ಲೆಕ್ಕದ ಮೇಷ್ಟ್ರ ಲೆಕ್ಕ ತಪ್ಪಿತೇ?
ಧಾರಾವಾಹಿ-40
ಯುನಿಟ್ಗೆ ಬಂದ ಪಪ್ಪು ಎರಡು ದಿನ ಯಾರೊಂದಿಗೂ ಮಾತನಾಡಿರಲಿಲ್ಲ. ಅಪ್ಪಯ್ಯ ಬಂದು ಎರಡು ಬಾರಿ ಅವನನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಪಪ್ಪು ಸಿಡಿದಿದ್ದ
‘‘ಒಬ್ಬ ಸೈನಿಕನಾಗಿ ವೆಂಕಟನ ಬಗ್ಗೆ ತಪ್ಪಾಗಿ ಮಾತ ನಾಡಲು ನಾಚಿಕೆಯಾಗುವುದಿಲ್ಲವೆ ನಿನಗೆ?’’
ಆ ಮಾತಿಗೆ ಅಪ್ಪಯ್ಯ ಆವಕ್ಕಾಗಿದ್ದ.
‘‘ಆ ವಿಷಯ ಈಗ್ಯಾಕೆ? ಊರಿನಲ್ಲಿ ಎಲ್ಲರೂ ಕ್ಷೇಮ ಅಲ್ವಾ?’’
‘‘ವೆಂಕಟನ ಪತ್ನಿಯನ್ನು ನೋಡಿ ಬಂದೆ...’’
ಅಪ್ಪಯ್ಯ ಕಲ್ಲಿನಂತೆ ಅವನನ್ನೇ ನೋಡುತ್ತಾ ನಿಂತ. ಪಪ್ಪುವಿನ ಮುಖದಲ್ಲಿ ವ್ಯಗ್ರತೆ ಎದ್ದು ಕಾಣುತ್ತಿತ್ತು. ‘‘ಹುತಾತ್ಮ ವೆಂಕಟನ ಪತ್ನಿ, ಅವನ ಮಕ್ಕಳನ್ನು, ಅವನ ಮನೆಯನ್ನು ನೋಡಿ ಬಂದೆ. ಈಗ ಅದು ನಮ್ಮ ಊರಿನ ಸ್ಮಾರಕ ...’’
ಮಾತಿಗೆ ಒಂದಕ್ಕೊಂದು ತಾಳೆ ಇದ್ದಿರಲಿಲ್ಲ. ಪಪ್ಪುವಿನ ಮನಸ್ಸು ಸರಿಯಿಲ್ಲ ಎನ್ನುವುದು ಅಪ್ಪಯ್ಯನಿಗೆ ಅರ್ಥವಾಯಿತು. ಅವನನ್ನು ಸ್ವಲ್ಪ ದಿನ ಅವನಷ್ಟಕ್ಕೆ ಬಿಡುವುದು ಒಳ್ಳೆಯದು ಎನ್ನಿಸಿತು. ಯುನಿಟ್ಗೆ ಬಂದು ಇನ್ನೂ ತರಬೇತಿಗೆ ಸೇರ್ಪಡೆಗೊಂಡಿರಲಿಲ್ಲ ಆತ. ರಜೆ ಇನ್ನೂ ಉಳಿದಿದ್ದುದರಿಂದ ಯಾರಿಂದಲೂ ಆಕ್ಷೇಪ ಬಂದಿರಲಿಲ್ಲ. ರಾತ್ರಿಯಿಡೀ ನಿದ್ರೆಗೆಡುತ್ತಿದ್ದ ಪಪ್ಪು, ಹಗಲು ನಿದ್ದೆ ಮಾಡುತ್ತಿದ್ದ.
ಒಂದು ಮಧ್ಯ ರಾತ್ರಿ ಅಪ್ಪಯ್ಯ ಕಣ್ಣು ತೆರೆದಾಗ ಆ ಮಂದ ಬೆಳಕಿನಲ್ಲಿ ತನ್ನ ಮಂಚದ ಪಕ್ಕ ಪಪ್ಪು ಕಲ್ಲಿನಂತೆ ನಿಂತಿದ್ದ. ಅಪ್ಪಯ್ಯ ಬೆಚ್ಚಿ ಎದ್ದು ಕುಳಿತ. ಅವನಿಗೆ ಹೃದಯವೇ ಬಾಯಿಗೆ ಬಂದಂತಾಗಿತ್ತು.
‘‘ಏನೋ ಪಪ್ಪು...ಏನಾಯಿತು?’’ ಅಪ್ಪಯ್ಯ ಕೇಳಿದ.
‘‘ಶ್!...’’ ಎಂದು ತುಟಿಗೆ ಬೆರಳಿಟ್ಟ.
‘‘ಏನಾಯಿತು?’’ ‘‘ಶತ್ರುಗಳು...’’ ಪಪ್ಪು ಪಿಸುಗುಟ್ಟಿ ಹೇಳಿದ.
‘‘ಎಲ್ಲಿ?’’ ಅಪ್ಪಯ್ಯ ಆತಂಕದಿಂದ ಕೇಳಿದ.
‘‘ಗಡಿದಾಟಿ ಒಳ ಬಂದಿದ್ದಾರೆ. ಪಾಕಿಸ್ತಾನದ ಗಡಿಯಿಂದ, ಚೀನಾದ ಗಡಿಯಿಂದ ಈಗಾಗಲೇ ಒಳ ಬಂದಿದ್ದಾರೆ. ನೀನಿಲ್ಲಿ ಗಾಢ ನಿದ್ದೆಯಲ್ಲಿದ್ದೀಯ. ನಾನೊಬ್ಬನೇ ಅವರ ಜೊತೆ ಹೋರಾಡುವುದು ಹೇಗೆ?’’
‘‘ಕನಸು ಬಿತ್ತೇ?’’ ಅಪ್ಪಯ್ಯ ನಕ್ಕು ಕೇಳಿದ. ‘‘ನಿದ್ದೆ ಬಿಟ್ಟು ದೇಶ ಕಾಯುತ್ತಿದ್ದೇನೆ. ನನಗೆ ಕನಸು ಗಳು ಹೇಗೆ ಬೀಳಬೇಕು ? ಹೊರಗೆಲ್ಲ ಶತ್ರು ಸೇನೆಯ ಯೋಧರು ಅವಿತುಕೊಂಡಿದ್ದಾರೆ. ಯಾವ ಕ್ಷಣದಲ್ಲೂ ಅವರು ಗುಂಡು ಹಾರಿಸಬಹುದು. ನಾನು ಎಚ್ಚರ ಇದ್ದೇನೆ ಎಂದು ಅವರು ಸುಮ್ಮಗಿದ್ದಾರೆ...’’ ಅಪ್ಪಯ್ಯನ ಕಿವಿಯ ಬಳಿ ಬಂದು ಪಪ್ಪು ಹೇಳಿದ.
‘‘ನೀನು ಹೋಗು...ನಿದ್ದೆ ಮಾಡು...’’ ಅಪ್ಪಯ್ಯ ಸಲಹೆ ಕೊಟ್ಟ.
‘‘ಯುದ್ಧ ಘೋಷಣೆಯಾಗಲೇ ಬೇಕು. ಯುದ್ಧ ಘೋಷಣೆಯಾಗಲೇ ಬೇಕು....ಶತ್ರುಗಳು ನುಗ್ಗಿದ್ದಾರೆ...ಯುದ್ಧ ಘೋಷಣೆಯಾಗಲೇ ಬೇಕು...’’ ಪಪ್ಪು ಒಮ್ಮೆಲೆ ಜೋರಾಗಿ ಅಬ್ಬರಿಸಿದ. ಕೊಠಡಿಯ ದೀಪ ಬೆಳಗಿತು. ಎಲ್ಲ ಸಹೊದ್ಯೋಗಿಗಳೂ ಆತಂಕ ದಿಂದ ಎದ್ದು ಕಣ್ಣುಜ್ಜಿಕೊಂಡರು. ‘‘ಏನಾಯಿತು...ಏನಾಯಿತು?’’ ಕೊಠಡಿ ತುಂಬಾ ಗುಜುಗುಜು.
ಪಪ್ಪುವನ್ನು ಅಪ್ಪಯ್ಯ ಸಮಾಧಾನಿಸಿ ಅವನ ಕೊಠಡಿಯ ಕಡೆಗೆ ಕರೆದೊಯ್ದ. ಅವನನ್ನು ಸಮಾಧಾನಿಸಿ ಮಲಗಿಸಿದ. ಅವನ ಪಕ್ಕದಲ್ಲೇ ಇವನೂ ಮಲಗಿಕೊಂಡ. ಆದರೆ ರಾತ್ರಿಯಿಡೀ ಪಪ್ಪು ಕಣ್ಣು ತೆರೆದೇ ಇದ್ದ. ಮರುದಿನ ಹಗಲು ಪಪ್ಪುವಿಗೆ ಗಾಢ ನಿದ್ದೆ. ಇದಾದ ಒಂದೆರಡು ದಿನದಲ್ಲಿ ಅವನು ಯಥಾಸ್ಥಿತಿಗೆ ಬಂದ. ಅಪ್ಪಯ್ಯನ ಜೊತೆಗೆ ಸಹಜವಾಗಿ ಮಾತನಾಡತೊಡಗಿದ. ಸಣ್ಣ ಹಾಸ್ಯಕ್ಕೂ ಜೋರಾಗಿ ನಗುತ್ತಿದ್ದ ಪಪ್ಪು. ಏನೇ ಇರಲಿ, ಪಪ್ಪುವಿನ ಮನಸ್ಸು ಸರಿಯಾಗುತ್ತಿದೆ ಎಂದು ಅಪ್ಪಯ್ಯನಿಗೆ ಸಮಾಧಾನ. ಕೆಲವು ದಿನಗಳು ಸಮಾಧಾನದಿಂದಲೇ ಹೋಯಿತು.
ಅದೊಂದು ದಿನ ರಾತ್ರಿ ಹವಾಲ್ದಾರ್ ಪಪ್ಪುವನ್ನು ತನ್ನ ಕೋಣೆಗೆ ಕರೆದ. ಹವಾಲ್ದಾರ್ ಸ್ವಲ್ಪ ಕುಡಿದಿದ್ದ. ‘‘ಪಪ್ಪು...ಮದುವೆಯಾಯಿತಂತೆ ನಿನಗೆ..ಹೌದೆ...’’ ಎಂದ.
ಪಪ್ಪು ಸುಮ್ಮಗೆ ನಿಂತಿದ್ದ.
‘‘ಹುಡುಗಿಯನ್ನು ಊರಲ್ಲೇ ಬಿಟ್ಟು ಬಂದೆಯಾ?’’ ಮತ್ತೆ ಕೇಳಿದ.
ಹತ್ತಿರ ಬಂದ ಹವಾಲ್ದಾರ್ ಮೆಲ್ಲಗೆ ಪಪ್ಪುವಿನ ಕೆನ್ನೆಯನ್ನು ಸವರಿದ. ಪಪ್ಪು ಸುಮ್ಮಗಿದ್ದ. ನಿಧಾನಕ್ಕೆ ಪಪ್ಪುವಿನ ಅಂಗಿಯ ಗುಂಡಿಯನ್ನು ಬಿಚ್ಚತೊಡಗಿದ. ಬಳಿಕ ಪಪ್ಪುವಿನ ಎದೆಯನ್ನು ಸವರಿದ. ಪಪ್ಪುವಿನ ಮುಷ್ಟಿ ಬಿಗಿಯಾಯಿತು. ಅವನೊಳಗೆ ಅಷ್ಟು ಶಕ್ತಿ ಎಲ್ಲಿತ್ತೋ? ‘‘ಜೈ ಹಿಂದ್’’ ಎಂದು ಜೋರಾಗಿ ಚೀರಿದವನೇ ಮುಷ್ಟಿಯಿಂದ ಹವಾಲ್ದಾರ್ನ ಮೂತಿಗೆ ಬಲವಾಗಿ ಗುದ್ದಿದ. ಆತ ಅಷ್ಟು ದೂರ ನೆಗೆದು ಬಿದ್ದಿದ್ದ. ಅವನ ಮೂಗಿನಿಂದ ಬಳಬಳ ರಕ್ತ ಸುರಿಯತೊಡಗಿತ್ತು. ಗದ್ದಲ ಕೇಳಿ ಅಲ್ಲಿದ್ದವರೆಲ್ಲ ಓಡಿ ಬಂದರು. ಒಂದೆಡೆ ಸಿಟ್ಟು, ಅಪಮಾನ, ನೋವು, ಗಾಬರಿ ಎಲ್ಲದರಿಂದ ಹವಾಲ್ದಾರ್ ಚೀರಾಡುತ್ತಿದ್ದ. ‘‘ಅನುಭವಿಸುತ್ತೀಯ...ನೀನು ಅನುಭವಿಸು ತ್ತೀಯ...ನಿನಗೆ ಪಾಠ ಕಲಿಸದೇ ಬಿಡುವುದಿಲ್ಲ...’’ ಹವಾಲ್ದಾರ್ ಒಂದೇ ಸಮನೆ ಚೀರುತ್ತಿದ್ದ.
ಸಹೋದ್ಯೋಗಿಗಳು ಪಪ್ಪುವನ್ನು ಹೊರ ಕರೆದುಕೊಂಡು ಹೋದರು. ಅಪ್ಪಯ್ಯ ಓಡಿ ಬಂದು ಪಪ್ಪುವಿನ ಭುಜ ಹಿಡಿದು ಕೇಳಿದ ‘‘ಪಪ್ಪು ಏನಾಯ್ತೋ?’’
ಪಪ್ಪು ಅಪ್ಪಯ್ಯನನ್ನು ನೋಡಿ ಮುಗುಳ್ನಕ್ಕ. ಆ ನಗು ನೋಡಿ ಅಪ್ಪಯ್ಯನಿಗೆ ಇನ್ನಷ್ಟು ಭಯವಾಯಿತು. ‘‘ಈ ಬೊಮ್ಮನ್ ಎಂದರೆ ಏನು ಎನ್ನುವುದನ್ನು ಆ ನಾಯಿಗೆ ತೋರಿಸಿದೆ...’’ ಎಂದು ತನ್ನ ಬಿಗಿದ ಮುಷ್ಟಿಯನ್ನು ಅಪ್ಪಯ್ಯನಿಗೆ ತೋರಿಸಿದ.
***
ಅಂತಹ ಮಳೆಗಾಲವನ್ನು ಪುತ್ತೂರು ಆಸುಪಾಸಿನ ಜನರು ಈ ಹಿಂದೆ ನೋಡಿರಲಿಲ್ಲ. ಕೆರೆಗದ್ದೆಗಳೆಲ್ಲ ಕೊಚ್ಚಿ ಕೊಂಡು ಹೋಗುವಂತಹ ಮಳೆ ಅದು. ಹೀಗೆ ಮಳೆ ಸುರಿದರೆ ಈ ಬಾರಿ ಸಂಗಮ ಆಗಿಯೇ ಆಗುತ್ತದೆ ಎಂಬ ಮಾತು ಉಪ್ಪಿನಂಗಡಿಯಲ್ಲಿ ಹರಿದಾಡ ತೊಡಗಿತ್ತು. ಕಂಚಿಕಲ್ಲು ಈ ಬಾರಿ ಮುಳುಗಿಯೇ ಬಿಡುತ್ತದೆ ನೋಡಿ ಎಂದು ಬಜತ್ತೂರಿನಲ್ಲಿ ಕೆಲವರು ಪಂಥ ಕಟ್ಟುವುದಕ್ಕೆ ತೊಡಗಿದ್ದರು. ನೇತ್ರಾವತಿಯ ನೆರೆ ನೀರು ಉಕ್ಕಿ, ಬಜತ್ತೂರಿನ ಮಸೀದಿಯ ಗೋಡೆಯನ್ನು ಇನ್ನೇನು ಮುಟ್ಟಿಯೇ ಬಿಡುತ್ತೇನೆ ಎಂದು ಬೆದರಿಕೆಯೊಡ್ಡುತ್ತಿತ್ತು. ನಮಾಝಿಗೆ ಬಂದವರು ಮಸೀದಿಯ ವಿಶಾಲ ಕಿಟಕಿಯಲ್ಲೇ ಇಡೀ ನದಿಯನ್ನು ನೋಡಬಹುದಿತ್ತು. ಎಂಜಿರಡ್ಕದಲ್ಲಿರುವ ಸುಬ್ಬಣ್ಣ ಭಟ್ಟರ ತೋಟ ಅರ್ಧಕ್ಕರ್ಧ ಕೃತಕ ನೆರೆಯಿಂದ ಮುಳುಗಿತ್ತು. ಅನಂತಭಟ್ಟರ ಮನೆಗೆ ಹೋಗುವ ದಾರಿಯಲ್ಲಿ ಸಿಗುವ ಕಿರುಸೇತುವೆಯೂ ಮುಳುಗುವ ಹಂತಕ್ಕೆ ಬಂದಿತ್ತು. ಗದ್ದೆಯ ಪುಣಿಯೆಲ್ಲ ನೀರಿನಿಂದಾವೃತವಾಗಿರುವ ಕಾರಣದಿಂದಲೋ ಏನೋ, ಅನಂತ ಭಟ್ಟರು ಶಾಲೆಗೂ ರಜೆ ಹಾಕಿ ಮನೆಯಲ್ಲಿ ಝಂಡಾ ಹೂಡಿ ಬಿಟ್ಟಿದ್ದರು. ಬಜತ್ತೂರು ಎಂದಲ್ಲ ಇಡೀ ಪುತ್ತೂರು ತಾಲೂಕು ಸೂರ್ಯನನ್ನು ನೋಡದೆ ಎರಡು ವಾರ ದಾಟಿದೆ. ಪಪ್ಪು ಮನೆ ಬಿಟ್ಟು ಹೋಗಿ ಆರು ತಿಂಗಳು ಕಳೆದಿವೆ. ಅನಂತಭಟ್ಟರು ಮತ್ತು ಲಕ್ಷ್ಮಮ್ಮರ ನಡುವೆ ಈಗ ವೌನದ ಕೋಟೆ ಎದ್ದಿದೆ. ಇತ್ತೀಚೆಗೆ ಸಾರ್ವಜನಿಕ ಸಭೆಗಳಿಗೆ, ಸಮಾರಂಭಗಳಿಗೆ ಹೋಗುವುದನ್ನು ಭಟ್ಟರು ಕಡಿಮೆ ಮಾಡಿದ್ದರು. ಮನೆಯ ಜಗಲಿಯ ಆರಾಮ ಕುರ್ಚಿಯಲ್ಲಿ ಒರಗಿ, ಮಾಡಿನಿಂದ ಧೋ ಎಂದು ಇಳಿಯುತ್ತಿರುವ ಮಳೆ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತುಕೊಳ್ಳುತ್ತಿದ್ದರು. ಪಪ್ಪು ಊರು ಬಿಟ್ಟ ಬಳಿಕ ಗುರೂಜಿ ದಾರಿಯ ಲ್ಲೊಮ್ಮೆ ಸಿಕ್ಕಿದ್ದರು ‘‘ನಿಮ್ಮ ಮಗನಿಗೆ ಇನ್ನೊಂದು ಸಭೆಯಲ್ಲಿ ಸನ್ಮಾನ ಇಟ್ಟುಕೊಳ್ಳಬೇಕು ಎಂದು ನಾವೆಲ್ಲ ಯೋಚಿಸಿದ್ದೆವು. ಅಷ್ಟರಲ್ಲಿ ಹೊರಟು ಬಿಡೋದಾ ಅವನು? ನನ್ನಲ್ಲೊಂದು ಮಾತೂ ಹೇಳಿಲ್ಲ....’’ ಎಂದು ಹಂಚಿಕೊಂಡಿದ್ದರು.
ಅನಂತಭಟ್ಟರು ಒಣ ನಗುವನ್ನಷ್ಟೇ ಚೆಲ್ಲಿದರು. ‘‘ಶಾಖೆಗೂ ಬರುವುದು ಕಡಿಮೆ ಮಾಡಿದ್ದೀರಿ ನೀವು....ನಾಳೆ ನಮ್ಮ ಚುನಾವಣೆಯ ಅಭ್ಯರ್ಥಿಯ ಪರ ಉಪ್ಪಿನಂಗಡಿಯಲ್ಲಿ ಸಭೆ ಇದೆ...ನಿಮ್ಮ ವಿದ್ಯಾರ್ಥಿ ಗಳಿಗೆಲ್ಲ ಸ್ವಲ್ಪ ಹೇಳಿ....’’ ಗುರೂಜಿ ಹೇಳಿದರು.
‘‘ಎಲ್ಲಿ ನೋಡಿದರೂ ನೀರು. ಹೊರಗೆ ಕಾಲಿಡು ವುದು ಹೇಗೆ...’’ ಎಂದು ಭಟ್ಟರು ಸಮಜಾಯಿಶಿ ನೀಡಿ, ಮನೆಯ ಕಡೆ ನಡೆದಿದ್ದರು. ಒಂದು ದಿನ ಪದ್ಮನಾಭರು ಯಾವುದೋ ಫೋಟೋ ಹಿಡಿದುಕೊಂಡು ಬಂದಾಗ ‘‘ನನ್ನ ಮಗನನ್ನು ವರಿಸುವ ಯೋಗ್ಯತೆಯಿರುವ ಒಂದು ಹೆಣ್ಣು ಮಗಳೂ ಈ ಊರಲ್ಲಿಲ್ಲ. ನಿನ್ನ ಫೋಟೋ ಜೊತೆಗೆ ತೊಲಗು ಇಲ್ಲಿಂದ’’ ಎಂದು ಹೂಂಕರಿಸಿ ಬಿಟ್ಟರು. ಹಾಗೆ ಹೋದ ಪದ್ಮನಾಭರು ಮತ್ತೆ ಈ ಕಡೆ ತಲೆಯೇ ಹಾಕಿರಲಿಲ್ಲ. ಮನೆಯಿಂದ ಹೋದ ಮಗನಿಂದ ಯಾವುದೇ ಪತ್ರ ಇದ್ದಿರಲಿಲ್ಲ. ಇವರೇ ಒಂದೆರಡು ಪತ್ರಗಳನ್ನು ಬರೆದು ಹಾಕಿದರು. ಉತ್ತರವಿಲ್ಲ. ಅದರ ನಿರೀಕ್ಷೆಯೂ ದಂಪತಿಗೆ ಇದ್ದಿರಲಿಲ್ಲ. ಎಲ್ಲಿದ್ದರೂ ಅವನು ಚೆನ್ನಾಗಿದ್ದರೆ ಸಾಕು ಎನ್ನುವುದು ಅವರ ಹಾರೈಕೆಯಾಗಿತ್ತು. ಒಮ್ಮಾಮ್ಮೆ ಎಲ್ಲಿಗೋ ಹೊರಡಲೆಂದು ಸಿದ್ಧರಾಗಿ ಛತ್ರಿಯೊಂದಿಗೆ ಅಂಗಳಕ್ಕಿಳಿಯುತ್ತಿದ್ದರು. ಆದರೆ ಅಂಗಳದಲ್ಲಿ ನಿಂತು ನೋಡಿದರೆ ಗದ್ದೆಗಳನ್ನೆಲ್ಲ ನೆರೆ ನೀರು ಒಂದು ಮಾಡಿವೆ. ನನ್ನ ಮನೆ ಇಡೀ ಊರಿನಿಂದಲೇ ಪ್ರತ್ಯೇಕವಾಗಿ ಬಿಟ್ಟಿತೇ? ಆತಂಕದಿಂದ ಅದನ್ನು ನೋಡುತ್ತಿದ್ದರು. ನಡೆದುಕೊಂಡು ಹೋಗುವ ಕಾಲುದಾರಿಯನ್ನೆಲ್ಲ ನೀರು ಆವರಿಸಿಕೊಂಡಿತ್ತು. ಮತ್ತೆ ಬಂದು ಜಗಲಿಯಲ್ಲಿರುವ ಆರಾಮಕುರ್ಚಿಯಲ್ಲಿ ಕುಕ್ಕರಿಸಿ ಬಿಡುತ್ತಿದ್ದರು. ಪಪ್ಪುವಿಗೆ ಸೇನೆ ಸೇರುವ ಆಸಕ್ತಿ ಹುಟ್ಟಿದ್ದು ಹೇಗೆ ಎನ್ನುವುದನ್ನೇ ಅನಂತ ಭಟ್ಟರು ಪದೇ ಪದೇ ಯೋಚಿಸುತ್ತಿದ್ದರು. ಚೆನ್ನಾಗಿ ಹಾಡುತ್ತಿದ್ದ. ಇವಳು ಹೇಳಿದ ಹಾಗೆ ಸಂಗೀತಕ್ಕಾಗಿಯೇ ಹುಟ್ಟಿದವನು ಅವನು. ನರಸಿಂಹಯ್ಯನಲ್ಲಿಗೆ ಸಂಗೀತ ಕಲಿಯಲೂ ಕಳುಹಿಸಿದ ನೆನಪು. ಸಂಗೀತ ವಿದ್ವಾನ್ ಆಗಿದ್ದಿದ್ದರೆ ಇದೀಗ ಊರಲ್ಲಿಯೂ ಗೌರವದೊಂದಿಗೆ ನಮ್ಮ ಕಣ್ಣೆದುರೇ ಇರುತ್ತಿದ್ದನೇನೋ. ನರಸಿಂಹಯ್ಯ ನನ್ನ ಮಗನ ಸಂಬಂಧಕ್ಕಾಗಿ ತಾನೇ ಜಾತಕ ಹಿಡಿದು ಬರುತ್ತಿದ್ದನೇನೋ. ‘‘ಅಪ್ಪಾ ನಾನು ಸೈನಿಕನಾಗಿ ಈ ದೇಶ ಕಾಯುತ್ತೇನೆ’’ ಎಂದಾಗ ನನಗೆ ಹೆಮ್ಮೆ ಅನ್ನಿಸಿತ್ತು. ‘‘ನೋಡೇ...ನಿನ್ನ ಮಗ ಯೋಧನಾಗ್ತಾನಂತೆ...ಗುರೂಜಿ ಅವರು ಪ್ರತಾಪ ಸಿಂಹ ಎಂಬ ಹೆಸರಿಟ್ಟಿದ್ದು ಸಾರ್ಥಕವಾಗಿ ಬಿಟ್ಟಿತು ಬಿಡು’’ ಎಂದು ಹಿಗ್ಗಿ ಹೇಳಿದ್ದೆ. ಅಷ್ಟೇ ಅಲ್ಲ, ಅವತ್ತು ಗುರೂಜಿಯ ಜೊತೆಗೂ ಇದನ್ನು ಹಂಚಿಕೊಂಡಿದ್ದೆ. ಆದರೆ ಮಗ ಸೇನೆ ಸೇರಿಯೇ ಬಿಡುತ್ತಾನೆ ಎಂದು ತಾನು ನಿರೀಕ್ಷಿಸಿರಲಿಲ್ಲ. ಗುರೂಜಿ ಮಗ ಸೇನೆ ಸೇರಿದ ಸುದ್ದಿಯನ್ನು ಹಿಡಿದುಕೊಂಡು ಬಂದಾಗ ಏನು ಪ್ರತಿಕ್ರಿಯಿಸುವುದು ಎನ್ನುವುದೇ ಅರ್ಧವಾಗಲಿಲ್ಲ. ಗುರೂಜಿಯ ಹೆಮ್ಮೆಯ ಮಾತಿಗೆ ಮರುಳಾದೆ. ಎಷ್ಟಾದರೂ ದೇಶ ಸೇವೆ ತಾನೆ. ಗುರೂಜಿಯಂತಹ ಹಿರಿಯರು ಅವನ ಬೆನ್ನಿಗಿರುವಾಗ, ಇಡೀ ದೇಶ ಅವನ ಜೊತೆಯಲ್ಲಿರುವಾಗ ನಾನು ಕಳೆದುಕೊಳ್ಳುವುದಾದರೂ ಏನನ್ನು? ಎಂದು ಯೋಚಿಸಿದೆ. ಎಂತಹ ಲೆಕ್ಕವನ್ನೂ ಬಿಡಿಸಿಡುತ್ತಿದ್ದ ಈ ಲೆಕ್ಕದ ಮೇಷ್ಟ್ರ ಲೆಕ್ಕ, ಮಗನ ವಿಷಯದಲ್ಲೇ ತಪ್ಪಿ ಬಿಟ್ಟಿತೇ?
(ಗುರುವಾರ ಸಂಚಿಕೆಗೆ)