ಸದನಕ್ಕೆ ಹಾಜರಾಗುವಂತೆ ಶಾಸಕರಿಗೆ ಸಿಎಂ ಕಟ್ಟಪ್ಪಣೆ
ಬೆಂಗಳೂರು, ಜೂ.9: ಸೋಮವಾರದಿಂದ ಆರಂಭವಾಗಿರುವ ವಿಧಾನಮಂಡಲದ ಉಭಯ ಸದನಗಳ ಕಲಾಪದಲ್ಲಿ ಶಾಸಕರು, ಸಚಿವರ ಗೈರು ಹಾಜರಾತಿ ಪ್ರತಿದಿನ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ, ಪ್ರತಿಪಕ್ಷಗಳು ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಮಂಡಲದ ಅಧಿವೇಶನದಲ್ಲಿ ಈಗ ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆಗಳು ನಡೆಯುತ್ತಿದ್ದು, ಆಡಳಿತ ಪಕ್ಷದ ಪ್ರತಿಯೊಬ್ಬ ಶಾಸಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು.
ರಾಜ್ಯ ಸರಕಾರದ ಸಾಧನೆಗಳನ್ನು ಸಚಿವರು, ಶಾಸಕರು ಸದನದಲ್ಲಿ ಉಪಸ್ಥಿತರಿದ್ದರು ಸಮರ್ಥಿಸಿಕೊಳ್ಳಬೇಕು. ಜನಪರವಾದ ವಿಷಯಗಳನ್ನು ಸದನದಲ್ಲಿ ಚರ್ಚೆ ಗೆತ್ತಿಕೊಳ್ಳಬೇಕು. ಕಲಾಪಕ್ಕೆ ಗೈರು ಹಾಜರಾಗುತ್ತಿರುವುದು ಉತ್ತಮವಾದ ಬೆಳವಣಿಗೆಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯವು ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಸದನದಲ್ಲಿ ಶಾಸಕರು, ಸಚಿವರು ಉಪಸ್ಥಿತರಿರುವುದಿಲ್ಲ. ಈ ಸರಕಾರಕ್ಕೆ ಜವಾಬ್ದಾರಿಯಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ಸಭಾಧ್ಯಕ್ಷರು ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಶಾಸಕರಿಗೆ ಸಿದ್ದರಾಮಯ್ಯ ತಾಕೀತು ಮಾಡಿದರು.
ನ್ಯಾಷನಲ್‌ಹೆರಾಲ್ಡ್ ಪತ್ರಿಕೆಯನ್ನು ಪುನರ್ ಆರಂಭಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಜೂ.12ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಶಾಸಕರು, ಸಚಿವರು ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.
ಶಾಸಕಾಂಗ ಸಭೆಗೂ ಕಾಡಿದ ಗೈರು ಹಾಜರಿ: ಶಾಸಕಾಂಗ ಪಕ್ಷದ ಸಭೆಯು 8.30ಕ್ಕೆ ನಿಗದಿಯಾಗಿದ್ದರೂ ಶಾಸಕರು ನಿಗದಿತ ಅವಧಿಗೆ ಆಗಮಿಸಲಿಲ್ಲ. ಇದರಿಂದಾಗಿ, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಶಾಸಕರು, ಸಚಿವರಿಗೆ ಕಾದು ಕುಳಿತುಕೊಳ್ಳುವಂತಾಯಿತು.