ಹಳೆಯ ವಿದ್ಯುತ್ ಕಂಬ, ತಂತಿ ಬದಲಾವಣೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.6: ವಿಜಯಪುರ, ಬಾಗಲಕೋಟೆ ಸೇರಿ ಇತರೆ ಜಿಲ್ಲೆಗಳಲ್ಲಿನ ಹಳೆಯ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ಬದಲಾಯಿಸಿ ಹೊಸ ಕಂಬಗಳು ಹಾಗೂ ತಂತಿಗಳನ್ನು ಹಾಕಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ಬಸವನಗೌಡ ಆರ್. ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯಪುರ, ಬಾಗಲಕೋಟೆ ಸೇರಿ ಇತರೆ ಜಿಲ್ಲೆಗಳಲ್ಲಿ ನಾಲ್ಕೈದು ದಶಕಗಳಿಂದ ಹಳೆಯ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಇರುವುದು ತಮ್ಮ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಇವುಗಳನ್ನು ಬದಲಾಯಿಸಿ ಹೊಸ ಕಂಬಗಳು ಹಾಗೂ ತಂತಿಗಳನ್ನು ಹಾಕಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ದೀನ ದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುದ್ಧೀಕರಣ ಯೋಜನೆ ಮತ್ತು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಐಪಿಡಿಎಸ್ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಹಳೆಯದಾದ ಹಾಗೂ ಶಿಥಿಲಗೊಂಡ ವಿದ್ಯುತ್ ಕಂಬಗಳು ಮತ್ತು ತಂತಿಗಳ ಬದಲಾವಣೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.