ಹಕ್ಕು ಪತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ರೈತ
ಹಾವೇರಿ, ಜೂ.12: ಬಗರ್ ಹುಕುಂ ಜಮೀನಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಒಬ್ಬ ರೈತ ಸಂಪೂರ್ಣ ಬೆತ್ತಲಾದ ಘಟನೆ ನಗರದ ಹಾವೇರಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ನಗರದ ಮುರುಘಾಮಠದಿಂದ ಸೊಪ್ಪನ್ನು ಸೊಂಟಕ್ಕೆ ಕಟ್ಟಿಕೊಂಡ ಪ್ರತಿಭಟನೆ ನಡೆಸಿದ ರೈತರು ಅರೆಬೆತ್ತಲೆಯಾಗಿಯೇ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಬಾಯಿಯನ್ನು ಬಡಿದುಕೊಂಡು ಆಗ್ರಹಿಸಿದರು. ಈ ವೇಳೆ ಒಬ್ಬ ರೈತ ಸಂಪೂರ್ಣ ಬೆತ್ತಲಾಗಿ ಬಾಯಿ, ಬಾಯಿ ಬಡಿದುಕೊಂಡು ನ್ಯಾಯಬೇಕೆಂದು ಕೂಗಾಡಿದ್ದು ರೈತರ ಅಸಹಾಯಕತೆಗೆ ಸಾಕ್ಷಿಯಾಗಿತ್ತು
ಸಂಪೂರ್ಣ ಬೆತ್ತಲಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ, ನ್ಯಾಯಕ್ಕಾಗಿ ಬಾಯಿ ಬಡಿದುಕೊಳ್ಳುತ್ತಲೆ ಸಂಪೂರ್ಣ ನಿತ್ರಾಣನಾದ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸರು ಆತನನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿ ಹತ್ತಿರವೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹುಚ್ಚವನಹಳ್ಳಿ ಮಂಜುನಾಥ್ ಮಾತನಾಡಿ, ಬಗರ್ ಹುಕುಂ ಭೂಮಿಯ ಹಕ್ಕುಪತ್ರಕ್ಕಾಗಿ ಕಳೆದ 30-40 ವರ್ಷಗಳಿಂದ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಅಧಿಕಾರಿಗಳ ಹತ್ತಿರಕ್ಕೆ ತಿರುಗಾಡಿ ಇಲ್ಲಿನ ರೈತರು ಹೈರಾಣಾಗಿದ್ದಾರೆ. ಹೀಗಾಗಿ ಅನ್ಯಮಾರ್ಗವಿಲ್ಲದೆ ಅರೆ ಬೆತ್ತಲೆ ಪ್ರತಿಭಟನೆ ಮಾಡಬೇಕಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.