ಭಾವುಕತೆಯ ಶಕ್ತಿ
ಭಾಗ 2
ಗುರುತಿಸುವ ಬಗೆ
ಭಾವುಕತೆಯನ್ನು ಗುರುತಿಸುವ ಮತ್ತು ಅದರ ಸಾಮರ್ಥ್ಯವನ್ನು ಗುರುತಿಸುವ ಬಗೆಯನ್ನು ನಾವು ಮೊದಲು ಕಲಿಯಬೇಕು.
ಶರೀರದಲ್ಲಿ ಆಗುವಂತಹ ಯಾವುದೇ ನೋವು ಅಥವಾ ಸಂವೇದನೆಯನ್ನು ಗಮನವಿಟ್ಟು ಗುರುತಿಸಲು ಮತ್ತು ಅದನ್ನು ಅನು ಭವಿಸುವಾಗ ಹಾಗೂ ವ್ಯಕ್ತಪಡಿಸುವಾಗ ನಮ್ಮಲ್ಲಿ ಉಂಟಾಗುವ ಪರಿಣಾಮ ಗಳೇನು ಎಂಬುದನ್ನು ನೋಡಿಕೊಳ್ಳಬೇಕು. ಇದೇ ಪ್ರಾರಂಭದ ಹಂತ.
ಮಕ್ಕಳೂ ಕೂಡ ಆಡುವಾಗಲೋ, ಓಡಾಡುವಾಗಲೋ ಬೀಳುವುದು, ತಗುಲಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಾರೆ. ಆಗ ನಾವು ಅಲ್ಲಿ ಉಂಟಾಗಿರುವ ಏಟಿನ ಮತ್ತು ಗಾಯದ ಪ್ರಮಾಣವನ್ನು ನೋಡಿ ಮಗುವು ಎಷ್ಟರ ಮಟ್ಟಿಗೆ ತನ್ನ ನೋವನ್ನು ಅಭಿವ್ಯಕ್ತಪಡಿಸುತ್ತಿದೆ ಎಂಬುದನ್ನು ಗಮನಿಸಬೇಕು. ಕೆಲವು ಮಕ್ಕಳು ಅತೀ ಹೆಚ್ಚು ಅತ್ತರೆ, ಕೆಲವು ಮಕ್ಕಳು ಸಮಾಧಾನಿಸಿದ ಕೂಡಲೇ ಸುಮ್ಮನಾಗಿಬಿಡುತ್ತಾರೆ. ಮತ್ತೆ ಕೆಲವು ಮಕ್ಕಳು ಊರು ಕೇರಿಯವರೆಲ್ಲಾ ಅಥವಾ ಅಪಾರ್ಟ್ಮೆಂಟಿನವರೆಲ್ಲಾ ಬಂದು ಕೇಳುವಷ್ಟರ ಮಟ್ಟಿಗೆ ಚೀರಿಯೇ ತೀರುವುದು. ಇಂತಹ ಸಂದರ್ಭದಲ್ಲಿ ಮಗುವಿನ ಭಾವುಕತೆಯ ಅಭಿವ್ಯಕ್ತತೆ ಅಥವಾ ಪ್ರದರ್ಶನದ ಪ್ರಾಮಾಣಿ ಕತೆಯು ಹಿರಿಯರಿಗೆ ತಿಳಿಯುತ್ತದೆ. ಇದರಿಂದಲೇ ಮಗುವು ಅಂತರ್ಮು ಖಿಯೋ, ಬಹಿರ್ಮುಖಿಯೋ ಅಥವಾ ಎರಡನ್ನೂ ಒಳಗೊಂಡಿರುವುದೋ ಎಂದು ತಿಳಿಯುತ್ತದೆ. ಒಟ್ಟಾರೆ ತನ್ನ ಭಾವುಕತೆಯ ಪ್ರದರ್ಶನವನ್ನು ಮಾಡುವ ಭರದಲ್ಲಿ ತನ್ನ ಗುಣ ಸ್ವಭಾವ ಎಂತಹುದು ಎಂಬುದನ್ನೂ ಮಗುವು ತೋರಿಸುತ್ತದೆ.
ಮಕ್ಕಳ ಭಾವುಕತೆಯ ಪ್ರದರ್ಶನಗಳು
ಮಗುವು ತಪ್ಪು ಮಾಡಿದಾಗ ಅದನ್ನು ನೀವು ಗದರಿಸಿದಾಗ ಅದು ತನ್ನ ಭಾವುಕತೆಯನ್ನು ಪ್ರಕಟಗೊಳಿಸುವ ಬಗೆಯನ್ನು ಗಮನಿಸಬೇಕು. ಒಂದೊಂದು ಮಗುವು ಒಂದೊಂದು ರೀತಿಯಲ್ಲಿ ಪ್ರದರ್ಶಿಸುತ್ತದೆ. ಹಾಗೆ ಪ್ರದರ್ಶಿಸುವಾಗಲೂ ಅಲ್ಲಿ ಯಾವ ವ್ಯಕ್ತಿ ಇದ್ದಾರೆ? ಮಗುವಿನೊಡನೆ ವ್ಯಕ್ತಿಯ ಸಂಬಂಧ ಎಂತಹುದು? ಆ ವ್ಯಕ್ತಿಯೊಡನೆ ಈ ಹಿಂದಿನ ಸಂದರ್ಭ ಹೇಗೆ ಒದಗಿತ್ತು? ಆ ವ್ಯಕ್ತಿಯ ಬಗ್ಗೆ ಮಗುವಿಗೆ ಇರುವಂತಹ ಸಾಧಾರಣ ಒಲವು ಮತ್ತು ನಿಲುವು ಏನು? ಆ ಜಾಗ ಯಾವುದು? ಪ್ರೇಕ್ಷಕರು ಯಾರು? ಈ ಘಟನೆಯ ನಂತರ ಮುಂದೆ ಯಾವ ಸನ್ನಿವೇಶಕ್ಕೆ ಆ ಪ್ರಸ್ತುತ ಸಂದರ್ಭವು ಒಯ್ಯುವುದು? ಇತ್ಯಾದಿ ಹಲವು ವಿಷಯಗಳನ್ನು ಮಗುವು ತನ್ನ ಭಾವುಕತೆಯನ್ನು ಪ್ರದರ್ಶಿಸುವಾಗ ಅವಲಂಬಿಸಿರುತ್ತದೆ.
1.ಮಗುವು ಬೈದವರನ್ನು ಸುಮ್ಮನೆ ನೋಡುತ್ತಿರುತ್ತದೆ. ಏನೂ ಮಾತಾಡುವುದಿಲ್ಲ. ನೋಡನೋಡುತ್ತಲೇ ತುಟಿ ಬಿಗಿದು ಬರುತ್ತದೆ. ಮೂಗಿನ ಹೊಳ್ಳೆಗಳು ಅದುರತೊಡಗುತ್ತವೆ. ತಡೆದುಕೊಳ್ಳುತ್ತಿದ್ದರೂ ಅದು ತನ್ನ ನಿಯಂತ್ರಣವನ್ನು ಮೀರಿ ಸಣ್ಣ ಬಿಕ್ಕುವಿಕೆಯೊಂದಿಗೆ ಕಣ್ಣಿಂದ ನೀರು ಸುರಿಯತೊಡಗುತ್ತದೆ. ಕುತ್ತಿಗೆಯ ನರಗಳು ಬಿಗಿಗೊಳ್ಳುತ್ತಿರುತ್ತವೆ.
ಈ ಮಗುವಿಗೆ ಬೈಗುಳವು ಅನಿರೀಕ್ಷಿತವಾಗಿದ್ದು, ಅದರಲ್ಲೂ ತನ್ನ ನಿರೀಕ್ಷೆಗೆ ಮೀರಿದ ಬೈಗುಳವಾಗಿರುತ್ತದೆ. ಸಾಮಾನ್ಯವಾಗಿ ಆತ್ಮಗೌರವ ಮತ್ತು ಆತ್ಮವಿಶ್ವಾಸದಿಂದ ತಾನೇನೋ ಮಾಡಲು ಹೋದಾಗ ಬೈಸಿಕೊಳ್ಳುವ ಮಕ್ಕಳಲ್ಲಿ ಇಂತಹ ಭಾವುಕತೆಯ ಪ್ರದರ್ಶನವಾಗುತ್ತದೆ. ಪ್ರಶಂಸೆಯನ್ನು ನಿರೀಕ್ಷಿಸುವಂತಹ ಕೆಲಸ ಮಾಡುವಾಗ ಅದಕ್ಕೆ ವ್ಯತಿರಿಕ್ತವಾಗಿ ಬೈಸಿಕೊಳ್ಳುವಂತಹ ಪ್ರಸಂಗವನ್ನು ಎದುರಿಸಿದರೆ ಅವರಿಗೆ ಆಘಾತವಾಗುತ್ತದೆ.
ಇದು ಮುಂದುವರಿದು ಈ ಮಗುವು ಅಡಗಿಸಿಕೊಳ್ಳಲು ಯತ್ನಿಸುವಂತಹ ಭಾವುಕತೆಯು ಒಮ್ಮೆ ವ್ಯಕ್ತವಾಗಿಬಿಟ್ಟರೆ ಅದು ಇನ್ನು ತಡೆದು ಕೊಳ್ಳುವಂತಹ ಪ್ರಯತ್ನವನ್ನು ಮಾಡದೇ ಹೊರಹರಿಯಬಿಡುತ್ತದೆ. ಒಂದು ವೇಳೆ ಅದು ನಿಯಂತ್ರಣವನ್ನು ಮೀರುವ ಮುನ್ನವೇ ಪ್ರಸಂಗವು ಮುಗಿದುಹೋದರೆ ಮಗುವು ಮನೆಯಲ್ಲೋ ಅಥವಾ ತನ್ನ ಆತ್ಮೀಯರ ಹಾಗೂ ಆಪ್ತರ ಬಳಿಯಲ್ಲಿ ಅದನ್ನು ಹೊರಗೆ ಹಾಕುವಾಗ ದುಮ್ಮಾನದ ಭಾವುಕತೆಯನ್ನು ಪ್ರದರ್ಶಿಸುತ್ತದೆ.
2.ಈ ಮಗು ಬೈದ ಕೂಡಲೇ ಜೋರಾಗಿ ಅಳುತ್ತಾ ತನ್ನ ಜೊತೆಯಲ್ಲಿ ಇದ್ದವರ ಕಡೆಗೆ ಬೆರಳು ಮಾಡುತ್ತದೆ. ತನ್ನೆಲ್ಲಾ ತಪ್ಪುಗಳೂ ಅವರಿಂದಾ ಗಿಯೇ ಆಗಿದ್ದು ಎಂದು ತೋರುತ್ತಾ ನೀವು ನನ್ನನ್ನು ಬೈಯಲೇಬಾರದು ಎಂಬ ಧೋರಣೆಯಲ್ಲಿ ತನ್ನ ಅಳುವಿನ ಸದ್ದನ್ನು ಹೆಚ್ಚಿಸಿಕೊಂಡು ನಿಮ್ಮ ದನಿಯು ತನ್ನ ಕಿವಿಯ ಮೇಲೆ ಬೀಳದಂತೆ ನೋಡಿಕೊಳ್ಳುತ್ತದೆ.
ಈ ಮಗು ಪಲಾಯನವಾದಿಯಾಗಿರುತ್ತದೆ. ತನ್ನ ಮೇಲೆ ಯಾವುದೇ ದೋಷಾ ರೋಪಣೆಯನ್ನು ಸಹಿಸದಂತಹ ಅಹಂಕಾರಿಯೂ ಕೂಡ ಆಗಿರುತ್ತದೆ. ಜೊತೆಗೆ ಅದಕ್ಕೆ ಯಾವ ಕೆಲಸಕ್ಕೆ ಬೈಸಿಕೊಳ್ಳುತ್ತೇವೆ. ಯಾವುದಕ್ಕೆ ಪ್ರಶಂಸೆಯನ್ನು ಪಡೆಯುತ್ತೇವೆ ಎಂಬ ಅರಿವೇ ಇರುವುದಿಲ್ಲ. ತನ್ನ ಇಷ್ಟ ಬಂದ ಹಾಗೆ ನಡೆದುಕೊಳ್ಳುತ್ತದೆ.
3.ಇದೊಂದು ಬಗೆಯ ಮಗು ಬೈದಾಗ ತಲೆ ತಗ್ಗಿಸಿಕೊಂಡು ಶೂನ್ಯದಲ್ಲೆಲ್ಲೋ ನೋಟವನ್ನು ನೆಟ್ಟುಕೊಂಡು ಬಳಬಳನೆ ಕಣ್ಣೀರು ಸುರಿಸುತ್ತಿರುತ್ತದೆ. ಏನೇ ಹೇಳಿದರೂ ಸರಿ ಸರಿ ಎಂದು ತಲೆಯಾಡಿಸುವುದೇ ಹೊರತು ಎದುರು ವಾದಿಸುವುದಿಲ್ಲ.
ಇಂತಹ ಮಕ್ಕಳು ಶರಣಾಗತಿ ಭಾವದಲ್ಲಿ ಇರುತ್ತದೆ. ತಾವೀಗ ಅಸಹಾ ಯಕರು, ಪರಿಸ್ಥಿತಿ ಮತ್ತು ಅಧಿಕಾರದಲ್ಲಿರುವವರ ಆಜ್ಞಾಧಾರಕರು ಎಂಬಂತಹ ಮನೋಭಾವ. ಬೈಯುವ ವ್ಯಕ್ತಿಗಳೇ ಮತ್ತೆ ಒಳ್ಳೆಯ ಮಾತು ಗಳನ್ನು ಹೇಳಿದರೂ ಕೇಳುವಂತಹ ಮತ್ತು ಅವರನ್ನು ಸಂತೋಷಪಡಿಸಲು ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.
4.ಕೆಲವು ಮಕ್ಕಳು ಬೈದ ಕೂಡಲೇ ಅವರ ಮುಂದೆ ಸುಮ್ಮನಿರುತ್ತವೆ. ಯಾವ ಅಳು ಅಥವಾ ಕೋಪವನ್ನೂ ತೋರಿಸುಮದಿಲ್ಲ. ಆದರೆ, ಅವರಿಗೆ ಆಪ್ತವಾಗಿರುವವರ ಬಳಿಯಲ್ಲಿ ದೊಡ್ಡದನಿಯಲ್ಲಿ ಅಳುತ್ತಾರೆ. ಹೀಗಂದರು ಹೀಗಾಯ್ತು ಎಂದು ತನ್ನನ್ನು ಬಲಿಪಶು ಮಾಡಿದರು ಎಂಬುದಾಗಿ ತೋಡಿಕೊಳ್ಳುತ್ತದೆ.
ಈ ಮಕ್ಕಳು ಚಾಡಿಕೋರರು. ತಮ್ಮನ್ನು ಬಲಿಪಶು ಎಂದೇ ತೋರ್ಪಡಿ ಸುತ್ತಾರೆ. ಜೊತೆಗೆ ತಾವು ಪಾಪದವರು, ತಮ್ಮ ಮೇಲೆ ವೃಥಾ ಅಪವಾದ ವನ್ನು ಹೊರಿಸಿದ್ದಾರೆ ಎಂಬಂತಹ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಸ್ವಮರುಕ ಸ್ವಭಾವದ ಈ ಮಕ್ಕಳು ಸಾಮಾನ್ಯವಾಗಿ ಸ್ವಾರ್ಥಿಗಳೂ ಮತ್ತು ಪರರ ವಿಷಯದಲ್ಲಿ ದಯಾಹೀನರಾಗಿಯೂ ವರ್ತಿಸುತ್ತಾರೆ.
5.ಮತ್ತೆ ಕೆಲವು ಮಕ್ಕಳು ಸುಮ್ಮನೆ ನೋಡುತ್ತಿರುತ್ತವೆ. ಅಳುವುದೂ ಇಲ್ಲ. ಎದುರು ವಾದಿಸುವುದೂ ಇಲ್ಲ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಸಮರ್ಥಿಸಿಕೊಳ್ಳುವುದೂ ಇಲ್ಲ. ಇಂತಹ ಮಕ್ಕಳು ಕೊಂಚ ನಿಗೂಢ ಮನಸ್ಥಿತಿಯವರು. ಭಾವುಕತೆಯನ್ನು ವ್ಯಕ್ತಪಡಿಸದೇ ಇದ್ದರೂ, ಅದನ್ನು ತೀವ್ರವಾಗಿ ಪ್ರದರ್ಶಿಸದಿದ್ದರೂ ಅದನ್ನು ನಕಾರಾತ್ಮಕ ಭಾವದ ಪ್ರದರ್ಶನವೆಂದೇ ತಿಳಿಯಬೇಕು. ಅಂತಹ ಮಕ್ಕಳು ಹೊರಗೆ ತಮ್ಮ ಭಾವುಕತೆಯನ್ನು ಪ್ರದರ್ಶಿಸದೇ ಇರಬಹುದು. ಆದರೆ ತಮಗೆ ನಿಮ್ಮ ಬಗ್ಗೆ ನಕಾರಾತ್ಮಕ ಧೋರಣೆ ಇದೆ ಎಂಬುದೇ ಆ ಗಾಢವೌನದ ಮತ್ತು ಪ್ರದರ್ಶಿಸದ ಭಾವುಕತೆಯ ಲಕ್ಷಣ.
6.ತನ್ನ ಬೈಯುತ್ತಿರುವ ವ್ಯಕ್ತಿಯು ಬಹಳ ಜೋರಿನವರಾಗಿದ್ದು, ಆ ವ್ಯಕ್ತಿಗೆ ತನ್ನ ಮೇಲೆ ಅಧಿಕಾರವಿದ್ದು, ಅದರಲ್ಲೂ ತನಗೆ ಬೇಕಾದುದನ್ನು ಕೊಡಿಸುವ ಮತ್ತು ಕೊಡಿಸದಿರುವ ಅಧಿಕಾರವಿದ್ದರೆ ತಕ್ಷಣವೇ ತಪ್ಪನ್ನು ಒಪ್ಪಿಕೊಳ್ಳುವುದು. ಒಂದು ವೇಳೆ ಬೈಯುವ ವ್ಯಕ್ತಿಯು ಅಂತಹ ಅಧಿಕಾರವನ್ನು ಹೊಂದಿರದಿದ್ದರೆ, ಜೋರಿರದಿದ್ದರೆ ತಾನೇ ಜೋರಾಗಿ ಅಳುತ್ತಾ, ಜೋರು ಮಾಡುತ್ತಾ ಅವರನ್ನು ಕಾಡಿಸುವುದು. ತಂದೆ, ತಾಯಿ ಅಲ್ಲದೇ ಮೆದು ಭಾಷೆಯ ಅಥವಾ ಹಣ್ಣಾಗಿರುವ ಅಜ್ಜಿಯೋ ತಾತನೋ ಆಗಿದ್ದರೆ, ಅಥವಾ ಮನೆಯ ಕೆಲಸದವರಾಗಿದ್ದರೆ ಅಳುವ ಬಗೆ ಮತ್ತು ಭಾವುಕತೆಯನ್ನು ಪ್ರದರ್ಶಿಸುವ ಬಗೆ ಬೇರೆಯೇ ಆಗಿರುತ್ತದೆ. ಇದು ಸಾಮಾನ್ಯವಾಗಿ ಹಠಮಾರಿ ಮಗುವಿನ ಲಕ್ಷಣಗಳಾಗಿರುತ್ತದೆ.
7.ಕೆಲವುಬಾರಿಒಂದೇಮಗುವಿನಲ್ಲಿಈಎಲ್ಲಾಲಕ್ಷಣಗಳೂತೋರುತ್ತವೆ.ಕೆಲವೊಮ್ಮೆಮಗುವುಸಂದರ್ಭಸನ್ನಿವೇಶ,ಮನಸ್ಥಿತಿ,ಪರಿಸ್ಥಿತಿ,ವ್ಯಕ್ತಿಗಳಿಗ ನುಗುಣವಾಗಿ ಭಾವುಕತೆಯ ಪ್ರದರ್ಶನವನ್ನು ಬದಲಾಯಿಸುತ್ತಿರುತ್ತಾರೆ.
8.ಈ ಮೇಲಿನ ಎಲ್ಲಾ ಉದಾಹರಣೆಗಳೂ ನಕಾರಾತ್ಮಕವಾದ ಸನ್ನಿವೇಶದ್ದೇ ಆಗಿವೆ. ಆದರೆ ಇದೇ ರೀತಿಯಲ್ಲಿ ನಗುವನ್ನು, ಆಸಕ್ತಿಯನ್ನು, ಕುತೂಹಲವನ್ನು, ಉತ್ಸಾಹವನ್ನು ಮತ್ತು ದಯೆ ಕರುಣೆಗಳನ್ನು ವ್ಯಕ್ತಪಡಿಸುವಂತಹ ಸಂದರ್ಭಗಳಲ್ಲೂ ಮಗುವಿನ ವಿವಿಧ ಮನಸ್ಥಿತಿ ಮತ್ತು ಸ್ವಭಾವಗಳ ಚಿತ್ರಣವು ಪ್ರಕಟವಾಗುತ್ತದೆ. ಅವುಗಳನ್ನೂ ಗಮನಿಸಬೇಕು. ಆದರೆ ದುಃಖ ಮತ್ತು ಬೇಸರದ ಸಂದರ್ಭಗಳಲ್ಲಿ ನೇರವಾದ ಮತ್ತು ಸ್ಪಷ್ಟವಾದ ಗುರುತುಗಳು ಕಾಣುವುದರಿಂದ ಅವುಗಳ ಉದಾಹರಣೆಗಳನ್ನಷ್ಟೇ ಇಲ್ಲಿ ಬಳಸಿಕೊಂಡಿದ್ದೇನೆ.
ತರಬೇತಿ ನೀಡಿ
ನಾವು ಪೋಷಕರು ಅಥವಾ ಶಿಕ್ಷಕರಾಗಿ ಮಾಡಬೇಕಾದ ಕೆಲಸವೆಂದರೆ, ಭಾವುಕತೆಯನ್ನು ಗುರುತಿಸುವಂತೆ ತರಬೇತಿಯನ್ನು ನೀಡುವುದು. ಪ್ರದರ್ಶನವಾಗುವ ಭಾವುಕತೆಯನ್ನು ಗುರುತಿಸುವುದನ್ನು ಕಲಿತಂತೆಯೇ ಅದರ ಗುಣಸ್ವಭಾವವನ್ನೂ ಮಕ್ಕಳು ಅರಿಯತೊಡ ಗುತ್ತಾರೆ. ಇದು ಅತ್ಯಂತ ಗುರುತರವಾದ ಮತ್ತು ಅಗತ್ಯವಾದ ಘಟ್ಟ.
ಏಕೆಂದರೆ ತಮ್ಮ ಭಾವುಕತೆಯು ಎಂತಹ ತೆರನಾದದ್ದು ಎಂದು ತಿಳಿದರೆ, ಅದು ಯಾವ ರೀತಿಯಲ್ಲಿ ವ್ಯಕ್ತವಾಗುತ್ತಿದೆ ಎಂದು ತಿಳಿದರೆ, ಆ ಗಮನಿಸುವಿಕೆಯೇ ಮಕ್ಕಳಿಗೆ ಭಾವುಕತೆಯ ಶಕ್ತಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಯಾವಾಗ ಭಾವುಕತೆಯ ಶಕ್ತಿಯನ್ನು ಒಂದು ನಿರ್ದಿಷ್ಟ ಉದ್ದೇಶಕ್ಕೆ ಬಳಸಲು ಸಮರ್ಥವಾಗುತ್ತೇಮೋ ಆಗ ಸಹಜವಾಗಿಯೇ ಎಮೋಶನಲ್ ಇಂಟಲಿಜೆನ್ಸನ್ನು ಪಡೆದಂತೆಯೇ ಅರ್ಥ.
ಭಾವುಕತೆಯು ಸಹಜವಾಗಿ ಉಂಟಾಗುವುದಾದರೂ ಅದರ ಬಳಕೆಯು ಸಮರ್ಥವಾದ ನಿರ್ದೇಶನದಲ್ಲಿ ತರಬೇತಿಯನ್ನು ಹೊಂದ ಬೇಕು. ಸರಿಯಾದ ಮಾರ್ಗದರ್ಶನ ಬೇಕು. ನಿರ್ದೇಶನ ಮತ್ತು ಮಾರ್ಗದರ್ಶನವಿಲ್ಲದೇ ಹೋದರೆ ಮತ್ತೆ ಮಕ್ಕಳು ತಮ್ಮ ಗ್ರಹಿಕೆ ಮತ್ತು ಅರಿವಿನ ಪ್ರಕಾರವೇ ತಮ್ಮ ಸಾಮರ್ಥ್ಯದ ಬಳಕೆಯನ್ನು ಮಾಡಿಕೊಳ್ಳುವುದನ್ನು ರೂಢಿಗೊಳಿಸಿಕೊಳ್ಳುತ್ತಾರೆ.
ಈ ವ್ಯಾಖ್ಯಾನ ಅಥವಾ ವಿವರಣೆಯನ್ನು ಹೆಚ್ಚು ಜಟಿಲ ಗೊಳಿಸಿ ಕೊಂಡು ಗೊಂದಲಕ್ಕೀಡಾಗುವುದು ಬೇಡ. ಸರಳವಾಗಿ ಹೇಳುವು ದಾದರೆ, ಯಾವುದೇ ಕ್ರಿಯೆಗೆ ಸಹಜವಾಗಿ ಉಂಟಾಗುವ ಪ್ರತಿಕ್ರಿ ಯೆಯ ಸಮಯದಲ್ಲಿ ಉಂಟಾಗುವ ಭಾವುಕತೆಯನ್ನು ಗಮನಿಸು ವಂತಹ ತನ್ನನ್ನು ತಾನು ನೋಡಿಕೊಳ್ಳುವ ಗುಣವನ್ನು ಅಭ್ಯಾಸ ಮಾಡುವುದು ಅಷ್ಟೇ. ಇದೇನು ಅಷ್ಟೇ ಎನ್ನುವಷ್ಟು ಸರಳವಲ್ಲ.
ಏಕೆಂದರೆ ಭಾವುಕತೆಗೆ ಒಳಗಾದ ಕೂಡಲೇ ತಮ್ಮನ್ನು ತಾವು ಗಮನಿಸಿ ಕೊಳ್ಳುವ ಬದಲು ಭಾವುಕತೆಯಲ್ಲಿ ವಿಲೀನವಾಗಿ ಅದರೊಂದಿಗೇ ಗುರುತಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಭಾವುಕತೆಯ ಮೂಲಗುಣ ತಾದ್ಯಾತ್ಮತೆ.
ಆದರೆ ಅದನ್ನು ಗುರುತಿಸಿ ಮತ್ತು ಗಮನಿಸುವಂತಹ ಗುಣವೆಂಬುದು ತನ್ನನ್ನು ಪ್ರತ್ಯೇಕಗೊಳಿಸಿಕೊಂಡು ಎಚ್ಚರಿಕೆಯಿಂದ ಇರುವಂತಹ ಗುಣ. ಸಾಕ್ಷೀಕರಿಸುವ ಮತ್ತು ಭಾವುಕವಾಗುವ ಈ ಎರಡೂ ಪರಸ್ಪರ ವಿರೋಧಗುಣಗಳನ್ನು ಹೊಂದಿದ್ದರೂ ಕೂಡ, ಪ್ರಜ್ಞಾಪೂರ್ವಕವಾಗಿ ಅಥವಾ ಎಚ್ಚರಿಕೆಯಿಂದ ಗಮನಿಸುವಂತಹ ತರಬೇತಿ ವಿರೋಧಾಭಾಸಗಳನ್ನು ಸೃಷ್ಟಿಸುವುದಿಲ್ಲ.