varthabharthi


ಕಮೆಂಟರಿ

ಇಂಡಿಯಾ-ಪಾಕಿಸ್ತಾನ ಮ್ಯಾಚ್: ಕ್ರಿಕೆಟ್ ಅನ್ನು ಆನಂದಿಸೋಣ

ವಾರ್ತಾ ಭಾರತಿ : 18 Jun, 2017
Parvateesha.b@gmail.com

ಇವತ್ತು ಸಂಜೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಮ್ಯಾಚ್‌ನಲ್ಲಿ ಇಂಡಿಯಾ-ಪಾಕಿಸ್ತಾನ ಸೆಣೆಸಾಡಲಿವೆ. ಅಕಸ್ಮಾತಾಗಿ ಮಳೆ ಸುರಿದರೂ ಸಹ ಈ ಮ್ಯಾಚ್ ರೋಚಕವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಈ ಮ್ಯಾಚ್ ಅನ್ನು ವಿಶ್ವಾದ್ಯಂತ ಸುಮಾರು ಒಂದು ನೂರು ಕೋಟಿ ಜನ ವೀಕ್ಷಿಸಲಿದ್ದಾರೆಂದು ಹೇಳಲಾಗುತ್ತಿದೆ. ಟಿವಿ ಎದುರು ಕೂರುವ ಇವರಲ್ಲಿ ಅನೇಕರಿಗೆ ಕ್ರಿಕೆಟ್ ಆಟದ ರೋಮಾಂಚನಕ್ಕಿಂತ ಅಸಹನೆ, ದ್ವೇಷದ ಭಾವನೆಗಳು ತುಂಬಿಕೊಂಡಿರುತ್ತವೆ. ಇನ್ನು ಟಿವಿ ಸ್ಟುಡಿಯೋದೊಳಗೆ ಇರುವ ಅರ್ನಾಬ್ ಗೋಸಾಮಿ ತರದ ಕೆಟ್ಟ ನಾಲಿಗೆಯ ಪತ್ರಕರ್ತರಿಗೂ ಕ್ರಿಕೆಟ್‌ನ ಅಸಲಿ ಮಜಾಕ್ಕಿಂತಾ ಚೀರಾಡುವುದೇ ಮುಖ್ಯವಾಗಿರುತ್ತದೆ.
ಸದ್ಯಕ್ಕೆ ಇದನ್ನು ಬದಿಗಿರಿಸಿ ಏನೆಲ್ಲಾ ಸಂಕುಚಿತ ರಾಜಕೀಯ ಧೋರಣೆಗಳ ನಡುವೆಯೂ ಕ್ರಿಕೆಟ್ ಅದು ಹೇಗೆ ರಾಜಕಾರಣವನ್ನು ಸೋಲಿಸಿ ತನ್ನನ್ನು ಕಾಪಾಡಿಕೊಂಡು ಮತ್ತೆ ತಲೆ ಎತ್ತಬಹುದು ಎಂಬುದಿಲ್ಲಿ ಗಮನಾರ್ಹವಾಗಿದೆ. ಇಂಡಿಯಾ-ಪಾಕಿಸ್ತಾನ ಇವೆರಡೂ ನೆಲದಲ್ಲಿ ಕ್ರಿಕೆಟ್ ಆಡಲು ಸದ್ಯಕ್ಕೆ ಅವಕಾಶ ಸಿಗುವಂತಿಲ್ಲ. ಆದರೇನು ಕ್ರಿಕೆಟ್ ಈ ಗೋಜಲುಗಳಿಂದ ತನ್ನನ್ನು ತಾನೇ ಬಿಡಿಸಿಕೊಂಡು ಇನ್ನೊಂದು ತಾಣದಲ್ಲಿ ತಲೆ ಎತ್ತುತ್ತಿದೆ.

ಒಂದರ್ಥದಲ್ಲಿ ಇದು ಕ್ರಿಕೆಟ್‌ನ ಗೆಲುವು.

ಉಪಖಂಡದ ವಿಭಜನೆಯವರೆಗೂ ಒಂದೇ ತಂಡವಾಗಿ ನಾವು ಕ್ರಿಕೆಟ್ ಆಡುತ್ತಿದ್ದೆವು. ಜಗತ್ತಿನ ಸುಂದರ ಸ್ಟೇಡಿಯಂಗಳಲ್ಲಿ ಒಂದಾಗಿರುವ ಲಾಹೋರಿನ ಜಂಖಾನ ಗ್ರೌಂಡ್‌ನಲ್ಲಿ ಪಂಜಾಬ್ ವಿವಿ ಹಾಗೂ ಪಶ್ಚಿಮ ಪಂಜಾಬ್‌ನ ತಂಡಗಳ ಮ್ಯಾಚ್‌ಗಳು ಈಗಿನಷ್ಟೇ ರೋಚಕವಾಗಿರುತ್ತಿದ್ದವು. ದೇಶ ವಿಭಜನೆಯ ನಂತರ ಭಾರತದ ಸ್ಟಾರ್ ಆಟಗಾರ ಎನಿಸಿದ್ದ ರಣಜಿಯಲ್ಲಿ ಆಡುತ್ತಿದ್ದ ಮಿಯಾನ್ ಮುಹಮ್ಮದ್ ಸಮೀದ್ ಪಾಕಿಸ್ತಾನಕ್ಕೆ ಹೋಗಿ ಗ್ರೇಟೆಸ್ಟ್ ಕ್ರಿಕೆಟರ್ ಎನಿಸಿಕೊಂಡ. ಬಡ ಹಿನ್ನೆಲೆಯಿಂದ ಬಂದಿದ್ದ ಹನೀಫ್ ಮುಹಮ್ಮದ್, ಫಜಲ್ ಮುಹಮ್ಮದ್ ತರದವರು ದಿನಕ್ಕೆ ಮುವತ್ತು ರೂಪಾಯಿ ಸಂಭಾವನೆ ಪಡೆದು ಆಡುತ್ತಿದ್ದರು. ಆಟದ ಮೈದಾನಕ್ಕೆ ಸೈಕಲ್‌ನಲ್ಲಿ ಅಥವಾ ನಡೆದುಕೊಂಡು ಬರುವುದು ಇಲ್ಲಿನಂತೆ ಅಲ್ಲೂ ಸಹಜ ವಿದ್ಯಮಾನವಾಗಿತ್ತು.

ಪಾಕಿಸ್ತಾನದಲ್ಲಿ ಕ್ರಿಕೆಟ್ ಕಟ್ಟಿ ಬೆಳೆಸಿದ್ದು ಬ್ರಿಟಿಷ್ ಅಧಿಕಾರಿ ಸರ್ ಫ್ರಾನ್ಸಿಸ್. 'The Wounded Tiger' ಎಂಬ ಪುಸ್ತಕದಲ್ಲಿ ಪೀಟರ್ ಒಬಾಮೆ ಪಾಕಿಸ್ತಾನ ಕ್ರಿಕೆಟ್‌ನ ಬಾಲ್ಯ, ಶೈಶವ ಹಾಗೂ ಯೌವನಗಳ ಏರಿಳಿತಗಳ ಬಗ್ಗೆ ಚೇತೋಹಾರಿ ವಿವರಣೆಗಳನ್ನು ದಾಖಲಿಸಿದ್ದಾನೆ. 52ರಲ್ಲಿ ಪಾಕಿಸ್ತಾನ ತಂಡ ಮೊದಲ ಬಾರಿಗೆ ಇಂಡಿಯಾ ಟೂರ್ ಮಾಡಿತ್ತು. ಎರಡು ವರ್ಷದ ನಂತರ ಇಂಡಿಯಾ ಟೀಂ ಪಾಕಿಸ್ತಾನಕ್ಕೆ ಹೋಯಿತು. ನಮ್ಮಲ್ಲಿ ಬಿಜೆಪಿಯವರಿಂದಾಗಿ ಇಂಡಿಯಾ-ಪಾಕಿಸ್ತಾನದ ಕ್ರಿಕೆಟ್ ದ್ವೇಷ ಶುರುವಾಯಿತು ಎಂದು ಬಹಳ ಜನ ಭಾವಿಸಿದ್ದಾರೆ. ಆದರೆ ಅದು ಪೂರ್ತಿ ನಿಜವಲ್ಲ. 1950ರ ದಶಕದಲ್ಲೇ ಇವೆರಡೂ ಟೀಂಗಳ ಮ್ಯಾಚ್‌ಗಳು ಅದೆಷ್ಟು ಬಿಗುವಿನಿಂದ ಕೂಡಿರುತ್ತಿದ್ದವೆಂದರೆ ತಂಡಗಳು ಗೆಲ್ಲುವ-ಸೋಲುವ ರಗಳೆಯೇ ಬೇಡವೆಂದು ಡ್ರಾ ಮಾಡಿಕೊಳ್ಳಲು ಆಡುತ್ತಿದ್ದರು. ಕ್ರಿಕೆಟ್ ಆಟದ ಮೋಜು ಸಂಕುಚಿತಗೊಂಡ ದಿನಗಳವು. ಆದರೂ ಸಾವಿರಾರು ಜನ ಮ್ಯಾಚ್ ನೋಡಲೆಂದೇ ವೀಸಾ ಪಡೆದು ಅತ್ತಿಂದಿತ್ತ ಓಡಾಡುತ್ತಿದ್ದರು. ನಂತರದಲ್ಲಿ ಯುದ್ಧ್ದಗಳಾಗಿ 1962ರಿಂದ 77ರವರೆಗೆ ಇಂಡಿಯಾ-ಪಾಕ್ ತಂಡಗಳು ತಮ್ಮ ನೆಲದಲ್ಲಿ ಪರಸ್ಪರರ ಮುಖ ನೋಡಲಿಲ್ಲ. 1984ರಲ್ಲಿ ಇಂಡಿಯಾದವರು ಪಾಕಿಸ್ತಾನಕ್ಕೆ ಹೊರಟರಾದರೂ ಇಂದಿರಾಗಾಂಧಿ ಹತ್ಯೆ ಆ ಸರಣಿಗೆ ಅಡ್ಡಬಂತು. ಅದಾದ ಮೇಲೆ ಕಾರ್ಗಿಲ್ ಯುದ್ಧ. ಮುಂಬೈ ಸ್ಫೋಟ ಇತ್ಯಾದಿಗಳಿಂದ ಭಾರತ-ಪಾಕ್ ಕ್ರಿಕೆಟ್ ಆಟಕ್ಕೆ ದ್ವೇಷದ ಆಯಾಮ ಒದಗಿತು. ಅಕಸ್ಮಾತಾಗಿ ಮುಖಾಮುಖಿಯಾದಾಗೆಲ್ಲ ಅದಕ್ಕೆ ರೋಚಕತೆಯೂ ಬರತೊಡಗಿತು.

ಇದೀಗ ಅಂತದ್ದೇ ಇನ್ನೊಂದು ಸಂದರ್ಭವಿದೆ. ಕ್ರಿಕೆಟ್‌ನಲ್ಲಿ ಬೌಲರ್ ಒಬ್ಬನ ಚಾಕಚಕ್ಯತೆ, ಬ್ಯಾಟ್ಸ್‌ಮೆನ್‌ನ ಧೀರೋದಾತ್ತ ಉತ್ತರಗಳು ನೋಡುವವರ ಮನಸಲ್ಲಿ ದಾಖಲಾಗದೆ ಹೋದರೆ ಅಷ್ಟರಮಟ್ಟಿಗೆ ಅವರು ರೋಗಿಷ್ಠ ಕ್ರೀಡಾಭಿಮಾನಿಗಳೇ. ಪೂರ್ವಾಗ್ರಹಗಳು ಒಬ್ಬರ ಕೀಳು ಅಭಿರುಚಿಯ ಪ್ರತಿಫಲನ ಅಷ್ಟೆ. ಅಂತಹ ಮನಸ್ಥಿತಿಯಲ್ಲಿ ಜಹೀರ್ ಅಬ್ಬಾಸ್‌ರ ಬ್ಯಾಟಿಂಗ್ ಸ್ಕಿಲ್, ಅಬ್ದುಲ್ ಖಾದಿರ್‌ರ ತಮಾಷೆ ಎನಿಸುತ್ತಿದ್ದರೂ ಅಪಾಯಕಾರಿ ಬೌಲಿಂಗ್, ಇಂಜಮಾಮ್ ಉಲ್ ಹಕ್‌ರ ಸೊಂಬೇರಿತನಗಳನ್ನು ನಾವು ಗಮನಿಸಿರುವುದಿಲ್ಲ. ಇಮ್ರಾನ್ ಖಾನ್‌ರ ಆಕರ್ಷಕ ಬೌಲಿಂಗ್ ಶೈಲಿ ಹಾಗೂ ಜೊತೆಗಿದ್ದ ಲಂಪಟಿಗತನಗಳ ವಿಚಾರ ಗ್ರಹಿಸದಿದ್ದರೆ ಕ್ರಿಕೆಟ್ ಆಟದ ವೇಶ್ಯೆಯ ಗುಣ ಅರ್ಥವಾಗುವುದಿಲ್ಲ.

ಜಾವೇದ್ ಮಿಯಾಂದಾದ್ ಶಾರ್ಜಾದಲ್ಲಿ ಕೊನೆಯ ಬಾಲ್‌ನಲ್ಲಿ ಹೊಡೆದ ಸಿಕ್ಸರ್ ಅನ್ನು ನಾವು ಬೇಕೆಂತಲೇ ಮರೆತರೂ ಕ್ರಿಕೆಟ್ ಅದನ್ನು ಮರೆಯುವುದಿಲ್ಲ.

ಇವೆಲ್ಲಾ ರಗಳೆ-ರೋಮಾಂಚನಗಳು ಇಂಡಿಯಾದ ಕ್ರಿಕೆಟ್‌ನಲ್ಲೂ ಇವೆ. ಕಪಿಲ್ ದೇವ್, ಸಚಿನ್, ವಿರಾಟ್ ಕೊಹ್ಲಿ ತರದ ಅತ್ಯುತ್ತಮ ಆಟಗಾರರ ತಂಡದಲ್ಲೇ ಶ್ರೀಕಾಂತ್, ಅಜಯ್ ಜಡೇಜಾ ತರದ ವಂಚಕರು-ಲಂಪಟರು ಇದ್ದರೆಂಬುದನ್ನು ನಾವು ಮರೆತು ಬಿಡಬಾರದು.

ಕ್ರಿಕೆಟ್ ಒಂದು ದೊಡ್ಡ ಉದ್ಯಮವಾಗಿ ಈಗ ಬೆಳೆದಿದೆ. ಹಾಗಾಗಿ ಅದಕ್ಕೆ ಕೇವಲ ಆಟದ ಕೌಶಲ್ಯ, ಥ್ರಿಲ್ ಮಾತ್ರ ಸಾಕಾಗುವುದಿಲ್ಲ. ಪ್ರಾಯೋಜಕರು ಮತ್ತವರ ಪ್ರಾಡಕ್ಟುಗಳು, ಟಿವಿ ಪ್ರಸಾರ ಮತ್ತವರ ಜಾಹೀರಾತು ಆದಾಯಗಳು, ರಾಜಕಾರಣಿ ಮತ್ತವನ ಓಟುಗಳು, ಸೇನೆ ಮತ್ತವರ ಕಮಿಷನ್ ಡೀಲುಗಳೆಲ್ಲಾ ಇದರಲ್ಲಿ ಸೇರಿರುತ್ತವೆ. ಇಂತವರೆಲ್ಲಾ ಸೇರಿಕೊಂಡು ಮಿತ್ರರಲ್ಲದ ಎರಡು ದೇಶಗಳ ಕ್ರಿಕೆಟ್ ಮ್ಯಾಚ್ ಒಂದನ್ನು ಯುದ್ಧದಂತಹ ಉನ್ಮಾದದ ಸ್ಥಿತಿಗೆ ರೂಪಾಂತರಿಸುತ್ತಾರೆ. ಐಪಿಎಲ್‌ನಲ್ಲಿ ಪಾಕ್ ಆಟಗಾರರು ಇರುವಂತಿಲ್ಲ ಎಂದು ಆದ ಮೇಲೆ ಪಾಕಿಸ್ತಾನದವರು ತಮ್ಮದೇ 20 ಟೂರ್ನಿ ನಡೆಸುತ್ತಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್, ಪೇಶಾವರ್ ಝಲ್ಮಿ, ಕರಾಚಿ ಕಿಂಗ್ಸ್ ಎಂಬಿತ್ಯಾದಿ ಐದು ಟೀಂ ರೂಪಿಸಿ ಅವರೂ ಕೂಡ ಸಾವಿರಾರು ಕೋಟಿ ರೂಪಾಯಿಗಳ ಕ್ರಿಕೆಟ್ ವ್ಯಾಪಾರ ನಡೆಸುತ್ತಿದ್ದಾರೆ. ಇಂಡಿಯಾದ ಐಪಿಎಲ್‌ನಲ್ಲಿ ಇರುವಂತೆ ಅಲ್ಲೂ ಸಹ ಆಟ, ಹಣ, ಮ್ಯಾಚ್ ಫಿಕ್ಸಿಂಗ್, ಹುಡುಗಿಯರು, ಕುಡಿತ, ಲಂಪಟತನಗಳ ಪ್ಯಾಕೇಜ್ ವಿಜೃಂಭಿಸುತ್ತಿದೆ.
ಅಂತಲ್ಲಿ ಕ್ರಿಕೆಟ್ ಆಟ ಹೊರತುಪಡಿಸಿ ಉಳಿದ ಸಹಭಾಗಿಗಳೆಲ್ಲಾ ಸಾಕಷ್ಟು ಲಾಭ ದೋಚಿಕೊಳ್ಳುತ್ತಾರೆ. ಹಾಗಿದ್ದಾಗಲೂ ಈ ಗದ್ದಲ ಗೌಜುಗಳ ನಡುವೆ ‘ನನ್ನ ಕಡಿದರೂ, ತುಂಡರಿಸಿದರೂ ಮತ್ತೆ ಮತ್ತೆ ತಲೆ ಎತ್ತುತ್ತೇನೆ’ ಎಂಬ ಕವಿ ನುಡಿಯಂತೆ ಇವತ್ತಿನ ಮ್ಯಾಚ್‌ನಲ್ಲಿ ಕ್ರಿಕೆಟ್ ಗೆಲ್ಲುತ್ತದೆ ಎಂದು ನಿರೀಕ್ಷಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)