ಭಾರತದ ಮೊದಲ ಪತ್ರಿಕಾ ದಾಳಿಯ ಸುತ್ತ...
1782ರಲ್ಲಿ ಗವರ್ನರ್ ಜನರಲ್‌ನನ್ನು ಟೀಕಿಸಿದ್ದಕ್ಕಾಗಿ ಪ್ರಸಿದ್ಧ ‘ಬೆಂಗಾಲ್ ಗಜೆಟ್’ ಪತ್ರಿಕೆಯ ಕಚೇರಿಯ ಮೇಲೆ ದಾಳಿ ನಡೆಸಲಾಯಿತು.
ಈಗಿನಂತೆ ಆಗಲೂ ಕೂಡಾ ಅಧಿಕಾರವುಳ್ಳವರ ಮಾನಹಾನಿ ಮಾಡುವುದು ಮುದ್ರಣ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಒಂದು ಅನಿರೀಕ್ಷಿತ ಪರಿಣಾಮವಾಗಿತ್ತು. ಪರಿಣಾಮವಾಗಿ, ಹಿಕ್ಕಿಯ ಗಜೆಟ್ ಅಂತ್ಯಗೊಂಡು ಒಂದು ಶತಮಾನದ ಬಳಿಕ ಬರೆಯಲಾದ ಬ್ರಿಟಿಷ್ ರಾಜ್ಯದ್ರೋಹ/ದೇಶದ್ರೋಹ ಕಾನೂನಿನ ಸೆಕ್ಷನ್ 124ಎ, ಸರಕಾರದ ವಿರುದ್ಧ ಮಾತನಾಡುವವರ ವಿರುದ್ಧ ಮೊಕದ್ದಮೆ ಹೂಡಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿತು. ಇಂದಿಗೂ ಈ ಕಾನೂನು ಅಸ್ತಿತ್ವದಲ್ಲಿದೆ. ಹಿಕ್ಕಿ ಅಧಿಕಾರಸ್ಥರ ವಿರುದ್ಧ ಬರೆದ ಹಾಗೆ, ಅವಹೇಳನಕಾರಿಯಾಗಿ ಆ ಭಾಷೆಯಲ್ಲಿ ಬರೆಯುವುದು ಇಂದು ಅಸಾಧ್ಯವೆಂದೇ ಹೇಳಬಹುದು.
1782ರ ಮಾರ್ಚ್ 23ರಂದು ಪ್ರಮುಖ ಪತ್ರಿಕೆಯೊಂದರ ಮುದ್ರಣವನ್ನು ತಡೆಯಲಾಯಿತು. ಅದರ ಮಾಲಕನನ್ನು ಬಂಧಿಸಲಾಯಿತು. ಅಂದಿನ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್‌ನನ್ನು ತನ್ನ ಪತ್ರಿಕೆಯಲ್ಲಿ ಆ ಮಾಲಕ ‘ಲಾರ್ಡ್ ಕ್ಲೈವ್‌ನ ಚಿಂತಾಜನಕ ಉತ್ತರಾಧಿಕಾರಿ’ ಎಂದು ಕರೆದಿದ್ದ. ಪತ್ರಿಕೆಯ ಮುದ್ರಣಾಲಯವನ್ನು ಕೆಡವಿ ಕಟ್ಟಡದ ಸಾಮಗ್ರಿಗಳನ್ನು ಹೊತ್ತು ಒಯ್ಯಲಾಯಿತು. ಪತ್ರಿಕೆಯ ಸ್ಥಾಪಕ ಹಾಗೂ ಸಂಪಾದಕ ಜೇಮ್ಸ್ ಆಗಸ್ಟಸ್ ಹಿಕ್ಕಿಯನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. (ಆತನನ್ನು ಬೇಗನೆ ಬಿಡುಗಡೆ ಮಾಡಲಾಯಿತು, ಆ ಮಾತು ಬೇರೆ.)
ಅದು ಭಾರತದ ಮೊತ್ತ ಮೊದಲ ವರ್ತಮಾನ ಪತ್ರಿಕೆಯ ಅಂತ್ಯ. ಹಿಕ್ಕಿ ಸರಕಾರವನ್ನು ಗೇಲಿ ಮಾಡುವ ತನ್ನ ಪ್ರಯತ್ನದಲ್ಲಿ ಕಾನೂನನ್ನು ಮೀರಿದ್ದ. ಇತ್ತೀಚೆಗೆ ಕಂಪೆನಿಯ ಸಾಲದ ಇತಿಹಾಸಕ್ಕೆ ಸಂಬಂಧಿಸಿ ಸಿಬಿಐ, ಎನ್‌ಡಿಟಿವಿಯ ಮೇಲೆ ದಾಳಿ ನಡೆಸಿತು. ಟಿವಿ ಚಾನೆಲ್ ಮತ್ತು ಕೇಂದ್ರ ಸರಕಾರದ ನಡುವಿನ ವೈಷಮ್ಯ ಇದಕ್ಕೆ ಕಾರಣ, ಹಿಕ್ಕಿ ಮತ್ತು ಗವರ್ನರ್ ಜನರಲ್‌ನ ಮಧ್ಯೆ ಇದ್ದ ವೈಷಮ್ಯಕ್ಕೂ ಈ ಪ್ರಕರಣಕ್ಕೂ ತುಂಬ ಹೋಲಿಕೆ ಇದೆ.
ಎನ್‌ಡಿಟಿವಿಯು ಸರಕಾರ ತನ್ನ ವಿರುದ್ಧ ಮಾಡಿರುವ ಆಪಾದನೆಗಳಿಗೆ ಪ್ರತಿಕ್ರಿಯಿಸುತ್ತಿರುವಾಗ ಭಾರತದ (ಮತ್ತು ಏಷ್ಯಾದ ಕೂಡ) ಮೊದಲ ಪತ್ರಿಕೆ ಹಿಕ್ಕಿಯ ‘ಬೆಂಗಾಲ್ ಗಜೆಟ್’ ಗೆ ಸಂಬಂಧಿಸಿ ನಡೆದ ಹಗರಣದ ಕಡೆಗೆ ಸ್ವಲ್ಪ ಹಿಂದಿರುಗಿ ನೋಡೋಣ.
ಸಿಟ್ಟಿನ ಒಬ್ಬ ಮನುಷ್ಯ 1780ರಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಆರಂಭಿಸಿದ ಬೆಂಗಾಲ್ ಗಜೆಟ್ ಎರಡು ಪುಟಗಳ ಅನಿಯಂತ್ರಿತ ಸಾಪ್ತಾಹಿಕ ಪತ್ರಿಕೆಯಾಗಿ ಎರಡು ವರ್ಷ ಪೂರೈಸಿತು. ಅದರ ಧ್ಯೇಯ ವಾಕ್ಯ ಹೀಗಿತ್ತು; ‘‘ಒಂದು ಸಾಪ್ತಾಹಿಕ, ರಾಜಕೀಯ ಹಾಗೂ ವಾಣಿಜ್ಯ ಪತ್ರಿಕೆ, ಎಲ್ಲ ಪಕ್ಷಗಳಿಗೂ ಮುಕ್ತ, ಆದರೆ ಯಾರೊಬ್ಬರಿಂದಲು ಪ್ರಭಾವಿತವಲ್ಲ.’’
ಕೋಲ್ಕತಾದ ಪಾರ್ಟಿಗಳಿಗೆ-ಹೋಗುವ ಮೇಲ್ವರ್ಗದ (ಎಲೈಟ್) ಬ್ರಿಟಿಷ್ ಗಣ್ಯರ ಹರಟೆ ಹಾಗೂ ವೈಭೋಗ ಜೀವನದ ವಿವರಗಳನ್ನು ಪ್ರಕಟಿಸುತ್ತಿದ್ದ ಬೆಂಗಾಲ್ ಗಜೆಟ್ ವ್ಯಾಪಕ ಪ್ರಸಾರವಿದ್ದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಅದರ ಮಾಲಕ ಮತ್ತು ಭಾರತದ ಮೊದಲ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ ನಡುವೆ ನಡೆದ ಒಂದು ಸಾರ್ವಜನಿಕ ಕಲಾಪ ಅದರ ಅಂತ್ಯಕ್ಕೆ ಕಾರಣವಾಯಿತು. ಹಿಕ್ಕಿಯ ಹಾಗೆಯೇ, ಹೇಸ್ಟಿಂಗ್ಸ್ ಕೂಡ ಯಾವ ಪ್ರಭಾವಿ ವ್ಯಕ್ತಿಗಳ ಬೆಂಬಲವಿಲ್ಲದೆಯೇ ದೋಣಿಯೊಂದರಲ್ಲಿ 1750ರಲ್ಲಿ ಭಾರತಕ್ಕೆ ಬಂದಿದ್ದ. ಆಗ ದೇಶ ಗೊಂದಲದ ಗೂಡಾಗಿತ್ತು. ಈಸ್ಟ್ ಇಂಡಿಯಾ ಕಂಪೆನಿ ಆಗ ಇನ್ನೂ ಒಂದು ಸಮಾನ ಕಾನೂನು ವ್ಯವಸ್ಥೆಯನ್ನು ರೂಪಿಸಿರಲಿಲ್ಲ. ಒಂದು ಪ್ರಮುಖ ಬ್ರಿಟಿಷ್ ವ್ಯಾಪಾರ ಕೇಂದ್ರವಾಗಿದ್ದ ಕೋಲ್ಕತಾದಲ್ಲಿ ರಾಜಕೀಯ ಅಸ್ಥಿರತೆ ಇತ್ತು. 1756ರಲ್ಲಿ ಬಂಗಾಲದ ನವಾಬ ಕೋಲ್ಕತಾದ ಮೇಲೆ ದಾಳಿ ನಡೆಸಿದ. ಹೆಸ್ಟಿಂಗ್ಸ್‌ನನ್ನು ಬಂಧಿಸಿ ಕೋಲ್ಕತಾದ ಕುಖ್ಯಾತ ‘ಬ್ಲಾಕ್‌ಹೋಲ್’ ಸೆರೆಮನೆಗೆ ತಳ್ಳಲಾಯಿತು, ಜೈಲಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತೆಂದರೆ ಆತ ಸೆರೆಮನೆಯಿಂದ ತಪ್ಪಿಸಿಕೊಂಡು ಹೊರ ಬಂದ. ಬಳಿಕ ಸ್ವಲ್ಪ ಸಮಯದಲ್ಲೆ ಸೇನಾ ತುಕಡಿಯೊಂದರ ಜೊತೆ ಮರಳಿ ಬಂದ ಹೇಸ್ಟಿಂಗ್ಸ್ ಕೋಲ್ಕತಾವನ್ನು ಪುನಃ ತನ್ನ ವಶಕ್ಕೆ ತೆಗೆದುಕೊಂಡ. ಅವನ ನಡತೆ ಮತ್ತು ಆ ಬಳಿಕದ ಅವನ ವ್ಯವಹಾರಗಳು 1776ರಲ್ಲಿ ಅವನಿಗೆ ಗವರ್ನರ್ ಜನರಲ್ ಹುದ್ದೆಯನ್ನು ದೊರಕಿಸಿ ಕೊಟ್ಟವು.
ಹಡಗು ವ್ಯಾಪಾರದಲ್ಲಾದ ನಷ್ಟದಿಂದಾಗಿ ಆದ ಸಾಲ ಮರು ಪಾವತಿಸಲಾಗದೆ, 1778ರಲ್ಲಿ, ಹಿಕ್ಕಿ ಅದಾಗಲೆ ಜೈಲಿನಲ್ಲಿದ್ದ. ವಿಲಿಯಂ ಹಿಕ್ಕಿ (ಈತ ಬೇರೆಯೇ ವ್ಯಕ್ತಿ) ಎಂಬಾತ ಬರೆದಿರುವ ಆತ್ಮಕತೆಯಲ್ಲಿ ಜೇಮ್ಸ್ ಹಿಕ್ಕಿಯನ್ನು ತಾನು ಜೈಲಿನಲ್ಲಿ ಭೇಟಿಯಾದೆ; ಆತ ತುಂಬಾ ಪ್ರತಿಭಾವಂತನಾದ ವಿಚಿತ್ರ (ಅಕ್ಸೆಂಟ್ರಿಕ್), ಒರಟ, ಅಸಂಸ್ಕೃತ ಐರಿಶ್ ವ್ಯಕ್ತಿ ಎಂದು ವರ್ಣಿಸಿದ್ದಾನೆ. ನ್ಯಾಯಾಲಯದಲ್ಲಿ ತನ್ನ ವಕಿಲರ ವಿರುದ್ಧವೇ ಚೀರಾಡುತ್ತಿದ್ದ ಹಿಕ್ಕಿಯ ಪರವಾಗಿ ವಾದಿಸಲು ಯಾವ ವಕೀಲರೂ ಸಿದ್ಧವಿರಲಿಲ್ಲ ಅಂತಿಮವಾಗಿ ವಿಲಿಯಂ ಅವನ ಪರವಾಗಿ ವಾದಿಸಿದ. ವಿಚಾರಣೆಯ ಮಧ್ಯೆ ಇನ್ನೊಬ್ಬ ವಕೀಲನ ಮೇಲೆ ಹರಿಹಾಯ್ದ ಹಿಕ್ಕಿಯನ್ನು ಗದರಿಸಿ ಬಾಯಿಮುಚ್ಚಿಸಿದ ವಿಲಿಯಂ, ‘‘ನಾನು ಅವನಿಗೆ (ಹಿಕ್ಕಿಗೆ) ಅವನೊಬ್ಬ ಸುಳ್ಳು ಹೇಳುವ ಅಲೆಮಾರಿ ಫಟಿಂಗ, ಜೈಲಿನಲ್ಲೇ ಅವ ಕೊಳೆಯಬೇಕು’’ ಎಂದು ಹೇಳಿದೆ ಎಂದು ಬರೆದಿದ್ದಾನೆ.
ಆ ಮಾತು ಕೇಳಿದ ಐರಿಶ್ ಹಿಕ್ಕಿ ಕಣ್ಣೀರು ಹಾಕಿದ; ತನ್ನ ಪರವಾಗಿ ತಾನೇ ವಾದಿಸಿದ; ಇನ್ನು ಮುಂದಕ್ಕೆ ತಾನು ಆ ವಕೀಲನ ಮಾತಿಗೆ ಎದುರಾಡದೆ ಕೇಳಿಸಿಕೊಳ್ಳುತ್ತೇನೆ ಎಂದು ಮಾತು ಕೊಟ್ಟ. ಇದನ್ನೆಲ್ಲಾ ನೊಡಿ ಮನಕರಗಿದ ನ್ಯಾಯಾಧೀಶರು ಅವನನ್ನು ಸಾಲಬಾಧೆಯಿಂದ ಮುಕ್ತನಾಗಿಸಿ ಅವನ ಬಿಡುಗಡೆಗೆ ಆದೇಶಿಸಿದರು.
ಗಜೆಟ್‌ನ ಜನನ
ಜೈಲಿನಿಂದ ಹೊರಬಂದ ಹಿಕ್ಕಿಗೆ ಒಂದು ಯೋಚನೆ ಹೊಳೆಯಿತು, ಪರಿಣಾಮವಾಗಿ, ಕೋಲ್ಕತಾದಲ್ಲಿದ್ದ 200ಕ್ಕೂ ಹೆಚ್ಚು ಸ್ಥಳೀಯ ಯುರೋಪಿಯನ್ನರಿಗಾಗಿ ಅವನು ‘ಬೆಂಗಾಲ್ ಗಜೆಟ್’ ಆರಂಭಿಸಿದ.
ಕಾವ್ಯ ಮತ್ತು ಸಾಮಾನ್ಯ ಜಾಹೀರಾತುಗಳಲ್ಲದೆ, ಹಿಕ್ಕಿ ತನ್ನ ಪತ್ರಿಕೆಯಲ್ಲಿ ಸಿರಿವಂತರ ಹಾಗೂ ಪ್ರಸಿದ್ಧ ವ್ಯಕ್ತಿಗಳ ಪಾರ್ಟಿಗಳ ನೇರ ವಿವರಗಳನ್ನು ನೀಡುತ್ತಿದ್ದ. ಅವರ ಉಡುಪನ್ನು ಗೇಲಿಮಾಡಿ, ಟೀಕಿಸಿ ಬರೆಯುತ್ತಿದ್ದ. ಅವರಿಗೆ ಅಡ್ಡ ಹೆಸರುಗಳನ್ನಿಟ್ಟು, ಯಾವ ಪಾರ್ಟಿಯಲ್ಲಿ ಯಾರು ಏನನ್ನು ಕದ್ದಿದ್ದಾರೆ ಎಂದು ಬರೆದು, ತಮ್ಮ ಸೊತ್ತುಗಳನ್ನು ಕಳೆದುಕೊಂಡವರು ಅವುಗಳನ್ನು ಮರಳಿಸುವಂತೆ ಮಾಡಿಕೊಂಡ ಮನವಿಗಳನ್ನೂ ಪ್ರಕಟಿಸುತ್ತಿದ್ದ.
ಹಿಕ್ಕಿಯ ‘ಬೆಂಗಾಲ್ ಗಜೆಟ್’ ಪ್ರಕಟವಾದ ವರ್ಷವೇ ಸರಕಾರದ ಆಜ್ಞೆಯೊಂದು ಜನರಲ್ ಪೋಸ್ಟ್ ಆಫೀಸ್ ಮೂಲಕ ಅದರ ಪ್ರಸಾರವನ್ನು ನಿಷೇಧಿಸಿತು. ಹಿಕ್ಕಿ ಈ ಆಜ್ಞೆ ಹೊರಡಿಸಿದ ನ್ಯಾಯಾಧೀಶರುಗಳನ್ನೇ ಗೇಲಿಮಾಡಿ ಬರೆದ. ಮರಾಠ ಯುದ್ಧದಲ್ಲಿ ಸರಕಾರದ ಸೋಲುಗಳಿಂದಾರಂಭಿಸಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳ ಭ್ರಷ್ಟಾಚಾರ, ಹಾಗೂ ಮಹಾರಾಜ ನಂದ ಕುಮಾರ್‌ನನ್ನು ನೇಣುಗಂಬಕ್ಕೆ ಹಾಕಿದ ಪ್ರಕರಣದ ವರೆಗೆ-ಹಿಕ್ಕಿ ಸರಕಾರವನ್ನು ಕಟುವಾಗಿ ಟೀಕಿಸಲಾರಂಭಿಸಿದ. ಹೆಸ್ಟಿಂಗ್ಸ್ ನ ಆಪ್ತ ಸ್ನೇಹಿತ ಎಲಿಜಾ ಇಂಪಿ, ಸೇತುವೆಯೊಂದನ್ನು ಕಟ್ಟುವ ಕಾಂಟ್ರಾಕ್ಟ್ ಪಡೆಯಲು ಸ್ವಜನ ಪಕ್ಷಪಾತಕ್ಕೆ ಮೊರೆಹೋದ ಕಾರಣಕ್ಕಾಗಿ ಆತನಿಗೆ ‘ಪೂಲ್‌ಬಂದಿ’ ಎಂದು ಅಡ್ಡ ಹೆಸರಿಟ್ಟ.
ಕಾನೂನಿನ ತೊಂದರೆ
ಸರಕಾರದ ಪ್ರಕಟನೆಯಾದ ‘ಇಂಡಿಯಾ ಗಜೆಟ್’ ಆರಂಭವಾಗಿ ಅದು ತನ್ನ ಚಂದಾದಾರನನ್ನು ಸೆಳೆಯಲಾರಂಭಿಸಿದಾಗ ಸಿಟ್ಟಾದ ಹಿಕ್ಕಿ ಜನರಲ್ ಪೋಸ್ಟ್ ಮೂಲಕ ಅದರ ಪ್ರಸಾರಕ್ಕೆ ಸರಕಾರದ ಸಹಾಯಧನ ದೊರಕಿದಾಗ ನೇರಯುದ್ಧಕ್ಕೆ ಇಳಿದ: ಹೇಸ್ಟಿಂಗ್ಸ್ ನ ಪತ್ನಿಯ ವಿರುದ್ಧ ಕಿಡಿಕಾರಿದ. ಆಕೆಗೆ ‘ಇಂಡಿಯಾ ಗಜೆಟ್’ ಏನೋ ಕೊಡುಗೆ ನೀಡಿದೆ ಎಂದು ಆಪಾದಿಸಿದ.
ಹೇಸ್ಟಿಂಗ್ಸ್‌ನನ್ನು ಹಿಕ್ಕಿ ‘ಲಾರ್ಡ್ ಕ್ಲೈವ್‌ನ ಚಿಂತಾಜನಕ ಉತ್ತರಾಧಿಕಾರಿ’ ಎಂದು ಕರೆದದ್ದೇ ತಡ, ವಿಷಯ ನ್ಯಾಯಾಲಯಕ್ಕೆ ಹೋಯಿತು. ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಯಿತು. ಆದರೂ ಆಶ್ಚರ್ಯಕರವಾಗಿ ಆತ ಮೊಕದ್ದಮೆಯಲ್ಲಿ ಗೆದ್ದ. ಕೆಲವು ತಿಂಗಳ ಬಳಿಕ ಆತ ನ್ಯಾಯಾಲಯಕ್ಕೆ ಮರಳಿದ. ಸೇನೆಗೆ ದಂಗೆ ಏಳುವಂತೆ ಕರೆ ನೀಡಿದ ಒಂದು ಲೇಖನ ಪ್ರಕಟಿಸಿದಾಗ, ಆತ ಭಾರೀ ದಂಡ ತೆತ್ತು ಜೈಲಿಗೆ ಹೋಗಬೇಕಾಯಿತು. ಆದರೆ ಅವನ ಪತ್ರಿಕೆ ಮುಂದುವರಿಯಿತು. ಬಳಿಕ ಅದರಲ್ಲಿ ಆತ ಬರೆದ ಕತೆಯೊಂದರಲ್ಲಿ ಎಲಿಜಾ ನ್ಯಾಯವನ್ನೇ ಹರಾಜು ಹಾಕುವ ಪ್ರಸಂಗವೊಂದು ಬರುತ್ತದೆ; ಆಗ ನ್ಯಾಯಾಧೀಶ ರಾಬರ್ಟ್ ಚೇಂಬರ್ಸ್, ಹೇಸ್ಟಿಂಗ್ಸ್ ನ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಅಂತಿಮವಾಗಿ ಹಿಕ್ಕಿ ವಿರುದ್ಧ ಆರು ಮೊಕದ್ದಮೆಗಳನ್ನು ಹೂಡಲಾಯಿತು. ಆಗ ಹಿಕ್ಕಿಯ ಹಣ ಮತ್ತು ಪತ್ರಿಕೆ ಎರಡೂ ಮುಳುಗಿತು. ಅವನ ಮುದ್ರಣಾಲಯವನ್ನು ಸರಕಾರ ವಶಪಡಿಸಿಕೊಂಡಿತು.
ಬಲಾಢ್ಯರನ್ನು ಎದುರು ಹಾಕಿಕೊಳ್ಳುವುದು.
ಈಗಿನಂತೆ ಆಗಲೂ ಕೂಡಾ ಅಧಿಕಾರವುಳ್ಳವರ ಮಾನಹಾನಿ ಮಾಡುವುದು ಮುದ್ರಣ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಒಂದು ಅನಿರೀಕ್ಷಿತ ಪರಿಣಾಮವಾಗಿತ್ತು. ಪರಿಣಾಮವಾಗಿ, ಹಿಕ್ಕಿಯ ಗಜೆಟ್ ಅಂತ್ಯಗೊಂಡು ಒಂದು ಶತಮಾನದ ಬಳಿಕ ಬರೆಯಲಾದ ಬ್ರಿಟಿಷ್ ರಾಜ್ಯದ್ರೋಹ/ದೇಶದ್ರೋಹ ಕಾನೂನಿನ ಸೆಕ್ಷನ್ 124ಎ, ಸರಕಾರದ ವಿರುದ್ಧ ಮಾತನಾಡುವವರ ವಿರುದ್ಧ ಮೊಕದ್ದಮೆ ಹೂಡಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿತು. ಇಂದಿಗೂ ಈ ಕಾನೂನು ಅಸ್ತಿತ್ವದಲ್ಲಿದೆ. ಹಿಕ್ಕಿ ಅಧಿಕಾರಸ್ಥರ ವಿರುದ್ಧ ಬರೆದ ಹಾಗೆ, ಅವಹೇಳನಕಾರಿಯಾಗಿ ಆ ಭಾಷೆಯಲ್ಲಿ ಬರೆಯುವುದು ಇಂದು ಅಸಾಧ್ಯವೆಂದೇ ಹೇಳಬಹುದು. ಎನ್‌ಡಿಟಿವಿ ಸರಕಾರದ ವಿರುದ್ಧ ಟೀಕೆ ಮಾಡಿದೆಯಾದರೂ ಈಗ ಅದರ ವಿರುದ್ಧ ಮಾನಹಾನಿ ಮೊಕದ್ದಮೆಗಾಗಿ ತನಿಖೆ ನಡೆಯುತ್ತಿಲ್ಲ. ಅದೇನಿದ್ದರೂ ಎನ್‌ಡಿಟಿವಿ ಚಾನೆಲ್‌ಗೆ ಒಂದು ಅಜೆಂಡಾ (ಗುಪ್ತ ಉದ್ದೇಶ) ಇದೆ ಎಂದು ಹೇಳಿದ್ದಕ್ಕಾಗಿ ಬಿಜೆಪಿ ವಕ್ತಾರರೊಬ್ಬರನ್ನು ಟಿವಿ ಚರ್ಚೆಯಿಂದ ಹೊರನಡೆಯುವಂತೆ ಹೇಳಿದ ಕೆಲವೇ ದಿನಗಳಲ್ಲಿ ಚಾನೆಲ್ ಮೇಲೆ ಸಿಬಿಐ ದಾಳಿ ನಡೆದಿದೆ. ಚಾನೆಲ್ ಸೀನಿಯರ್ ಎಕ್ಸಿಕ್ಯೂಟಿವ್ ಎಡಿಟರ್ ರವೀಶ್ ಕುಮಾರ್ ದಿಲ್ಲಿಯ ಪತ್ರಕರ್ತರ ಸುತ್ತ ಭಯದ ವಾತಾವರಣವಿದೆ ಎಂದಿದ್ದಾರೆ. ಇವೆಲ್ಲ ಕೇವಲ ಕಾಕತಾಳೀಯಗಳೇ? ತನ್ನ ಆರಂಭದ ದಿನಗಳಿಂದಲೂ ಭಾರತದಲ್ಲಿ ಪತ್ರಿಕೋದ್ಯಮ ಬದುಕಿ ಉಳಿಯಲು ಹೋರಾಡುತ್ತಲೇ ಬಂದಿದೆ. ಸ್ವತಂತ್ರ ಪತ್ರಿಕೆಗಳ ಬಾಯಿ ಮುಚ್ಚಿಸುವ ಸರಕಾರದ ಪ್ರಯತ್ನಗಳನ್ನೂ ಮೀರಿ ಅಭಿವ್ಯಕ್ತಿ ಸ್ವಾತಂತ್ರ ಉಳಿದೀತು ಎಂಬುದೇ ನಮಗಿರುವ ಭರವಸೆ.
ಕೃಪೆ: scroll.in