ ಹಠಕ್ಕೆ ಮಣಿದು ಹಿರಿಯರು ಮಕ್ಕಳನ್ನು 'ಸಹರಿ' ಊಟಕ್ಕೆ ಎಬ್ಬಿಸುವುದು ಇದೆಲ್ಲ ಸಾಮಾನ್ಯವಾಗಿ ಪ್ರತೀ ಮನೆಗಳಲ್ಲಿ ಕಂಡುಬರುವ ದೃಶ್ಯವಾಗಿದೆ.
ಒಂಬತ್ತು ವರ್ಷ ಪ್ರಾಯದ ನನ್ನ ಮಗಳು ಫಾತಿಮತ್ ರಫಾನಳಿಗೆ ರಮಝಾನಿನಲ್ಲಿ 'ನೋಂಬು' (ಉಪವಾಸ) ಹಿಡಿಯುವ ಆಸೆ. ಬೆಳಗ್ಗೆ ಎದ್ದು ಹತ್ತು ಕಿ.ಮೀ. ದೂರ ರಿಕ್ಷಾದಲ್ಲಿ ಪ್ರಯಾಣಿಸಿ ಶಾಲೆಗೆ ಹೋಗಿ ಪುನಃ ಸಂಜೆ ಮನೆಗೆ ಬರುವ ಅವಳಿಗೆ ಉಪವಾಸ ಹಿಡಿಯಲು ಕಷ್ಟವಾಗಬಹುದೆಂದು ನಾವು ಅವಳನ್ನು ಸಹರಿಗೆ ಎಬ್ಬಿಸುತ್ತಿರಲಿಲ್ಲ. ನಾನು ಗಲ್ಫ್ ರಾಷ್ಟ್ರದಲ್ಲಿದ್ದು, 'ತಾಯಿ ನನ್ನನ್ನು ಸಹರಿಗೆ ಎಬ್ಬಿಸುವುದಿಲ್ಲ' ಎಂಬ ಕಂಪ್ಲೇಂಟ್ ಮಗಳಿಂದ ಬಂತು. 'ಉಪವಾಸ ಹಿಡಿಯಲು ನಿನಗೆ ಕಷ್ಟವಾಗಬಹುದು ಈಗ ಬೇಡ ಮುಂದಿನ ವರ್ಷ ನೋಡುವ' ಎಂದು ಹೇಳಿದರೂ ಕೇಳದ ಮಗಳ ಒತ್ತಾಯಕ್ಕೆ ಮಣಿಯಬೇಕಾಯಿತು. ನನ್ನ ವಿನಂತಿಯಂತೆ ಆ ದಿನ ಪತ್ನಿ ಮಗಳನ್ನು ಸಹರಿಗೆ ಎಬ್ಬಿಸಿಯೇ ಬಿಟ್ಟಳು. ಭರ್ಜರಿಯಾಗಿ ಸಹರಿ ಊಟವನ್ನು ಮಾಡಿದ ಮಗಳು ಶಾಲೆಗೆ ಹೊರಡುವಾಗ ನಾನು ಫೋನ್ ಮಾಡಿ ಮಗಳಿಗೆ ಟಿಫಿನ್ ಕೊಡುವಂತೆ ಹೇಳಿದೆ. ಬೇಡವೆಂದು ಹಠ ಹಿಡಿದ ಮಗಳು ಮನಸ್ಸಿಲ್ಲದ ಮನಸ್ಸಿನಿಂದ ಟಿಫಿನ್ ಹಿಡಿದುಕೊಂಡು ಹೋದಳು. ಆದರೆ ಪತ್ನಿ ಸಂಜೆ ಟಿಫಿನ್ ತೆರೆದು ನೋಡುವಾಗ ಅದು ಖಾಲಿಯಾಗಿತ್ತಂತೆ. ನಾನು ಮಗಳಲ್ಲಿ ಕೇಳಿದಾಗ "ಮಧ್ಯಾಹ್ನ ನನಗೆ ಬಹಳ ಹಸಿವಾಯಿತು ಅದಕ್ಕೆ ತಿಂದೆ" ಎಂಬ ಉತ್ತರ ಬಂತು. ಮತ್ತೂ ಮಾತು ಮುಂದುವರೆಸಿದ ಮಗಳು ಹೇಳಿದ್ದು "ಡ್ಯಾಡಿ ನಾನು ಇವತ್ತು ಅರ್ಧ ನೋಂಬು ಹಿಡಿದೆ. ನಾಳೆ ಪುನಃ ಅರ್ಧ ಹಿಡಿದು ಪೂರ್ತಿ ಮಾಡುತ್ತೇನೆ" ಎಂದಿದ್ದಳು. ಒಟ್ಟಿನಲ್ಲಿ ನನ್ನ ಮಗಳು ಕಳೆದ ವರ್ಷ ಅರ್ಧ ಅರ್ಧ ಮಾಡಿ ಮೂರು ಉಪವಾಸ ಹಿಡಿದಿದ್ದಾಳೆ.
-ಎಸ್.ಎ.ರಹಿಮಾನ್ ಮಿತ್ತೂರು