varthabharthi


ಮುಂಬೈ ಮಾತು

ಹಕ್ಕಿಗಳಿಗಾಗಿ ಹಣ್ಣಿನ ಗಿಡಗಳು!, ಬೆಟ್ಟ ಉಳಿಸಲು ಅಭಿಯಾನ!

ವಾರ್ತಾ ಭಾರತಿ : 13 Jun, 2017
ಶ್ರೀನಿವಾಸ್ ಜೋಕಟ್ಟೆ

ಮುಂಬೈಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆ ಜೊತೆಗೆ ಅವರ ಆರೋಗ್ಯದ ಕಡೆಗೂ ಗಮನ ನೀಡುತ್ತಿರುವ ಮುಂಬೈ ಮಹಾನಗರ ಪಾಲಿಕೆಯು ಈಗ ಪಕ್ಷಿಗಳಿಗೂ ಆಹಾರ ಸೌಲಭ್ಯದ ಜವಾಬ್ದಾರಿಯನ್ನೂ ವಹಿಸಿಕೊಂಡಿದೆ. ಪಕ್ಷಿಗಳಿಗೆ ತಿನ್ನಲು ಉಪಯೋಗವಾಗುವಂತಹ ಹಣ್ಣುಗಳ ಉದ್ಯಾನ ನಿರ್ಮಿಸುತ್ತಿದೆ ಹಾಗೂ ವಸತಿ ಕ್ಷೇತ್ರಗಳ ಕಟ್ಟಡಗಳ ಕಾಂಪೌಂಡ್‌ಗಳಲ್ಲೂ ಇಂತಹ ಗಿಡಗಳನ್ನು ನೆಡಲು ಆದ್ಯತೆ ನೀಡಲಿದೆ. ಈ ಉದ್ದೇಶದಿಂದ ದಕ್ಷಿಣ ಮುಂಬೈಯ ಮಲ್‌ಬಾರ್ ಹಿಲ್ ಟೆಕ್ಡಿ ಪರಿಸರದಲ್ಲಿ ಫಲಗಳ ಗಿಡಗಳನ್ನು ನೆಡಲು ನಿರ್ಣಯ ಕೈಗೊಂಡಿದೆ.

ಮಳೆಗಾಲದ ಪೂರ್ವದಲ್ಲಿ ಮನಪಾ ಉದ್ಯಾನ ವಿಭಾಗವು ಮನಪಾ ಮುಖ್ಯಾಲಯದಲ್ಲಿ ಮನಪಾ ಆಯುಕ್ತರ ಮಾರ್ಗದರ್ಶನದಲ್ಲಿ ಬೈಠಕ್ ನಡೆಸಿತು. ಈ ಬೈಠಕ್‌ನಲ್ಲಿ ಪಕ್ಷಿಗಳು ತಿನ್ನುವ ಹಣ್ಣಿನ ಗಿಡಗಳನ್ನು ಉಚಿತವಾಗಿ ವಿತರಿಸುವ ಮತ್ತು ನೆಡುವ ಮಹತ್ವಪೂರ್ಣ ನಿರ್ಣಯವನ್ನು ತಳೆಯಲಾಯಿತು. ಉದ್ಯಾನ ಅಧೀಕ್ಷಕ ಜಿತೇಂದ್ರ ಪರ್ದೇಶಿ ಅವರು ತಿಳಿಸಿದಂತೆ ಮನಪಾ ಕ್ಷೇತ್ರದಲ್ಲಿ ಹಣ್ಣುಬಿಡುವ ಮರಗಳ ಸಂಖ್ಯೆ ಕಡಿಮೆ ಇರುವ ಕಾರಣ ಪಕ್ಷಿಗಳಿಗೆ ತಿನ್ನಲು ಆವಶ್ಯಕ ಹಣ್ಣುಗಳು ಸಿಗುತ್ತಿಲ್ಲ. ಪಕ್ಷಿಗಳಿಗಾಗಿ ವಸತಿ ಪ್ರದೇಶ ಮತ್ತು ಉದ್ಯಾನಗಳಲ್ಲಿ ಹಣ್ಣುಗಳ ಗಿಡಗಳನ್ನು ನೆಡುವುದಕ್ಕೆ ಪ್ರೋತ್ಸಾಹ ನೀಡಲಾಗುವುದು.ಇಂತಹ ಕೆಲಸಗಳಲ್ಲಿ ಮುಂದಾಗುವವರಿಗೆ ಮನಪಾ ಪ್ರತೀವರ್ಷ ಮಳೆಗಾಲದಲ್ಲಿ ಕಡಿಮೆ ದರಕ್ಕೆ ಗಿಡಗಳನ್ನು ಒದಗಿಸಿಕೊಡಲೂ ನಿರ್ಣಯಿಸಲಾಗಿದೆ.

ಇದೇ ವರ್ಷ ಜುಲೈ ಒಂದರಿಂದ ಜುಲೈ 7ರ ತನಕ ಸೊಸೈಟಿ ಪರಿಸರದಲ್ಲಿ ವನಮಹೋತ್ಸವ ಆಚರಿಸುವವರಿಗೆ ಮನಪಾ ಉಚಿತ ಹಣ್ಣಿನ ಗಿಡಗಳನ್ನು ನೀಡುವುದಾಗಿ ಘೋಷಿಸಿದೆ.
* * *
ಪಾರಸಿಕ್ ಬೆಟ್ಟ ಉಳಿಸಲು ಅಭಿಯಾನ
ನವಿಮುಂಬೈಯ ಪ್ರಖ್ಯಾತ ಪಾರಸಿಕ್ ಬೆಟ್ಟವನ್ನು ಉಳಿಸುವಂತೆ ಮುಖ್ಯಮಂತ್ರಿಗೆ ಪರಿಸರ ಪ್ರೇಮಿಗಳು ಮನವಿ ನೀಡಿದ್ದಾರೆ.

‘‘ನಾನು ಪಾರಸಿಕ್ ಬೆಟ್ಟ. ನಾನು ಸಾಯುತ್ತಿದ್ದೇನೆ’’ ಈ ಸ್ಲೋಗನ್ ಜೊತೆ ಪಾರಸಿಕ್ ಬೆಟ್ಟ ಉಳಿಸುವಂತೆ ಹೋರಾಟ ನಡೆಯುತ್ತಿದೆ. ನವಿಮುಂಬೈಯ ಈ ಬೆಟ್ಟ ಸರಣಿಯನ್ನು ಲೂಟಿಗೈಯಲಾಗುತ್ತಿದೆ. ಈ ಕಾರಣ ಪರಿಸರದ ಜನರ ಬದುಕು ಉಳಿಸುವುದು ಕಷ್ಟವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಮುಖ್ಯಮಂತ್ರಿಯವರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಬೆಟ್ಟದಲ್ಲಿ ಸ್ಫೋಟಗಳನ್ನು ನಡೆಸುವ ಜಲ್ಲಿಕಲ್ಲು ಉದ್ಯಮದಿಂದಾಗಿ ಪರಿಸರಕ್ಕೆ ತೀವ್ರ ಹಾನಿಯಾಗಿದ್ದರಿಂದ ಪಾರಸಿಕ್ ಬೆಟ್ಟವನ್ನು ಉಳಿಸುವ ಅಭಿಯಾನ ನಡೆಯುತ್ತಿದೆ. ಅದರಂತೆ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಆರ್.ಸಿ.ಐ) ವತಿಯಿಂದ ಮುಂಬೈ ಪ್ರೆಸ್ ಕ್ಲಬ್‌ನಲ್ಲಿ ಮೀಡಿಯಾ ಸೆಮಿನಾರ್ ಆಯೋಜಿಸಲಾಯಿತು. ಇದರಲ್ಲಿ ‘ಎಕ್‌ವಿರಾ ಆಯಿ ಪ್ರತಿಷ್ಠಾನ’ ಎನ್‌ಜಿಒದ ನಿರ್ದೇಶಕ ನಂದಕುಮಾರ್ ಮತ್ತು ‘ಆವಾಝ್ ಫೌಂಡೇಶನ್’ನ ಪ್ರಮುಖರಾದ ಸುಮೈರಾ ಅಬ್ದುಲ್ ಅಲಿ ಉಪಸ್ಥಿತರಿದ್ದು ಪ್ರತಿಕ್ರಿಯಿಸಿದರು. ‘ವನ ಶಕ್ತಿ’ ಎನ್‌ಜಿಒದ ನಿರ್ದೇಶಕ ಸ್ಟಾಲಿನ್ ಡಿ. ಅವರೂ ಪಾರಸಿಕ್ ಬೆಟ್ಟ ಉಳಿಸುವ ಬಗ್ಗೆ ಆಗ್ರಹಿಸಿದ್ದಾರೆ.

ಈ ಬೆಟ್ಟ ಸರಣಿಯನ್ನು ಸಾಹಸ ಕ್ರೀಡೆ ಮತ್ತು ಇಕೋ ಟೂರಿಸಂನ ಸ್ಥಳವನ್ನಾಗಿಸಲು ಪ್ರಯತ್ನಿಸಬಹುದಾಗಿದೆ ಎಂದು ಸಲಹೆ ಇತ್ತಿದ್ದಾರೆ. ಮಾಧ್ಯಮಗಳ ವರದಿಯನುಸಾರ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಬೋರ್ಡ್ ಕೂಡಾ ಬೆಟ್ಟದ ಕಲ್ಲುಗಳನ್ನು ಸ್ಫೋಟಿಸುವುದರಿಂದ ಅಕ್ಕಪಕ್ಕದ ಪರಿಸರಗಳಲ್ಲಿ ನೂರುಪಟ್ಟು ಅಧಿಕ ವಾಯುಮಾಲಿನ್ಯ ಕಾಣಿಸಲಿದೆ ಎಂದಿದೆ. ಆದರೆ ಈ ಪರಿಸರದಲ್ಲಿ ಕಲ್ಲುಸ್ಫೋಟಿಸುವ ಕಂಪೆನಿಗಳೆಲ್ಲ ರಾಜಕಾರಣಿಗಳ ಮಾಲಕತ್ವದಲ್ಲಿದೆ.
* * *
ಆರ್ಥರ್ ರೋಡ್ ಜೈಲ್‌ನ ಕೈದಿಗಳಿಗೆ ಟೆಲಿಮೆಡಿಸಿನ್
ಜೈಲ್‌ನಲ್ಲಿ ಬಂಧಿಸಲ್ಪಟ್ಟಿರುವ ಕೈದಿಗಳನ್ನು ಒಂದು ವೇಳೆ ಶುಶ್ರೂಷೆಗಾಗಿ ಆಸ್ಪತ್ರೆಗೆ ಒಯ್ಯುವುದು ಮತ್ತು ಆಸ್ಪತ್ರೆಯಿಂದ ಕರೆತರುವುದು ಬಹಳ ಜವಾಬ್ದಾರಿಯ ಕೆಲಸ. ಯಾಕೆಂದರೆ ಕೆಲವೊಮ್ಮೆ ಕೈದಿಗಳು ಹಲ್ಲೆ ನಡೆಸಿ ಪರಾರಿಯಾಗುವ ಸಂಭವವಿರುತ್ತದೆ. ಇತ್ತೀಚೆಗೆ ಹಗರಣವೊಂದರ ಆರೋಪದಲ್ಲಿ ಬಂಧಿಸಲ್ಪಟ್ಟ ಶಾಸಕ ರಮೇಶ್ ಕದಮ್ ಅವರು ಪೊಲೀಸರ ಜೊತೆ ಅಸಭ್ಯವಾಗಿ ವರ್ತಿಸಿದ ವೀಡಿಯೊ ಕೂಡಾ ವೈರಲ್ ಆಗಿತ್ತು. ಆದರೆ ಈ ಸಮಸ್ಯೆಯಿಂದ ಪಾರಾಗಲು ಮುಂಬೈಯ ಆರ್ಥರ್ ರೋಡ್ ಜೈಲ್ ಆಡಳಿತವು ಟೆಲಿಮೆಡಿಸಿನ್ ಆರಂಭಿಸಿದೆ.
ಟೆಲಿಮೆಡಿಸಿನ್ ಅರ್ಥಾತ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಜೆ.ಜೆ. ಆಸ್ಪತ್ರೆಯ ದೊಡ್ಡ ಡಾಕ್ಟರ್‌ಗಳಿಂದ ಜೈಲ್‌ನೊಳಗೇ ಶುಶ್ರೂಷೆ ನೀಡಲಾಗುತ್ತದೆ.

ಆರ್ಥರ್ ರೋಡ್ ಜೈಲ್‌ನ ಅಧೀಕ್ಷಕರಾದ ಹರ್ಷದ್ ಅಹಿರ್ ರಾವ್ ತಿಳಿಸಿದಂತೆ ‘‘ಜೈಲ್‌ನಲ್ಲಿ ಒಪಿಡಿ ಮತ್ತು ಡಾಕ್ಟರ್‌ಗಳು ಇದ್ದಾರೆ. ಆದರೆ ಗಂಭೀರ ರೋಗಗಳ ಶುಶ್ರೂಷೆಗಾಗಿ ಕೈದಿಗಳನ್ನು ಜೆ.ಜೆ. ಆಸ್ಪತ್ರೆಗೆ ತರಬೇಕಾಗುತ್ತದೆ. ಪ್ರತೀದಿನ 35ರಷ್ಟು ಕೈದಿಗಳು ಗಂಭೀರ ರೋಗದ ನೆಪಹೇಳಿ ಜೆ.ಜೆ. ಆಸ್ಪತ್ರೆಗೆ ಸೇರಿಸುವಂತೆ ಒತ್ತಡ ಹಾಕುತ್ತಾರೆ. ಇದರಿಂದಾಗಿ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳುತ್ತದೆ. ಆಸ್ಪತ್ರೆಯಲ್ಲಿ ಈ ಕೈದಿಗಳಿಗೆ ಹೊರಗಿನ ಜನರ ಸಂಪರ್ಕವಾಗುತ್ತದೆ. ನಂತರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗುವುದು. ಹೀಗಾಗಿ ಟೆಲಿಮೆಡಿಸಿನ್ ಯೋಜನೆಯಂತೆ ಜೈಲ್‌ನೊಳಗೆಯೇ ಈ ರೋಗಿ ಕೈದಿಗಳ ಶುಶ್ರೂಷೆ ಆರಂಭಿಸಲಾಗುತ್ತಿದೆ.’’
ಆದರೆ ಸೋನೋಗ್ರಾಫಿ ಮತ್ತು ಎಂಆರ್‌ಐನಂತಹ ಟೆಸ್ಟ್‌ಗಾಗಿ ಆರೋಪಿಗಳನ್ನು ಆಸ್ಪತ್ರೆಗೆ ಈಗಲೂ ಒಯ್ಯಬೇಕಾಗಿದೆ.
* * *
ಮನಪಾ ಶಾಲಾ ಮಕ್ಕಳಿಗೆ ಹಲ್ಲುನೋವಿನ ಸಮಸ್ಯೆ
ಮುಂಬೈ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅತಿಹೆಚ್ಚಿನ ಆರೋಗ್ಯ ಸಮಸ್ಯೆ ಎಂದರೆ ಹಲ್ಲುನೋವು. ಈ ಸಂಗತಿ ತಿಳಿದು ಬಂದದ್ದು ಮನಪಾ ಆರ್‌ಟಿಐಗೆ ಉತ್ತರ ನೀಡಿದಾಗ. ಆರ್‌ಟಿಐ ಅನುಸಾರ ಮನಪಾ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ 2016ರ ಆರೋಗ್ಯ ತಪಾಸಣೆಯ ಸಮಯ ಸುಮಾರು 2 ಲಕ್ಷ ಮಕ್ಕಳನ್ನು ತಪಾಸಣೆ ಮಾಡಲಾಗಿತ್ತು. ಇದರಲ್ಲಿ 97 ಸಾವಿರ ಮಕ್ಕಳ ಹಲ್ಲುಗಳಲ್ಲಿ ಅನೇಕ ಹಲ್ಲುಗಳು ಹುಳ ಹಿಡಿದಿರುವುದು ತಿಳಿದು ಬಂತು.

ಪ್ರಜಾ ಫೌಂಡೇಶನ್ ಮೂಲಕ ಆರ್.ಟಿ.ಐ. ಅಡಿಯಲ್ಲಿ ಮನಪಾ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಆರೋಗ್ಯ ಪರೀಕ್ಷೆಯ ಮಾಹಿತಿ ಕೇಳಲಾಗಿತ್ತು. ಉತ್ತರವಾಗಿ 2016ರಲ್ಲಿ ಮನಪಾ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ 3,83,485 ಆಗಿತ್ತು. ಇದರಲ್ಲಿ 1,89,809 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. ರಿಪೋರ್ಟ್‌ನ ಪ್ರಕಾರ 97,165 ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ಕಂಡುಬಂತು.
* * *

ಮುಂಬೈ ಮಹಾನಗರ ಪರಿಸರದಲ್ಲಿ ಬೋಗಸ್ ಶಾಲೆಗಳು ಅನೇಕ ಶಾಲಾ ಆಡಳಿತವು ಸರಕಾರದ ಅನುಮತಿ ಪಡೆಯದೆಯೇ ಶಾಲೆಯನ್ನು ನಡೆಸುತ್ತದೆ. ಮುಂಬೈಯಲ್ಲಿ ಈ ಬಾರಿ ತನಿಖೆಯ ಸಮಯ 318 ಶಾಲೆಗಳು ಬೋಗಸ್ ಎಂದು ತಿಳಿದು ಬಂದಿದೆ.

ಸರಕಾರದ ಮಾನ್ಯತೆ ಇಲ್ಲದ ಶಾಲೆಗಳಲ್ಲಿ ಮುಂಬೈಯಲ್ಲಿ 114, ಥಾಣೆಯಲ್ಲಿ 129, ಪಾಲ್‌ಘರ್‌ನಲ್ಲಿ 48 ಮತ್ತು ರಾಯ್‌ಗಡ್‌ನಲ್ಲಿ 27 ಬೋಗಸ್ ಶಾಲೆಗಳು ಪತ್ತೆಯಾಗಿವೆ. ಪ್ರತೀವರ್ಷ ಶಿಕ್ಷಣ ಉಪಸಂಚಾಲಕ ಕಾರ್ಯಾಲಯದ ವತಿಯಿಂದ ಮಾನ್ಯತೆ ಪಡೆಯದೆ ಇರುವ ಶಾಲೆಗಳ ತನಿಖೆ ನಡೆಸಲಾಗುತ್ತದೆ ಹಾಗೂ ಸೂಚಿಯನ್ನು ಬಿಡುಗಡೆ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗುವ ಕಾರಣ ಈ ಸೂಚಿಯನ್ನು ಶಿಕ್ಷಣ ಉಪಸಂಚಾಲಕರು ಬಿಡುಗಡೆ ಮಾಡಿದ್ದಾರೆ.ಈ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸದಂತೆ ತಿಳಿಸಲಾಗಿದೆ.
* * *
ಟ್ರಾಂಜಿಟ್ ಕ್ಯಾಂಪ್ ಬೇಡವೇ ಬೇಡ
ಮಹಾರಾಷ್ಟ್ರ ಸರಕಾರದ ಮ್ಹಾಡಾ (ಮಹಾರಾಷ್ಟ್ರ ಹೌಸಿಂಗ್ ಆ್ಯಂಡ್ ಏರಿಯಾ ಡೆವೆಲೆಪ್‌ಮೆಂಟ್ ಅಥಾರಿಟಿ) ಮಳೆಗಾಲ ಪೂರ್ವದ ಸಮೀಕ್ಷೆಯಲ್ಲಿ 9 ಕಟ್ಟಡಗಳನ್ನು ಶಿಥಿಲ ಎಂದು ಘೋಷಿಸಿದ್ದು ಇಲ್ಲಿಯ ನಿವಾಸಿಗಳು ತಕ್ಷಣ ಟ್ರಾಂಜಿಟ್ ಕ್ಯಾಂಪ್‌ಗೆ ಶಿಫ್ಟ್ ಆಗುವಂತೆ ಸೂಚನೆ ನೀಡಿದೆ. ಮ್ಹಾಡಾ ತನ್ನ ನಿವಾಸಿಗಳಿಗೆ ಪ್ರೊಜೆಕ್ಟ್ ಪೂರ್ಣಗೊಳಿಸಲು ತಾತ್ಕಾಲಿಕ ರೂಪದಿಂದ ನೀಡುವ ನಿವಾಸವೇ ಟ್ರಾಂಜಿಟ್ ಕ್ಯಾಂಪ್. ಪ್ರತೀ ಟ್ರಾಂಜಿಟ್ ಕ್ಯಾಂಪ್‌ನಲ್ಲಿ 3ರಿಂದ 5 ಕುಟುಂಬ ವಾಸಿಸಬಹುದಾಗಿದೆ.

ಯಾವ ಕ್ಷಣದಲ್ಲಾದರೂ ಈ 9 ಕಟ್ಟಡಗಳು ದುರ್ಘಟನೆಗೆ ಒಳಗಾಗಬಹುದು ಎಂದು ಮ್ಹಾಡಾ ಎಚ್ಚರಿಕೆ ನೀಡಿದೆ. ಆದರೆ ಈ ಎಚ್ಚರಿಕೆಯನ್ನು ಕಡೆಗಣಿಸಿದ ಈ ಕಟ್ಟಡದ ನಿವಾಸಿಗಳು ಟ್ರಾಂಜಿಟ್ ಕ್ಯಾಂಪ್‌ಗೆ ಹೋಗಲು ಇನ್ನೂ ಒಪ್ಪುತ್ತಿಲ್ಲ. ಕಾರಣ ಇಷ್ಟೇ- ಒಮ್ಮೆ ಮ್ಹಾಡಾ ಕಟ್ಟಡದಿಂದ ಟ್ರಾಂಜಿಟ್ ಕ್ಯಾಂಪ್‌ಗೆ ಹೋದರೆ ವರ್ಷಗಟ್ಟಲೆ ಅವರಿಗೆ ಮೊದಲಿನ ಮನೆ ಸಿಗುವುದೇ ಇಲ್ಲ. ಅರ್ಥಾತ್ ಮ್ಹಾಡಾ ಈ ಶಿಥಿಲ ಕಟ್ಟಡಗಳನ್ನು ಅಷ್ಟು ಬೇಗನೆ ರಿಪೇರಿ ಮಾಡುವುದೇ ಇಲ್ಲ. ಅಥವಾ ಹೊಸದಾಗಿ ಕಟ್ಟುವುದೂ ಇಲ್ಲ. ಇನ್ನೊಂದೆಡೆ ಟ್ರಾಂಜಿಟ್ ಕ್ಯಾಂಪ್ ನಿವಾಸಿಗಳು ಲಂಚ ನೀಡಬೇಕಾಗುತ್ತದೆ. ಮ್ಹಾಡಾ ತನ್ನ ಪ್ರೊಜೆಕ್ಟನ್ನು ತುಂಬಾ ತಡವಾಗಿ ನಿರ್ಮಿಸುವುದರಿಂದ ನಿವಾಸಿಗಳು ಟ್ರಾಂಜಿಟ್ ಕ್ಯಾಂಪ್‌ನ ಬದಲು ಈ ಶಿಥಿಲ ಕಟ್ಟಡದಲ್ಲೇ ಇರುವುದು ಸುರಕ್ಷಿತ ಎಂದು ಭಾವಿಸುತ್ತಾರೆ. ಈಬಾರಿ ಮ್ಹಾಡಾ ಘೋಷಿಸಿದ 9 ಶಿಥಿಲ ಕಟ್ಟಡಗಳಲ್ಲಿ 247 ಮನೆ ಹಾಗೂ 253 ಅಂಗಡಿಗಳಿವೆ.

ಮುಂಬೈ ಮನಪಾ ಚುನಾವಣೆಯ ಮೊದಲು ಬಿಜೆಪಿ ಸರಕಾರ ಮುಂಬೈ ಮಹಾನಗರದಲ್ಲಿ ವರ್ಷದಿಂದ ಮಹಾರಾಷ್ಟ್ರ ಹೌಸಿಂಗ್ ಆ್ಯಂಡ್ ಏರಿಯಾ ಡೆವೆಲಪ್‌ಮೆಂಟ್ ಅಥಾರಿಟಿ (ಮ್ಹಾಡಾ)ಯ ಟ್ರಾಂಜಿಟ್ ಕ್ಯಾಂಪ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಪುನರ್ವಸತಿಯ ಯೋಜನೆ ಆರಂಭಿಸುವ ಘೋಷಣೆ ಮಾಡಿತ್ತು. ಸದ್ಯ ಆ ಘೋಷಣೆ ಕೇವಲ ಚುನಾವಣಾ ಘೋಷಣೆಯಾಗಿ ಉಳಿದಿದೆ.

ಮುಂಬೈಯ ಬೋರಿವಲಿ, ಚೆಂಬೂರ್, ಗೋರೆಗಾಂವ್, ಓಶಿವಾರಾ, ಮಾಲ್ವಾಣಿ, ಧಾರಾವಿ, ಘಾಟ್‌ಕೋಪರ್, ಮಾಗಾ ಠಾಣೆ, ಮಾನ್‌ಖುರ್ದ್, ಮುಲುಂಡ್, ವಿಕ್ರೋಲಿ, ಕಾಂದಿವಲಿ, ವಡಾಲಾ, ಕುಲಾಬಾ, ಸಯನ್, ಬಾಂದ್ರಾ ಮತ್ತು ಮಹೀಂ ಕ್ಷೇತ್ರಗಳಲ್ಲಿ ಮ್ಹಾಡಾದ ಟ್ರಾಂಜಿಟ್ ಕ್ಯಾಂಪ್ ನಿರ್ಮಿಸಲಾಗಿದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)