ಕೊಸಾಂಬಿಯವರ ಆತ್ಮನಿವೇದನೆ
ಈ ಹೊತ್ತಿನ ಹೊತ್ತಿಗೆ
ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಬೌದ್ಧಧರ್ಮವನ್ನು ಜೀವಂತ ಧರ್ಮವಾಗಿ ಪುನಶ್ಚೇತನಗೊಳಿಸಿದ ಕೀರ್ತಿ ಧರ್ಮಾನಂದ ಕೋಸಂಬಿ ಅವರಿಗೆ ಸಲ್ಲುತ್ತದೆ. ಈ ಕಾರ್ಯದಲ್ಲಿ ಅವರು ಧರ್ಮದ ಸಿದ್ಧಾಂತವನ್ನು ಮತ್ತು ಆಚರಣೆಗಳನ್ನು ಮತ್ತೆ ಪರಿಚಯಿಸಿದ್ದಲ್ಲದೆ, ಅದರ ಪ್ರಸಕ್ತತೆಯನ್ನು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳೊಂದಿಗೆ ಸ್ಥಾಪಿಸುವುದರ ಮೂಲಕ ಹೊಸದಾದ ಮತ್ತು ಸಮಂಜಸವಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು ಧರ್ಮಾನಂದ ಕೊಸಾಂಬಿಯವರು ತಮ್ಮ ಆತ್ಮಕಥನ ‘ನಿವೇದನೆ’ಯನ್ನು ಬರೆದಿದ್ದಾರೆ. ಧರ್ಮಾನಂದ ಕೊಸಾಂಬಿ ಅವರು ಮರಾಠಿಯಲ್ಲಿ ಬರೆದ ಈ ಆತ್ಮಕಥನವನ್ನು ಡಾ. ಮೀರಾ ಕೊಸಾಂಬಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದು, ಇಂಗ್ಲಿಷ್‌ನಿಂದ ಡಾ. ಗೀತಾ ಶೆಣೈ ಅವರು ಕನ್ನಡಕ್ಕಿಳಿಸಿದ್ದಾರೆ. ಕೋಸಾಂಬಿಯವರ ಬಾಲ್ಯದ ನೆನಪುಗಳು, ತಾರುಣ್ಯ, ದೇಶತ್ಯಾಗ, ವಿವಿಧ ಪ್ರವಾಸಗಳು ಅವರಿಗೆ ಕೊಟ್ಟ ಅನುಭವ, ಬೌದ್ಧ ಕ್ಷೇತ್ರಗಳ ಯಾತ್ರೆ ಮತ್ತು ಅದರ ಅನುಭವ, ಅಮೆರಿಕ ಪ್ರವಾಸ ಸೇರಿದಂತೆ ಬೌದ್ಧ ಧರ್ಮದ ಪ್ರಚಾರ ಸಂದರ್ಭದಲ್ಲಿ ಅವರು ಎದುರಿಸಿದ ಹಲವು ಸವಾಲುಗಳೂ ಇದರಲ್ಲಿ ದಾಖಲು ಕೊಂಡಿದೆ. ಅವರ ಬದುಕಿನಲ್ಲಿ ಸ್ಥಿರವಾಗಿ ಒಂದೆಡೆ ನಿಂತಿರುವುದಕ್ಕಿಂತ ಪ್ರವಾಸಗೈದಿರುವುದೇ ಜಾಸ್ತಿ. 1930 ಕೊನೆಯಲ್ಲಿ ಮತ್ತು 1940ರಲ್ಲಿ ಧರ್ಮಾನಂದರು ಉಪಖಂಡದುದ್ದಕ್ಕೂ ಮತ್ತು ಅದನ್ನು ಮೀರಿಯೂ ತಿರುಗಾಟ ನಡೆಸಿದ್ದಾರೆ. ಬೌದ್ಧ ಧರ್ಮದ ಪ್ರಚಾರಗೈದ ಕೋಸಾಂಬಿಯವರು ತನ್ನ ಜೀವನದ ಕೊನೆಯನ್ನು ಜೈನಧರ್ಮದ ಸಲ್ಲೇಖನದ ಮೂಲಕ ಮುಗಿಸಿರುವುದು ಮತ್ತೊಂದು ವಿಶೇಷವಾಗಿದೆ. ಸಲ್ಲೇಖನ ವ್ರತವನ್ನು ಅವರು ಗಾಂಧೀಜಿಯ ವಾರ್ಧಾ ಆಶ್ರಮದಲ್ಲಿ ನೆರವೇರಿಸಿದರು. ಬೌದ್ಧ ಧರ್ಮದ ಪ್ರಚಾರ ಭಾರತದ ಕಾಲಘಟ್ಟದಲ್ಲಿ ಮಹತ್ವದ ಆಯಾಮವನ್ನು ಪಡೆಯಿತು ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು. ಒಂದೆಡೆ ಸ್ವಾತಂತ್ರ ಹೋರಾಟದಲ್ಲೂ ಭಾಗವಹಿಸಿದವರು ಕೋಸಾಂಬಿ. ಗಾಂಧೀಜಿಯ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಬೌದ್ಧ ಧರ್ಮದ ಜೊತೆ ಜೊತೆಗೇ ಜೈನಧರ್ಮದಲ್ಲೂ ಒಲವಿಟ್ಟುಕೊಂಡಿದ್ದ ಕೊಸಾಂಬಿ ಜೈನ ಚಿಂತಕರ ಜೊತೆಗೂ ಒಡನಾಡಿರುವುದನ್ನು ಕೃತಿ ಹೇಳುತ್ತದೆ. ನೇಪಾಳ, ಸಿಕ್ಕಿಂ, ಅಮೆರಿಕ, ಬರ್ಮಾ ಹೀಗೆ ಬೇರೆ ಬೇರೆ ದೇಶಗಳನ್ನು ಸುತ್ತಾಡುತ್ತಾ ಅನುಭವ ಭಂಡಾರವನ್ನು ತನ್ನದಾಗಿಸಿಕೊಂಡಿದ್ದರು. ನಿವೇದನೆ ಕೊಸಾಂಬಿಯಯವರ ಬದುಕಿನ ಜೊತೆಗೆ ಬೌದ್ಧ ಧರ್ಮದ ಕೆಲವು ಕುತೂಹಲಕರ ಮಾಹಿತಿಗಳನ್ನೂ ನಮಗೆ ನೀಡುತ್ತದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 160 ರೂಪಾಯಿ.