ಜಾತಿವಾರು ಜನಗಣತಿ, ಆರ್ಥಿಕ ಸಮೀಕ್ಷೆ ವರದಿಯನ್ನು ಬಹಿರಂಗಪಡಿಸಲು ಒತ್ತಾಯಿಸಿ ಹೋರಾಟ
ದಾವಣಗೆರೆ, ಜೂ.19: ಜಾತಿವಾರು ಜನಗಣತಿ, ಆರ್ಥಿಕ ಸಮೀಕ್ಷೆ ವರದಿಯನ್ನು ಈ ಕೂಡಲೇ ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ಹೋರಾಟ ಕ್ರಿಯಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಾಣೆ ಮಾಡಿ, ನಂತರ ಜಾತಿ ಜನಗಣತಿ ಸಮೀಕ್ಷಾ ವರದಿಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮುಖಂಡ ಬಿ.ಎಂ. ಸತೀಶ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಜಾತಿ ಮೂಲದ ಅನ್ಯಾಯಕ್ಕೆ ಒಳಗಾದ ಅಲಕ್ಷಿತ ಬಹು ಸಮುದಾಯಗಳು ಸಾಕಷ್ಟು ವಂಚನೆಗೆ ಒಳಗಾಗಿವೆ. 1931ರಲ್ಲಿ ಜಾತಿ ಜನಗಣತಿ ನಡೆದಿತ್ತು. ಅಂದಿನಿಂದ ಇಂದಿನವರೆಗೂ ನಡದೆ ಇಲ್ಲ. ಶೋಷಿತರ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸುತ್ತಿರುವ ಸರ್ಕಾರ ಇದೇ ಮೊದಲ ಬಾರಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಶೋಷಿತ ಜಾತಿಗಳಿಗೆ ಸಾಮಾಜಿಕ ನ್ಯಾಯ ಕೊಡಲು ಈ ವರದಿ ಅತ್ಯಂತ ಪೂರಕವಾಗಿದೆ ಎಂದು ಅವರು ತಿಳಿಸಿದರು.
ಈ ವರದಿ ಪೂರ್ಣಗೊಂಡು ಈಗಾಗಲೇ ಒಂದು ವರ್ಷ ಕಳೆಯಿತು. ಸರಕಾರ ವರದಿಯನ್ನು ಬಹಿರಂಗಗೊಳಿಸದೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಬಲ ಜಾತಿಗಳು, ಕೆಲವು ಮಠಾಧೀಶರು ಸೇರಿ ಈ ಕುರಿತು ಸರಕಾರಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ವರದಿ ಬಹಿರಂಗಕ್ಕೆ ವಿಳಂಬವಾಗುತ್ತಿದೆ. ಸರಕಾರ ಕೂಡಲೇ ವರದಿಯನ್ನು ಬಹಿರಂಗಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆಂಗೋ ಹನುಮಂತಪ್ಪ, ಎಂ.ಬಿ.ಹಾಲಪ್ಪ ಹದಡಿ, ರಘು ದೊಡ್ಡಮನಿ, ಗಣೇಶ ದಾಸ್‌ಕರಿಯಪ್ಪ, ಜೆ. ಅಮಾನುಲ್ಲಾಖಾನ್, ಅನಿಷ್ ಪಾಷಾ, ಹೂವಿನಮಡಿ ಚಂದ್ರಪ್ಪ, ಕೋಡಿಹಳ್ಳಿ ದುರ್ಗಪ್ಪ, ಡಿ. ಏಕಾಂತಪ್ಪ, ಎ. ಶ್ರೀನಿವಾಸ್, ಕೆ.ಜಿ. ಶಂಕರನಾಯಕ್, ಯರಬಳ್ಳಿ ಉಮಾಪತಿ, ರೇಣುಕಾ ಯಲ್ಲಮ್ಮ, ಪರುಶುರಾಮಪ್ಪ, ತಾ.ಪಂ. ಸದಸ್ಯ ಆಲೂರು ನಿಂಗರಾಜ್, ಬಸವರಾಜ ಗುಬ್ಬಿ, ಕೆ.ಎಸ್. ಬಸವರಾಜಪ್ಪ, ಜಿ.ಸಿ. ನಿಂಗಪ್ಪ, ಪಂಪಣ್ಣ, ನಲ್ಕುಂದ ಹಾಲೇಶ್, ಹೆಚ್. ಶಿವಪ್ಪ, ಷಣ್ಮುಖಚಾರ್, ಹೆಗ್ಗೆರೆ ರಂಗಪ್ಪ, ಐರಾಣಿ ಚಂದ್ರ ಮತ್ತಿತರರು ಇದ್ದರು.