ಬಿಜೆಪಿ-ಯುವವಾಹಿನಿ ತಿಕ್ಕಾಟ
ಮಾರ್ಚ್‌ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಗೆಲುವಿನ ಬಳಿಕ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾಗಿ ಎರಡೂವರೆ ತಿಂಗಳಾಗಿದೆ, ಅಷ್ಟೆ. ಆದರೆ, ಈಗಾಗಲೇ ಹಿಂದೂ ಯುವ ವಾಹಿನಿ ಮತ್ತು ಆಳುವ ಪಕ್ಷದ ನಡುವಿನ ಜಗಳದಿಂದಾಗಿ ಅವರ ರಾಜ್ಯದ ಅನೇಕ ಕಡೆಗಳಲ್ಲಿ ತಿಕ್ಕಾಟಗಳು, ಘರ್ಷಣೆಗಳು ನಡೆದಿವೆ.
ಹಿಂದೂ ಯುವ ವಾಹಿನಿಯ ಹಿರಿಯ ಪದಾಧಿಕಾ ರಿಗಳು ಈ ತಿಕ್ಕಾಟಗಳನ್ನು ಲಘುವಾಗಿ ಪರಿಗಣಿಸಲು ಪ್ರಯತ್ನಿಸಿದ್ದಾರಾದರೂ, ಬಿಜೆಪಿ ಕಾರ್ಯಕರ್ತರು ಆದಿತ್ಯನಾಥ್‌ರ ಈ ಖಾಸಗಿ ಸಂಘಟನೆಯ ಬಗ್ಗೆ ಭಾರೀ ಅನುಮಾನ ವ್ಯಕ್ತಪಡಿಸಿರುವ ಹಾಗೆ ಕಾಣುತ್ತಿದೆ. ‘‘ಇದು (ಯುವವಾಹಿನಿ) ತನ್ನ ಆಕ್ರಮಣ ಶೀಲ ಕಾರ್ಯಕ್ಷೇತ್ರ ವಿಸ್ತಾರದಿಂದಾಗಿ ತಾವು ರಾಜ್ಯದಲ್ಲಿ ಆಳುವ ಪಕ್ಷ ಎಂಬ ತಮ್ಮ ಭಾವನೆಯನ್ನೆ ಕಿತ್ತುಕೊಳ್ಳುತ್ತಿದೆ’’ ಎಂದು ತಮಗನ್ನಿಸುತ್ತದೆಂದು ಅವರು ಹೇಳುತ್ತಿದ್ದಾರೆ. ಮೇ 28ರಂದು ಗೋಂಡಾದಲ್ಲಿ ಬಿಜೆಪಿ ಕಾರ್ಯ ಕರ್ತರು ಹಿಂದೂ ಯುವ ವಾಹಿನಿಯ ರಾಜ್ಯ ಉಪಾಧ್ಯಕ್ಷ ಅಶೋಕ್ ಸಿಂಗ್‌ರವರ ವಾಹನವನ್ನು ತಡೆದು ಪುಡಿಗಟ್ಟಿ ಅವರ ವಾಹನ ಚಾಲಕನನ್ನು ಥಳಿಸಿದರು. ಇದು ಉಭಯ ಬಣಗಳ ನಡುವೆ ನಡೆದ ಘರ್ಷಣೆಗಳಲ್ಲಿ ಇತ್ತೀಚಿನದು. ಆದಿತ್ಯನಾಥ್‌ರನ್ನು ಸ್ವಾಗತಿಸಲು ಅಷ್ಟರಲ್ಲಾಗಲೇ ಸಿಂಗ್ ವಾಹನದಿಂದ ಕೆಳಗಿಳಿದಿದ್ದುದರಿಂದ ಅವರು ದಾಳಿಯಿಂದ ತಪ್ಪಿಸಿಕೊಂಡರು. ಮುಖ್ಯಮಂತ್ರಿಯಾದ ಬಳಿಕ ಅವರು ಗೋಂಡಾಗೆ ನೀಡಿದ ಮೊದಲ ಭೇಟಿ ಅದಾಗಿತ್ತು. ಆರು ದಿನಗಳ ಮೊದಲು, ಮೇ 22ರಂದು, ಕನೌಜ್‌ನಲ್ಲಿ ಉಭಯ ಬಣಗಳ ನಡುವೆ ಒಂದು ತಿಕ್ಕಾಟ ನಡೆದಿತ್ತು. ಅದು ಗಂಗಾನದಿಯ ಒಂದು ಭಾಗದಲ್ಲಿ ಮರಳುಗಾರಿಕೆಯ ಮೇಲೆ ನಿಯಂತ್ರಣ ಸಾಗಿಸುವುದಕ್ಕಾಗಿ ನಡೆದ ತಿಕ್ಕಾಟ. ಉಭಯ ಬಣಗಳು ಪರಸ್ಪರ ಕಲ್ಲು ತೂರಾಟ ನಡೆಸಿ, ಅಂತಿಮವಾಗಿ ಗುಂಡು ಹಾರಿಸಿದವು. ನಂತರ, ಪರಸ್ಪರ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದವು.
ಅದಕ್ಕೂ ಮೊದಲು, ಮೇ 13ರಂದು ಬಸ್ತಿಯಲ್ಲಿ ಬಿಜೆಪಿ ಸಭೆ ನಡೆಯಬೇಕಿದ್ದ ಸ್ಥಳದಲ್ಲಿ ವಾಹಿನಿಯ ಕಾರ್ಯಕರ್ತರು ತಮ್ಮ ತ್ರಿಕೋನ ಧ್ವಜಗಳನ್ನು ಹಾಕಿದಾಗ ಬಿಜೆಪಿ ಕಾರ್ಯಕರ್ತರು ಕೋಪೋದ್ರಿಕ್ತರಾದರು. ಆದಿತ್ಯನಾಥ್ ಭಾಷಣ ಮಾಡಬೇಕಿದ್ದ ಅಲ್ಲಿ ಕೆಲವೇ ಕೆಲವು ಬಿಜೆಪಿ ಧ್ವಜಗಳು ಹಾರಾಡುತ್ತಿದ್ದವು. ಅವರು ಅಲ್ಲಿಗೆ ತಲುಪಿದಾಗ ಬಿಜೆಪಿ ಕಾರ್ಯಕರ್ತರು ಆ ಬಗ್ಗೆ ಗಟ್ಟಿ ಧ್ವನಿಯಲ್ಲೆ ಪ್ರತಿಭಟಿಸಿದರು. ಅವರು ತಮ್ಮ ಪಕ್ಷದ ಧ್ವಜಗಳನ್ನು ಕಟ್ಟಲು ಪ್ರಯತ್ನಿಸಿ ದಾಗ ವಾಹಿನಿಯಿಂದ ಅವರಿಗೆ ಪ್ರತಿಭಟನೆ ಎದುರಾ ಯಿತು. ಇದನ್ನು ಅವರು ತುಂಬಾ ವಿರೋಧಿಸಿದ ಮೇಲಷ್ಟೇ, ಅವರಿಗೆ ಅಲ್ಲಿ ತಮ್ಮ ಪಕ್ಷದ ಧ್ವಜಗಳನ್ನು ಕಟ್ಟಲು ಸಾಧ್ಯವಾಯಿತು.
ಅಧಿಕೃತ ನಿರಾಕರಣೆಗಳು
ಹಿಂದು ಯುವ ವಾಹಿನಿಯ ಮಹಾ ಕಾರ್ಯದರ್ಶಿ ಪಿ.ಕೆ. ಮಾಲ್ ಎರಡು ಬಣಗಳ ನಡುವೆ ಯಾವುದೇ ತಿಕ್ಕಾಟ ನಡೆದಿಲ್ಲ ಎಂದಿದ್ದಾರೆ. ‘‘ನಾವು ನಮ್ಮ ಮುಖ್ಯಮಂತ್ರಿಗಳ ಕೈ ಬಲಪಡಿಸಲು ಎರಡು ಸಹೋದರ ಸಂಘಟಣೆಗಳ ಹಾಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲೆಲ್ಲಿ ಘರ್ಷಣೆ ನಡೆದಿದೆಯೋ ಅದೆಲ್ಲಾ ಎರಡು ಸಂಘಟನೆಗಳ ಸ್ವಾರ್ಥ ಶಕ್ತಿಗಳ ನಡುವೆ ನಡೆದವುಗಳು.’’ ಎನ್ನುತ್ತಾರೆ ಮಾಲ್.
ಮಾಲ್ ಏನೇ ಹೇಳಿದರೂ, ಪೂರ್ವದ್ವೇಷ, ಪ್ರತಿಸ್ಪರ್ಧೆ ಹಾಗೂ ವಿಭಿನ್ನ ಆಕಾಂಕ್ಷೆಗಳ ಪರಿಣಾಮವಾಗಿ ಉಭಯ ಬಣಗಳ ಮಧ್ಯೆ ಬಿಗಿತಗಳು ಹೆಚ್ಚುತ್ತಲೇ ಇವೆ. ತಾನು ಒಂದು ಸಾಂಸ್ಕೃತಿಕ ಸಂಘಟನೆ ಎಂದು ಹಿಂದೂ ಯುವವಾಹಿನಿ ಹೇಳಿಕೊಳ್ಳುತ್ತಿದೆಯಾದರೂ ಅದರ ರಾಜಕೀಯ ಉದ್ದೇಶಗಳು ಎಂದೂ ಗುಟ್ಟಾಗಿ ಉಳಿದಿಲ್ಲ. ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಈ ಉದ್ದೇಶಗಳು ಇನ್ನಷ್ಟು ಸ್ಪಷ್ಟವಾಗಿದೆ. ಆದಿತ್ಯನಾಥ್ ಅಸೆಂಬ್ಲಿಯಲ್ಲಿ ತಾನು ನಾಯಕನಾಗಿರುವ ಪಕ್ಷಕ್ಕಿಂತ ಹೆಚ್ಚಾಗಿ ತನ್ನ ಖಾಸಗಿ ವಾಹಿನಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂಬ ಭಯ ಅಲ್ಲಿಯ ಬಿಜೆಪಿಯನ್ನು ಕಾಡುತ್ತಿದೆ.
ಆರೆಸ್ಸ್ಸೆಸ್ ಹಂತಕ ಆದಿತ್ಯನಾಥ್ ಮುಖ್ಯಮಂತ್ರಿಯಾಗುವ ಮೊದಲು ಗೋರಖ್‌ಪುರ ಮತ್ತು ಉತ್ತರ ಪ್ರದೇಶದ ಪೂರ್ವಭಾಗದ ನೆರೆ ಜಿಲ್ಲೆಗಳಿಗೆ ಮಾತ್ರ ಹಿಂದೂ ಯುವವಾಹಿನಿಯ ಪಾತ್ರ ಸೀಮಿತವಾಗಿತ್ತು. ಆದರೆ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಬಳಿಕ ಅದರ ಸದಸ್ಯತ್ವ ರಾಜ್ಯಾದ್ಯಂತ ವ್ಯಾಪಿಸಿದೆ. ಇದು ಬಿಜೆಪಿ ತೀವ್ರ ಆತಂಕದಿಂದ ಗಮನಿಸಿರುವ ಒಂದು ಬೆಳವಣಿಗೆ. ಉಭಯ ಬಣಗಳ ನಡುವಿನ ಶತ್ರುತ್ವ ಘರ್ಷಣೆಗೆ ದಾರಿಯಾಗದ ಸ್ಥಳಗಳಲ್ಲಿ ಕೂಡ ಬಿಗಿತ ಕಾಣಿಸುತ್ತಿದೆ. ‘‘ಜನಸಾಮಾನ್ಯರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ನಮ್ಮ ಬಳಿಗೆ ಬರುತ್ತಿರುವುದರಿಂದ ಬಿಜೆಪಿ ಕಾರ್ಯ ಕರ್ತರು ಹತಾಶರಾಗುತ್ತಿದ್ದಾರೆ’’ ಎಂದು ಹಿಂದೂ ಯುವ ವಾಹಿನಿಯ ಅಂಬೇಡ್ಕರ್ ನಗರ ಘಟಕದ ಸುನಿಲ್ ಜೈಸ್ವಾಲ್ ಹೇಳಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೇಶವ ಪ್ರಸಾದ್ ವೌರ್ಯ, ‘‘ಸರಕಾರದಲ್ಲಿ ಮುಖ್ಯಮಂತ್ರಿಗಳು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ‘ಹೊರಗಿನವರಿಗೆ’ ಆದ್ಯತೆ ಕೊಡುತ್ತಿದ್ದಾರೆ ಎಂದು ಮೇ 2ರಂದು ಮಾತಿನ ಚಾಟಿ ಬೀಸಿದರು. ಮರುದಿನವೇ ಯುವ ವಾಹಿನಿಗೆ ಹೊಸ ಸದಸ್ಯರನ್ನು ಸೇರಿಸಿಕೊ ಳ್ಳುವುದರ ಮೇಲೆ ‘‘ಆರು ತಿಂಗಳು ಅಥವಾ ಒಂದು ವರ್ಷದವರೆಗೆ’’ ನಿರ್ಬಂಧ ಹೇರಲಾಗಿದೆ ಎಂದು ಪಿ.ಕೆ. ಮಾಲ್ ಘೋಷಿಸಿದರು. ವೌರ್ಯರವರ ಅಸಮಾಧಾನ ವ್ಯಕ್ತವಾದದ್ದು ರಾಜ್ಯ ಬಿಜೆಪಿಯ ಎರಡು ದಿನಗಳ ಕಾರ್ಯಕಾರಣಿ ಸಭೆಯ ಮುಕ್ತಾಯದ ದಿನದಂದು. ಆ ಸಭೆಗೆ ಬಿಜೆಪಿಯ ಸೈದ್ಧಾಂತಿಕ ಪೋಷಕ ಆರೆಸ್ಸೆಸ್‌ನ ಅಂಗೀಕಾರ ಇತ್ತು ಎನ್ನಲಾಗಿದೆ. ಸಂಘ ಪರಿವಾರದ ಪರಿಧಿಯಿಂದ ಹೊರಗಿರುವ ಹಿಂದೂ ಯುವ ವಾಹಿನಿಯನ್ನು ಆದಿತ್ಯನಾಥ್ ವಿಸರ್ಜಿಸಬೇಕೆಂದು ಅರೆಸ್ಸೆಸ್ ಬಯಸು ತ್ತದೆ ಎಂಬುದು ಪರಿಸ್ಥಿತಿ ಬಲ್ಲವರ ಅಭಿಮತ. ಆದಿತ್ಯನಾಥ ಖಾಸಗಿ ಸೇನೆ ತನಗೆ ಸಮಾನವಾದ ಒಂದು ಪ್ರಭಾವಿ ಹಿಂದುತ್ವ ಬಣವಾಗಿ ಬೆಳೆಯಬಹುದೆಂಬ ಭಯ ಆರೆಸ್ಸೆಸ್‌ಗೆ ಇದೆ ಎನ್ನಲಾಗಿದೆ. ಇಷ್ಟರವರೆಗೆ ಆದಿತ್ಯನಾಥ್ ಸಂಘದ ಈ ಬೇಡಿಕೆಗೆ ಪ್ರತಿಕ್ರಿಯಿಸಿಲ್ಲ.
(ಕೃಪೆ: scroll.in)