ಸಮೋಸಾ ಎಂದರೆ ತಮಾಷೆಯಲ್ಲ
ಗೂಗಲ್ ಉದ್ಯೋಗ ಬಿಟ್ಟು ಸಮೋಸಾ ಮಾರಾಟಕ್ಕಿಳಿದ ಎಂಬಿಎ ಪದವೀಧರ!
ಸೆಲೆಬ್ರಿಟಿಗಳಿಂದ ಹಿಡಿದು ಪಾಕತಜ್ಞರು, ಅಂತಾರಾಷ್ಟ್ರೀಯ ಮಾಧ್ಯಮಗಳವರೆಗೆ ಪ್ರತಿಯೊಬ್ಬರೂ ಬೋಹ್ರಿ ಕಿಚನ್‌ನ ಅತಿಥಿಗಳಾಗಿದ್ದು, ಮುನಾಫ್‌ರ ಕಥೆ ಮತ್ತು ಅವರ ಮುಂದಿನ ಉದ್ಯಮ ಹೆಜ್ಜೆಯ ಕುರಿತು ತಿಳಿದುಕೊಳ್ಳಲು ಕಾತರರಾಗಿದ್ದಾರೆ.
ಮುಂಬೈನ ಖಾದ್ಯಗಳ ಸವಿ ಬಲ್ಲವರಿಗೆ ‘ಬೋಹ್ರಿ ಕಿಚನ್’ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಆದರೆ ಆ ಬಗ್ಗೆ ಗೊತ್ತಿಲ್ಲದವರಿಗೆ ಇಲ್ಲಿದೆ ಮಾಹಿತಿ.....
ಇದು 2015ರ ಕಥೆ. ಗೂಗಲ್‌ನಲ್ಲಿ ಕೈತುಂಬ ಸಂಬಳದ ಉದ್ಯೋಗದಲ್ಲಿದ್ದ ಎಂಬಿಎ ಪದವೀಧರ ಮುನಾಫ್ ಕಪಾಡಿಯಾ ಆಹಾರ ಯೋಜನೆಯೊಂದನ್ನು ಆರಂಭಿಸುವ ಮೂಲಕ ತನ್ನ ತಾಯಿ ನಫೀಸಾರನ್ನು ಟಿವಿ ಧಾರಾವಾಹಿಗಳಿಂದ ದೂರವಿಡಲು ನಿರ್ಧರಿಸಿದ್ದರು. ಕಪಾಡಿಯಾಗಳು ಬಾಯಲ್ಲಿ ನೀರೂರಿಸುವ ತಮ್ಮ ‘ಥಾಲ್’ಗಾಗಿ ಪ್ರಸಿದ್ಧರಾಗಿರುವ ಬೋಹ್ರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಂದ ಹಾಗೆ ಈ ‘ಥಾಲ್’ ಅಥವಾ ಥಾಲಿ ಮಟನ್ ಸಮೋಸಾದಿಂದ ಹಿಡಿದು ನರ್ಗಿಸ್ ಕಬಾಬ್, ಡಬ್ಬಾ ಘೋಷ್ತ್, ಕರಿ ಚಾವಲ್‌ವರೆಗೂ ಹಲವಾರು ಖಾದ್ಯಗಳನ್ನು ಒಳಗೊಂಡಿರುತ್ತದೆ. ನಫೀಸಾ ಪ್ರತಿದಿನ ತನ್ನ ಮನೆಯಲ್ಲಿ ಇದನ್ನು ಅತ್ಯಂತ ರುಚಿಕಟ್ಟಾಗಿ ತಯಾರಿಸುತ್ತಿದ್ದರು. ಅಡುಗೆಯಲ್ಲಿ ತನ್ನ ಕೈಗುಣಕ್ಕಾಗಿ ಅವರು ಹೆಸರಾಗಿದ್ದರು. ಅವರು ತಯಾರಿಸುವ ಮಟನ್ ಸಮೋಸಾದ ರುಚಿಯಂತೂ ಬೇರೆಲ್ಲಿಯೂ ಸಿಗುತ್ತಿರಲಿಲ್ಲ.
ತನ್ನ ಸಮುದಾಯದಲ್ಲಿ ಜನಪ್ರಿಯವಾಗಿದ್ದ ತನ್ನ ತಾಯಿ ತಯಾರಿಸುವ ಊಟವನ್ನು ಜಗತ್ತಿಗೆ ಪರಿಚಯಿಸಲು ಮುನಾಫ್ ನಿರ್ಧರಿಸಿದ್ದರು. ಆ ನಿರ್ಧಾರದ ಬಳಿಕ ಅವರೆಂದೂ ಹಿಂದಿರುಗಿ ನೋಡಲೇ ಇಲ್ಲ, ಈಗ ಅವರ ಜಗತ್ತೇ ಬದಲಾಗಿಬಿಟ್ಟಿದೆ. ಮುನಾಫ್‌ರ ಮನಸ್ಸಿನಲ್ಲಿ ಚಿಗುರೊಡೆದಿದ್ದ ಯೋಜನೆಯನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ಇಳಿಸಲು ನಿರ್ಧರಿಸಿದ್ದ ತಾಯಿ-ಮಗನಿಗೆ ತಮ್ಮ ನಿವಾಸಕ್ಕೆ ಕೆಲವು ಜನರನ್ನು ಊಟಕ್ಕೆ ಆಹ್ವಾನಿಸಿ ತಮ್ಮ ಖಾದ್ಯಗಳ ಬಗ್ಗೆ ಅವರ ಅಭಿಪ್ರಾಯ ಪಡೆಯುವ ಯೋಚನೆ ಹೊಳೆದಿತ್ತು.
ಸಮೋಸಾ ಕ್ರಾಂತಿ
ಇ-ಮೇಲ್ ಮತ್ತು ಕೆಲವು ದೂರವಾಣಿ ಕರೆಗಳ ಮೂಲಕ ಮುನಾಫ್ ತನ್ನ ತಾಯಿಯ ಕೈಯಲ್ಲ್ಲಿ ತಯಾರಾದ ಖಾದ್ಯಗಳನ್ನು ಸವಿಯಲು ಯುವತಿಯರ ಗುಂಪೊಂದನ್ನು ಮನೆಗೆ ಆಹ್ವಾನಿಸಿದ್ದರು. ಅವರಿಗೆ 700 ರೂ.ಶುಲ್ಕವನ್ನು ವಿಧಿಸಿದ್ದರು. ನಫೀಸಾರ ಖಾದ್ಯಗಳನ್ನು ಸವಿದ ಆ ಯುವತಿಯರು ಫುಲ್ ಖುಷ್ ಆಗಿದ್ದರು. ಅದರಲ್ಲೂ ಮಟನ್ ಸಮೋಸಾ ಅಂತೂ ಅವರನ್ನು ಸಂಪೂರ್ಣ ಚಿತ್ ಮಾಡಿತ್ತು. ಇದರಿಂದ ಉತ್ತೇಜಿತ ಮುನಾಫ್ ತಮ್ಮ ಯೋಜನೆಗೆ ‘ಬೋಹ್ರಿ ಕಿಚನ್’ಎಂದೇ ಹೆಸರಿಸಿದ್ದರು ಮತ್ತು ಫೇಸ್‌ಬುಕ್ ಪುಟವನ್ನು ಸೃಷ್ಟಿಸಿದ್ದರು. ಇದು ಎಷ್ಟೊಂದು ಪರಿಣಾಮಕಾರಿ ಯಾಗಿತ್ತೆಂದರೆ ಮುನಾಫ್ ತನ್ನ ತಾಯಿಗಿಂತಲೂ ಹೆಚ್ಚು ಬಿಝಿಯಾಗಿಬಿಟ್ಟಿದ್ದರು ಮತ್ತು ಜನರಿಗೆ ರುಚಿರುಚಿಯಾದ ಆಹಾರ ಉಣಬಡಿಸುವ ಕ್ರಾಂತಿಗಾಗಿ ತನ್ನ ಗೂಗಲ್ ಉದ್ಯೋಗಕ್ಕೆ ತಿಲಾಂಜಲಿ ನೀಡಿದ್ದರು.
ಇಂದು ನಫೀಸಾರ ಕೈರುಚಿ ಸವಿಯಬೇಕೆಂದರೆ ನೀವು ಮುನಾಫ್‌ರ ಗೆಳೆಯರಾಗಿರಬೇಕು ಅಥವಾ ಪ್ರಧಾನಿ ಅಥವಾ ರಾಷ್ಟ್ರಪತಿಯಾಗಿರಬೇಕು. ತಾವು ಮನೆಗೆ ಆಮಂತ್ರಿಸುವ ಜನರ ಬಗ್ಗೆ ತಾಯಿ-ಮಗ ಅಷ್ಟು ಕಟ್ಟುನಿಟ್ಟಾಗಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಪಾಕತಜ್ಞರು, ಅಂತಾರಾಷ್ಟ್ರೀಯ ಮಾಧ್ಯಮಗಳವರೆಗೆ ಪ್ರತಿಯೊಬ್ಬರೂ ಬೋಹ್ರಿ ಕಿಚನ್‌ನ ಅತಿಥಿಗಳಾಗಿದ್ದು, ಮುನಾಫ್‌ರ ಕಥೆ ಮತ್ತು ಅವರ ಮುಂದಿನ ಉದ್ಯಮ ಹೆಜ್ಜೆಯ ಕುರಿತು ತಿಳಿದುಕೊಳ್ಳಲು ಕಾತರರಾಗಿದ್ದಾರೆ.
ಸರಳತೆ ಮತ್ತು ಪ್ರಾಮಾಣಿಕತೆ
ಬೋಹ್ರಿ ಕಿಚನ್ ಈಗಾಗಲೇ ವರ್ಲಿಯಲ್ಲಿ ಡೆಲಿವರಿ ಕಿಚನ್‌ವೊಂದನ್ನು ಹೊಂದಿದ್ದು, ರೆಸ್ಟೋರೆಂಟ್‌ನ್ನು ಆರಂಭಿಸುವ ಬಗ್ಗೆ ಮುನಾಫ್ ನೀಲಿನಕ್ಷೆ ರೂಪಿಸುತ್ತಿದ್ದಾರೆ. ಅವರ ಮಾರುಕಟ್ಟೆ ತಂತ್ರಗಾರಿಕೆಯಿಂದಾಗಿ ಇಂದು ಬೋಹ್ರಿ ಕಿಚನ್ ಖ್ಯಾತ ಬ್ರಾಂಡ್ ಆಗಿ ರೂಪುಗೊಂಡಿದೆ.
ಸರಳತೆ ಮತ್ತು ಪ್ರಾಮಾಣಿಕತೆ ತನ್ನ ಯಶಸ್ಸಿನ ಗುಟ್ಟು ಎನ್ನುತ್ತಾರೆ ಮುನಾಫ್. ಸಮ್ಮೇಳನವೊಂದರಲ್ಲಿ ಮಂಡಿಸಲು ವರದಿಯೊಂದನ್ನು ಸಿದ್ಧಗೊಳಿಸುತ್ತಿದ್ದಾಗ ಬೋಹ್ರಿ ಕಿಚನ್ ಪರಿಕಲ್ಪನೆ ಅವರ ತಲೆಗೆ ಹೊಳೆದಿತ್ತು. ಅದನ್ನೊಂದು ಉದ್ಯಮವನ್ನಾಗಿ ಮಾಡಲು ಅವರು ಖಂಡಿತ ಯೋಚಿಸಿರಲಿಲ್ಲ.
ಯಶಸ್ಸಿನೊಂದಿಗೆ ಬೋಹ್ರಿ ಕಿಚನ್‌ನ ‘ಅಮ್ಮನ ಕೈರುಚಿ’ಯನ್ನು ಕಾಯ್ದುಕೊಳ್ಳಬೇಕಾದ ಸವಾಲೂ ಅವರಿಗೆ ಎದುರಾಗಿತ್ತು ಮತ್ತು ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.
ಮಮ್ಮಿ...... ಬ್ರಾಂಡ್ ಅಂಬಾಸಡರ್
ಬೋಹ್ರಿ ಕಿಚನ್ ಆರಂಭವಾಗಿದ್ದೇ ನಫೀಸಾರಿಗಾಗಿ ಮತ್ತು ಒಂದು ರೀತಿಯಲ್ಲಿ ಅವರಿಂದಲೇ ಅದು ಆರಂಭಗೊಂಡಿತ್ತು. ತಾಯಿಯಿಂದಾಗಿಯೇ ತನ್ನ ಬ್ರಾಂಡ್‌ಗೆ ಮನ್ನಣೆ ಸಿಕ್ಕಿದೆ ಎನ್ನುತ್ತಾರೆ ಮುನಾಫ್.
ಅಲ್ಪಾವಧಿಯಲ್ಲಿಯೇ ನಫೀಸಾ ಖುದ್ದು ಒಂದು ಬ್ರಾಂಡ್ ಆಗಿಬಿಟ್ಟಿದ್ದಾರೆ. ಖಾದ್ಯಗಳನ್ನು ಸವಿಯಲು ಅವರ ಮನೆಗೆ ಬರುವ ಜನರು ಹೊಟ್ಟೆ ತುಂಬ ಉಂಡು, ಮುಖದ ತುಂಬ ನಗುವನ್ನು ಹೊತ್ತುಕೊಂಡು ಅಮ್ಮನ ಕೈರುಚಿಯನ್ನು ಸವಿದ ಸಂತೃಪ್ತಿಯೊಂದಿಗೆ ಮರಳುತ್ತಾರೆ. ತಾಯಿಯೇ ತನ್ನ ಯೋಜನೆಯ ಬ್ರಾಂಡ್ ಆಗಿರುವುದು ತನ್ನ ಅತ್ಯಂತ ದೊಡ್ಡ ಯಶಸ್ಸು ಎನ್ನುತ್ತಾರೆ ಮುನಾಫ್.
ಫೇಸ್‌ಬುಕ್‌ನ ಸದ್ಬಳಕೆ
ಫೇಸಬುಕ್‌ಗಾಗಿಯೇ ಮುನಾಫ್ ವಾರಕ್ಕೆ 700 ರೂ.ವ್ಯಯಿಸುತ್ತಾರೆ ಎಂದರೆ ಅಚ್ಚರಿ ಪಡಬೇಡಿ. ಬೋಹ್ರಿ ಕಿಚನ್ ಪುಟವನ್ನು ಆರಂಭಿಸಿದ ಪ್ರಾಥಮಿಕ ಹಂತದಲ್ಲಿ ಕೆಲವು ಲೈಕ್‌ಗಳನ್ನು ಪಡೆಯಲು ಅವರು ಪ್ರಯತ್ನಿಸಿದ್ದರು. ಆದರೆ ವಾಸ್ತವದಲ್ಲಿ ಅದರಿಂದ ಯಾವುದೇ ನೆರವು ಸಿಕ್ಕಿರಲಿಲ್ಲ. ಮುನಾಫ್ ಈಗ ಫೇಸ್‌ಬುಕ್‌ನಲ್ಲಿ ಟಾರ್ಗೆಟೆಡ್ ಅಡ್ವರ್ಟ್ವೈಸಿಂಗ್‌ನ್ನು ಕರಗತ ಮಾಡಿಕೊಂಡಿದ್ದಾರೆ.