varthabharthi


ಕಮೆಂಟರಿ

ತಡವಾದರೂ ತಲೆ ಎತ್ತಿದ ರೋಹನ್ ಬೋಪಣ್ಣ

ವಾರ್ತಾ ಭಾರತಿ : 10 Jun, 2017
ಪಾರ್ವತೀಶ ಬಿಳಿದಾಳೆ

ಭಾರತದ ಟೆನಿಸ್‌ನ ಬಾವುಟ ದೂರದ ಫ್ರಾನ್ಸ್ ದೇಶದಲ್ಲಿ ಹಾರಾಡಿದೆ. ಕೊಡಗಿನಲ್ಲಿ ಪ್ಲಾಂಟರ್ ಕುಟುಂಬವೊಂದರಲ್ಲಿ ಜನಿಸಿ ಬೆಂಗಳೂರಿನ ಕಾಕ್ಸ್ ಟೌನ್‌ನಲ್ಲಿ ಟೆನಿಸ್ ಆಡುತ್ತಾ ಬೆಳೆದ ರೋಹನ್ ಬೋಪಣ್ಣ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಚಾಂಪಿಯನ್ ಆಗಿದ್ದಾರೆ.

ರೋಹನ್ ಜೊತೆ ಮಿಶ್ರ ಡಬಲ್ಸ್‌ನಲ್ಲಿ ಆಡಿದವಳು ಕೆನಡಾದ ಗ್ಯಾಬ್ರಿಯಲ್ ಡೆಬ್ರೋವ್‌ಸ್ಕಿ.

ವಿಶ್ವ ಟೆನಿಸ್‌ನ ಎಟಿಪಿ ರ್ಯಾಂಕಿಂಗ್‌ನಲ್ಲಿ 2007ರಲ್ಲಿ 213ನೆ ಸ್ಥಾನ ಪಡೆದಿದ್ದೇ ಬೋಪಣ್ಣರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಡಬಲ್ಸ್ ಆಟದಲ್ಲಿ 2013ರಲ್ಲಿ ಬೋಪಣ್ಣ ಜೋಡಿ ವಿಶ್ವದ ನಂ. 3ನೆ ರ್ಯಾಂಕ್ ಹೊಂದಿತ್ತು.

ಭಾರತದ ಟೆನಿಸ್ ಆಟಗಾರರು ಸಿಂಗಲ್ಸ್ ನಲ್ಲಿ ದಾಂಗುಡಿಯಿಡುವ ಸಾಧ್ಯತೆ ಸದ್ಯದ ಭವಿಷ್ಯದಲ್ಲಿ ಕಾಣುತ್ತಿಲ್ಲ. ಆದರೆ ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್‌ನಲ್ಲಿ ಅನೇಕ ಟ್ರೋಫಿಗಳನ್ನು ಜಯಿಸುತ್ತಿರುವುದು ಗಮನಾರ್ಹವಾಗಿದೆ.

ರೋಹನ್ 2007ರಲ್ಲಿ ಪಾಕಿಸ್ತಾನದ ಐಸಾಮುಲ್‌ಹಕ್ ಖುರೇಷಿ ಜೊತೆಗೂಡಿ ಮೂರು ವರ್ಷ ಡಬಲ್ಸ್ ಆಡಿ ನಾಲ್ಕು ಚಾಂಪಿಯನ್‌ಶಿಪ್ ಜಯಿಸಿದ್ದರು. ಈ ಜೋಡಿಯು ಟೆನಿಸ್ ಜಗತ್ತಿನಲ್ಲಿ ‘ಇಂಡೋ-ಪಾಕ್ ಎಕ್ಸ್‌ಪ್ರೆಸ್’ ಎಂದೇ ಪ್ರಖ್ಯಾತವಾಗಿತ್ತು. ಆದರೆ ಅದೇನು ಕಾಯಿಲೆ ಬಂತೋ ಈ ವಿಜಯಿ ಜೋಡಿ ಮುರಿದು ದೂರಾಯಿತು. ನಂತರ ಬೋಪಣ್ಣ ಕನಿಷ್ಠ ಹತ್ತು ಬೇರೆ ಬೇರೆ ಆಟಗಾರರೊಂದಿಗೆ ಜೊತೆಯಾಟ ಆಡಲು ಯತ್ನಿಸಿ ಕೆಟ್ಟದಾಗಿ ಸೋಲತೊಡಗಿದ್ದರು. ಬೋಪಣ್ಣನ ಟೆನಿಸ್ ಕೆರಿಯರ್ ಮುಗಿಯಿತು ಎಂದು ಎಲ್ಲಾ ಅಂದುಕೊಳ್ಳುತ್ತಿದ್ದಾಗಲೇ ಈಗ ತನ್ನ ಆಟದ ಬದುಕಿನ ಮೊಟ್ಟಮೊದಲ ಹಾಗೂ ಮಹತ್ವದ ಗ್ರಾಂಡ್ ಸ್ಲಾಂ ಟೂರ್ನಿಯೊಂದರಲ್ಲಿ ಬೋಪಣ್ಣ ಚಾಂಪಿಯನ್ ಆಗಿದ್ದಾನೆ.

ಈಗ ಮೂವತ್ತೇಳನೆ ವರ್ಷದಲ್ಲಿ ಸಾಗುತ್ತಿರುವ ಬೋಪಣ್ಣರಿಗೆ ಇನ್ನೂ ಹೆಚ್ಚಿನ ಟೆನಿಸ್ ಜೀವನ ಉಳಿದಿರುವಂತಿಲ್ಲ. ಆದರೂ ತನ್ನ ಬಲಿಷ್ಟ ನರ್ವ್, ವಸ್‌ಗಳ ಮೂಲಕ ತಲೆ ಎತ್ತುತ್ತಿರುವುದು ಅಭಿನಂದನಾರ್ಹ.

ಮಹೇಶ್ ಭೂಪತಿ ಜಪಾನಿನ ಆಟಗಾರ್ತಿ ರೀಕಾ ಹಿರಾಕಿ ಜೊತೆಗೂಡಿ 20 ವರ್ಷಗಳ ಹಿಂದೆ ಫ್ರೆಂಚ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ಗೆದ್ದಿದ್ದರು. ಅದರ ಮೇಲೆ ಈಗಲೇ ಫ್ರೆಂಚ್ ಓಪನ್‌ನ ಮಣ್ಣಿನ ಅಂಗಳದಲ್ಲಿ ಕನ್ನಡಿಗನೊಬ್ಬ ಗೆಲುವಿನ ನಗೆ ಬೀರುತ್ತಿದ್ದಾನೆ.

ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಭಾರತ ರೂಪಿಸಿರುವ ಅತ್ಯುತ್ತಮ ಟೆನಿಸ್ ಆಟಗಾರರೆಂದರೆ ಲಿಯಾಂಡರ್ ಪೇಸ್. ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಸೋಮದೇವ ವರ್ಮನ್ ಹಾಗೂ ರೋಹನ್ ಬೋಪಣ್ಣ, ಇವರೆಲ್ಲಾ ಈಗ ನಲವತ್ತರ ವಯಸ್ಸಿನ ಆಸು-ಪಾಸಿನಲ್ಲಿದ್ದಾರೆ. ವಿಶ್ವ ಟೆನಿಸ್‌ನ ಸ್ಪರ್ಧೆಯ ಪ್ರವಾಹವು ಇನ್ನೇನು ಕೆಲಕಾಲದಲ್ಲಿಯೇ ಇವರನ್ನೆಲ್ಲಾ ಬದಿಗೆ ಸರಿಸಿ ಮುಂದೆ ಸಾಗುವುದು ದಿಟ.

ಈ ಪೀಳಿಗೆಯ ಆಟಗಾರರು ಟೆನಿಸ್ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ಮುನ್ನ ವಿಜಯ್ ಅಮೃತರಾಜ್, ರಮೇಶ್ ಕೃಷ್ಣನ್-ಬಹುಶಃ ಒಂದರ್ಧ ಶತಮಾನ ಕಾಲ-ಬಿಟ್ಟೂ ಬಿಡದೆ ಟೆನಿಸ್ ಆಡುತ್ತಾ ಮೊದಲ ಅಥವಾ 2ನೆ ಸುತ್ತಿನಲ್ಲೇ ಟೂರ್ನಿಗಳಿಂದ ನಿರ್ಗಮಿಸುವ ಪರಿಪಾಟ ಇಟ್ಟುಕೊಂಡಿದ್ದರು. ಆದರೆ ಕಳೆದ ದಶಕದಿಂದೀಚೆಗೆ ಭಾರತೀಯ ಟೆನಿಸ್ ಆಟಗಾರರು ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಿ ಗೆದ್ದಿದ್ದಾರೆ. ಇವರೆಲ್ಲಾ ಅತ್ಯುತ್ತಮ ಫಾರಂನಲ್ಲಿದ್ದಾಗಲೂ ಗೆಲ್ಲಲಾರದೆ ಹೋದದ್ದಕ್ಕೆ ಮುಖ್ಯ ಕಾರಣವೇನೆಂದರೆ ಸೂಕ್ತ ಜೊತೆಗಾರರನ್ನು ಆರಿಸಿಕೊಳ್ಳುವಲ್ಲಿ ವಿಫಲರಾದದ್ದು.

ರೋಹನ್ ಕೂಡಾ ಇದುವರೆಗೂ ಹತ್ತು ಜನ ಸಹ ಆಟಗಾರರನ್ನು ಬದಲಾಯಿಸಿದ್ದಾರೆ. ಭೂಪತಿ, ಲಿಯಾಂಡರ್, ಸಾನಿಯಾ ಮಿರ್ಜಾ ವರ್ಷಕ್ಕೆ ನಾಲ್ವರು ಸಹ ಆಟಗಾರರನ್ನು ಬದಲಾಯಿಸುತ್ತಾ ತಮ್ಮ ಟೆನಿಸ್ ಕೆರಿಯರ್‌ನ ಅನೇಕ ಸುವರ್ಣಾವಕಾಶಗಳನ್ನು ತಾವೇ ತಮ್ಮ ಕೈಯಾರೆ ಹಾಳು ಮಾಡಿಕೊಂಡರು. ಇದಕ್ಕೆ ಅವರ ಈಗೋಗಳೇ ಕಾರಣವಾದದ್ದು ದುರಂತ.

ಈ ಸಮಸ್ಯೆಯನ್ನು ಸದ್ಯಕ್ಕೆ ಬಗೆಹರಿಸಿಕೊಂಡಂತೆ ಕಾಣುತ್ತಿರುವ ರೋಹನ್ ಬೋಪಣ್ಣ ಭಾರತಕ್ಕೆ ಇನ್ನಷ್ಟು ಟ್ರೋಫಿ ಗಳನ್ನು ಗೆದ್ದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಇಂಡಿಯಾದಲ್ಲಿ ಟೆನಿಸ್ ಇನ್ನಷ್ಟು ಜನಪ್ರಿಯವಾಗ ಬೇಕೆಂದರೆ, ಹೊಸ ಚಾಂಪಿಯನ್ ಆಟಗಾರರು ಹುಟ್ಟಬೇಕೆಂದರೆ ಆವಾಗೀವಾಗಲಾದರೂ ಗೆಲುವುಗಳು ಬೇಕಾಗುತ್ತದೆ.

ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಗಂಟೆಯ ಪ್ರಾಕ್ಟೀಸ್‌ಗೆ ಮುನ್ನೂರು ರೂಪಾಯಿ ತೆತ್ತು ಟೆನಿಸ್ ಕಲಿಯುತ್ತಿದ್ದ ರೋಹನ್ ಬೋಪಣ್ಣ ಈಗ ನಾವೆಲ್ಲಾ ಖುಷಿಪಡುವಂತೆ ಆಡುತ್ತಿದ್ದಾರೆ. ಗ್ರ್ಯಾಂಡ್ ಸ್ಲಾಂ ಟೂರ್ನಿಯೊಂದರಲ್ಲಿ ಚಾಂಪಿಯನ್ ಆಗಿದ್ದಾರೆ. ಅದಕ್ಕಾಗಿ ರೋಹನ್‌ರನ್ನು ಅಭಿನಂದಿಸೋಣ.

ಆದರೆ,

ವರ್ಷಗಳ ಹಿಂದೆಯೇ ತರಬೇತಿಗೆ/ಪ್ರಾಕ್ಟೀಸ್‌ಗೆ ಗಂಟೆಗೆ ಮುನ್ನೂರು ರೂಪಾಯಿ ಶುಲ್ಕವಿತ್ತೆಂದರೆ 2017ರಲ್ಲಿ ಅದು ಗಂಟೆಗೆ ಕನಿಷ್ಠ ಒಂದು ಸಾವಿರ ರೂಪಾಯಿಗಳಾದರೂ ಆಗಿರಬಹುದು.ಇದು ಸಾಮಾನ್ಯ ಯುವಜನರ ಕೈಗೆ ನಿಲುಕುವ ಸಂಗತಿಯಲ್ಲ.

ಭಾರತದಲ್ಲಿ ಟೆನಿಸ್ ಯಾಕೆ ಬೆಳೆಯುವುದಿಲ್ಲ ಎಂಬುದು ನಿಮಗರ್ಥವಾಯಿತೇ?

Parvateesha.b@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)