ಸಮಕಾಲೀನ
ತೆರೇಸಾ ಮೇ
ಅವಧಿಗಿಂತ ಎರಡು ವರ್ಷ ಮೊದಲೇ ಚುನಾವಣೆ ನಡೆಸಿ ಭಾರೀ ಬಹುಮತ ದೊಂದಿಗೆ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದ್ದ ಇಂಗ್ಲೆಂಡಿನ ಟೋರಿ ಪಕ್ಷದ ಪ್ರಧಾನಿ ತೆರೇಸಾ ಮೇಗೆ ಮುಖಭಂಗವಾಗಿದೆ.
ತಮಗಿದ್ದ ಸರಳ ಬಹುಮತದಷ್ಟೂ ಸೀಟುಗಳನ್ನು ಗೆಲ್ಲಲಾಗದೆ ತೆರೇಸಾ ಅತಂತ್ರ ಸ್ಥಿತಿ ತಲುಪಿದ್ದಾರೆ. ಒಂದು ಕಾಲದ ಸೂರ್ಯ ಮುಳುಗಿದ ಸಾಮ್ರಾಜ್ಯ ವಾಗಿದ್ದ ಬ್ರಿಟನ್‌ಗೆ ಈಗ ಅನೇಕ ವಿಚಾರಗಳಲ್ಲಿ ಸ್ವಂತ ನಿಲುವಿಲ್ಲ. ಅಮೆರಿಕ ಗುಂಪು ಹಾಗೂ ಯೂರೋಪಿಯನ್ ಒಕ್ಕೂಟದ ನಡುವೆ ಯಾರ ಜೊತೆ ಸಾಗಬೇಕೆಂಬುದು ಬ್ರಿಟನ್‌ನ ಬಂಡವಾಳಶಾಹಿಗಳಿಗೆ ಜಿಜ್ಞಾಸೆಯಾಗಿ ಬಿಟ್ಟಿದೆ.
ಬ್ರಿಟನ್ ಉದ್ಯಮಿಗಳಿಗೆ ಯೂರೋಪಿಯನ್ ಯೂನಿಯನ್ ಬೇಕು ಆದರೆ ಅಲ್ಲಿ ಅದು ತಮಗೆ ಹೆಚ್ಚು ಲಾಭ ತರುವಂತಿರಬೇಕು ಎಂದಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾನು ಇಯೂ ತೊರೆಯುವುದಾಗಿ ಬೆದರಿಸುತ್ತಿದೆ. 2016 ರಲ್ಲಿ ಡೇವಿಡ್ ಕ್ಯಾಮರೂನ್ ಸರಕಾರ ಈ ಬಗ್ಗೆ ಜನಾಭಿಪ್ರಾಯ ಪಡೆದಾಗ ಜನ ಬ್ರೆಕ್ಸಿಟ್ ಪರ ಮತ ಹಾಕಿಬಿಟ್ಟರು. ಆದರೆ ಬ್ರಿಟನಿನ ಆಳುವ ಗುಂಪುಗಳಿಗೆ ಹೀಗೆ ಕಡ್ಡಿ ತುಂಡಾದಂತೆ ನಿರ್ಧಾರ ಮಾಡುವುದು ಬೇಕಿರಲಿಲ್ಲ. ಅವರಿಗೆ ಇಯೂ ಜೊತೆ ಚೌಕಾಸಿ ಮಾತ್ರಬೇಕಿತ್ತು. ಆ ಚೌಕಾಸಿಯ ಶಕ್ತಿ ಪಡೆಯಲೆಂದೇ ಕಳೆದ ವಾರ ಅವಧಿ ಪೂರ್ವ ಚುನಾವಣೆ ನಡೆದದ್ದು. ಆದರೆ ಅಂದು ಜನಾಭಿಪ್ರಾಯದಲ್ಲಿ ಡೇವಿಡ್ ಕ್ಯಾಮರೂನ್ ಸೋತರೆ ಈಗ ಚುನಾವಣೆಯಲ್ಲಿ ತೆರೇಸಾ ಸೋತಿದ್ದಾರೆ.
ಈಗಿನ ಸಂಪ್ರದಾಯವಾದಿ ಟೋರಿ ಪಕ್ಷದ ಬಗ್ಗೆ ಬ್ರಿಟಿಷರಿಗೆ ಅಷ್ಟೇನು ಒಲವಿಲ್ಲ. ಮೇ ಸರಕಾರ ಶಾಲೆಗಳಲ್ಲಿನ ಉಚಿತ ಉಪಾಹಾರ ಯೋಜನೆ ರದ್ದು ಮಾಡಿದೆ. ವೃದ್ಧರಿಗಿದ್ದ ಆರೋಗ್ಯ ಯೋಜನೆಗಳನ್ನು ರದ್ದು ಮಾಡಿ ಜನರ ಸಿಟ್ಟಿಗೆ ಕಾರಣವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇಂಗ್ಲೆಂಡ್‌ನ ಜನ ಈಗ ಉಗ್ರಗಾಮಿಗಳ ಬೆದರಿಕೆಯ ನಡುವೆಯೆ ಬದುಕಬೇಕಾದ ಕೆಟ್ಟ ಸ್ಥಿತಿ ಇದೆ. ಇರಾಕ್, ಅಫ್ಘಾನಿಸ್ತಾನ, ಸಿರಿಯಾ, ಲಿಬಿಯಾ ಹಾಗೂ ಈಜಿಪ್ಟ್ ದೇಶಗಳ ವ್ಯವಹಾರಗಳಲ್ಲಿ ತಲೆಹಾಕುತ್ತಾ ಅಮೆರಿಕ ಜೊತೆ ಸೇರಿ ಲಕ್ಷಾಂತರ ಜನರ ಸಾವು-ನೋವುಗಳಿಗೆ ಬ್ರಿಟನ್ ಕೂಡ ಹೊಣೆಯಾಗಿದೆ.
ಇಂಗ್ಲೆಂಡ್‌ನ ಈ ಕೆಟ್ಟ ನೀತಿಗಳ ಪರಿಣಾಮಗಳನ್ನು ಭಯೋತ್ಪಾದನೆ ರೂಪದಲ್ಲಿ ಅಲ್ಲಿನ ಸಾಮಾನ್ಯ ಜನ ಅನುಭವಿಸುವ ಪರಿಸ್ಥಿತಿ ಬಂದಿದೆ.
ಕಳೆದ ಆರೆಂಟು ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ಜನಾಭಿಪ್ರಾಯ, ಮತದಾನ ಮುಂತಾದವೆಲ್ಲ ಒಂದರ ಹಿಂದೆ ಮತ್ತೊಂದು ನಡೆಯುತ್ತಿವೆ. ಬಹುಶಃ ಅಲ್ಲಿನ ಆಳುವ ವರ್ಗಗಳಿಗೆ ತಮಗೆ ಬೇಕಾದ ಜನಾಭಿಪ್ರಾಯ ಕೈಗೂಡುವ ತನಕವೂ ಇದೇ ನಾಟಕಗಳು ನಡೆಯುತ್ತಿರುತ್ತವೆ ಅನಿಸುತ್ತದೆ.
ಮೊನ್ನೆ ನಡೆದ ಚುನಾವಣೆ ಸಹ ಅದಕ್ಕಿಂತಾ ಬೇರೆಯಾದದ್ದೇನಾಗಿರಲಿಲ್ಲ.
ಇಂಗ್ಲೆಂಡಿನ ಜನ ತಮಗೇನು ಬೇಕೆಂದು ಪದೇ-ಪದೇ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆದರೆ ಆಳುವವರಿಗೆ ಅದು ಅಪಥ್ಯವಾಗಿದೆ. ಹಾಗಾಗಿ ಅವರು ತಮಗೆ ಬೇಕಾದ ಉತ್ತರ ಪಡೆಯಲು ತಿಣುಕುತ್ತಿದ್ದಾರೆ.
ಅಮಿತ್ ಶಾ
ಬಿಜೆಪಿಯ ನಾಯಕ ಅಮಿತ್ ಶಾರನ್ನು ಮಹಾನ್ ಶಕ್ತಿಶಾಲಿ, ಚುನಾವಣಾ ತಂತ್ರಜ್ಞ-ನಿಪುಣ ಎಂದೆಲ್ಲಾ ಪದೇ-ಪದೇ ಬಿಂಬಿಸಲಾಗುತ್ತಿದೆ.
ಅವರೀಗ ಒಂದು ಚುನಾವಣಾ ತಯಾರಿಯ ಸಭೆಯಲ್ಲಿ ಮಾತನಾಡುತ್ತಾ ‘ಮಹಾತ್ಮ ಗಾಂಧಿ ಒಬ್ಬ ಚತುರ ಬನಿಯಾ’ ಆಗಿದ್ದರು ಎಂದಿದ್ದಾರೆ. ಭಾರತವು ಸ್ವಾತಂತ್ರ ಪಡೆದ ನಂತರ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದಿದ್ದರು ಎಂಬ ಮಾತಿನ ಹಿನ್ನೆಲೆಯಲ್ಲಿ ಅಮಿತ್ ಶಾ ಹೀಗೆ ಹೇಳಿರುವುದು. ಅವರ ಮಾತು ಈಗ ವಿವಾದವಾಗಿದೆ.
ಅಮಿತ್ ಶಾ ಗಾಂಧಿಯನ್ನು ‘‘ಚತುರ ಬನಿಯಾ’’ ಅನ್ನುವ ಬದಲಾಗಿ ‘ಒಬ್ಬ ಮಹಾನ್ ಮಾನವತಾವಾದಿ’ ಅಂದಿದ್ದರೂ ಅದಕ್ಕೇನು ಮಹತ್ವ ಬರುತ್ತಿರಲಿಲ್ಲ. ಏಕೆಂದರೆ ಗಾಂಧಿ ಬಗ್ಗೆ ಮಾತನಾಡುವಷ್ಟು ಎತ್ತರದಲ್ಲೇನೂ ಶಾ ಇಲ್ಲ. ಅದಕ್ಕೆ ಕಾರಣ ಅಮಿತ್ ಶಾರ ವ್ಯಕ್ತಿತ್ವದಲ್ಲೇ ಇದೆ.
ಬಿಜೆಪಿಯ ಇತಿಹಾಸದಲ್ಲಿ ಆಗಿ ಹೋಗಿರುವ ಅಧ್ಯಕ್ಷರುಗಳ ಪೈಕಿ ಸಂಸದೀಯ ಹಿನ್ನೆಲೆ ಇರದ, ಸಾರ್ವಜನಿಕ ವ್ಯಕ್ತಿತ್ವವೂ ಇರದ ಅಧ್ಯಕ್ಷರೆಂದರೆ ಅಮಿತ್ ಶಾ ಮಾತ್ರ. ಇಂಡಿಯಾ ದೇಶದ ರಾಜಕೀಯ ನಕ್ಷೆಯಿಂದ ಕಾಂಗ್ರೆಸ್ ಪಾರ್ಟಿ ಕಣ್ಮರೆಯಾಗಿಬಿಡಲಿ ಎಂಬ ಬಯಕೆ ಬಿಜೆಪಿಗಿದೆ. ಆಗ ರಾಷ್ಟ್ರಮಟ್ಟದಲ್ಲಿ ಜನರಿಗೆ ಬಿಜೆಪಿ ಬಿಟ್ಟರೆ ಬೇರೆ ಆಯ್ಕೆ ಇರುವುದಿಲ್ಲ ಎಂಬ ತಿರುಕರ ಕನಸೂ ಅವರಿಗೆ ಬೀಳುತ್ತಿದೆ. ಹಾಗಾಗಿ ಬಿಜೆಪಿಯವರು ಬಡತನ ಮುಕ್ತ ಭಾರತ, ಅನಕ್ಷರತೆ-ನಿರುದ್ಯೋಗ ಮುಕ್ತ, ಭ್ರಷ್ಟಚಾರ ರಹಿತ ಭಾರತ ಎನ್ನುವ ಬದಲಾಗಿ ಪದೇಪದೇ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿರುತ್ತಾರೆ.
ಒಬ್ಬ ಚುನಾವಣಾ ವ್ಯಾಪಾರಿಯಂತೆ ಮಾತ್ರ ಕಾಣುವ ಅಮಿತ್ ಶಾ ಇಷ್ಟು ಪ್ರಬಲವಾಗಿ ಬಿಜೆಪಿಯಲ್ಲಿ ನೆಲೆ ಕಂಡುಕೊಳ್ಳಲು ಅವರ ಚಿಂತನೆ, ನಡವಳಿಕೆಗಳು ಕಾರಣವಲ್ಲ. ಭಾರತದಲ್ಲಿ ಲಕ್ಷಾಂತರ ಕೋಟಿ ವ್ಯವಹಾರ ನಡೆಸುವ ಉದ್ಯಮಿಗಳು, ಪ್ರಭಾವಶಾಲಿ ಮೀಡಿಯಾಗಳೆಲ್ಲಾ ಶಾ ಬೆಂಬಲಕ್ಕಿವೆ. ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಲ್ಲುದು ಎಂಬ ಗಾದೆ ಮಾತಿನಂತೆ ಅಮಿತ್ ಶಾ ನಾಯಕತ್ವದಲ್ಲಿ ಇವರೆಲ್ಲರ ಬೆಂಬಲದೊಂದಿಗೆ ಒಂದರ ಮೇಲೊಂದರಂತೆ ಚುನಾವಣೆ ಗೆಲ್ಲಲು ಬಿಜೆಪಿಗೆ ಸಾಧ್ಯವಾಗುತ್ತಿದೆ. ಎಲೆಕ್ಷನ್ ಬಂದಾಗ ಜಾತಿ ಲೆಕ್ಕಾಚಾರ ಹಾಕಿ ಸಂಯೋಜಿಸಿ, ಹಣದ ಪ್ರವಾಹ ಹರಿಸಿ, ಭರ್ಜರಿ ಸಕಾರಾತ್ಮಕ ಮೀಡಿಯಾ ಪ್ರಚಾರ ಗಟ್ಟಿಸುವ ಅನುಕೂಲ ಶಾ ನಾಯಕತ್ವದ ಬಿಜೆಪಿಗೆ ಇದೆ. ಇದಲ್ಲದೆ ಯಾರೇ ಬಂದು ಪಕ್ಷ ಸೇರುತ್ತಾ ಹೋದರೂ ಅವರವರಿಗೆ ಓಟು ತರುವ ತಾಕತ್ತೆಷ್ಟಿದೆ ಎಂಬ ಆಧಾರದಲ್ಲಿ ಸ್ಥಾನಮಾನ-ಅಧಿಕಾರ ಕಲ್ಪಿಸಿಕೊಡುವ ಶಕ್ತಿಯೂ ಈಗ ಬಿಜೆಪಿಗೆ ಬಂದಿದೆ. ಅಮಿತ್ ಶಾ ಇವೆಲ್ಲವನ್ನು ಬೆಸೆಯುತ್ತಿರುವ ಸೂತ್ರಧಾರ ಅಷ್ಟೆ.
‘ವಜನ್’ಭಾಯಿ ವಾಲಾ
ಅನಿರೀಕ್ಷಿತ ಪ್ರಶ್ನೆಗಳನ್ನು ಕೇಳುವುದು, ಅದಕ್ಕೆ ನಿರೀಕ್ಷಿಸುವ ಸಮಾಧಾನ (?) ಸಿಕ್ಕ ನಂತರ ಪ್ರಶ್ನೆ ಪತ್ರಿಕೆಯನ್ನೇ ರದ್ದು ಪಡಿಸಿಬಿಡುವುದು ! ಇಂತಹದೊಂದು ಅನುಮಾನಾಸ್ಪದ ವಿದ್ಯಮಾನಗಳು ಕರ್ನಾಟಕದ ರಾಜ್ಯಪಾಲ ವಜೂಭಾಯಿ ವಾಲಾರ ಕಚೇರಿಯಲ್ಲಿ ಸಂಭವಿಸುತ್ತಿವೆ.
ಈಗ ರಾಜ್ಯಪಾಲರು ಕೇಳುವ ಪ್ರಶ್ನೆಗಳನ್ನು ಮೊದಲು ನೋಡೋಣ. ನಂತರ ‘ಸಮಾಧಾನ’ಗಳೇನಿದ್ದಿರಬಹುದು, ಎಷ್ಟಿರಬಹುದು ಎಂಬುದನ್ನು ಓದುಗರ ಊಹೆಗೆ ಬಿಡಬಹುದು.
ಇತ್ತೀಚಿಗೆ ಸಿದ್ದರಾಮಯ್ಯ ಸರಕಾರ ಮೂವರನ್ನು ವಿಧಾನ ಪರಿಷತ್ ಸ್ಥಾನಗಳಿಗೆ ನೇಮಿಸಲು ಶಿಫಾರಸು ಮಾಡಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳಿಸಿತು. ಅವರಲ್ಲಿ ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್. ರಮೇಶರಿಗೆ ಒಪ್ಪಿಗೆ ಸೂಚಿಸಿದ ವಜೂಭಾಯಿ ವಾಲಾ ರಾಮನಗರದ ಸಿ.ಎಂ. ಲಿಂಗಪ್ಪನವರ ಪ್ರಸ್ತಾಪ ಒಪ್ಪದೆ ಫೈಲ್ ಹಿಂದಕ್ಕೆ ಕಳುಹಿಸಿದ್ದರು.
‘ಶಿಕ್ಷಣ-ಸಮಾಜ-ಸೇವೆ’ ವಿಭಾಗದಲ್ಲಿ ಲಿಂಗಪ್ಪನವರ ಹೆಸರು ಪ್ರಸ್ತಾಪವಾಗಿತ್ತು. ಇದರಲ್ಲಿ ಲಿಂಗಪ್ಪನವರ ಕೊಡುಗೆ ಏನೆಂದು ರಾಜ್ಯಪಾಲರು ಮೊದಲು ಪ್ರಶ್ನಿಸಿ ನಂತರ ಅದೇನು ಉತ್ತರ ಪಡೆದರೋ ಗೊತ್ತಿಲ್ಲ. ಕೊನೆಗೆ ಒಪ್ಪಿಕೊಂಡಿದ್ದಾರೆ. ಒಬ್ಬರನ್ನು ಎಂಎಲ್‌ಸಿ ಸ್ಥಾನಕ್ಕೆ ಶಿಫಾರಸು ಮಾಡುವಾಗ ಅವರ ಪ್ರೊಫೈಲ್ ಹಾಗೂ ಸಾಧನೆಗಳ ಮಾಹಿತಿ ನೀಡದೆ ಕಳುಹಿಸಲು ಸಾಧ್ಯವೇ? ಆದರೆ ವಜೂಭಾಯಿ ವಾಲಾರ ತೃಪ್ತಿಯ ಟೇಪಿನ ಅಳತೆ ರಾಜಭವನದ ಜೊತೆ ವ್ಯವಹರಿಸುವವರಿಗೆ ಗೊತ್ತಾಗಿದೆ. ಸಾರ್ವಜನಿಕರಿಗೆ ಇದೊಂದು ಅರ್ಥವಾಗುವುದಿಲ್ಲ.
ವಜೂಭಾಯಿ ವಾಲಾ ಗುಜರಾತಿನವರು. ಅದಕ್ಕಿಂತ ಮುಖ್ಯವಾಗಿ ಭಾರತೀಯರಿಗೆ ದೊಡ್ಡ ಸಮಸ್ಯೆಯಾಗಿರುವ ಆರೆಸ್ಸೆಸ್ ವ್ಯಕ್ತಿ. 2014 ರಲ್ಲಿ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬರುವಷ್ಟರಲ್ಲಿ ವಜೂಭಾಯಿ ವಾಲಾ ಗುಜರಾತಿನಲ್ಲಿ ಹಣಕಾಸು ಮಂತ್ರಿಯಾಗಿ ಹದಿನೆಂಟು ಬಜೆಟ್ ಮಂಡಿಸಿದ್ದರು.
ದೇಶ ಹಾಗೂ ದೇಶಭಕ್ತಿಯ ಬಗ್ಗೆ ವಿಪರೀತ ಮಾತನಾಡುತ್ತಿದ್ದರು. ‘ನನ್ನ ಕೊನೆಯುಸಿರು ಇರುವವರೆಗೂ ಬಡವರಿಗಾಗಿ ದುಡಿದು ತ್ಯಾಗ ಮಾಡುತ್ತೇನೆ’ ಎಂದು ನಿಸ್ಸಂಕೋಚವಾಗಿ ಹೇಳಿ ಕೊಳ್ಳುತ್ತಿದ್ದರು. ಕರ್ನಾಟಕಕ್ಕೆ ಬಂದ ಮೇಲೆ ಈ ಬಡವರ ಸೇವಕ ತನ್ನ ಅಡುಗೆ ಮನೆ, ಊಟದ ತಾಣ, ಸ್ನಾನದ ಕೊಠಡಿ, ಟಿ.ವಿ, ಪೋನ್ ಇತ್ಯಾದಿಗೆ ಕೇವಲ 5 ಕೋಟಿ ರೂಪಾಯಿ ಹಣವನ್ನು ಕರ್ನಾಟಕದ ಜನರ ತೆರಿಗೆ ಹಣದಿಂದ ಖರ್ಚು ಮಾಡಿದ್ದಾರೆ.
ಕಾಲೇಜು ಹುಡುಗಿಯರು ಹುಬ್ಬು ತೀಡ ಬಾರದು, ಲಿಪ್‌ಸ್ಟಿಕ್ ಹಚ್ಚಬಾರದೆಂದು ಒಮ್ಮೆ ಅಪ್ಪಣೆ ಕೊಡಿಸಿದ್ದರು. ಈ ವಾಲಾ ತಲೆಯಲ್ಲಿ ಆರೆಸ್ಸೆಸ್‌ನ ಕೆಟ್ಟ ವೈರಸ್‌ಗಳೆಲ್ಲಾ ಅಡಗಿ ಕುಳಿತಿದ್ದರೆ ಇವರ ಕಚೇರಿಯೊಳಗೆ ಬಿಜೆಪಿ ಅಡಗಿದೆ.
ಕಾಂಗ್ರೆಸ್ ಸರಕಾರದ ಏನೇ ಪ್ರಸ್ತಾಪಗಳಿರಲಿ ವಾಲಾ ವಿರೋಧ ಪಕ್ಷದವರಂತೆ ಪ್ರಶ್ನೆ ಕೇಳುವುದು, ತಕರಾರು ತೆಗೆಯುವುದು ಮಾಮೂಲಾಗಿ ಹೋಗಿದೆ.
ಲೋಕಾಯುಕ್ತರ ನೇಮಕ, ಬೆಂಗಳೂರು ನಗರಪಾಲಿಕೆ ವಿಭಜನೆ ಪ್ರಸ್ತಾಪ, ನಿಗಮ ಮಂಡಳಿ ಹಾಗೂ ವಿಶ್ವವಿದ್ಯಾನಿಲಯಗಳ ನೇಮಕದ ವಿಚಾರಗಳಲ್ಲಿ ಚುನಾಯಿತ ಸರಕಾರಕ್ಕೆ ಪದೇ ಪದೇ ತೊಡಕು ಸೃಷ್ಟಿಸಿದ್ದಾರೆ. ಇದರಿಂದ ಆಳುವ ಕಾಂಗ್ರೆಸ್ ಪಕ್ಷಕ್ಕೆ ಕಿರಿಕಿರಿ ಎನಿಸಿದರೆ ಬಿಜೆಪಿಗೆ ತಾವೇ ಏನೋ ಸಾಧಿಸಿದಂತೆ ಖುಷಿಯಾಗುತ್ತಿದೆ.
ಆದರೆ ಕೊನೆಗೂ ಉಳಿದುಬಿಡುವ ಪ್ರಶ್ನೆ ಏನೆಂದರೆ ವಜೂಭಾಯಿ ವಾಲಾ ನೀಡುವ ‘ಬಿಟ್ಟ ಸ್ಥಳವನ್ನು ತುಂಬಿರಿ’ ಪ್ರಶ್ನೆಪತ್ರಿಕೆಯಲ್ಲಿ ಯಾರು, ಹೇಗೆ, ಎಷ್ಟು ಉತ್ತರ ತುಂಬಿದರೆಂಬುದು !
ಅಂತಹ ಉತ್ತರಗಳ ತೂಕ ಬಹುಶಃ ಹೆಚ್ಚಿದ್ದಿರ ಲೇಬೇಕು. ಹಾಗಾಗಿಯೇ ವಜೂಭಾಯಿ ವಾಲಾ ಈಗ ವಜನ್ ಭಾಯಿ ವಾಲಾ ಎಂಬುದಾಗಿ ವಿಧಾನ ಸೌಧದಲ್ಲಿ ಮರು ನಾಮಕರಣಗೊಂಡಿದ್ದಾರೆ.